• ವೀರೇಂದ್ರ ಮಲ್ಲಣ್ಣ

ಪ್ರೀತಿಯ ಕನ್ನಡ ಸುದ್ದಿ ಮಾಧ್ಯಮಗಳೇ,

ಇದನ್ನು ಬರೆಯುವುದಕ್ಕೆ ಹಿಂದಿನ ಹಲವಾರು ಘಟನೆಗಳ ಪ್ರೇರಣೆ ಇದ್ದರೂ, ಇಂದಿನ ಒಂದು ಉದಾಹರಣೆ ಹೀಗಿದೆ. ರಾಜಮೌಳಿಯನ್ನು ಕೇಳಿದ ಪ್ರಶ್ನೆ “ಕನ್ನಡದ ಯಾವ ನಟರಿಗೆ ನಿರ್ದೇಶನ ಮಾಡಲು ನೀವು ಇಚ್ಚಿಸುತ್ತೀರಿ?”

ರಾಜಮೌಳಿಯ ಉತ್ತರ : “ನಾನು ಈ ಪ್ರಶ್ನೆಗೆ ಉತ್ತರಿಸಿದರೆ ನಿಮ್ಮ ಹೆಡ್ ಲೈನ್ ‘ರಾಜಮೌಳಿ ಇಂತ ನಟರ ಜೊತೆ ಸಿನಿಮಾ ಮಾಡೋಕೆ ಇಷ್ಟ ಪಡ್ತಾರೆ’ ಅಂತಾಗುತ್ತದೆ, ನಾನು ಬಂದಿರುವುದು ಆರ್.ಆರ್.ಆರ್. ಸಿನಿಮಾದ ಪ್ರಚಾರಕ್ಕೆ, ಇಂದಿನ ಹೆಡ್ ಲೈನ್ ಆರ್.ಆರ್.ಆರ್. ಸಿನಿಮಾ ಆಗಬೇಕು, ಹಾಗಾಗಿ ನಾನು ಈ ಪ್ರಶ್ನೆಗೆ ಉತ್ತರಿಸುವುದಿಲ್ಲ..!”

ತಮಿಳು, ತೆಲುಗು, ಹಿಂದಿ ಮತ್ತು ಬೇರೆ ಯಾವುದೇ ಭಾಷೆಯ ಸಿನಿಮಾ ನಟ-ನಟಿಯರು, ನಿರ್ದೇಶಕರು, ಸಿನಿಮಾ ತಂಡದವರು ಅವರ ಸಿನಿಮಾಗಳ ಪ್ರಚಾರಕ್ಕಾಗಿ ಅಥವ ಬೇರೆ ಉದ್ದೇಶಕ್ಕಾಗಿ ಕರ್ನಾಟಕಕ್ಕೆ ಅಥವ ಬೆಂಗಳೂರಿಗೆ ಬಂದಾಗ ಅವರನ್ನು “ಕನ್ನಡದಲ್ಲಿ ನಾಲ್ಕು ಮಾತನಾಡಿ, ನಿಮಗೂ ಕನ್ನಡಕ್ಕೂ ಕರ್ನಾಟಕಕ್ಕೂ ಇರುವ ನಂಟನ್ನು ಹೇಳಿ, ಕನ್ನಡದ ಯಾವ ನಟ-ನಟಿ ನಿಮಗೆ ಸ್ನೇಹಿತರು, ಯಾರ ಮನೆಗಳಿಗೆ ಹೋಗ್ತೀರಿ, ಕನ್ನಡದ ಒಂದು ಸಂಭಾಷಣೆ ಹೇಳಿ, ಕನ್ನಡದ ಒಂದು ಹಾಡು ಹಾಡಿ, ನಿಮ್ಮ ಮೆಚ್ಚಿನ ಕನ್ನಡ ಸಿನಿಮಾ ಯಾವುದು?” ಈ ರೀತಿಯ ಪ್ರಶ್ನೆಗಳನ್ನಾಗಲೀ, ನಿರ್ದೇಶಕರಿಗೆ “ಕನ್ನಡದಲ್ಲಿ ಯಾವಾಗ ಸಿನಿಮಾ ಮಾಡ್ತೀರಿ? ಕನ್ನಡದ ಯಾವ ನಟರ ಜೊತೆ ಸಿನಿಮಾ ಮಾಡ್ತೀರಿ? ಕನ್ನಡದ ಯಾವ ನಟ ನಿಮಗೆ ಇಷ್ಟ?” ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ.

