ಸಿನಿಮಾ ಮಂದಿಗೆ ಒಂದು ವ್ಯಾಧಿಯಿದೆ; ಇವರನ್ನು ಮೀಡಿಯಾದವರು ಸದಾ ಹೊಗಳುತ್ತಲೇ ಇರಬೇಕು. ಯದ್ವಾತದ್ವ ಹೊಗಳಿಸಿಕೊಂಡು ಒಳಗೊಳಗೇ ಖುಷಿ ಪಡುವ ಕೆಲವರಿಗೆ ಸಣ್ಣದೊಂದು ಥ್ಯಾಂಕ್ಸ್ ಹೇಳುವ ಔದಾರ್ಯ ಕೂಡಾ ಇರೋದಿಲ್ಲ. ಅದೇ ಟೀಕೆ ಮಾಡಿದಾಗ ಮಾತ್ರ ಉಗ್ರಾವತಾರ ತಾಳಿ ಹಾರಾಟ, ಒದರಾಟ ಶುರು ಮಾಡಿಬಿಡುತ್ತಾರೆ.
ಪಬ್ಲಿಕ್ ಟಿವಿ ಮೇಲೆ ರಕ್ಷಿತ್ ರಪಕ್ಕಂತಾ ಸಿಟ್ಟಿಗೆದ್ದಿದ್ದಾರೆ. ಇತ್ತೀಚೆಗೆ ರಕ್ಷಿತ್ ಶೆಟ್ಟರನ್ನು ಪಬ್ಲಿಕ್ ಟೀವಿಯ ಸಿನಿ ಅಡ್ಡಾದಲ್ಲಿ ಚೂರು ಗಿಲ್ಲಿರೋದು ಅದಕ್ಕೆ ಕಾರಣ. ಅದರಿಂದ ಮನನೊಂದ ಸಿಂಪಲ್ ಸ್ಟಾರ್ ಸೀರಿಯಸ್ಸಾಗೊಂದು ಪತ್ರ ಬರೆದು, ಬಹಿರಂಗವಾಗಿ ರಿಲೀಸ್ ಮಾಡಿದ್ದಾರೆ.
ʻʻನನ್ನ ವೃತ್ತಿ ಜೀವನದಲ್ಲಿ ಯಾರೆಲ್ಲಾ ನನ್ನ ಜೊತೆ ಕೆಲಸ ಮಾಡಿದ್ದಾರೋ, ಅವರಲ್ಲಿ ಶೇಕಡ 90ರಷ್ಟು ಜನ ಇಂದಿಗೂ ನನ್ನ ಜೊತೆಯಲ್ಲೇ ಇರುವವರು. ಬಿಟ್ಟು ಹೋದವರು ನನ್ನಿಂದ, ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆಯೇ ಹೊರತು, ಯಾರೂ ಕಳೆದುಕೊಂಡು ಹೋಗಿಲ್ಲ. ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೀನಿ ಅಥವಾ ಅವರಿಗೆ ಭುಜ ಕೊಟ್ಟು ನಿಂತಿದ್ದೀನಿ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಲೈಟ್ ಆಫೀಸರ್ ಇಂದ ಹಿಡಿದು, ಟೆಕ್ನಿಷಿಯನ್ಸ್, ಡೈರೆಕ್ಟರ್ಸ್ ಹಾಗೂ ಪ್ರತಿಯೊಬ್ಬ ಪ್ರೊಡ್ಯೂಸರ್ಸ್ ಸಾಕ್ಷಿ. ನಾನು ಇದೆಲ್ಲದರ ಬಗ್ಗೆ ಎಲ್ಲೂ ಮಾತನಾಡಲು ಬಯಸುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಹಾಗಂತ ನಿಜ ಸುಳ್ಳಾಗಲ್ಲ.
ಪಬ್ಲಿಕ್ ಟಿವಿಯವರು ಕಳೆದ ಎರಡು ವರ್ಷಗಳಲ್ಲಿ ನನ್ನ ಬಗ್ಗೆ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾನು ಈ ಎಲ್ಲಾ ತೇಜೋವಧೆಯ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೆ. ಕಾರಣ ಇದಕ್ಕೆಲ್ಲ ನನ್ನ ಕೆಲಸ ಉತ್ತರ ಕೊಡುತ್ತದೆ ಎಂಬ ನಂಬಿಕೆ ಇತ್ತು. ಈಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು ಮಾಧ್ಯಮದ ನೈತಿಕ ಜವಾಬ್ದಾರಿಗಳನ್ನು ಮರೆತು, ವೈಯಕ್ತಿಕ ದಾಳಿ ನಡೆಸಿ ನನ್ನ ವ್ಯಕ್ತಿತ್ವಕ್ಕೆ ಮತ್ತೆ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ.
ಈ ಬಾರಿ ಇದನ್ನು ನಿರ್ಲಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಉತ್ತರ ಕೊಡುತ್ತೇನೆ. ಆದರೆ ಹತ್ತು ದಿನಗಳ ಬಳಿಕ.. ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು ಯಾವ ಯಾವ ಸತ್ಯ ಹೊರಗೆ ಬರುತ್ತದೋ ಅವರವರ ಬಾಯಿಯಿಂದಲೇ ಹೊರಬರಲಿ. ನಾನು ಕಾದು ನೋಡುತ್ತೇನೆ. ನನ್ನ ಉತ್ತರ ಜುಲೈ 11ರಂದು, ಕಾದು ನೋಡಿ… Truth is mighty and must prevail.ʼʼ ಅಂತಾ ತಮ್ಮ ಲೆಟರ್ ಹೆಡ್ಡಿನಲ್ಲಿ ಬರೆದು ಬಿಡುಗಡೆ ಮಾಡಿದ್ದಾರೆ.
