ರಕ್ಷಿತ್ ಶೆಟ್ಟಿ ಜಾಗತಿಕ ಮಟ್ಟದಲ್ಲಿ ಬೆಳೆದು, ಬಾಳಬೇಕಿರುವ ಕಲಾವಿದ. ಪರೋಪಕಾರ, ಸ್ನೇಹಶೀಲ ಗುಣಗಳಿಗೆ ಹೆಸರಾಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಈಗ ಸೇಡು ತೀರಿಸಿಕೊಳ್ಳುವ ಮಟ್ಟಕ್ಕೆ ತಲುಪಿದ್ದಾರೆ. ಮಾಧ್ಯಮವೊಂದು ತಮ್ಮನ್ನು ಟೀಕೆ ಮಾಡಿತು ಅನ್ನೋದನ್ನೇ ನೆಪವಾಗಿಟ್ಟುಕೊಂಡು ಸಮರಕ್ಕೆ ಸಜ್ಜಾಗಿದ್ದಾರೆ. ರಕ್ಷಿತ್ ಯಾಕೆ ಹೀಗೆಲ್ಲಾ ಬದಲಾಗಿದ್ದಾರೆ? ಅಸಲಿಗೆ ಇಲ್ಲಿ ತಪ್ಪು ಯಾರದ್ದು ಎನ್ನುವ ವಿಚಾರದ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ….
ರಕ್ಷಿತ್ ಶೆಟ್ಟಿ ಪಬ್ಲಿಕ್ ಟಿವಿ ಮೇಲೆ ಕೆಂಡ ಕಾರುತ್ತಿದ್ದಾರೆ. ʻʻನಿಮ್ಮ ಬಳಿ ಇರುವ ಅಸ್ತ್ರ TRPಗೋಸ್ಕರ ನಡೆಸುತ್ತಿರುವ ಒಂದು news channel. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ. ಜುಲೈ 11ರಂದು ಉತ್ತರ ಕೊಡ್ತೀನಿ. ಕಾದು ನೋಡಿ…ʼʼ ಎನ್ನುವಂತಾ ದೀರ್ಘ ಪತ್ರ ಬರೆದು ಇಂದಿಗೆ ಒಂಭತ್ತು ದಿನಗಳು ಕಳೆದಿವೆ.
ಒಂದು ಮಟ್ಟಕ್ಕೆ ಹೆಸರು ಮಾಡಿದ ನಟ-ನಟಿಯರ ಸುತ್ತ ವಿವಾದಗಳೂ ಆಗಾಗ ಗಿರಕಿ ಹೊಡೆಯುತ್ತಿರುತ್ತವೆ. ಪರ್ಸನಲ್ ಮತ್ತು ಪ್ರೊಫೆಷನಲ್ ಲೈಫಿನಲ್ಲಿ ಯಾವ್ಯಾವುದೋ ಕಿತಾಪತಿಗಳಲ್ಲಿ ಇವರು ಸಿಕ್ಕಿಕೊಳ್ಳುತ್ತಿರುತ್ತಾರೆ. ಈ ನಿಟ್ಟಿನಲ್ಲಿ ನೋಡಿದರೆ ನಟ ರಕ್ಷಿತ್ ಶೆಟ್ಟಿ ಯಾವ ವಿವಾದಗಳನ್ನೂ ಬೇಕಂತಾ ಮೈಮೇಲೆಳೆದುಕೊಂಡವರಲ್ಲ. ಇಷ್ಟಪಟ್ಟು ಮದುವೆಯಾಗ ಬಯಸಿದ ಹುಡುಗಿ ರಶ್ಮಿಕಾ ಕೈಕೊಟ್ಟು ಹೋದಳು. ಆ ಸಮಯದಲ್ಲೂ ರಕ್ಷಿತ್ ಆಕೆಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡದೆ ಸುಮ್ಮನಾದ ಸೌಜನ್ಯಶೀಲ ಅಂತಾನೇ ಎಲ್ಲರೂ ನಂಬಿದ್ದಾರೆ.
ಆದರೆ ರಕ್ಷಿತ್ ಕೂಡಾ ಇತರರಂತೆ ಹಿಂದೊಂದು, ಮುಂದೊಂದು ಅಂತಾ ಮುಖವಾಡ ಧರಿಸಿದವರಾ? ಸುಗುಣ ಸಂಪನ್ನನಂತೆ ಕಾಣುವ, ವಿನಯಮೂರ್ತಿ ಅವತಾರದ ರಕ್ಷಿತ್ ಒಳಗೊಬ್ಬ ವಿಕೃತ ಮನುಷ್ಯ ಅವಿತುಕುಳಿತಿದ್ದಾನಾ? ಎನ್ನುವ ಅನುಮಾನ ಮೂಡುವಂತಾ ವಿಚಾರಗಳು ಹರಿದಾಡುತ್ತಿವೆ.
