ತೀರಾ ಕಷ್ಟಪಟ್ಟು, ವರ್ಷಗಟ್ಟಲೆ ಪ್ಲಾನು ಮಾಡಿ ತಯಾರಿಸುವ ಸಿನಿಮಾ ಏನೇನೂ ಸದ್ದು ಮಾಡದೆ ಸುಮ್ಮನಾಗಿಬಿಡುತ್ತದೆ. ದೊಡ್ಡ ಮಟ್ಟದ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ, ದಿಢೀರನೇ ಶುರು ಮಾಡಿ, ರಿಲೀಸ್ ಮಾಡಿದ ಸಿನಿಮಾ ಇತಿಹಾಸ ಸೃಷ್ಟಿಸುತ್ತದೆ ಅನ್ನೋದಕ್ಕೆ ಕ್ರೇಜ಼ಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾಗಿಂತಾ ಬೇರೆ ಉದಾಹರಣೆ ಬೇಕಿಲ್ಲ. ಹಾಗಾದರೆ, ರಾಮಾಚಾರಿ ಆರಂಭಗೊಂಡಿದ್ದು ಹೇಗೆ? ಆ ವಿವರ ಇಲ್ಲಿದೆ…
ರಣಧೀರ, ಅಂಜದಗಂಡು ಮತ್ತು ಯುಗಪುರುಷ ಸಿನಿಮಾಗಳಲ್ಲಿ ರವಿಚಂದ್ರನ್ ಮತ್ತು ಖುಷ್ಬೂ ಕಾಂಬಿನೇಷನ್ ದೊಡ್ಡ ಮಟ್ಟದ ಕ್ರೇಜ಼್ ಹುಟ್ಟು ಹಾಕಿತ್ತು. ಅದಾದ ನಂತರ ಇಬ್ಬರೂ ಒಂದಾಗಿ ನಟಿಸಬೇಕು ಅಂತಂದುಕೊಂಡರೂ ಸಾಧ್ಯವಾಗಿರಲಿಲ್ಲ. ರವಿಚಂದ್ರನ್ ಕನ್ನಡದಲ್ಲಿ ಸೂಪರ್ ಸ್ಟಾರ್ ಆದರೆ, ಖುಷ್ಬೂ ದಕ್ಷಿಣ ಭಾರತವನ್ನೇ ಆಳ್ವಿಕೆ ನಡೆಸುತ್ತಿದ್ದರು. ನಟನೆಯಲ್ಲಿ ಸಿಕ್ಕಾಪಟ್ಟೆ ಅವಕಾಶಗಳಿದ್ದರೂ, ಹೊಸ ಟ್ರೆಂಡ್ ಸೃಷ್ಟಿಸುವ ಕಾರಣಕ್ಕಾಗಿ ರವಿಚಂದ್ರನ್ ಏಕಕಾಲಕ್ಕೆ ನಾಲ್ಕು ಭಾಷೆಗಳಲ್ಲಿ ಶಾಂತಿಕ್ರಾಂತಿಯನ್ನು ಆರಂಭಿಸಿದ್ದರು. ಅದಕ್ಕೆ ಮುಂಚಿನ ವರ್ಷಗಳಲ್ಲಿ ವರ್ಷಕ್ಕೆ ಏನಿಲ್ಲವೆಂದರೂ ರವಿ ನಟನೆಯ ಐದಾರು ಸಿನಿಮಾಗಳು ತೆರೆಗೆ ಬಂದಿದ್ದವು. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ರವಿಚಂದ್ರನ್ ಅಭಿನಯದ ಸಿನಿಮಾಗಳು ವರ್ಷವಿಡೀ ಪ್ರದರ್ಶನಗೊಳ್ಳುತ್ತಲೇ ಇರುತ್ತಿದ್ದವು.
ಯಾವಾಗ ರವಿಚಂದ್ರನ್ ಶಾಂತಿಕ್ರಾಂತಿಯನ್ನು ಕೈಗೆತ್ತಿಕೊಂಡರೋ, ಕ್ರಮೇಣ ಥೇಟರುಗಳ ಮುಂದೆ ಅವರ ಕಟೌಟು ಕಣ್ಮರೆಯಾಗಿದ್ದವು. ಶಾಂತಿ ಕ್ರಾಂತಿ ಸಿನಿಮಾಗೆ ಬಂಡವಾಳದ ಕೊರತೆಯೂ ಎದುರಾಗಿತ್ತು. ಆ ಸಂದರ್ಭದಲ್ಲಿ ತಕ್ಷಣಕ್ಕೆ ಯಾವುದಾದರೊಂದು ಸಿನಿಮಾ ರೆಡಿ ಮಾಡಿ ತೆರೆಗೆ ಬಿಡಲೇಬೇಕಿದ್ದ ಅನಿವಾರ್ಯತೆಯೂ ಎದುರಾಗಿತ್ತು. ಅದೇ ಸಮಯದಲ್ಲಿ ಶಿವಾಜಿ ಪ್ರಭು ಮತ್ತು ಖುಷ್ಬೂ ಜೋಡಿಯ ಚಿನ್ನತಂಬಿ ತಮಿಳುನಾಡಿಲ್ಲಿ ಅಮೋಘ ಜಯಭೇರಿ ಬಾರಿಸಿತ್ತು.
