rajan

ನಾವಾಡುವ ನುಡಿಯೇ ಕನ್ನಡ ನುಡಿ ಅಂದವರು…

ಹಿರಿಯ ಸಂಗೀತ ನಿರ್ದೇಶಕ,  ಮೆಲೋಡಿ ಕಿಂಗ್‌ ಎಂದೇ ಹೆಸರಾಗಿದ್ದ ರಾಜನ್‌ ತುಂಬು ಜೀವನವನ್ನು ಮುಗಿಸಿ ಹೊರಟಿದ್ದಾರೆ. ರಾಜನ್‌-ನಾಗೇಂದ್ರ ಜೋಡಿ ನಿರ್ದೇಶಿಸಿದ ನೂರಾರು ಸಿನಿಮಾಗಳ ಸಾವಿರಾರು ಹಾಡುಗಳು ಭಾರತೀಯ ಚಿತ್ರರಂಗವನ್ನು ಆವರಿಸಿವೆ. ನೆನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಲು ಅಣಿಯಾಗುತ್ತಿದ್ದ ರಾಜನ್‌ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ತತ್ತರಿಸಿದ್ದಾರೆ. ಸುಧಾರಿಸಿಕೊಳ್ಳಬಹುದು ಅಂತಾ ಅಂದುಕೊಳ್ಳುವಷ್ಟರಲ್ಲಿ ಹಿರಿಯ ಜೀವ ಉಸಿರು ನಿಲ್ಲಿಸಿದೆ. ಗಂಧದ ಗುಡಿಯ ನಿರ್ದೇಶಕ ವಿಜಯ್‌ ತೀರಿಕೊಂಡು ಎರಡು ದಿನ ಕಳೆಯುವುದರ ಒಳಗೆ ಅದರ ಸಂಗೀತ ನಿರ್ದೇಶಕರಲ್ಲೊಬ್ಬರಾದ ರಾಜನ್‌ ಕೂಡಾ ಬದುಕಿನ ಪಯಣ ಮುಗಿಸಿರುವುದು ವಿಪರ್ಯಾಸ…

ಕಪ್ಪು ಬಿಳುಪು ಯುಗದಿಂದಲೂ ನೂರಾರು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಯಶಸ್ವೀ ಸಂಗೀತ ನಿರ್ದೇಶಕ ಜೋಡಿಯಾದ ರಾಜನ್ – ನಾಗೇಂದ್ರ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಸ್ಯಾಂಡಲ್‍ವುಡ್ಡಿನ ಮೆಲೋಡಿ ಕಿಂಗ್ಸ್ ಎಂದೇ ಇವರು ಖ್ಯಾತಿ ಪಡೆದಿದ್ದಾರೆ. 1965 ರಿಂದ 1990 ರವರೆಗೆ ಕನ್ನಡ ಚಿತ್ರ ರಸಿಕರಿಗೆ ಸುಮಧುರ ಗೀತೆಗಳನ್ನು ರಾಜನ್-ನಾಗೇಂದ್ರ ಅವರು ನೀಡಿದ್ದಾರೆ. ಇವರು ಸಂಗೀತ ಸಂಯೋಜಿಸಿದ ಒಂದೊಂದು ಗೀತೆಗಳೂ ವರುಷಗಳು ಉರುಳಿದರೂ ಇನ್ನೂ ಮನಸ್ಸಿನಲ್ಲಿ ಗುನುಗುವಂತೆ ಹಸಿರಾಗಿವೆ. ಯುಗಳ ಗೀತೆಗಳಿರಿಲಿ, ಭಕ್ತಿರಸದಿಂದ ಕೂಡಿದ ಗೀತೆಗಳಿರಲಿ, ಎಲ್ಲ ತರಹದ ಗೀತೆಗಳ ಸಂಗೀತ ಸಂಯೋಜನೆಯಲ್ಲೂ ಇವರದು ಎತ್ತಿದಕೈ. ಈ ಜೋಡಿಗೆ ಎರಡು ಕನಸು, ಪರಸಂಗದ ಗೆಂಡೆತಿಮ್ಮ ಚಿತ್ರಗಳು ರಾಜ್ಯ ಪ್ರಶಸ್ತಿ ತಂದು ಕೊಟ್ಟಿದ್ದವು. 90ರ ದಶಕದವರೆಗೂ ರಾಜನ್ – ನಾಗೇಂದ್ರ ಜೋಡಿ ಸುಮಧುರ ಸಂಗೀತ ನಿರ್ದೇಶನಕ್ಕೆ ಹೆಸರಾಗಿತ್ತು. ಈ ಜೋಡಿಯಲ್ಲಿ ಕಿರಿಯರಾದ ನಾಗೇಂದ್ರ ಅವರು ನವೆಂಬರ್ 4, 2000ರಲ್ಲಿ ನಮ್ಮನ್ನಗಲಿದರು. ಇದರೊಂದಿಗೆ ಈ ಜೋಡಿಯ ಮಧುರ ಮಧುರ ಮಂಜುಳಗಾನದ ಅಧ್ಯಾಯ ಅಂತ್ಯ ಕಂಡಿತು. ಈಗ ರಾಜನ್‌ ಕೂಡಾ ಕಣ್ಮುಚ್ಚಿದ್ದಾರೆ.

