ಬರೀ ಪ್ರಚಾರಕ್ಕೆ ಮಾತ್ರ ಒತ್ತುಕೊಟ್ಟು ಚಿತ್ರವನ್ನು ಖಿಚಡಿಯಂತೆ ಮಾಡಿದರೆ ಏನಾಗುತ್ತದೆಂಬುದಕ್ಕೆ ದಿ ವಿಲನ್ ಚಿತ್ರ ಸಾಕ್ಷಿಯಾಗಿ ನಿಂತಿದೆ. ಭರ್ಜರಿ ಪ್ರಚಾರ ಮತ್ತು ಶಿವಣ್ಣ, ಸುದೀಪ್ ಫೇಸ್ ವ್ಯಾಲ್ಯೂ ಕಾರಣಕ್ಕೆ ಒಂದೆರಡು ದಿನ ಕಲೆಕ್ಷನ್ನಾಗಿದ್ದು ನಿಜ. ಆದರೀಗ ಪ್ರೇಮ್ ನಿರ್ದೇಶನದ ವಿಲನ್ನು ಬಸವಳಿದಿದ್ದಾನೆ. ಇದನ್ನು ನೋಡಿ ಮಂದಿಯಲ್ಲಿ ಬಹುತೇಕರು ಪ್ರೇಮ್ರನ್ನು ಗೇಲಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ತುಂಬಾ ಪತಿದೇವರಿಗೆ ಈ ಪರಿ ಪೂಜೆ ಪುನಸ್ಕಾರ ನಡೆಯುತ್ತಿರೋದನ್ನು ಕಂಡು ಕಂಗಾಲಾದ ರಕ್ಷಿತಾ ಇದೇ ಭರದಲ್ಲಿ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ. ಅವರು ಪ್ರೇಮ್ರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳನ್ನು ಕೆಣಕಿದ್ದಾರೆ!
ದಿ ವಿಲನ್ ಹಾಗೂ ಪ್ರೇಮ್ ವಿರುದ್ಧ ನಡೆಯುತ್ತಿರೋ ವಿಮರ್ಶೆಗಳ ವಿರುದ್ಧ ರಕ್ಷಿತಾ ಸಾಮಾಜಿಕ ಜಾಲತಾಣಗಳಲ್ಲೊಂದು ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕಥೆಯೇ ಇಲ್ಲದೆ ಸಕ್ಸಸ್ ಕಂಡ ಚಿತ್ರಗಳ ಸಾಲಿನಲ್ಲಿ ರವಿಚಂದ್ರನ್ ಅಭಿನಯದ ಎವರ್ಗ್ರೀನ್ ಚಿತ್ರ ಪ್ರೇಮಲೋಕ ಮತ್ತು ಶಿವಣ್ಣನ ಟಗರು ಚಿತ್ರಗಳನ್ನೂ ರಕ್ಷಿತಾ ಉಲ್ಲೇಖಿಸಿದ್ದಾರೆ. ಇದುವೇ ಶಿವಣ್ಣ ಹಾಗೂ ಕನಸುಗಾರನ ಅಭಿಮಾನಿಗಳು ಸಿಟ್ಟುಗೊಂಡಿದ್ದಾರೆ.
ರವಿಚಂದ್ರನ್ ಅವರಿಗೆ ಆ ಕಾಲದಲ್ಲಿಯೇ ನಿರ್ಮಾಪಕರಾಗಿ ಖ್ಯಾತರಾಗಿದ್ದ, ಶ್ರೀಮಂತಿಕೆ ಹೊಂದಿದ್ದ ತಂದೆಯ ಸಪೋರ್ಟಿತ್ತು. ಅದಲ್ಲದೇ ಅವರಿಗೆ ನಾದಬ್ರಹ್ಮ ಹಂಸಲೇಖಾ ಅವರಂಥವರ ಸಾಥ್ ಕೂಡಾ ಸಿಕ್ಕಿತ್ತು. ಆದರೆ ಕಥೆಯಿಲ್ಲದಿದ್ದರೂ ಅವರು ಅಭಿನಯಿಸಿದ್ದ ಪ್ರೇಮಲೋಕ ಚಿತ್ರ ಗೆದ್ದಿಲ್ಲವೇ? ಇತ್ತೀಚೆಗೆ ತೆರೆ ಕಂಡಿದ್ದ ಟಗರು ಚಿತ್ರವನ್ನು ಕಥೆ ಇಲ್ಲದಿದ್ದರೂ ಕೂಡಾ ಜನ ನೋಡಿಲ್ಲವೇ? ಗೆಲ್ಲಿಸಿಲ್ಲವೇ ಎಂಬುದು ರಕ್ಷಿತಾ ಪತ್ರದಲ್ಲಿ ರವಿಚಂದ್ರನ್ ಚಿತ್ರದ ಬಗ್ಗೆ ಇರೋ ಉಲ್ಲೇಖದ ಸಾರಾಂಶ.
