ಟಾಲಿವುಡ್ ನಟ ರಾಮ್ಚರಣ್ ತೇಜಾ ’ವಿನಯ ವಿಧೇಯ ರಾಮ’ ತೆಲುಗು ಚಿತ್ರದ ಸೋಲೊಪ್ಪಿಕೊಂಡಿದ್ದಾರೆ. ಬೊಯಪಾಟಿ ಸೀನು ನಿರ್ದೇಶನದ ಸಿನಿಮಾ ಜನವರಿ 11ರಂದು ತೆರೆಕಂಡಿತ್ತು. ದೊಡ್ಡ ನಿರೀಕ್ಷೆಯೊಂದಿಗೆ ಥಿಯೇಟರ್ಗೆ ಬಂದಿದ್ದ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿತ್ತು. ಸಾಮಾನ್ಯವಾಗಿ ತೆಲುಗು ಸಿನಿಮಾಗಳು ಅಮೆರಿಕದಲ್ಲಿ ಉತ್ತಮ ವಹಿವಾಟು ನಡೆಸುತ್ತವೆ. ಆದರೆ ’ವಿನಯ ವಿಧಯ ರಾಮ’ ಅಲ್ಲಿಯೂ ಧಾರುಣವಾಗಿ ಸೋತಿದೆ. ಕಳೆದ ವರ್ಷ ತೆರೆಕಂಡಿದ್ದ ರಾಮ್ಚರಣ್ ನಟನೆಯ ’ರಂಗಸ್ಥಳಂ’ ಭರ್ಜರಿ ಯಶಸ್ಸು ಕಂಡಿದ್ದು ಸರಿಯಷ್ಟೆ. ಹೀಗಾಗಿ ಸಹಜವಾಗಿಯೇ ರಾಮ್ಚರಣ್ರ ಹೊಸ ಚಿತ್ರ ನಿರೀಕ್ಷೆ ಹುಟ್ಟಿಸಿತ್ತು. ಎಲ್ಲಾ ತಲೆಕೆಳಗಾಗಿ ಸಿನಿಮಾ ಸೋತಿದೆ. ಮೌನಮುರಿದಿರುವ ರಾಮ್ಚರಣ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ಎಲ್ಲಾ ವರ್ಗದ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಬೇಕು ಎನ್ನುವ ಉದ್ದೇಶದಿಂದ ತುಂಬಾ ಶ್ರಮವಹಿಸಿ ಸಿನಿಮಾ ಮಾಡಿದ್ದೆವು. ದುರದೃಷ್ಟವತಾಶ್ ಅಂದುಕೊಂಡ ಹಾಗೆ ಸಿನಿಮಾ ತೆರೆಗೆ ಬಂದಿಲ್ಲ. ಅಭಿಮಾನಿಗಳ ನಿರೀಕ್ಷೆಯನ್ನು ಮುಟ್ಟುವಲ್ಲಿ ನಾವು ಸೋತಿದ್ದೇವೆ. ಈ ಚಿತ್ರಕ್ಕಾಗಿ ದುಡಿದ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರಿಗೆ ನಾನು ಧನ್ಯವಾದ ಹೇಳುತ್ತೇನೆ. ಉದ್ಯಮದಲ್ಲಿ ನನಗೆ ಬೆಂಬಲ ನೀಡುತ್ತಾ ಬಂದಿರುವ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರನ್ನು ಸ್ಮರಿಸುತ್ತೇನೆ ಎನ್ನುವ ಒಕ್ಕಣಿ ಪತ್ರದಲ್ಲಿದೆ. ’ವಿನಯ ವಿಧೇಯ ರಾಮ’ ಚಿತ್ರ ಸುಮಾರು 15 ಕೋಟಿ ರೂಪಾಯಿ ನಷ್ಟ ಉಂಟುಮಾಡಿದೆ ಎನ್ನಲಾಗುತ್ತಿದೆ.
#
No Comment! Be the first one.