ಈ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡುವಂತೆ ರವಿಚಂದ್ರನ್ ಅವರಿಗೆ ಹೇಳಿದ್ದು, ಖುದ್ದು ಪಿ.ವಾಸು ಬಳಿ ಮಾತಾಡಿ ರೈಟ್ಸ್ ಕೊಡಿಸಿದ್ದು ಕೂಡಾ ಖಷ್ಬೂ ಅವರೇ. ಅದೇ ಸಮಯದಲ್ಲಿ ಮಾಲಾಶ್ರೀ ಕರ್ನಾಟಕದಲ್ಲಿ ಕನಸಿನ ರಾಣಿಯಂತೆ ಮೆರೆಯುತ್ತಿದ್ದರಲ್ಲಾ? ರವಿಚಂದ್ರನ್ ಎದುರಿಗೆ ಸಿಕ್ಕಾಗೆಲ್ಲಾ ಮಾಲಾಶ್ರೀ ಕೇಳುತ್ತಿದ್ದುದು ಒಂದೇ ಪ್ರಶ್ನೆ ‘ನಿಮ್ಮ ಜೊತೆ ನಟಿಸೋ ಛಾನ್ಸು ಯಾವಾಗ ಕೊಡ್ತೀರ’ ಅಂತಾ… ಆಗೆಲ್ಲಾ ರವಿಚಂದ್ರನ್ ‘ಒಂದು ದಿನ ಕಾಲ್ ಮಾಡ್ತೀನಿ. ಆಗ ನೀನು ಎಷ್ಟೇ ಬ್ಯುಸಿ ಇದ್ದರೂ ‘ಹ್ಞೂಂ..’ ಅನ್ನಬೇಕು ಅಷ್ಟೇ’ ಅನ್ನುತ್ತಿದ್ದರು.
ಇತ್ತ ಚಿನ್ನತಂಬಿಯ ಹಕ್ಕು ತಂದು, ಡಿ. ರಾಜೇಂದ್ರ ಬಾಬು ಅವರ ಕೈಗೆ ಕೊಟ್ಟು ಚಿತ್ರೀಕರಣದ ತಯಾರಿಯನ್ನೂ ನಡೆಸಲಾಗಿತ್ತು. ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಸ್ವತಃ ರವಿಚಂದ್ರನ್ ಅವರ ತಂದೆ ಎನ್. ವೀರಾಸ್ವಾಮಿಯವರು ನಿರ್ಮಿಸಿದ್ದ ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಅನ್ನೋ ಪಾತ್ರ ವಿಷ್ಣುವರ್ಧನ್ ಎನ್ನುವ ಮಹಾನ್ ನಟನನ್ನು ಪರಿಚಯಿಸಿತ್ತಲ್ಲಾ? ಅದೇ ರಾಮಾಚಾರಿಯ ಹೆಸರನ್ನು ಈ ಸಿನಿಮಾಗೆ ಇಟ್ಟಿದ್ದರು. ಹಂಸಲೇಖಾ ಅದ್ಭುತವಾದ ಹಾಡುಗಳನ್ನು ಸೃಷ್ಟಿ ಮಾಡಿದ್ದರು.
ಮೊದಲೇ ಅಂದುಕೊಂಡಂತೆ ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿದ್ದ ಖುಷ್ಬೂ ಅದಾಗಲೇ ಒಪ್ಪಿಕೊಂಡಿದ್ದ ಚಿತ್ರಗಳಲ್ಲಿ ವಿಪರೀತ ಬ್ಯುಸಿ ಇದ್ದರು. ಯಾವ ಕಾರಣಕ್ಕೂ ಅವನ್ನೆಲ್ಲಾ ಬಿಟ್ಟು ಬರುವಂತಿರಲಿಲ್ಲ. ಆಗ ರವಿಚಂದ್ರನ್’ಗೆ ನೆನಪಾಗಿದ್ದು ಮಾಲಾಶ್ರೀ. ತಕ್ಷಣ, ಖುದ್ದು ರವಿಚಂದ್ರನ್ ಮಾಲಾಶ್ರೀಗೆ ಕಾಲ್ ಮಾಡಿದ್ದರು. ಆ ಕಡೆ ರಿಸೀವರ್ ಹಿಡಿದಿದ್ದ ಮಾಲಾಶ್ರೀ ಕರೆ ಮಾಡಿರೋದು ರವಿಚಂದ್ರನ್ ಅಂತಾ ಗೊತ್ತಾಗುತ್ತಿದ್ದಂತೇ ’‘ಹ್ಞೂಂ..’ ‘ಹ್ಞೂಂ..’ ‘ಹ್ಞೂಂ..’ ಅನ್ನುತ್ತಿದ್ದರಂತೆ. ಮುಂದಿನ ಸಿನಿಮಾದಲ್ಲಿ ನೀನು ಬಂದು ನಟಿಸಬೇಕು ಅಂದಾಗಲೂ ‘ಹ್ಞೂಂ..’ ಅನ್ನೋ ಪದವನ್ನು ಬಿಟ್ಟು ಬೇರೆ ಮಾತಾಡುತ್ತಿರಲಿಲ್ಲವಂತೆ’!
