ಎರಡು ಪ್ಯಾಕೆಟ್ಟು ಆಹಾರ, ನಾಲ್ಕು ಪ್ಯಾಕೆಟ್ಟು ಬಿಸ್ಕೆಟ್ಟು ಕೊಟ್ಟವರೂ ಮಹಾನ್ ದಾನಿಗಳಂತೆ ಸೆಲ್ಫೀ ಫೋಟೋ ವಿಡಿಯೋಗಳನ್ನು ಫಾರ್ವಡ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬರು ತಂದೆ ರಾಜಕಾರಣಿ, ತಾವು ಸಿನಿಮಾ ಹೀರೋ ಆಗಿದ್ದರೂ ಪ್ರಕಾರಕ್ಕಾಗಿ ಒಂದಿಷ್ಟೂ ಹಂಬಲಿಸದೆ, ತಮ್ಮ ಪಾಡಿಗೆ ತಾವು ತಮ್ಮ ಕೈಲಾದ ಸೇವೆ ಮಾಡುತ್ತಾ, ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುತ್ತಿದ್ದಾರೆ. ತಮ್ಮ ಕಾರಿನ ತುಂಬಾ ದಿನಸಿ ಇತ್ಯಾದಿ ದಿನೋಪಯೋಗಿ ವಸ್ತುಗಳನ್ನು ತುಂಬಿಕೊಂಡು ಕಷ್ಟಕ್ಕೊಳಗಾಗಿರುವವರಿಗೆ ನೆರವಾಗುತ್ತಿದ್ದಾರೆ. ತ್ರಾಟಕ ಚಿತ್ರದಿಂದ ಹೆಸರು ಮಾಡಿರುವ ರಾಹುಲ್ ಐನಾಪುರ ಅವರ ಈ ಸಮಾಜಮುಖಿ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜಕಾರಣಿಗಳ ಮಕ್ಕಳೂ ರಾಜಕಾರಣಿಗಳೇ ಆಗುತ್ತಾರೆಂಬ ನಂಬಿಕೆ ಆಗಾಗ ಸುಳ್ಳಾದದ್ದಿದೆ. ಮನೆಯ ತುಂಬಾ ರಾಜಕೀಯ ವಾತಾವರಣವಿದ್ದರೂ ಮನಸನ್ನು ಕಲೆಯ ವಶಕ್ಕೊಪ್ಪಿಸಿದ ವಿರಳ ಉದಾಹರಣೆಗಳೊಂದಷ್ಟಿವೆ. ಅದರಲ್ಲಿ ತ್ರಾಟಕ ಚಿತ್ರದ ಮೂಲಕ ನಾಯಕ ನಟನಾಗಿ, ನಿರ್ಮಾಪಕನಾಗಿಯೂ ಪಾದಾರ್ಪಣೆ ಮಾಡಿರೋ ರಾಹುಲ್ ಐನಾಪುರ ಕೂಡಾ ನಿಸ್ಸಂದೇಹವಾಗಿಯೇ ಸೇರಿಕೊಳ್ಳುತ್ತಾರೆ!
ಹೀಗೆ ತ್ರಾಟಕ, ಗತ್ತು ಚಿತ್ರಗಳ ಮೂಲಕ ಸದ್ದು ಮಾಡುತ್ತಿರುವ ರಾಹುಲ್ ಬಿಜಾಪುರದವರು. ಅವರದ್ದು ಪಕ್ಕಾ ರಾಜಕೀಯದ ಹಿನ್ನೆಲೆ ಇರುವ ಕುಟುಂಬ. ರಾಹುಲ್ ತಂದೆ ಮನೋಹರ ಐನಾಪುರ ಕಾಂಗ್ರೆಸ್ ನಾಯಕ, ಮಾಜೀ ಶಾಸಕ. ತಾಯಿ ವಸುಂಧರಾ ಐನಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಾ ಇದೀಗ ನಿವೃತ್ತರಾಗಿದ್ದಾರೆ.
ತಂದೆಯಿಂದ ಬಂದ ಒಳ್ಳೇ ಗುಣವೋ, ತಾಯಿ ತೋರಿಸಿಕೊಟ್ಟಿರುವ ಉತ್ತಮ ಮಾರ್ಗವೋ ಗೊತ್ತಿಲ್ಲ. ರಾಹುಲ್ ತಮ್ಮ ಸರಳತೆ, ಸಿಂಪ್ಲಿಸಿಟಿಯ ಕಾರಣಕ್ಕೇ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿ. ಈಗ ನೊಂದವರ ಕಣ್ಣೀರು ಒರೆಸುವ ಮೂಲಕ ಮತ್ತಷ್ಟು ಆಪ್ತರಾಗಿದ್ದಾರೆ.
No Comment! Be the first one.