ಪೊಲೀಸ್ ಕ್ವಾಟ್ರಸ್, ನಮ್ ಏರಿಯಾಲ್ ಒಂದಿನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ, ಸಿನಿಮಾ ಪ್ರೇಕ್ಷಕರಿಗೆ ಪರಿಚಯವಾದವರು ಅನೀಶ್. ನಂತರ ಕಾಫಿ ವಿತ್ ಮೈ ವೈಫ್, ನನ್ ಲೈಫಲಿ, ಎಂದೆಂದು ನಿನಗಾಗಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಅನೀಶ್ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಮೂಲಕ ಪಕ್ಕಾ ಆಕ್ಷನ್ ಸ್ಟಾರ್ ಆಗಿ ಹೊರಹೊಮ್ಮಿದರು.
ಈಗ ಅನೀಶ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿ ನಾಯಕನಟನಾಗಿ ನಟಿಸಿರುವ ‘ರಾಮಾರ್ಜುನ’ ಚಿತ್ರದ ಖಡಕ್ ಟ್ರೇಲರ್ ಮತ್ತು ಹಾಡುಗಳು ಎಂಥವರನ್ನೂ ಸೆಳೆಯುವಂತಿವೆ. ಸಿನಿಮಾದಿಂದ ಸಿನಿಮಾಗೆ ಮಾಗುತ್ತಾ ಬಂದಿರುವ ಅನೀಶ್ ಅವರನ್ನು ‘ರಾಮಾರ್ಜುನ’ ಟೀಸರಿನಲ್ಲೀ ನೋಡೋದೇ ಒಂದು ಚೆಂದ. ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ತಯಾರಾಗಿದೆ. ಕೋವಿಡ್ ಕಾರಣದಿಂದ ಬೇರೆಲ್ಲ ಸಿನಿಮಾಗಳಂತೇ ರಾಮಾರ್ಜುನನಿಗೂ ಥೇಟರಿಗೆ ಬರಲು ಅಡೆತಡೆಯಾಗಿದ್ದು ನಿಜ. ಈ ಸಂದರ್ಭದಲ್ಲಿ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ಖುದ್ದು ಅನೀಶ್ ಯೋಚಿಸುತ್ತಿದ್ದರು.
ಈ ಕುರಿತು ಮಾತುಕತೆಯಲ್ಲಿರುವಾಗಲೇ ಅದೊಂದು ದಿನ ತಮ್ಮ ಆತ್ಮೀಯ ಗೆಳೆಯನೂ ಆಗಿರುವ ರಕ್ಷಿತ್ ಜೊತೆ ಈ ವಿಚಾರ ಪ್ರಸ್ತಾಪವಾಗಿತ್ತು. ಆ ಕೂಡಲೇ ರಕ್ಷಿತ್ ʻನಾನೊಮ್ಮೆ ರಾಮಾರ್ಜುನನನ್ನು ನನ್ನ ತಂಡದವರೊಂದಿಗೆ ನೋಡಬಹುದಾ?ʼ ಅಂತಾ ಕೇಳಿದ್ದರು. ತಕ್ಷಣಕ್ಕೆ ʻನೀನು ನೋಡ್ತೀನಿ ಅಂದ್ರೆ ಅದಕ್ಕಿಂತಾ ಖುಷಿಯ ಸಂಗತಿ ಬೇರೇನಿದೆ..ʼ ಅಂದಿದ್ದರು ಅನೀಶ್. ಸಿನಿಮಾವನ್ನು ನೋಡಿಮುಗಿಸೋ ಹೊತ್ತಿಗೆ ʻನಾನೂ ಈ ಚಿತ್ರಕ್ಕೆ ಸಹ ನಿರ್ಮಾಪಕನಾಗಿ ಬರಬಹುದಾ?ʼ ಅಂದಿದ್ದರು ರಕ್ಷಿತ್. ʻಇಷ್ಟು ಒಳ್ಳೆ ಕಂಟೆಂಟ್ ಇರುವ ಸಿನಿಮಾವನ್ನು ನಾವು ಜನಕ್ಕೆ ತಲುಪಿಸಲೇ ಬೇಕು. ಎಷ್ಟು ಚೆಂದಗೆ ನಿರ್ದೇಶನ ಮಾಡಿದ್ದೀಯ..ʼ ಎಂದು ಗೆಳೆಯ ಅನೀಶ್ ರನ್ನು ರಕ್ಷಿತ್ ಮನಸಾರೆ ಕೊಂಡಾಡಿದ್ದರು. ಈ ಮೂಲಕ ರಕ್ಷಿತ್ ಶೆಟ್ಟಿ ರಾಮಾರ್ಜುನ ಚಿತ್ರದ ಭಾಗವಾಗಿದ್ದಾರೆ.
