ಕರಾವಳಿ ಸೊಗಡಿನ ಕನ್ನಡ ಮಾತಾಡುವ ಹೀರೋಗಳನ್ನು ಎಲ್ಲ ಪ್ರಾಂತ್ಯದ ಜನ ಒಪ್ಪೋದು ಕಷ್ಟ ಅನ್ನೋ ಮಾತನ್ನು ಇತ್ತೀಚಿನ ದಿನಗಳಲ್ಲಿ ಸುಳ್ಳಾಗಿಸಿದವರು ರಕ್ಷಿತ್‌ ಶೆಟ್ಟಿ. ನಿರ್ದೇಶಕ ಅರವಿಂದ್‌ ಕೌಶಿಕ್‌ ಪರಿಚಯಿಸಿದ ಸಾಕಷ್ಟು ಜನ ಇವತ್ತು ಚಿತ್ರರಂಗದಲ್ಲಿ ದರ್ಬಾರು ನಡೆಸುತ್ತಿದ್ದಾರೆ.  ರಚಿತಾರಾಮ್, ಮೇಘನಾ ಗಾಂವ್ಕರ್, ಅನೀಶ್, ಬಾಲು ನಾಗೇಂದ್ರ, ಅರ್ಜುನ್‌ ಜನ್ಯಾ, ರಿಷಬ್ ಶೆಟ್ಟಿ ಮಾತ್ರವಲ್ಲ, ರಕ್ಷಿತ್‌ ಕೂಡಾ ಕೌಶಿಕ್‌ ಕ್ಯಾಂಪಿನಿಂದ ಎದ್ದುಬಂದವರೇ. ಬಹುಶಃ ಆವತ್ತು ಅರವಿಂದ್‌ ಕೌಶಿಕ್‌ ನಮ್‌ ಏರಿಯಾಲ್‌ ಒಂದಿನ, ತುಘ್ಲಕ್‌ ಸಿನಿಮಾಗಳಲ್ಲಿ ರಕ್ಷಿತ್‌ ಶೆಟ್ಟಿಗೆ ಛಾನ್ಸು ಕೊಡದೇ ಹೋಗಿದ್ದರೆ, ಈ ಹೊತ್ತಿಗೆ ಈ ಕರಾವಳಿ ಪ್ರತಿಭೆ ಸಿನಿಮಾಕ್ಷೇತ್ರದಲ್ಲಿ ಕಾಲೂರಲು ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ!

ಮೊದಲು ಹೀರೋ ಆಗಿ ನಟಿಸಿದ ಸಿನಿಮಾ ಕಮರ್ಷಿಯಲ್‌ ಹಿಟ್‌ ಅನ್ನಿಸಿಕೊಳ್ಳಲಿಲ್ಲ ಅಂತಾ ಕೊರಗುತ್ತಿದ್ದ ಹೊತ್ತಿಗೇ ನಿರ್ದೇಶಕ ಸುನಿಯಿಂದ ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಹುಟ್ಟಿಕೊಂಡಿತು. ಸಿನಿಮಾ ಯುವಕರ ಮನಸ್ಸೊಳಗೆ ʻಕೈಬಿಟ್ಟುʼ ಕಚಗುಳಿಯಿಟ್ಟಿತು. ರಕ್ಷಿತ್‌ ಶೆಟ್ಟಿ ಮಳೆ, ಚಳಿ, ಗಾಳಿಯನ್ನು ಏಕ ಕಾಲದಲ್ಲಿ ಗೆದ್ದರು. ಉಳಿದವರು ಕಂಡಂತೆ ಹೊಸಾ ಪ್ರಯೋಗ ಅನ್ನಿಸಿಕೊಂಡರೂ ಬಾಕ್ಸಾಫೀಸಲ್ಲಿ ಹೊಡೆಸಿಕೊಂಡಿತು. ಭಟ್ಟರ ವಾಸ್ತು ಪ್ರಕಾರ ಶೆಟ್ಟರ ಪಾಲಿಗೂ ಸರಿಹೋಗಲಿಲ್ಲ. ಒಳ್ಳೇ ವಿಮರ್ಶೆ ಪಡೆದ ರಿಕ್ಕಿ ಕೆಟ್ಟ ಕಲೆಕ್ಷನ್ನಿಂದ ಕಂಗಾಲಾಯಿತು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಒಂದು ಮಟ್ಟಿಗೆ ಕೈ ಹಿಡಿದೆಬ್ಬಿಸಿದ್ದು ನಿಜ. ಅದರ ಹಿಂದೆಯೇ ಬಂತು ನೋಡಿ ಕಿರಕ್‌ ಪಾರ್ಟಿ… ಕಾಲೇಜು ಹುಡುಗರು ಹುಚ್ಚೆದ್ದು ಥೇಟರಿಗೆ ನುಗ್ಗಿದರು. ಹಾಡಿನ ಸಮೇತ ಸಿನಿಮಾ ಕೂಡಾ ಸೂಪರ್‌ ಹಿಟ್‌ ಆಯಿತು. ಈ ಗೆಲುವಿನ ಬೆನ್ನಿಗೇ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸಿಕೊಂಡು ಹೋಗಿದ್ದರೆ, ರಕ್ಷಿತ್‌ ಶೆಟ್ಟಿಯ ಹಿಟ್‌ ಲಿಸ್ಟಿಗೆ ನಾಲ್ಕಾರು ಸಿನಿಮಾಗಳು ಸೇರಿಕೊಳ್ಳುತ್ತಿದ್ದವೋ ಏನೋ? ಕಿರಿಕ್‌ ಪಾರ್ಟಿಯ ನಂತರ ಸಿಕ್ಕಾಪಟ್ಟೆ ಸಂಭ್ರಮದಲ್ಲಿದ್ದ ರಕ್ಷಿತ್‌ ʼಶ್ರೀಮನ್ನಾರಾಯಣʼನ ಸಾವಾಸಕ್ಕೆ ಬಿದ್ದು ಒಂದಷ್ಟು ಲುಕ್ಸಾನು ಅನುಭವಿಸಿದರು. ಅವನೇ ಶ್ರೀಮನ್ನಾರಾಯಣ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್ಲಿನಲ್ಲಿ ಸೌಂಡು ಮಾಡಿದರೂ ಅಂದುಕೊಂಡ ಮಟ್ಟಿಗೆ ಗೆಲುವು ಕಾಣಲಿಲ್ಲ. ಈ ನಡುವೆ ಪ್ರೀತಿಸಿ, ಎಂಗೇಜ್‌ಮೆಂಟು ಮಾಡಿಕೊಂಡಿದ್ದ ರಶ್ಮಿಕಾ ಕೂಡಾ ಕೈಕೊಟ್ಟು ಎದ್ದು ನಡೆದಳು. ಹಾಡಿನ ವಿಚಾರವಾಗಿ ಲಹರಿ ವೇಲು ಕೇಸು ಹಾಕಿದರು…