ಇದರ ವಿರುದ್ಧ ರವಿಚಂದ್ರನ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಈ ವಿಚಾರವಾಗಿ ರಕ್ಷಿತಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ಶುರುವಾಗಿದೆ. ಪ್ರೇಮಲೋಕ ಎಂಬುದು ಸಾರ್ವಕಾಲಿಕ ಹಿಟ್ ಚಿತ್ರ. ತಂತ್ರಜ್ಞಾನ ಅಭಿವೃದ್ಧಿ ಹೊಂದಿರ ದಿನಗಳಲ್ಲಿಯೇ ಇಡೀ ಭಾರತೀಯ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ್ದ ಚಿತ್ರ. ಇದನ್ನು ನೋಡಿ ಅರ್ಥ ಮಾಡಿಕೊಳ್ಳಿ, ಅರ್ಥವಾಗದೇ ಇದ್ದರೆ ಮತ್ತೊಮ್ಮೆ ನೋಡಿ’ ಅಂತ ರಕ್ಷಿತಾಗೆ ರವಿಚಂದ್ರನ್ ಅಭಿಮಾನಿಗಳು ರಕ್ಷಿತಾಗೆ ತಿರುಗೇಟು ನೀಡಿದ್ದಾರೆ.
ಅಷ್ಟಕ್ಕೂ ದಿ ವಿಲನ್ ಚಿತ್ರವನ್ನು ಟಗರು ಮತ್ತು ಪ್ರೇಮಲೋಕ ಚಿತ್ರಗಳಿಗೆ ಹೋಲಿಸೋದೇ ಹಾಸ್ಯಾಸ್ಪದ. ದುನಿಯಾ ಸೂರಿಯಂತೂ ಪ್ರೇಮ್ನಂತೆ ಎಲ್ಲಿಯೂ ಜಂಭ ಕೊಚ್ಚಿಕೊಂಡಿಲ್ಲ. ತಾವಾಯಿತು ಚಿತ್ರೀಕರಣವಾಯಿತು ಅಂತಿರುತ್ತಾ ಅವರು ಪ್ರೆಸ್ ಮೀಟುಗಳಲ್ಲಿ ಮಾತಾಡಿದರೇ ಹೆಚ್ಚು. ಹಾಗೆ ನೋಡಿದರೆ ಟಗರು ಚಿತ್ರದ ಫೈವ್ ಪರ್ಸೆಂಟಿನಷ್ಟು ಅಚ್ಚುಕಟ್ಟುತನವಿದ್ದಿದ್ದರೂ ವಿಲನ್ ಇಂಥಾ ನಗೆಪಾಟಲಿಗೀಡಾಗುತ್ತಿರಲಿಲ್ಲ. ಆದರೆ ಪತಿ ಪ್ರೇಮದ ಭರಾಟೆಯಲ್ಲಿ ರಕ್ಷಿತಾ ಮೇಡಮ್ಮು ಇಂಥಾ ಸೂಕ್ಷ್ಮವನ್ನೇ ಮರೆತು ಬಿಟ್ಟಂತಿದೆ!
ಈ ಕುರಿತು ನಟ, ನಿರ್ದೇಶಕ ರಘುರಾಮ್ ಕೂಡಾ ತಮ್ಮ ನೇರ ಪ್ರತಿಕ್ರಿಯೆ ನೀಡಿದ್ದಾರೆ. ಅವರದ್ದೇ ಕೈಬರಹ ಇಲ್ಲಿದೆ. ಓದಿ.
#