ಈ ಹುಡುಗನ ನಸೀಬೇ ನೆಟ್ಟಗಿಲ್ಲವಾ? ಒಂದು ಕಡೆ ಜನಪ್ರಿಯತೆ ಹೆಚ್ಚುತ್ತಿದ್ದಂತೇ ಸಂಕಟಗಳೂ ಬೆಳೆಯುತ್ತಿವೆಯಾ? ಕೈಗೆ ಬಂದಿದ್ದು ಬಾಯಿಗೆ ಬರದಂಥಾ ಪರಿಸ್ಥಿತಿಯಾ? ಎಂದೋ ಮಾಡಿದ ಯಡವಟ್ಟು ಈಗ ಬೆನ್ನುಬಿದ್ದು ಕಾಡುತ್ತಿದೆಯಾ? ಸಿಂಪಲ್ ಸ್ಟಾರ್ ಅಂತಲೇ ಹೆಸರಾಗಿರುವ ರಕ್ಷಿತ್ ಶೆಟ್ಟಿಯನ್ನು ಕಂಡ ಯಾರಿಗಾದರೂ ಹೀಗನ್ನಿಸುತ್ತದೆ.
ಇಷ್ಟಪಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ ರೊಳ್ಳೆ ತೆಗೆದು ಮದುವೆ ಕ್ಯಾನ್ಸಲ್ ಮಾಡಿಕೊಂಡು, ಪುರ್ರ್ ಅಂತಾ ರೆಕ್ಕೆ ಬಡಿಯುತ್ತಾ ಪಕ್ಕದ ರಾಜ್ಯಗಳಿಗೆ ವಲಸೆ ಹಾರಿದಳು. ಹಾಗೆ ಹೋದವಳು ಮೇಲಿಂದ ಮೇಲೆ ಸೂಪರ್ ಸ್ಟಾರುಗಳ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಸೌತ್ ಇಂಡಿಯಾ ಸ್ಟಾರ್ ಅನ್ನಿಸಿಕೊಂಡಳು. ನಿನಗಿಂತ ನಾನೇನು ಕಮ್ಮಿ ಅಂತಾ ತೋರಿಸಲೋ ಏನೋ? ಲೋಕಲ್ಲಾಗಿ ಶುರು ಮಾಡಿದ ಶ್ರೀಮನ್ನಾರಾಯಣನನ್ನು ಗ್ಲೋಬಲ್ ಲೆವೆಲ್ಲಿಗೆ ಕೊಂಡೊಯ್ದರು. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಅವನೇ ಶ್ರೀಮನ್ನಾರಾಯಣ ದೇಶಾದ್ಯಂತ ಹಿಟ್ ಅನ್ನಿಸಿಕೊಂಡು ಯಶ್ ಪಕ್ಕದಲ್ಲೇ ಒಂದು ಸಿಂಹಾಸನ ಹಾಕಿಕೊಂಡು ಕೂರಬೇಕಿತ್ತು. ಶ್ರೀಮನ್ನಾರಾಯಣ ಕನ್ನಡದಲ್ಲಿ ಒಳ್ಳೇ ಕಲೆಕ್ಷನ್ನೇ ಮಾಡಿತು. ಸಿನಿಮಾದ ಕಂಟೆಂಟು ಅಷ್ಟಕ್ಕಷ್ಟೇ ಅನ್ನುವಂತಿದ್ದರೂ ಜನ ‘ನಮ್ಮವರ ಅಪರೂಪದ ಪ್ರಯತ್ನ’ ಅನ್ನೋ ಕಾರಣಕ್ಕೆ ಅಪ್ಪಿಕೊಂಡರು. ಇತರೆ ಭಾಷೆಯವರಿಗೆ ಅಂತಾ ದರ್ದಿರಲಿಲ್ಲ. ಸುದೀರ್ಘ ಸಿನಿಮಾವನ್ನು ದಿನಮಾತ್ರದಲ್ಲಿ ದೂರ ತಳ್ಳಿದರು. ನಿರ್ಮಾಪಕ ಪುಷ್ಕರ್ ಇಡೀ ಭಾರತ ತಿರುಗಿನೋಡುವಂಥಾ ಮಟ್ಟಕ್ಕೆ ಪಬ್ಲಿಸಿಟಿ ಮಾಡಿದ್ದರಲ್ಲಾ? ಅದರ ಕಾಸೂ ವಸೂಲಾಗಲಿಲ್ಲ.