ಹೌದು. ರಕ್ಷಿತ್ ನಿಜ ಮಾತಾಡಿದ್ದಾರೆ. ಯಾರೆಲ್ಲಾ ತಮ್ಮ ವೃತ್ತಿ ಜೀವನದಲ್ಲಿ ಸಹಕರಿಸಿದ್ದಾರೋ ಅವರೆಲ್ಲರಿಗೂ ರಕ್ಷಿತ್ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಲೇ ಬಂದಿದ್ದಾರೆ. ತಮ್ಮನ್ನು ಹೀರೋ ಆಗಿ ಪರಿಚಯಿಸಿದ ಅರವಿಂದ್ ಕೌಶಿಕ್ ಮತ್ತು ತಮ್ಮ ಬಹುಕಾಲದ ಗೆಳೆಯ ಬಾಲು ನಾಗೇಂದ್ರಗೆ ಏಕಕಾಲದಲ್ಲಿ ಸಹಕರಿಸಿದ್ದ ರಕ್ಷಿತ್ ʻಹುಲಿರಾಯʼ ಸಿನಿಮಾವನ್ನು ಒಳ್ಳೇ ಮೊತ್ತ ಕೊಟ್ಟು ಖರೀದಿಸಿದ್ದರು. ನಟ ಅನೀಶ್ ಅವರ ರಾಮಾರ್ಜುನ ಚಿತ್ರಕ್ಕೂ ಕೈಜೋಡಿಸಿ ನಿಂತಿದ್ದರು. ಹುಡುಕುತ್ತಾ ಹೋದರೆ, ರಕ್ಷಿತ್ ಅವರ ಇಂಥಾ ಉಪಕಾರ ಗುಣಕ್ಕೆ ಹಲವು ನಿದರ್ಶನಗಳು ಸಿಗುತ್ತವೆ.
ದೂರಾದ ನಂತರವೂ, ಇವರ ಋಣದಲ್ಲೇ ಬದುಕುತ್ತಿರುವವರೂ ಇದ್ದಾರೆ. ರಕ್ಷಿತ್ ಗೆ ವಿಪರೀತ ಹೆಲ್ಪಿಂಗ್ ನೇಚರ್ ಇದೆ ಅನ್ನೋದರಲ್ಲಿ ಯಾವ ಡೌಟೂ ಇಲ್ಲ. ಆದರೂ ಯಾಕೋ ವಿವಾದಗಳು ಸಿಂಪಲ್ ಹುಡುಗನನ್ನು ಹುಡುಕಿಕೊಂಡು ಬಂದು ಕಾಟ ಕೊಡುತ್ತವೆ!
ಈ ಹಿಂದೆ ರಕ್ಷಿತ್ ಮಾಡಿದ ಯಡವಟ್ಟನ್ನು ಲಹರಿ ವೇಲು ಕೋರ್ಟಿಗೆ ಎಳೆದು ʻಕಿರಿಕ್ʼ ಮಾಡಿದ್ದರಲ್ಲಾ? ಈಗ ಅದೇ ವರಸೆಯನ್ನು ರಕ್ಷಿತ್ ತಿರುಗುಬಾಣವಾಗಿ ಪ್ರಯೋಗಿಸಲು ಸಿದ್ದರಾದಂತಿದೆ ಸದ್ಯದ ಪರಿಸ್ಥಿತಿ. ಯಾಕೆಂದರೆ, ಪಬ್ಲಿಕ್ ಟೀವಿಗೂ ಲಹರಿ ವೇಲುಗೂ ನೇರ ಸಂಬಂಧವಿದೆ. ತಮ್ಮ ಅನುಮತಿ ಪಡೆಯದೆ ಟ್ಯೂನು ತೆಗೆದುಕೊಂಡಿದ್ದಕ್ಕಾಗಿ ವೇಲು ಇಡೀ ರಕ್ಷಿತ್ ಟೀಮನ್ನು ಅಲುಗಾಡಿಸಿಬಿಟ್ಟಿದ್ದರು. ಕೆ.ಜಿ.ಎಫ್. ನಿರ್ಮಾಪಕ ವಿಜಯ್ ಕಿರಗಂದೂರು ಮಧ್ಯಸ್ಥಿಕೆಯಲ್ಲಿ ಈ ವಿವಾದ ಮೇಲ್ನೋಟಕ್ಕೆ ಬಗೆಹರಿದಿತ್ತು. ಈಗ ಪಬ್ಲಿಕ್ ಟೀವಿ ತಮ್ಮ ಮಾನ ತೆಗೆದಿದೆ ಅಂತಾ ರಕ್ಷಿತ್ ಸೆಟೆದು ನಿಂತಿದ್ದಾರೆ.
ಸಿನಿಮಾ ಬದುಕಿನಲ್ಲಿ ಹೊಗಳಿಕೆ, ತೆಗಳಿಕೆಗಳೆಲ್ಲಾ ಸಹಜ. ಟೀಕೆ ಮಾಡಿದ್ದನ್ನೇ ಕಾರಣವಾಗಿಟ್ಟುಕೊಂಡು ಎಳೆದಾಡೋದು, ಮತ್ತಷ್ಟು ರಾಡಿ ಮಾಡಿಕೊಳ್ಳೋದು ರಕ್ಷಿತ್ ರಂಥಾ ನಟನಿಗೆ ಅಗತ್ಯವಾ? ಅನ್ನೋದಷ್ಟೇ ಸದ್ಯ ಹಲವರ ಪ್ರಶ್ನೆ..
No Comment! Be the first one.