ರಕ್ಷಿತ್ ಶೆಟ್ಟಿ ಅವರಿಗೆ ಅದೊಂದು ಅದ್ಭುತ ಗುಣವಿದೆ. ಅದೇನೆಂದರೆ, ಸಿನಿಮಾವನ್ನು ಅಪಾರವಾಗಿ ಪ್ರೀತಿಸುವ ರಕ್ಷಿತ್ ತಮ್ಮ ಮನಸ್ಸಿಗೆ ಒಪ್ಪಿದ ಚಿತ್ರಗಳಿಗೆ ಹಿಂದೆಮುಂದೆ ನೋಡದೆ ಸಹಕರಿಸಿದ ಸಾಕಷ್ಟು ಉದಾಹರಣೆಗಳಿವೆ. ತಾವು ಕೂಡಾ ಹೊಸ ಪ್ರಯತ್ನ ಮಾಡಿ, ಎಲ್ಲ ಥರದ ಕಷ್ಟಗಳನ್ನು ಅನುಭವಿಸಿ ಈ ಹಂತಕ್ಕೆ ಬಂದವರಾದ್ದರಿಂದ ಗುಣಮಟ್ಟದ ಚಿತ್ರಗಳು ಕಣ್ಣಿಗೆ ಬಿದ್ದೇಟಿಗೆ ಕೈ ಹಿಡಿಯುವ ಕಾರ್ಯಕ್ಕೆ ಮುಂದಾಗುತ್ತಾರೆ. ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಟೈಮಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನೀಶ್ ಗೆ ಸಾಥ್ ನೀಡಿದ್ದರು. ಈ ಬಾರಿ ರಕ್ಷಿತ್ ಜೊತೆಯಾಗಿದ್ದಾರೆ. ಅನೀಶ್ ರಂಥಾ ಅಪ್ಪಟ ಪ್ರತಿಭೆಗೆ ಈ ಹೊತ್ತಿನಲ್ಲಿ ಇಂಥವರ ಸಪೋರ್ಟು ಅಗತ್ಯವೂ ಇದೆ.
ಕಮರ್ಷಿಯಲ್ ಹೀರೋಗೆ ಬೇಕಿರುವ ಎಲ್ಲ ಗುಣವನ್ನೂ ಹೊಂದಿರುವ ಅನೀಶ್ ಅತ್ಯುತ್ತಮ ಡ್ಯಾನ್ಸರ್ ಅನ್ನೋದು ಈಗಾಗಲೇ ಸಾಬೀತಾಗಿದೆ. ಸ್ಟಂಟ್ಸ್’ನಲ್ಲಿ ಕೂಡಾ ಅಷ್ಟೇ ಪರ್ಫೆಕ್ಟ್ ಅನ್ನೋದನ್ನು ಜನ ವಾಸು ನಾನ್ ಪಕ್ಕಾ ಕಮರ್ಷಿಯಲ್ಲಿನಲ್ಲೇ ನೋಡಿದ್ದಾರೆ. ಈ ಬಾರಿ ‘ರಾಮಾರ್ಜುನ’ ಟ್ರೇಲರ್ ನೋಡಿದವರಿಗೆ ‘ಅನೀಶ್ ಸಿನಿಮಾದ ಎಲ್ಲ ವಿಭಾಗಗಳಲ್ಲೂ ನೈಪುಣ್ಯತೆ ಹೊಂದಿರುವ ಪ್ರತಿಭಾವಂತ’ ಅನ್ನಿಸೋದು ಖಾತ್ರಿಯಾಗುತ್ತದೆ. ಕಿರಣ್ ಚಂದ್ರ ಸಂಭಾಷಣೆ, ನವೀನ್ ಕುಮಾರ್ ಕ್ಯಾಮೆರಾ, ವಿಕ್ರಂ ಅವರ ಸಾಹಸ ಸಂಯೋಜನೆ, ನಿಶ್ವಿಕಾ ನಾಯ್ಡು