ಎಂಥಾ ದೊಡ್ಡ ಸಿನಿಮಾವೇ ಆದರೂ ಗೆಲುವು ಅನ್ನೋದು ಯಾರ ಕೈಯಲ್ಲೂ ಇಲ್ಲ. ಸೋಲದೇ ಸ್ಟಾರುಗಳಾದವರು ಯಾರೂ ಇಲ್ಲ. ಬಿಡಿ, ಇದಲ್ಲದಿದ್ದರೂ ಮತ್ತೊಂದು ಪ್ರಯತ್ನದಲ್ಲಿ ರಕ್ಷಿತ್ ಗೆಲ್ಲುತ್ತಾರೆ. ವಿಚಾರ ಇದಲ್ಲ. ರಕ್ಷಿತ್ ಈಗ ಹೇಳಿಕೊಳ್ಳಲಾಗದ ಸಂಕಟ ಅನುಭವಿಸುತ್ತಿದ್ದಾರೆ. ಅಕ್ಷರಃ ತಲೆಮರೆಸಿಕೊಂಡು ತಿರುಗುತ್ತಿದ್ದಾರೆ. ಕಳೆದ ಹತ್ತನ್ನೆರಡು ದಿನದಿಂದ ರಕ್ಷಿತ್ ಯಾರೆಂದರೆ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಅಸಲಿಗೆ, ರಕ್ಷಿತ್ ಎಲ್ಲಿದ್ದಾರೆನ್ನುವ ಸುಳಿವೂ ಇಲ್ಲ. ಯಾಕೆ ಹೀಗಾಯ್ತು?
ಟ್ಯೂನು ಕದ್ದು ಗುದ್ದಿಸಿಕೊಂಡ ಕಿರಿಕ್ ಪಾರ್ಟಿ : ೨೦೧೬ರಲ್ಲಿ ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ ಬಿಡುಗಡೆಯಾಗಿ, ದೊಡ್ಡ ಹಿಟ್ ಕೂಡಾ ಆಗಿತ್ತಲ್ಲಾ? ಅದರ ಬಿಡುಗಡೆಯ ಹೊಸ್ತಿಲಲ್ಲಿ ಭಾರೀ ಸದ್ದು ಮಾಡಿದ್ದು ಮಾತ್ರ ಒರಿಜಿನಲ್ ಕಿರಿಕ್ಕೊಂದರ ಮೂಲಕ ಮತ್ತು ಇವತ್ತಿಗೂ ಅದು ಕಗ್ಗಂಟಾಗಿದೆ ಎಂಬುದು ಮಾತ್ರ ದುರಂತ. ಕಿರಿಕ್ ಪಾರ್ಟಿ ರಿಲೀಸಿಗೆ ಮುಂಚೆ ಒಂದೊಂದೇ ಹಾಡನ್ನು ಯೂಟ್ಯೂಬಲ್ಲಿ ಹರಿ ಬಿಟ್ಟು ಹವಾ ಸೃಷ್ಟಿಸಲಾರಂಭಿಸಿದ್ದ ಚಿತ್ರ ತಂಡ ಕಡೇಗೆ ಬಿಟ್ಟಿದ್ದು ಹೇಯ್ ಹೂ ಆರ್ ಯೂ ಎಂಬ ಹಾಡನ್ನು. ಈ ಹಾಡು ಹಂಸಲೇಖ ಅವರು ಸಂಗೀತ ನೀಡಿದ್ದ ರವಿಚಂದ್ರನ್ ಅವರ ಶಾಂತಿಕ್ರಾಂತಿ ಚಿತ್ರದ ‘ಮಧ್ಯರಾತ್ರೀಲಿ’ ಎಂಬ ಎವರ್ಗ್ರೀನ್ ಹಾಡಿನ ಯಥಾವತ್ತು ಕಾಪಿ ಎಂಬುದು ಎಂಥವರಿಗಾದರೂ ಗೊತ್ತಾಗುವಂತಿತ್ತು!
ಸಾಮಾನ್ಯವಾಗಿ ಇಂಥಾ ಕಳವು ಕೃತ್ಯಗಳ ವಿರುದ್ಧ ಸಿಡಿದೇಳುವ ಲಹರಿ ವೇಲು ಈ ಬಗ್ಗೆ ಪ್ರಶ್ನಿಸಿದರೂ ಚಿತ್ರ ತಂಡ ಅದು ಬರೀ ಸ್ಫೂರ್ತಿ ತಗೊಂಡು ಮಾಡಿದ ಹಾಡು ಅಂತ ಮೊಂಡುತನ ಪ್ರದರ್ಶಿಸಿತ್ತು. ಇದಾದದ್ದೇ ವೇಲು ಸಿವಿಲ್ ಕೋರ್ಟಿನಿಂದ ಸ್ಟೇ ತಂದಿದ್ದರು. ಇದರಿಂದಾಗಿ ಚಿತ್ರ ಬಿಡುಗಡೆಯಾಗೋದೇ ಕಷ್ಟ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಅಂತೂ ಸಂಧಾನ ನಡೆದು ರವಿಚಂದ್ರನ್ ಮತ್ತು ಹಂಸಲೇಖಾ ಅವರಿಗೆ ಮಾತ್ರ ಕ್ರೆಡಿಟ್ಟು ನೀಡಿ ಬಿಡುಗಡೆಯೇನೋ ಆಯಿತು. ಆದರೆ ಚಿತ್ರ ತಂಡದ ಹೆಗಲು ಏರಿದ್ದ ಕೆಟ್ಟ ಆರೋಪದಿಂದ ಈ ಕ್ಷಣಕ್ಕೂ ಬಿಡುಗಡೆಯಾಗಲು ಸಾಧ್ಯವಿಲ್ಲ. ಯಾಕೆಂದರೆ, ನ್ಯಾಯಾಲಯದಲ್ಲಿ ಮಾತ್ರ ಈ ಪ್ರಕರಣ ಈಗಲೂ ಮುಂದುವರಿದೇ ಇದೆ.
