ಆರಂಭದಿಂದಲೂ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಕೃಷ್ಣ ಅಜೇಯ್ ರಾವ್ ತಾಯಿಗೆ ತಕ್ಕ ಮಗ ಚಿತ್ರದ ಮೂಲಕ ಆ್ಯಕ್ಷನ್ ಹೀರೋ ಆಗಿಯೂ ಮಿಂಚಿದ್ದರು. ಚಿತ್ರದ ಯಶಸ್ಸಿನ ನಂತರ ಮೊದಲ ಬಾರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ರೈನ್ ಬೋ ಮೂಲಕ ಅವತಾರವೆತ್ತಿದ್ದಾರೆ. ಇತ್ತೀಚಿಗಷ್ಟೇ ರೈನ್ ಬೋ ಮುಹೂರ್ತವನ್ನು ಆಚರಿಸಿಕೊಂಡಿದ್ದು, ನಿರ್ಮಾಪಕರುಗಳಾದ ರಮೇಶ್ ರೆಡ್ಡಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಸಮೃದ್ಧಿ ಮಂಜುನಾಥ್ ಕ್ಯಾಮೆರಾ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಕಲರ್ಸ್ ಆಫ್ ಕ್ರೈಂ ಎಂಬ ಅಡಿಬರಹವಿರುವ ರೈನ್ ಬೋ ಈವರೆಗೂ ಗಮನಿಸದ ಅನಾಹುತಕಾರಿ ಅಪರಾಧದ ಸುತ್ತ ಕಥೆ ಹೆಣೆಯಲಾಗಿದೆ. ಸಾಮಾನ್ಯವಾಗಿ ಬಳಕೆದಾರನು ಯಾವುದೇ ಒಂದು ಮೆಸೇಜ್ ಕಳುಹಿಸಿದರೆ, ಅದು ಮೊದಲು ಸ್ಯಾಟಲೈಟ್ ಸ್ಟೋರ್ಗೆ ತಲುಪುತ್ತದೆ. ನಂತರ ಸಂಬಂಧಪಟ್ಟವರಿಗೆ ಅದು ರವಾನೆಯಾಗುತ್ತದೆ. ಸ್ವೀಕೃತಿ ಮಾಡುವವನು ಹ್ಯಾಕ್ ಮಾಡಿ ಅದನ್ನು ದುರುಪಯೋಗ ಮಾಡಿಕೊಂಡರೆ ಅದರ ಪರಿಣಾಮವನ್ನು ಬಳಕೆದಾರ ಎದುರಿಸಬೇಕಾಗುತ್ತದೆ. ಇಂತಹುದನ್ನು ನಾಯಕನಟ ಹೇಗೆ ತನಿಖೆ ಮಾಡುತ್ತಾನೆ ಎಂಬುದು ರೈ ಬೋ ಸಿನಿಮಾದ ಸಾರಾಂಶವಾಗಿದೆ. ಅಜಯ್ ರಾವ್ ಗೆ ಮಾನ್ವಿತಾ ಹರೀಶ್ ನಾಯಕಿಯಾಗಿ ಜತೆಯಾಗಿದ್ದು, ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ.
ರೈನ್ ಬೋ ಚಿತ್ರವನ್ನು ಗುರು ದೇಶಪಾಂಡೆ ಅವರ ಶಿಷ್ಯ ಎಸ್. ರಾಜವರ್ಧನ್ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಸ್ವತಃ ಗುರುದೇಶಪಾಂಡೆ ವಹಿಸಿಕೊಂಡಿದ್ದಾರೆ. ಉಳಿದಂತೆ ಎಮಿಲ್ ಸಂಗೀತ ನಿರ್ದೇಶನ, ಜಡೇಶ್ ಕುಮಾರ್, ಜಾಯ್ ಜಾರ್ಸ್, ಎಸ್. ರಾಜವರ್ಧನ್ ಚಿತ್ರಕತೆ, ಆರೂರು ಸುಧಾಕರ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ. ಎಲ್ಲ ಅಂದುಕೊಂಡಂತಾದರೆ ಮುಂದಿನ ತಿಂಗಳಿನಿಂದ ರೈನ್ ಬೋ ಚಿತ್ರೀಕರಣ ಆರಂಭಿಸಲಿದೆ.