ಇವೆಲ್ಲಾ ಏನೇ ಆಗಲಿ, ರಕ್ಷಿತ್‌ ಶೆಟ್ಟಿ ಅಪ್ಪಟ ನಟ, ನಟನೆ ಮತ್ತು ನಿರ್ದೇಶನ ಎರಡರಲ್ಲೂ ವಿದ್ವತ್ತು ಹೊಂದಿರುವ ಅಪರೂಪದ ಪ್ರತಿಭಾವಂತ. ಪರ್ಸನಲಿ ತುಂಬಾ ಒಳ್ಳೇ ವ್ಯಕ್ತಿ, ಕಷ್ಟ ಅಂದ ತಕ್ಷಣ ಕೈ ಹಿಡಿಯುವ ಕರುಣಾಮಯಿ, ಕಷ್ಟದಲ್ಲಿದ್ದಾಗ ನೆರವಾದವರನ್ನು ನೆನೆಯುವ, ಋಣಸಂದಾಯ ಮಾಡುವ ಗುಣವಂತ ಅನ್ನೋ ಮಾತಿದೆ. ಇದರ ಜೊತೆಗೇ ಮೀಡಿಯಾದವರ ಫೋನನ್ನೂ ರಿಸೀವ್‌ ಮಾಡೋದಿಲ್ಲ, ಯಾವುದಕ್ಕೂ ಸರಿಯಾಗಿ ಪ್ರತಿಕ್ರಿಯಿಸೋದಿಲ್ಲ ಎನ್ನುವ ಸಣ್ಣ ಪುಟ್ಟ ಆರೋಪಗಳೂ ಇವೆ. ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಇಂಥ ಸಣ್ಣ ಕಾರಣಗಳಿಗೆ ಹೆಸರು ಕೆಡಿಸಿಕೊಳ್ಳದೇ, ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಅಂತಾ ಹಾರೈಸೋಣ. ಯಾಕೆಂದರೆ,  ಇವತ್ತು ರಕ್ಷಿತ್‌ ಬರ್ತಡೇ!

CG ARUN

ಬದುಕು ಎಲ್ಲಿ ಶುರುವಾಗಿ ಎಲ್ಲೆಲ್ಲಿ ನಿಲ್ಲುತ್ತದೆ ಅನ್ನೋ ಕತೆ…

Previous article

ಹೆಸರು ಹರ್ಮಿಳ….

Next article

You may also like

Comments

Leave a reply

Your email address will not be published. Required fields are marked *