ಒಮ್ಮೆ ಸೆಲೆಬ್ರಿಟಿ ಅನ್ನಿಸಿಕೊಂಡ ಮೇಲೆ ಅವರ ಕುರಿತಾದ ಯಾವುದೇ ಸುದ್ದಿಯನ್ನು ಮೀಡಿಯಾಗಳು ಪ್ರಸಾರ ಮಾಡುತ್ತವೆ. ರಕ್ಷಿತ್-ರಶ್ಮಿಕಾ ಮದುವೆ ಮುರಿದುಬಿದ್ದ ವಿಚಾರವನ್ನು ಪಬ್ಲಿಕ್ ಟಿವಿ ಕೂಡಾ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿಯಲ್ಲಿ ಮೂಡಿಬರುವ ಸಿನಿ ಅಡ್ಡ ನಂ.೧ ಸ್ಥಾನದಲ್ಲಿದ್ದು, ಕಳೆದ ಮೂರೂವರೆ ವರ್ಷಗಳಿಂದ ಸ್ಥಾನ ಗಿಟ್ಟಿಸಿಕೊಂಡಿದೆ. ವಿಶ್ವಾಸಾರ್ಹತೆ ಹೊಂದದ ಹೊರತು ಯಾವ ಕಾರಣಕ್ಕೂ ಇಂಥ ಗೆಲುವು ಸಾಧ್ಯವಿಲ್ಲ.
ರಕ್ಷಿತ್-ರಶ್ಮಿಕಾ ಬ್ರೇಕಪ್ ವಿಚಾರದ ಅಥೆಂಟಿಕ್ ನ್ಯೂಸ್ ಕೊಟ್ಟ ವಾಹಿನಿ ಮೇಲೆ ಅವತ್ತು ರಕ್ಷಿತ್ ಕೋಪಗೊಂಡಿದ್ದರಂತೆ. ಅದು ಎರಡು ವರ್ಷಗಳ ಹಿಂದಿನ ಮಾತು. ಪಬ್ಲಿಕ್ ಟಿವಿಯ ಸಿನಿಮಾ ವಿಭಾಗದ ಮುಖ್ಯಸ್ಥರೊಬ್ಬರ ಮನೆಯಲ್ಲಿ ಪೂಜೆ ನಡೆದಿತ್ತು. ಅವರ ತಾಯಿಯ ಪುಣ್ಯತಿಥಿ ಕಾರ್ಯದ ದಿನವದು. ಅದೇ ಸಮಯದಲ್ಲಿ ಅವರ ಫೋನು ರಿಂಗಣಿಸುತ್ತದೆ. ಆ ಕಡೆಯಿಂದ ಮಾತಾಡಿದವರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. “ಏನ್ಸಾರ್ ಬ್ರೇಕಪ್ ವಿಚಾರಾನ ಟೆಲಿಕಾಸ್ಟ್ ಮಾಡಿಬಿಟ್ಟಿದ್ದೀರ”. “ವಿಚಾರ ಯಾವುದಾದರೇನು ಅದನ್ನು ನಿಯತ್ತಾಗಿ ತಲುಪಿಸೋದಷ್ಟೇ ನಮ್ಮ ಕೆಲಸ” ಅಂದಿದ್ದರು ಆ ಪತ್ರಕರ್ತ. ಅಷ್ಟರಲ್ಲಾಗಲೇ ಪುಷ್ಕರ್ ಕೈಯಿಂದ ಫೋನು ಕಿತ್ತುಕೊಂಡ ರಕ್ಷಿತ್ ಮಾತು ಆರಂಭಿಸಿದ್ದರು. ತಾವು ಮಾತಾಡುತ್ತಿರೋದು ಒಬ್ಬ ಸೀನಿಯರ್ ಜರ್ನಲಿಸ್ಟ್ ಜೊತೆ, ತಾನೊಬ್ಬ ಪ್ರತಿಭೆಯ ಜೊತೆ ಜವಾಬ್ದಾರಿಯನ್ನೂ ಇರಿಸಿಕೊಂಡಿರುವ ಹೀರೋ ಅನ್ನೋದನ್ನ ಮರೆತ ರಕ್ಷಿತ್ ಏಕಾಏಕಿ “ನಿನ್ನಮ್ಮನ್ನಾ……” ಅಂತಾ ಅವಾಚ್ಯ ಪದ ಬಳಸಿಬಿಟ್ಟಿದ್ದರು ಎನ್ನುತ್ತಿದೆ ಮೂಲ.