ಕೆಲ ಸಂದರ್ಭಗಳಲ್ಲಿ ಆ ರೀತಿಯ ಪ್ರಶ್ನೆಗಳು ಬಾಲಿಶವಾಗಿಯೂ ಕಾಣಬಹುದು. ಅವರು ಬರುವುದು ಅವರ ಸಿನಿಮಾ ಪ್ರಚಾರಕ್ಕೆ ಅಥವ ಬೇರೆ ಯಾವುದಾದರೂ ಉದ್ದೇಶಕ್ಕೆ, ಆ ಉದ್ದೇಶವನ್ನು ಹೊರತುಪಡಿಸಿ ಕೇಳಲಾಗುವ ಪ್ರಶ್ನೆಗಳಿಗೆ ಅವರು ಹಾರಿಕೆಯ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತ, ನಾಜೂಕಿನಿಂದ ಜಾರಿಕೊಳ್ಳುವ ಉತ್ತರ ನೀಡುತ್ತಾರೆ. ಕೆಲ ಸಂದರ್ಭಗಳಲ್ಲಿ ಅವರು ಮುಜುಗರಕ್ಕೆ ಈಡಾಗಬಹುದು. ಹಾಗಾಗಿ ಅವರ ಉದ್ದೇಶದ ಕುರಿತಾದ ಪ್ರಶ್ನೆಗಳನ್ನು ಮಾತ್ರ ಕೇಳುವುದು ಆರೋಗ್ಯಕರ. ತೀರಾ ವೈಯಕ್ತಿಕ ಭೇಟಿಯಾದರೆ ಹೆಚ್ಚು ಪ್ರಶ್ನೆಗಳನ್ನು ಕೇಳದಿರುವುದೇ ಸೌಜನ್ಯ. ಹಾಗೇ ಅವರ ಭಾಷೆ ಗೊತ್ತಿದ್ದರೆ ಆ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿ, ಗೊತ್ತಿಲ್ಲದೇ ಆ ಭಾಷೆಗಳಲ್ಲಿ ಪ್ರಶ್ನೆ ಕೇಳಲು ಹೋಗಿ ನಗೆಪಾಟಲಿಗೆ ಈಡಾಗುವುದೂ ಬೇಡ. ಇಂದಿನ ಡಿಜಿಟಲ್ ಯುಗದಲ್ಲಿ ಒಂದು ದಾಖಲೆ ಹಲವಾರು ದಿನಗಳ ಕಾಲ ಕಾಲೆಳೆಸಿಕೊಳ್ಳುವ ಸರಕಾಗುತ್ತದೆ. ಪ್ರಶ್ನೆಗಳನ್ನು ಕನ್ನಡದಲ್ಲೇ ಕೇಳಿ, ಪ್ರಚಾರಕ್ಕೆಂದು ಬರುವವರಿಗೆ ಆ ಪ್ರಶ್ನೆ ಏನೆಂದು ಮತ್ತೊಬ್ಬರನ್ನು ಕೇಳಿಯಾದರೂ ತಿಳಿದುಕೊಂಡು ಉತ್ತರಿಸುವ ಅನಿವಾರ್ಯತೆ ಇದ್ದೇ ಇರುತ್ತದೆ.

ಕನ್ನಡ, ಕನ್ನಡನಾಡು, ಕನ್ನಡ ನಟರು, ಸಿನಿಮಾಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ, ಅವರು ಹೇಳುವ ಉತ್ತರಗಳಿಂದ ಖುಷಿಯಾಗಿ ಹೆಮ್ಮೆ ಪಡುವಂತ ದೌರ್ಭಾಗ್ಯ ಕನ್ನಡಿಗರಿಗೆ ಬಂದಿಲ್ಲ. ಭಾಷೆಯ ವಿಚಾರದಲ್ಲಿ ನಮಗೆ ಆ ಮಟ್ಟಿಗಿನ ಕೀಳರಿಮೆಯೂ ಬೇಕಾಗಿಲ್ಲ. ಕನ್ನಡ ಭಾಷೆ ಎಂದರೆ ಬರೀ ಸಿನಿಮಾ ಮಾತ್ರವಲ್ಲ, ಕನ್ನಡ ಭಾಷೆ, ಕನ್ನಡದ ಹಿರಿಮೆ ಸಿನಿಮಾನ ಮೀರಿದ್ದು. ಕನ್ನಡ ಒಂದು ಹೆಮ್ಮರ, ಸಿನಿಮಾ ಒಂದು ಕೊಂಬೆ.. ಯಾರೂ ಪ್ರಶ್ನೆ ಕೇಳದೆಯೂ ಪರಭಾಷೆಯ ಸಾಧಕರು ಅನೇಕ ವೇದಿಕೆಗಳಲ್ಲಿ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಜನರ ಬಗ್ಗೆ, ಕರ್ನಾಟಕದ ಸಾಧಕರ ಬಗ್ಗೆ ಬಿಚ್ಚುಮನಸ್ಸಿನಿಂದ ಮಾತನಾಡಿರುವ ಉದಾಹರಣೆಗಳು ಸಾಕಷ್ಟಿವೆ. ಅತ್ತು ಕರೆದು ಔತಣ ಮಾಡಿಸಿಕೊಳ್ಳುವುದು ಅನಗತ್ಯ..

ಪೊನ್ನಪ್ಪನ ಪಾತ್ರದಲ್ಲಿ ರವಿ ಮಿಂಚಿಂಗ್!

Previous article

ಪ್ರಮೋದ್‌ ಇಲ್ಲಿ ಮಾತಿನ ಮಲ್ಲ!

Next article

You may also like

Comments

Leave a reply

Your email address will not be published.