ಬೋಲ್ಡ್ ನಟನೆಯ ಜೊತೆಗೆ ಅನೀಶ್ ಅವರ ನಿರ್ದೇಶನ ಮತ್ತು ನಟನೆ ‘ರಾಮಾರ್ಜುನ’ನ ಕಲರ್ರು, ಖದರ್ರು ಎಲ್ಲವನ್ನೂ ಹೆಚ್ಚಿಸಿದೆ. ಒಟ್ಟಾರೆ, ಈ ಟೀಸರನ್ನು ನೋಡುತ್ತಿದ್ದಂತೇ ‘ಈ ಬಾರಿ ಅನೀಶ್ ಗುರಿ ಮುಟ್ಟೋದು ಗ್ಯಾರೆಂಟಿ’ ಅನ್ನಿಸುವಂತಿದೆ.
“ಯಾವತ್ತೂ ಡೈರೆಕ್ಷನ್ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಅಚಾನಕ್ಕಾಗಿ ಸ್ಟಾರ್ಟ್ ಆಯ್ತು. ನನ್ನ ಹಿಂದಿನ ನಿರ್ದೇಶಕರುಗಳಿಗೆ ಧನ್ಯವಾದವನ್ನು ಹೇಳುತ್ತೇನೆ. ಅವರು ಹೇಳಿಕೊಟ್ಟ ಪಾಠವಿದು. ನಾನು ಯಾವ ಡೈರೆಕ್ಷನ್ ಕೋರ್ಸ್ಗೆ, ಕ್ಲಾಸಿಗೆ ಹೋಗಿಲ್ಲ. ನನ್ನ ಮೊದಲ ಸಿನಿಮಾದಿಂದಲೂ ನಾನು ಟೆಕ್ನಿಕಲ್ ಆಗಿಯೇ ನೋಡುತ್ತಿದ್ದೆ. ಸೆಟ್’ಗೆ ಹೋಗಿ ಬರೀ ಶೂಟ್ ಮುಗಿಸಿ ಬರುತ್ತಿರಲಿಲ್ಲ. ಎಡಿಟಿಂಗ್ ಆಗಿರಬಹುದು, ಡಿಐ, ಶಾಟ್ ಡಿವಿಷನ್ ಸೇರಿದಂತೆ ಪ್ರತಿಯೊಂದರ ಕುರಿತಾಗಿಯೂ ನಾನು ನಿರ್ದೇಶಕರುಗಳನ್ನು ಡೌಟ್ ಕೇಳುತ್ತಲೇ ಇದ್ದೆ. ಅದಕ್ಕಾಗಿ ಈ ಸಿನಿಮಾವನ್ನು ನನ್ನ ಎಲ್ಲ ನಿರ್ದೇಶಕರಿಗೆ ಡೆಡಿಕೇಟ್ ಮಾಡುತ್ತೇನೆ. ಅವರ ಹತ್ತಿರ ಕಲಿತಿರುವುದನ್ನೇ ನಾನು ಈ ಚಿತ್ರದಲ್ಲಿ ಅಪ್ಲೈ ಮಾಡಲು ಸಾಧ್ಯವಾಯಿತು. ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಗೆಳೆಯ ರಕ್ಷಿತ್ ಶೆಟ್ಟಿ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ನೂರಾನೆ ಬಲ ಬಂದಂತಾಗಿದೆ.ʼʼ ಅನ್ನೋದು ಅನೀಶ್ ಅಭಿಪ್ರಾಯ.
No Comment! Be the first one.