ʻಅಮ್ಮ-ಅಕ್ಕʼನ ತಂಟೆಗೆ ಬಂದರೆ ಯಾರಾದರೂ ಸುಮ್ಮನೇ ಬಿಡೋದಿಲ್ಲ. ಹೆತ್ತ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ, ಅವರ ಪುಣ್ಯ ತಿಥಿಯ ಪೂಜೆ ಮುಗಿಸಿ ಹೊರಬಂದು, ಭಾವುಕರಾಗಿದ್ದವರ ಬಳಿ ಅಂಥಾ ಹೀನ ಪದ ಬಳಸಿದರೆ ಯಾರಾದರೂ ಮರೆಯಲು ಸಾಧ್ಯವಾ? ಹೀಗಾಗಿ ಸಿನಿ ಅಡ್ಡದಲ್ಲಿ ರಕ್ಷಿತ್ ಶೆಟ್ಟಿಯ ವಿಚಾರ ಪ್ರಸ್ತಾಪವಾದಾಗಲೆಲ್ಲಾ ಚನ್ನಾಗಿ ಹುರಿದು ಬಾಡಿಸಿದ್ದಾರೆ. ಹಾಗಂಥ ರಕ್ಷಿತ್ ಸಿನಿಮಾಗಳು ತೆರೆಗೆ ಬಂದಾಗ ಖಂಡಿತವಾಗಿಯೂ ರಿವೇಂಜು ತೀರಿಸಿಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಅತಿ ಹೆಚ್ಚು ಪ್ರಮೋಟ್ ಮಾಡಿದ್ದೇ ಪಬ್ಲಿಕ್ ಟಿವಿ. ಅದು ವಾಹಿನಿ ಮತ್ತು ಅಲ್ಲಿನವರ ವೃತ್ತಿಪರತೆ ಅನ್ನಬಹುದು.
ಸುಮಾರು ಜನ ಹೀರೋಗಳು ಪತ್ರಕರ್ತರಿಗೆ ಧಮ್ಕಿ ಹಾಕುವ, ಅವಾಚ್ಯ ಮಾತಾಡುವ ನೀಚ ಕೆಲಸ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ಇದೇ ಸಿನಿಮಾ ಮಂದಿ ತಮ್ಮ ಒಂದು ಫೋಟೋ, ನ್ಯೂಸು ಪಬ್ಲಿಷ್ ಮಾಡಿಕೊಡಿ ಅಂಥಾ ಮೀಡಿಯಾ ಆಫೀಸುಗಳ ಮುಂದೆ ಹಲ್ಲುಗಿಂಜಿರುತ್ತಾರೆ. ಸದಾ ಹೊಗಳಿಕೆಯನ್ನು ಬಯಸುವ ಕೆಲವರು ಮಾಡಿದ ತಪ್ಪನ್ನು ಅಥವಾ ಇದ್ದದ್ದನ್ನು ಇದ್ದಹಾಗೆ ಬರೆದಾಗ, ಎದೆಗೆ ಒದೆಯಲು ಬರೋದು ಹಳೇ ಚಾಳಿ!
ರಕ್ಷಿತ್ ಕೂಡಾ ಅದೇ ಕೆಟಗರಿಗೆ ಸೇರಿಬಿಟ್ಟರಾ? ಜನ ನಿಮ್ಮನ್ನು ʻಎಂಥಾ ಒಳ್ಳೇ ಮನ್ಷʼ ಅಂದುಕೊಂಡಿದ್ದಾರೆ. ಸಿಂಪಲ್ ಸ್ಟಾರ್ ಬಾಯಲ್ಲೂ ಇಂಥಾ ಹೇಸಿಗೆಯ ಮಾತು ಬರುತ್ತದಾ? ತಾಯಿಯನ್ನು ಕಳೆದುಕೊಂಡು ಸಂಕಟದಲ್ಲಿದ್ದವರಿಗೆ ನೀವು ಅಂಥಾ ಪದಬಳಕೆ ಮಾಡಿದ್ದರೆ Shame on you ರಕ್ಷಿತ್…
- ಈ ವರದಿ ಯಾವುದೇ ವ್ಯಕ್ತಿ/ಸಂಸ್ಥೆಯ ಮಾನಹಾನಿ ಮಾಡುವ ಉದ್ದೇಶ ಹೊಂದಿಲ್ಲ