ದಕ್ಷಿಣ ಭಾರತದ ಖ್ಯಾತ ಸಿನಿಮಾ ಛಾಯಾಗ್ರಾಹಕ ಸಂತೋಷ್ ಶಿವನ್ ಹಿಂದೆ ರಜನೀಕಾಂತ್ ಅಭಿನಯದ ’ದಳಪತಿ’ (1991) ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು. ಮಣಿರತ್ನಂ ನಿರ್ದೇಶನದ ಈ ಸೂಪರ್ಹಿಟ್ ಚಿತ್ರದ ಕ್ಯಾಮೆರಾ ಕೆಲಸಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸುಮಾರು 27 ವರ್ಷಗಳ ನಂತರ ಸಂತೋಷ್ ಶಿವನ್ ಮತ್ತೆ ರಜನೀಕಾಂತ್ ಸಿನಿಮಾತಂಡಕ್ಕೆ ಬಂದಿದ್ದಾರೆ. ಎ.ಆರ್.ಮುರುಘದಾಸ್ ನಿರ್ದೇಶನದಲ್ಲಿ ರಜನಿ ನಟಿಸುತ್ತಿರುವ ನೂತನ ಚಿತ್ರಕ್ಕೆ ಸಂತೋಷ್ ಶಿವನ್ ಛಾಯಾಗ್ರಹಣ ಮಾಡುವುದೆಂದು ನಿಗಧಿಯಾಗಿದೆ. ’2.0’ ಮತ್ತು ’ಪೆಟ್ಟಾ’ ಯಶಸ್ವೀ ಸಿನಿಮಾಗಳ ನಂತರ ರಜನೀಕಾಂತ್ರ ಈ ಹೊಸ ಸಿನಿಮಾ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದೆ.
ಛಾಯಾಗ್ರಾಹಕ ಸಂತೋಷ್ ಶಿವನ್ ತಮ್ಮ ಟ್ವಿಟರ್ನಲ್ಲಿ ಈ ವಿಷಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ’ಸರ್ಕಾರ್’, ’ತುಪ್ಪಾಕಿ’ ಸೂಪರ್ಹಿಟ್ ತಮಿಳು ಚಿತ್ರಗಳ ನಿರ್ದೇಶಕ ಎ.ಆರ್.ಮುರುಘದಾಸ್ ಮೊದಲ ಬಾರಿಗೆ ರಜನೀಕಾಂತ್ ಸಿನಿಮಾ ನಿರ್ದೇಶಿಸಲಿದ್ದಾರೆ. ಈಗಾಗಲೇ ರಾಜಕೀಯದಲ್ಲಿ ಒಂದು ಕಾಲಿಟ್ಟಿರುವ ರಜನೀಕಾಂತ್ ಅವರಿಗೆ ಇದೇ ಕೊನೆಯ ಚಿತ್ರವಾಗಲಿದೆ ಎಂದೂ ಹೇಳಲಾಗುತ್ತಿದೆ. ರಾಜಕೀಯಕ್ಕೆ ವೇದಿಕೆಯಾಗಿಯೂ ಚಿತ್ರಕಥೆ ಇರಲಿದೆಯೇ ಎನ್ನುವುದನ್ನು ಕಾದು ನೋಡಬೇಕು. ಚಿತ್ರತಂಡದ ಇತರೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಚಾಲ್ತಿಯಲ್ಲಿದೆ. ಈ ಹಿಂದೆ ತಮ್ಮ ’ಸರ್ಕಾರ್’ ತಮಿಳು ಚಿತ್ರಕ್ಕೆ ನಾಯಕಿಯಾಗಿದ್ದ ಕೀರ್ತಿ ಸುರೇಶ್ ಅವರನ್ನೇ ರಜನಿಗೆ ಜೋಡಿಯಾಗಿ ಕರೆತರುವ ಇರಾದೆ ಮುರುಘದಾಸ್ ಅವರದು. ಲೈಕಾ ಪ್ರೊಡಕ್ಷನ್ಸ್ ಚಿತ್ರ ನಿರ್ಮಿಸುತ್ತಿದೆ.
#
No Comment! Be the first one.