ʻಪ್ರತೀ ಮೋಸ ಶುರುವಾಗೋದೇ ನಂಬಿಕೆಯಿಂದ!ʼ ಹೌದಲ್ವಾ? ಈ ಒಂದು ಸಾಲು ಎಷ್ಟೊಂದು ಅರ್ಥ ಕೊಡುತ್ತದಲ್ಲವಾ? ನಂಬಿಕೆ ಅನ್ನೋದು ಇಲ್ಲದಿದ್ದರೆ ಮೋಸ ಅನ್ನೋದು ಹುಟ್ಟೋದೇ ಇಲ್ಲ… ಇತ್ತೀಚೆಗಂತೂ ಸೋಷಿಯಲ್ ಮೀಡಿಯಾಗಳು ನಂಬಿಕೆಯ ಹೆಸರಲ್ಲಿ ಅದೆಷ್ಟು ಜನರ ಮಾನ, ಪ್ರಾಣಗಳನ್ನು ನುಂಗಿಕೊಂಡಿದೆಯೋ? ಜನ್ಮೇಪಿ ಒಬ್ಬರನ್ನೊಬ್ಬರು ನೋಡಿರೋದೇ ಇಲ್ಲ; ಜೊತೆಗೆ ಆಡಿ ಬೆಳೆದವರೂ ಅಲ್ಲ… ಆನ್ ಲೈನ್ನಲ್ಲಿ ಪರಿಚಯಗೊಂಡು, ಆತ್ಮೀಯತೆ ಬೆಳೆದು, ಒಬ್ಬರಿಗೊಬ್ಬರ ಅಸಲೀಯತ್ತು ತಿಳಿಯೋ ಹೊತ್ತಿಗೆ ಬದುಕೇ ಮುಗಿದು ಹೋಗಿರುತ್ತದೆ. ಇದು ತಂತ್ರಜ್ಞಾನದಿಂದ ಸೃಷ್ಟಿಯಾದ ಗಂಡಾಂತರ!
ಇಂಥದ್ದೇ ಒಂದು ಕಥಾವಸ್ತುವನ್ನು ಒಳಗೊಂಡು ತೆರೆಮೇಲೆ ಬಂದಿರುವ ಚಿತ್ರ ʻರಕ್ತಾಕ್ಷʼ. ಇದ್ದಕ್ಕಿದ್ದಂತೇ ಒಬ್ಬರ ಹಿಂದೆ ಒಬ್ಬರು ಕೊಲೆಯಾಗುತ್ತಿರುತ್ತಾರೆ; ಅದೂ ಸುಂದರವಾದ ಯುವತಿಯರು. ಒಂದು ಜೋಡಿ ಸೇರಿ ಈ ಕೃತ್ಯವೆಸಗುತ್ತಿರುವ ವಿಚಾರ ಕೂಡಾ ಗೊತ್ತಾಗುತ್ತದೆ! ಅದು ಯಾತಕ್ಕಾಗಿ? ಇಡೀ ಚಿತ್ರದಲ್ಲಿ ಯಾಕಿಷ್ಟು ರಿವೇಂಜ್ ಮರ್ಡರುಗಳಾಗುತ್ತವೆ ಅನ್ನೋದೇ ʻರಕ್ತಾಕ್ಷʼ ಚಿತ್ರದ ಜೀವಾಳ!
ಗಂಡಸರನ್ನು ಯಾಮಾರಿಸಿ, ಪ್ರೀತಿಸುವ ನಾಟಕವಾಡಿ, ಅಪಹರಿಸಿ, ಅವರ ಮರ್ಮಾಂಗವನ್ನು ತೆಗೆದು, ಹೆಣ್ಣಾಗಿ ಬದಲಿಸುವ ಜಾಲದ ಕುರಿತಾಗಿಯೂ ಹೇಳಿದ್ದಾರೆ.
ಅರ್ಚನಾ ಕೊಟ್ಟಿ, ರಚನಾ ದಶರಥ್ ಮತ್ತು ರೂಪಾ ರಾಯಪ್ಪ ಪ್ರಮುಖ ಪಾತ್ರಗಳಲ್ಲಿ ಬಂದು ಹೋಗುತ್ತಾರೆ. ಗುರುದೇವ್ ನಾಗರಾಜ್ ಇಷ್ಟು ಸಲೀಸಾಗಿ ನಟಿಸಬಹುದು ಅಂತಾ ಯಾರೂ ಅಂದುಕೊಂಡಿರಲಿಲ್ಲ. ಪ್ರಮೋದ್ ಶೆಟ್ಟಿ ಪ್ರಮುಖ ಘಟ್ಟದಲ್ಲಿ ಬಂದು ಭೀತಿ ಹುಟ್ಟಿಸುವುದರ ಜೊತೆಗೇ ಹೋಗಿಬಿಡುತ್ತಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ಚಿತ್ರದ ನಾಯಕನಟ ರೋಹಿತ್ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಸಿಕ್ಸ್ ಪ್ಯಾಕ್ ಪ್ರದರ್ಶನದಿಂದ ಹೆಚ್ಚು ಗಮನ ಸೆಳೆಯುತ್ತಾರೆ. ಕ್ರೌರ್ಯ ಚೂರು ಹೆಚ್ಚಾಯ್ತು ಅನ್ನಿಸಿದರೂ ಕಥೆಗೆ ಪೂರಕವಾಗಿದೆ. ಸಿನಿಮಾದಲ್ಲಿ ಸಂಭಾಷಣೆ ಸಾಕಷ್ಟು ಕಡೆ ಗುಣಮಟ್ಟ ಕಾಯ್ದುಕೊಂಡಿದೆ… ನಿರ್ದೇಶಕ ವಾಸುದೇವ ತಮಗೆ ಸಿಕ್ಕಿರುವ ಸೌಲಭ್ಯಗಳಲ್ಲಿ ನೀಟಾಗಿ ದೃಶ್ಯಗಳನ್ನು ಕಟ್ಟಿದ್ದಾರೆ.
ನಿಗೂಢ ಕಥೆಯನ್ನು ಹೆಚ್ಚು ಗೋಜಲುಗೊಳಿಸದೆ ಸರಳವಾಗಿ ಬಿಡಿಸಿಟ್ಟಿದ್ದಾರೆ. ಅನವಶ್ಯಕವಾಗಿ ಎಳೆಯದೇ ಹೇಳಬೇಕಾದ್ದನ್ನು ಹೇಳಿ ಮುಗಿಸಿದ್ದಾರೆ. ಹೀಗಾಗಿ ಎಲ್ಲೂ ಬೇಸರ ಅನ್ನಿಸದೇ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಅಷ್ಟರಮಟ್ಟಿಗೆ ರಕ್ತಾಕ್ಷ ಸಹನೀಯ!
No Comment! Be the first one.