ಸಿನಿಮಾ ಸಂಗೀತದಲ್ಲಿ ರಾಜನ್ ನಾಗೇಂದ್ರ ಎಂದರೆ ಒಂದು ರೀತಿಯ ಗೀತ ಸುನಾದ, ವಿಧ ವಿಧ ವಾದ್ಯಗಳ ನಾದ ತರಂಗ ನಮ್ಮನ್ನಾವರಿಸುತ್ತದೆ. ರಾಜನ್ ನಾಗೇಂದ್ರ ಅವರ ಸಂಗೀತ ಅಂದರೆ ಕನ್ನಡಕ್ಕೊಂದು ಟ್ರಂಪ್ ಕಾರ್ಡ್. ಕೆಲವೊಂದು ಚಿತ್ರಗಳು, ಗೀತೆಗಳ ಮೌಲ್ಯಗಳಿಂದಲೇ ಗುರುತಿಸಲ್ಪಟ್ಟಿವೆ, ಚಿತ್ರದ ಬಾಕ್ಸ್ ಆಫೀಸ್ ಮೌಲ್ಯಗಳನ್ನು ಹೆಚ್ಚಿಸಿವೆ, ನಟ ನಟಿಯರ ತಾರಾ ವರ್ಚಸ್ಸನ್ನು ಹೆಚ್ಚಿಸಿವೆ ಎಂದು ಗುರುತಿಸುವುದಾದರೆ, ಅಲ್ಲಿ ರಾಜನ್ – ನಾಗೇಂದ್ರ ಸಂಗೀತ ಜೋಡಿಯ ಹೆಸರು ಪ್ರಧಾನವಾಗಿ ಉಲ್ಲೇಖಿಸಲ್ಪಡುತ್ತದೆ. ಹಿಂದೀ ಚಿತ್ರರಂಗದಲ್ಲಿ ಲಕ್ಷ್ಮೀಕಾಂತ್ ಪ್ಯಾರೇಲಾಲ್, ಕಲ್ಯಾಣಜೀ ಆನಂದಜೀ, ಶಂಕರ್ ಜೈಕಿಷನ್ ಜೋಡಿಗಳು ಪಡೆದ ಪ್ರಖ್ಯಾತಿಯನ್ನೇ ದಕ್ಷಿಣ ಭಾರತದ ಕನ್ನಡ ಮತ್ತು ಇತರ ಚಿತ್ರರಂಗಗಳಲ್ಲಿ ರಾಜನ್ ಮತ್ತು ನಾಗೇಂದ್ರ ಜೋಡಿ ಪಡೆದಿದ್ದಾರೆ.