ಅದಕ್ಕೆ ಕಾರಣ ಕೀಟಲೆ ಟ್ರೋಲು : ಎಲ್ಲವೂ ಬಗೆಹರಿದು ಸಿನಿಮಾ ರಿಲೀಸ್ ಕೂಡಾ ಆಯಿತಲ್ಲಾ? ಆಗಲಾದರೂ ರಕ್ಷಿತ್ ಶೆಟ್ಟಿ ಮತ್ತು ಅವರ ಪಟಾಲಮ್ಮು ಸುಮ್ಮನಾಗಿಬಿಟ್ಟಿದ್ದಿದ್ದರೆ ಬಹುಶಃ ಈ ಮಟ್ಟಕ್ಕೆ ಸಮಸ್ಯೆ ಅನುಭವಿಸುವ ಸಂದರ್ಭವೇ ಎದುರಾಗುತ್ತಿರಲಿಲ್ಲ. ಎಷ್ಟೇ ಉತ್ತಮ ಪ್ರಯತ್ನಗಳನ್ನು ಮಾಡಿಯೂ, ಆ ವರೆಗೂ ಗೆಲುವಿನ ರುಚಿ ನೋಡದೆ, ಬರೀ ಸೋಲನ್ನೇ ಕಂಡಿದ್ದ ರಕ್ಷಿತ್ ಟೀಮಿಗೆ ಏಕಾಏಕಿ ಕಿರಿಕ್ ಪಾರ್ಟಿಯಿಂದ ಸಿಕ್ಕ ಪ್ರತಿಕ್ರಿಯೆ ತಲೆ ತಿರುಗಿಸಿತ್ತು. ಅತೀ ಹುಮ್ಮಸ್ಸಿನ ವ್ಯಕ್ತಿ ಪುಷ್ಕರ್ ಕೂಡಾ ಜೊತೆಗಿದ್ದರಲ್ಲಾ? ಎಲ್ಲರೂ ಸೇರಿ ಯಡವಟ್ಟು ಕೆಲಸವೊಂದನ್ನು ಮಾಡಿದರು. ಅದೇನೆಂದರೆ, ಲಹರಿ ವೇಲು ಅವರ ವಿರುದ್ಧವೇ ಟ್ರೋಲು ಮಾಡಿ, ಅದನ್ನು ವೈರಲ್ ಮಾಡಿಸಿದರು. ತಣ್ಣಗಿದ್ದ ವೇಲು ಸಾಹೇಬರು ರೊಚ್ಚಿಗೆದ್ದು ತೊಡೆ ತಟ್ಟಿದ್ದೇ ಆವಾಗ. ಕಿರಿಕ್ ಟೀಮಿಗೆ ಹುಡುಕೀ ಹುಡುಕೀ ಬಿಸಿ ಕಾಯಿಸಲು ನಿಂತರು. ಹೇಳಿ ಕೇಳಿ ಲಹರಿ ವೇಲು ಶಿಸ್ತಿನ ವ್ಯಕ್ತಿ. ಆಡುವ ಹುಡುಗರೆಲ್ಲಾ ಲೇವಡಿ ಮಾಡಲು ಬಂದರೆ ಸುಮ್ಮನೇ ಬಿಡುತ್ತಾರಾ? ಕಾಪಿ ರೈಟ್ ಆಕ್ಟ್ ಅಡಿ ಪೊಲೀಸು ಕಂಪ್ಲೇಟು, ಕೇಸು ಎಲ್ಲವನ್ನೂ ದಾಖಲಿಸಿದರು. ಕೀಳುಮಟ್ಟದ ಟ್ರೋಲು ಮಾಡಿದ್ದವನನ್ನು ಕರೆದು ಕೂರಿಸಿ ಯಶವಂತಪುರ ಪೊಲೀಸರು ಬೆವರಿಸಿಳಿಸಿ ಕಳಿಸಿದ್ದರು.