ಕ್ರೇಜ಼ಿಸ್ಟಾರ್ ಕೆರಳಿಹೋಗಿದ್ದಾರೆ. ‘ಇವಳ್ಯಾವಳು ಏನು ಕೇಳಿದರೂ ‘ಹ್ಞೂಂ..’ ಅಂತಾಳಲ್ಲ’ ಎಂದು ರೇಗಿದ್ದಾರೆ. ಆಗ ಮಾಲಾಶ್ರೀ ‘ನಾನು ಕಾಲ್ ಮಾಡಿದಾಗ ದೂಸ್ರಾ ಮಾತಾಡದೇ ‘ಹ್ಞೂಂ..’ ಅಂತಿರಬೇಕು ಎಂದು ಹೇಳಿದ್ದಿದ್ದು ನೀವೇ ಅಲ್ಲವಾ?’ ಅಂದರಂತೆ. ಮಾಲಾಶ್ರೀ ‘ಹ್ಞೂಂ..’ ಅಂದಿದ್ದೇನೋ ಆಗಿತ್ತು. ಆದರೆ ಅವರು ದಿನಕ್ಕೆ ಮೂರ್ಮೂರು ಶೆಡ್ಯೂಲಲ್ಲಿ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಿಸುತ್ತಿದ್ದ ಹೀರೋಯಿನ್ನು. ಒಪ್ಪಿಕೊಂಡ ಸಿನಿಮಾಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಿದ್ದ ನಟಿ ಬೇರೆ. ಆದರೂ ಹೇಗೋ ಮಾಡಿ ರಾಮಾಚಾರಿಗೆ ತೊಡಕಾಗದಂತೆ ಹದಿನೆಂಟು ದಿವಸಗಳ ಕಾಲ್ ಶೀಟ್ ಕೊಟ್ಟು ಸಹಕರಿಸಿದ್ದರು. ಹಾಗೆ ಶುರುವಾದ ಸಿನಿಮಾ ರಾಮಾಚಾರಿ.
ಬಹುಶಃ ರವಿಚಂದ್ರನ್ ನಟಿಸಿದ ಸಿನಿಮಾಗಳಲ್ಲೇ ಅತೀ ಕಡಿಮೆ ಅವಧಿಯಲ್ಲಿ ಚಿತ್ರೀಕರಣಗೊಂಡು, ತಕ್ಷಣವೇ ರಿಲೀಸಾದ ಚಿತ್ರ ರಾಮಾಚಾರಿ. ಆದರೆ ಕರ್ನಾಟಕದ ಏಳೆಂಟು ಜಿಲ್ಲೆಗಳಲ್ಲಿ ಬರೋಬ್ಬರಿ ಇಪ್ಪತ್ತೈದು ವಾರಗಳ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತ್ತು. ಅಲ್ಲೀತನಕ ಬೇರೆಯದ್ದೇ ಲುಕ್’ನಲ್ಲಿದ್ದ ರವಿಚಂದ್ರನ್ ಬೀಳೀ ಶರ್ಟು, ಪಂಚೆಯಲ್ಲಿ ಮಿರಮಿರ ಮಿಂಚಿದ್ದರು. ಮಾಲಾಶ್ರೀ ತೊಟ್ಟಿದ್ದ ಬಳೆ, ಬ್ಲೌಸು, ಬಟ್ಟೆಗಳೆಲ್ಲವೂ ಹೊಸ ಟ್ರೆಂಡ್ ಸೃಷ್ಟಿಸಿದ್ದವು. ರಾಮಾಚಾರಿ ಬಳೆ, ರಾಮಾಚಾರಿ ಸೀರೆ, ರಾಮಾಚಾರಿ ಚಪ್ಪಲಿ, ರಾಮಾಚಾರಿ ಪಂಚೆ ಅಂತಾ ಕರ್ನಾಟಕದ ಉದ್ದಗಲಕ್ಕೂ ಪ್ರಾಡಕ್ಟುಗಳು ಹುಟ್ಟಿಕೊಂಡವು. ಇವತ್ತಿಗೂ ರಾಮಾಚಾರಿಯ ಹಾಡುಗಳು ಅದೇ ಹೊಸತನವನ್ನು ಕಾಯ್ದುಕೊಂಡುಬಂದಿವೆ. ಇನ್ನೊಂದು ವರ್ಷ ಕಳೆದರೆ ರಾಮಾಚಾರಿಗೆ ಮೂವತ್ತನೇ ಹುಟ್ಟಿದಹಬ್ಬ!