ಜೀವನ ಸಾಧನೆ : ಮೈಸೂರಿನ ಶಿವಾರಾಮಪೇಟೆಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ರಾಜನ್ ಮತ್ತು ನಾಗೇಂದ್ರ ಸಹೋದರರು ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಸಂಗೀತ ನೀಡಿದ ಚಿತ್ರಗಳ ಸಂಖ್ಯೆ ಕನ್ನಡದಲ್ಲಿ ಸುಮಾರು 200, ಮತ್ತು ಚಿತ್ರಗಳು ತಮಿಳು, ತೆಲುಗು, ಸಿಂಹಳಿ ಭಾಷೆಗಳು ಸೇರಿದಂತೆ ಒಟ್ಟಾರೆ 175. ಈ ಸಹೋದರರ ತಂದೆ ರಾಜಪ್ಪನವರು ಪ್ರಸಿದ್ಧ ಹಾರ್ಮೋನಿಯಂ ವಾದಕರಾಗಿದ್ದರು. ಮೂಕಿ ಚಿತ್ರಗಳ ಯುಗದಲ್ಲಿ ಅವರು ಸಂಗೀತವಾದನ ನೀಡಿದ್ದರು. ರಾಜನ್ ಮತ್ತು ನಾಗೇಂದ್ರ ಸಹೋದರರು ಸಂಗೀತ ಕಲಿತದ್ದು ಬಿಡಾರಂ ಕೃಷ್ಣಪ್ಪನಂತಹವರ ಬಳಿ. ರಾಜನ್ ಅವರು ಸ್ವಯಂ ಚೌಡಯ್ಯನವರಲ್ಲಿ ಪಿಟೀಲು ವಾದನ ಕಲಿತರು. ನಾಗೇಂದ್ರರು ಜಲತರಂಗ್ ವಾದನ ಕಲಿತರು. ಈ ಸೋದರರು ಕಾಳಿಂಗರಾಯರ ತಂಡ ಮತ್ತು ಇತರ ವಾದ್ಯ ತಂಡಗಳಲ್ಲಿ ಕಾರ್ಯ ನಿರ್ವಹಿಸಿ, 1952ರ ವರ್ಷದಲ್ಲಿ ಸೌಭಾಗ್ಯಲಕ್ಷ್ಮಿ ಎಂಬ ಚಿತ್ರದ ಮೂಲಕ ಚಿತ್ರಸಂಗೀತ ನಿರ್ದೇಶನಕ್ಕೆ ಪಾದಾರ್ಪಣ ಮಾಡಿದರು. ಈ ಜೋಡಿಯಲ್ಲಿ ರಾಜನ್ ಹಿರಿಯರು. ಇವರು ಜನಿಸಿದ್ದು ಮೇ 27, 1938ರಂದು.

