ಲವ್ ಸ್ಟೋರಿಗಳಲ್ಲಿಯೇ ಹೆಚ್ಚಾಗಿ ಮಿಂಚುತ್ತಿದ್ದ ಅಜಯ್ ರಾವ್ ಚೊಚ್ಚಲ ಬಾರಿಗೆ ರೈ ನ್ ಬೋ ಮೂಲಕ ಪೊಲೀಸ್ ಕಾಪ್ ಆಗಿ ಹವಾ ಕ್ರಿಯೇಟ್ ಮಾಡಲು ರೆಡಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರೈನ್ ಬೋ ಚಿತ್ರದ ಮುಹೂರ್ತ ನೆರವೇರಿದ್ದು, ಇಂದು ಚಿತ್ರದ ಮೋಷನ್ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ಕಲರ್ಸ್ ಆಫ್ ಕ್ರೈಂ ಎಂಬ ಅಡಿಬರಹವಿರುವ ರೈನ್ ಬೋ ಈವರೆಗೂ ಫೋಕಸ್ ಮಾಡದ ಅನಾಹುತಕಾರಿ ಅಪರಾಧದ ಸುತ್ತ ಕಥೆ ಹೆಣೆಯಲಾಗಿದೆ. ಸಾಮಾನ್ಯವಾಗಿ ಬಳಕೆದಾರನು ಯಾವುದೇ ಒಂದು ಮೆಸೇಜ್ ಕಳುಹಿಸಿದರೆ, ಅದು ಮೊದಲು ಸ್ಯಾಟಲೈಟ್ ಸ್ಟೋರ್ಗೆ ತಲುಪುತ್ತದೆ. ನಂತರ ಸಂಬಂಧಪಟ್ಟವರಿಗೆ ಅದು ರವಾನೆಯಾಗುತ್ತದೆ. ಸ್ವೀಕೃತಿ ಮಾಡುವವನು ಹ್ಯಾಕ್ ಮಾಡಿ ಅದನ್ನು ದುರುಪಯೋಗ ಮಾಡಿಕೊಂಡರೆ ಅದರ ಪರಿಣಾಮವನ್ನು ಬಳಕೆದಾರ ಎದುರಿಸಬೇಕಾಗುತ್ತದೆ. ಇಂತಹುದನ್ನು ನಾಯಕನಟ ಹೇಗೆ ತನಿಖೆ ಮಾಡುತ್ತಾನೆ ಎಂಬುದು ರೈ ಬೋ ಸಿನಿಮಾದ ಸಾರಾಂಶವಾಗಿದೆ. ಅಜಯ್ ರಾವ್ ಗೆ ಮಾನ್ವಿತಾ ಹರೀಶ್ ನಾಯಕಿಯಾಗಿ ಜತೆಯಾಗಿದ್ದಾರೆ. ರೈನ್ ಬೋ ಚಿತ್ರವನ್ನು ಗುರು ದೇಶಪಾಂಡೆ ಅವರ ಶಿಷ್ಯ ಎಸ್. ರಾಜವರ್ಧನ್ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಸ್ವತಃ ಗುರುದೇಶಪಾಂಡೆ ವಹಿಸಿಕೊಂಡಿದ್ದಾರೆ. ಉಳಿದಂತೆ ಎಮಿಲ್ ಸಂಗೀತ ನಿರ್ದೇಶನ, ಜಡೇಶ್ ಕುಮಾರ್, ಜಾಯ್ ಜಾರ್ಸ್, ಎಸ್. ರಾಜವರ್ಧನ್ ಚಿತ್ರಕತೆ, ಆರೂರು ಸುಧಾಕರ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ.