ಆರಂಭದಲ್ಲಿ ಟೈಟಲ್ ಕಾರಣದಿಂದಲೇ ಭಾರೀ ಸುದ್ದಿಯಾಗಿದ್ದ ಚಿತ್ರ ರಾಜಣ್ಣನ ಮಗ. ಕೋಲಾರ ಸೀನು ನಿರ್ದೇಶನದ ಈ ಚಿತ್ರದ ಬಿಡುಗಡೆ ದಿನಾಂಕವೀಗ ನಿಗಧಿಯಾಗಿದೆ. ಇದೇ ಮಾರ್ಚ್ ತಿಂಗಳ 22 ರಂದು ರಾಜಣ್ಣನ ಮಗ ಪ್ರೇಕ್ಷಕರ ಮುಂದೆ ಪ್ರತ್ಯಕ್ಷನಾಗಲಿದ್ದಾನೆ.
ಚರಣ್ ರಾಜ್ ಈ ಚಿತ್ರದಲ್ಲಿ ರಾಜಣ್ಣನಾಗಿ ವಿಶೇಷವಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಣ್ಣನ ಮಗನಾಗಿ ನಾಯಕನ ಪಾತ್ರವನ್ನು ನಿಭಾಯಿಸಿರುವವರು ಹರೀಶ್. ಈ ರಾಜಣ್ಣನ ಮಗನ ಪಾತ್ರವನ್ನು ನಿರ್ದೇಶಕ ಕೋಲಾರ ಸೀನು ಅತ್ಯಂತ ವಿಶೇಷವಾಗಿ ರೂಪಿಸಿದ್ದಾರಂತೆ. ಈ ರಾಜಣ್ಣನ ಮಗ ಸೌಮ್ಯ ಸ್ವಭಾವದ ಹುಡುಗ. ಆದರೆ ಅನ್ಯಾಯ ನಡೆದರೆ ಅದಕ್ಕೆ ಕಾರಣವಾದವರು ಎಂಥಾ ರಕ್ಕಸರೇ ಆಗಿದ್ದರೂ ಕೆಡವಿಕೊಂಡು ಬಡಿಯುವ ಛಾತಿಯಿರೋ ಈ ಪಾತ್ರ ಪಕ್ಕಾ ಮಾಸ್ ಶೈಲಿಯಲ್ಲಿ ಮೂಡಿ ಬಂದಿದೆಯಂತೆ.
ಆರಂಭದಲ್ಲಿ ಈ ಟೈಟಲ್ ವಿಚಾರವಾಗಿಯೇ ಒಂದಷ್ಟು ವಿವಾದಗಳೆದ್ದಿದ್ದವು. ಯಾಕೆಂದರೆ ಇಡೀ ಕರ್ನಾಟಕಕ್ಕೇ ಪ್ರೀತಿಯ ರಾಜಣ್ಣ ಆಗಿರೋದು ಡಾ. ರಾಜ್ ಕುಮಾರ್ ಅವರು ಮಾತ್ರ. ರಾಜಣ್ಣನ ಮಗ ಅನ್ನೋ ಟೈಟಲ್ ಏನಿದ್ದರೂ ಆ ಕುಟುಂಬಕ್ಕೆ ಮಾತ್ರ ಎಂಬಂಥಾ ವಾದವೂ ಕೇಳಿ ಬಂದಿತ್ತು. ಆದರೆ ರಾಜಣ್ಣನ ಅಭಿಮಾನಿಗಳೇ ಇರುವ ಈ ತಂಡ ರಾಜಣ್ಣನಿಗೆ ಅಪಮಾನವಾಗುವಂಥಾ ಯಾವ ಅಂಶಗಳನ್ನೂ ಇಟ್ಟಿಲ್ಲ ಅಂತ ಸ್ಪಷ್ಟೀಕರಣ ನೀಡಿದ ನಂತರ ಎಲ್ಲವೂ ತಣ್ಣಗಾಗಿ ಕುತೂಹಲ ಮಾತ್ರವೇ ಉಳಿದುಕೊಂಡಿತ್ತು. ಈ ಚಿತ್ರದ ಪ್ರಧಾನ ಆಕರ್ಷಣೆ ನಾಯಕ ಹರೀಶ್. ಇವರಂತೂ ಟೈಗರ್ ಪ್ರಭಾಕರ್ ಅವರನ್ನೇ ಹೋಲುತ್ತಾರೆಂದು ಅನೇಕರು ಹೇಳುತ್ತಾರೆ. ಆದರೆ ಚಿತ್ರದುದ್ದಕ್ಕೂ ಅವರು ಪ್ರಭಾಕರ್ ಅವರ ಖದರ್ ಅನ್ನೇ ನೆನಪಿಸುವಂತೆ ಅಬ್ಬರಿಸಿದ್ದಾರಂತೆ. ಸಾಹಸ ಸನ್ನಿವೇಶಗಳಂತೂ ಡಿಫರೆಂಟ್ ಡ್ಯಾನಿ ಅವರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದಿವೆಯಂತೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಆಕ್ಷನ್ ಹೀರೋನ ಆಗಮನವಾದಂತಿದೆ.
No Comment! Be the first one.