ಅದರ ಜೊತೆಗೇ ಕಾನೂನು ಹೋರಾಟವನ್ನೂ ಮುಂದುವರೆಸಿದರೂ ಮೊದಲ ಪ್ರಕರಣದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅವರ ತಂಡವೇ ಗೆಲುವು ಕಂಡಿತು. ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಮತ್ತು ತಂಡ ನ್ಯಾಯಾಲಯಕ್ಕೆ ಹಾಜರಾಗಲೇ ಇಲ್ಲ. ಈ ವಿಚಾರವಾಗಿ ಪರಮ್’ವ್ಹಾ ಸ್ಟುಡಿಯೋಸ್ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಇತ್ತ ೯ನೇ ಎಸಿಎಂಎಂ ನ್ಯಾಯಾಲಯ ನಾನ್ ಬೇಲಬಲ್ ವಾರೆಂಟ್ ಹೊರಡಿಸುತ್ತಿದ್ದಂತೇ ರಕ್ಷಿತ್ ಶೆಟ್ಟಿ ಯಾರ ಕಣ್ಣಿಗೂ ಸಿಗದಂತೆ ಕಣ್ಮರೆಯಾಗಿದ್ದಾರೆ. ಅದರ ಮಾರನೇ ದಿನಕ್ಕೇ ಡಾ. ರಾಜ್ ಕುಮಾರ್ ಇಂಟರ್ ನ್ಯಾಷನಲ್ ಹೊಟೇಲಿನ ಸಮಾರಂಭಕ್ಕೆ ಬರುತ್ತಾರೆಂದು ಮೀಡಿಯಾದವರೆಲ್ಲಾ ಕಾದಿದ್ದರು. ಆದರೆ ಅಲ್ಲಿಗೆ ಹೋಗದೇ ರಕ್ಷಿತ್ ತಪ್ಪಿಸಿಕೊಂಡರು. ಜಯನಗರ ಪೊಲೀಸರು ರಕ್ಷಿತ್ ಮನೆ ಸೇರಿದಂತೆ, ಅವರ ಮೊಬೈಲ್ ನಂಬರುಗಳ ಜಾಡು ಹಿಡಿದು ಎಷ್ಟೇ ಹುಡುಕಿದರೂ ರಕ್ಷಿತ್ ಸುಳಿವೇ ಸಿಗುತ್ತಿಲ್ಲ. ಟ್ವಿಟರ್ ನಲ್ಲಿ ಮಾತ್ರ ಆಕ್ಟೀವ್ ಆಗಿರುವ ರಕ್ಷಿತ್ ಆಗೊಂದು ಈಗೊಂದು ಟ್ವೀಟ್ ಮಾಡಿ ತಾವು ಎಲ್ಲೂ ಹೋಗಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಅಸಲಿಗೆ ಪೊಲೀಸರು ಬಂಧಿಸುತ್ತಾರೆ ಅನ್ನೋ ಭಯಕ್ಕೆ ಬಿದ್ದಿರುವ ರಕ್ಷಿತ್ ನಿಜಕ್ಕೂ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ. ನೆನ್ನೆ ಮೊನ್ನೆಯ ಒಳಗೆ ರಕ್ಷಿತ್ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಅಂತಾ ಖುದ್ದು ರಕ್ಷಿತ್ ಪರ ವಕೀಲರು ಹೇಳಿದ್ದರಾದರೂ ಅದು ಸಾಧ್ಯವಾಗಿಲ್ಲ. ಇದೇ ತಿಂಗಳ ಹದಿನಾರರ ತನಕ ನ್ಯಾಯಮೂರ್ತಿಗಳು ಗಡುವು ನೀಡಿದ್ದಾರೆ ಎನ್ನುವ ಸುದ್ದಿಯಿದೆ. ಕೋರ್ಟಿಗೆ ಹಾಜರಾಗದೇ ಬೇಲು ಪಡೆಯುವ ಪ್ಲಾನು ರಕ್ಷಿತ್ ಅವರದ್ದಿರಬಹುದು. ನ್ಯಾಯ-ನ್ಯಾಯಾಲಯವನ್ನು ಧಿಕ್ಕರಿಸಿದ ಯಾರೇ ಆದರೂ ತಲೆಯೆತ್ತಿದ ನಿದರ್ಶನಗಳೇ ಇಲ್ಲ. ರಕ್ಷಿತ್ ಕೂಡಾ ಅದಕ್ಕೆ ಹೊರತಾಗಿಲ್ಲ. ಅದನ್ನವರು ಮನಗಾಣಬೇಕಷ್ಟೇ!
(ಈ ವರದಿ ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ಹೊಂದಿಲ್ಲ. ಬರಹದ ಆಶಯ ತಿಳಿಯದೇ ಕಮೆಂಟು ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು)
No Comment! Be the first one.