ರಾಜನ್-ನಾಗೇಂದ್ರ ಅವರು ಸಂಗೀತ ಸಂಯೋಜನೆಯಲ್ಲಿ ಮಧುರ ರಾಗ ಸಂಯೋಜನೆಯ ಜೊತೆಗೆ, ಲಯಬದ್ಧ ತಾಳಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದರು. ಇವರ ಸಂಗೀತ ಸಂಯೋಜನೆಯ ಶೈಲಿ ಆ ಕಾಲದಲ್ಲಿ ಅವರದೇ ಬ್ರ್ಯಾಂಡ್ ಆಗಿ ಗುರುತಿಸಲ್ಪಟ್ಟಿತ್ತು. ಚಿತ್ರಗೀತೆಯ ಪಲ್ಲವಿಯನ್ನು ಕೇಳುತ್ತಲೇ ಅದು ಅವರದೇ ಸಂಗೀತ ಸಂಯೋಜನೆ ಎಂದು ಜನರು ಗುರುತಿಸುವ ಮಟ್ಟಿಗೆ ಜನಪ್ರಿಯವಾಗಿದ್ದವು. ರಾಜನ್-ನಾಗೇಂದ್ರ ಸಂಗೀತ ಸಂಯೋಜನೆಯ ವಿಶಿಷ್ಟತೆ ಎಂದರೆ, ಆ ಕಾಲದಲ್ಲಿ ಜನಪ್ರಿಯವಾಗಿದ್ದ ಪಾಶ್ಚಿಮಾತ್ಯ ವಾದ್ಯಗಳಾದ ಡ್ರಮ್ಸ್‍ಗಳ ಹಾಗೂ ಗಿಟಾರ್‍ಗಳ ಉಪಯೋಗ. ಡ್ರಮ್ಸ್‍ಗಳ ಮತ್ತು ಗಿಟಾರ್‍ಗಳ ಹಿಮ್ಮೇಳವನ್ನು ಇವರಷ್ಟು ಪರಿಣಾಮಕಾರಿಯಾಗಿ ಕನ್ನಡ ಚಿತ್ರಸಂಗೀತದಲ್ಲಿ ಅಳವಡಿಸಿಕೊಂಡವರು ಆ ಕಾಲದಲ್ಲಿ ಇಲ್ಲವೆಂದೇ ಹೇಳಬೇಕು. ನಾನಿನ್ನ ಬಿಡಲಾರೆ ಚಿತ್ರದ “ಎಂದೆಂದಿಗೂ ನಾ ನಿನ್ನ.. ಬಿಡಲಾರೆ ಬಾ ಚಿನ್ನ” ಮತ್ತು ಸಿಂಗಪೂರಿನಲ್ಲಿ ರಾಜ ಕುಳ್ಳ ಚಿತ್ರದ “ಪ್ರೇಮ ಪ್ರೀತಿ ನನ್ನುಸಿರು..” ಗೀತೆಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ಈಗಿನ ಎಲೆಕ್ಟ್ರಾನಿಕ್ ಯುಗದ ಡಿಜಿಟಲ್ ಡ್ರಮ್ಸ್‍ಗಳು ಆಗ ಇದ್ದಿದ್ದರೆ ಅವರಿಂದ ಇನ್ನೆಷ್ಟು ಅದ್ಭುತಗಳು ಹೊಮ್ಮುತ್ತಿದ್ದವೋ!

ಮಹಾನಟರಿಗೆ ರಾಗ ಹೆಣೆದು : ಡಾ. ರಾಜ್ ಅವರ ಅನೇಕ ಚಿತ್ರಗಳಿಗೆ ರಾಜನ್ – ನಾಗೇಂದ್ರ ಜೋಡಿ ಅತ್ಯುತ್ತಮ ಸಂಗೀತ ಸಂಯೋಜಿಸಿದ್ದಾರೆ. ಗಂಧದ ಗುಡಿ ಚಿತ್ರದ “ನಾವಾಡುವ ನುಡಿಯೇ ಕನ್ನಡ ನುಡಿ” ಮತ್ತು ಚಲಿಸುವ ಮೋಡಗಳು ಚಿತ್ರದ “ಜೇನಿನ ಹೊಳೆಯೋ ಹಾಲಿನ ಮಳೆಯೋ” ಗೀತೆಗಳಂತೂ ಎಷ್ಟು ಜನಪ್ರಿಯವಾಯಿತೆಂದರೆ, ಅವು ಒಂದು ರೀತಿಯಲ್ಲಿ ಕನ್ನಡದ ನಾಡಗೀತೆಗಳಾಗಿ ಬಿಟ್ಟಿವೆ. ಇನ್ನು ಕನ್ನಡದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ ಅವರ ಅನೇಕ ಚಿತ್ರಗಳಿಗೂ ರಾಜನ್ – ನಾಗೇಂದ್ರ ಜೋಡಿ ಸಂಗೀತ ನೀಡಿದ್ದಾರೆ. ಒಂದು ಕಾಲದಲ್ಲಿ ಅನಂತ್‍ನಾಗ್ ಮತ್ತು ಲಕ್ಷ್ಮಿ ಅವರ ಜನಪ್ರಿಯ ಜೋಡಿಯ ಚಿತ್ರಗಳು ರಾಜನ್ – ನಾಗೇಂದ್ರ ಜೋಡಿಯ ಸುಮಧುರ ಸಂಗೀತದಿಂದಲೇ ಅತ್ಯಂತ ಯಶಸ್ವಿಯಾಗಿದ್ದವು ಎಂದರೆ ತಪ್ಪಾಗಲಾರದು. ಡಾ.ರಾಜ್ ಅಭಿನಯದ ಗಂಧದ ಗುಡಿ ಸಿನೆಮಾಕ್ಕೆ ಸಂಗೀತ ನೀಡಿದ್ದ ರಾಜನ್ -ನಾಗೇಂದ್ರ ಗಂಧದ ಗುಡಿ – ಭಾಗ 2ಕ್ಕೂ ಸಂಗೀತ ನೀಡಿದ್ದರು. ಅವರು ಗಂಧದಗುಡಿಯಲ್ಲಿ ಪಿ.ಬಿ.ಶ್ರೀನಿವಾಸ್ ಅವರು ಹಾಡಿದ “ನಾವಾಡುವ ನುಡಿಯೇ ಕನ್ನಡ ನುಡಿ” ಜನಪ್ರಿಯ ಗೀತೆಯನ್ನು ಡಾ. ರಾಜ್ ಅವರ ಕಂಠದಲ್ಲಿ ಸ್ವಲ್ಪ ವಿಭಿನ್ನವಾಗಿ ರಾಗ ಸಂಯೋಜಿಸಿ ಹಾಡಿಸಿದ್ದರು.

ಕನ್ನಡದ ಪ್ರತಿಭಾವಂತ ಗೀತ ರಚನೆಕಾರರಾದ ದಿವಂಗತ ಚಿ.ಉದಯ್‍ಶಂಕರ್ ಮತ್ತು ರಾಜನ್-ನಾಗೇಂದ್ರ ಜೋಡಿ ಸೇರಿ ಕನ್ನಡ ಚಿತ್ರರಂಗಕ್ಕೆ ಅತಿಮಧುರವಾದ ಗೀತ-ಸಂಗೀತದ ಹೊಸ ಯುಗವನ್ನೇ ಸೃಷ್ಟಿಸಿದರು. ಒಟ್ಟಿನಲ್ಲಿ ಹೇಳಬೇಕಂದರೆ ರಾಜನ್ – ನಾಗೇಂದ್ರ ಜೋಡಿ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಸಂಗೀತ ನಿರ್ದೇಶಕ ಜೋಡಿ ಎಂದರೆ ತಪ್ಪಲ್ಲ. ಕನ್ನಡ ಚಿತ್ರರಸಿಕರಿಗೆ ಮಧುರ ಗೀತೆಗಳ ಮೂಲಕ ಮರೆಯಲಾರದ ಕಾಣಿಕೆಯನ್ನು ನೀಡಿ, ಅವರ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದ್ದಿದ್ದಾರೆ. ಕೆಲವು ವರ್ಷಗಳ ಹಿಂದೆ ನಾಗೇಂದ್ರ ಅವರ ನಿಧನದಿಂದ ರಾಜನ್-ನಾಗೇಂದ್ರ ಜೋಡಿಯ ಕೊಂಡಿಯೊಂದು ಕಳಚಿತ್ತು. ಈಗ ರಾಜನ್‌ ಕೂಡ ಬದುಕು ಮುಗಿಸಿ ಎದ್ದು ನಡೆದಿದ್ದಾರೆ. ಈ ಜೋಡಿ ಸಂಗೀತ ನೀಡಿದ ಹಾಡುಗಳು ಯಾವತ್ತಿಗೂ ಕೇಳಲು ಇಂಪಾಗಿ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿ ಹಚ್ಚಹಸಿರಾಗಿರಲಿವೆ…


Posted

in

by

Tags:

Comments

Leave a Reply