ಶ್ರೀ ರಾಮಸೇವಾ ಮಂಡಳಿ ಈ ಎಂಭತ್ತು ವರ್ಷಗಳ ಕಾಲವೂ ಸಂಗೀತ ಕಾರ್ಯಕ್ರಮವನ್ನು ವ್ರತದಂತೆಯೇ ಮಾಡಿಕೊಂಡು ಬಂದಿದೆ. ಈ ಬಾರಿಯೂ ಏಪ್ರಿಲ್ 6 ರಂದು ಶುರುವಾಗಿರುವ ಈ ಸಂಗೀತ ಕಾರ್ಯಕ್ರಮ ಮೇ ತಿಂಗಳ 6ನೇ ತಾರೀಖಿನವರೆಗೂ ಅವ್ಯಾಹತವಾಗಿ ನಡೆಯಲಿದೆ. ಏಪ್ರಿಲ್ 6 ರಂದು ಸಂಜೆ ಆರು ಘಂಟೆಗೆ ಎಂಬತ್ತೊಂದನೇ ಶ್ರೀ ರಾಮನವಮಿ ಸಂಗೀತೋತ್ಸವಕ್ಕೆ ಚಾಲನೆ ಸಿಗುತ್ತಿದೆ. ಇಂದು ಬಾಂಬೆ ಜಯಶ್ರೀಯವರ ಗಾಯನ ಕಾರ್ಯಕ್ರಮದ ಮೂಲಕ ಸಂಗೀತದ ಹಬ್ಬಕ್ಕೆ ಶುಭಾರಂಭ ನೀಡಲಾಗುತ್ತಿದೆ. ಇದಾದ ನಂತರ ಪ್ರತೀ ಸಂಜೆಯೂ ಸಂಗೀತದ ಹಬ್ಬ ಮೇಳೈಸಲಿದೆ.
ಏಪ್ರಿಲ್ ಇಪ್ಪತ್ತೊಂದರ ಭಾನುವಾರದಂದು ಸಂಜೆ ಆರು ನಲವತೈದರ ಹೊತ್ತಿಗೆಲ್ಲ ವಿಶೇಷ ಸಂಗೀತ ಲೋಕವೊಂದು ಜನಮಾನಸದ ಮುಂದೆ ಅನಾವರಣಗೊಳ್ಳಲಿದೆ. ಆ ದಿನ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ರಾತ್ರಿ ಹತ್ತು ಘಂಟೆಯ ವರೆಗೂ ನೆರವೇರಲಿದೆ. ಇದು ಎಂಬತ್ತೊಂದನೇ ಶ್ರೀರಾಮನವಮಿ ಸಂಗೀತೋತ್ಸವದ ಪ್ರಧಾನ ಆಕರ್ಷಣೆಯಂಥಾ ಕಾರ್ಯಕ್ರಮ. ಇನ್ನುಳಿದಂತೆ ಪ್ರವೀಣ್ ಗೋಡ್ಕಿಂಡಿ, ಚಂದನಾ ಬಾಲಕಲ್ಯಾಣ್, ವಿದ್ಯಾಭೂಷಣ, ಸೇರಿದಂತೆ ಅನೇಕ ಸಂಗೀತ ಲೋಕದ ದಿಗ್ಗಜರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಏಪ್ರಿಲ್ ಆರರಿಂದ ಮೇ ಆರರ ವರೆಗೆ ಈ ಮೂಲಕ ಸಂಗೀತಮಯ ವಾತಾವರಣವೊಂದು ಬೆಂಗಳೂರಿನ ವಾತಾವರಣಕ್ಕೆ ರಂಗು ತುಂಬಲಿವೆ. ಇಂಥಾದ್ದೊಂದು ಅದ್ಭುತ ಸಂಗೀತ ಕಾರ್ಯಕ್ರಮವನ್ನು ಅಖಂಡ ಎಂಭತ್ತು ವರ್ಷಗಳಿಂದ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರೋದು ಶ್ರೀರಾಮ ಸೇವಾ ಮಂಡಳಿ. ಈ ಮಂಡಳಿಯದ ಇತಿಹಾಸ ಕೂಡಾ ಇಂಥಾ ಅಚ್ಚುಕಟ್ಟಾದ ವಿಚಾರಗಳನ್ನೇ ತಳಹದಿಯಾಗಿಸಿಕೊಂಡಿದೆ.
ಚಾಮರಾಜಪೇಟೆಯ ಕೋಟೆ ಶಾಲಾ ಮೈದಾನದಲ್ಲಿ ಅದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಣ್ಣದಾಗಿ ಶುರುವಾದ ಶ್ರೀ ರಾಮನವಮಿ ಸಂಗೀತ ಕಾರ್ಯಕ್ರಮ. 1939ನೇ ಇಸವಿಯಲ್ಲಿ ಎಸ್.ವಿ. ನಾರಾಯಣಸ್ವಾಮಿ ರಾವ್ ಅವರಿಂದ ಸ್ಥಾಪಿತಗೊಂಡ ಶ್ರೀ ರಾಮಸೇವಾಮಂಡಲಿ ಆನಂತರ ಬೆಳೆದು ನಿಂತ ಬಗೆ ಇದೆಯಲ್ಲಾ? ಅದು ನಿಜಕ್ಕೂ ಬೆರಗು ಹುಟ್ಟಿಸುವ ಸಂಗತಿ. ಬೆಂಗಳೂರಿನ ಅತಿ ಪುರಾತನ ಸಂಸ್ಥೆಗಳಲ್ಲಿ ಕಡಲೇಕಾಯಿ ಪರಿಶೆ ಬಿಟ್ಟರೆ ಎರಡನೇ ಜನಪ್ರಿಯ ಸಂಸ್ಥೆಯಾಗಿ ಶ್ರೀ ರಾಮಸೇವಾ ಮಂಡಲಿ ಗುರುತಿಸಿಕೊಂಡಿದೆ. ಇಂತಹ ಸಂಸ್ಥೆಯನ್ನು ಎಸ್.ವಿ.ನಾರಾಯಣಸ್ವಾಮಿ ರಾವ್ ಅವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಆರಂಭಿಸಿದ್ದು. ಇಸವಿ 2000ರಲ್ಲಿ ಅವರು ದೈವಾದೀನರಾಗುವವರೆಗೆ ಅವರೇ ಸಂಸ್ಥಾಪಕ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಆನಂತರ ಎಸ್.ಎನ್. ವರದರಾಜ್ ಅವರು ಮಂಡಳಿಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಬಹುತೇಕ ಎಲ್ಲ ಸಂಗೀತ ವಿದ್ವಾಂಸರೂ ಶ್ರೀ ರಾಮಸೇವಾ ಮಂಡಳಿಯ ರಾಮೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ಕಛೇರಿಗಳನ್ನು ನೀಡಿರುವುದು ಈ ನಾಡಿನ ಹೆಮ್ಮೆ. ಎಂ.ಎಸ್. ಸುಬ್ಬುಲಕ್ಷ್ಮಿ, ಭೀಮಸೇನ ಜೋಷಿ, ಟಿ. ಚೌಡಯ್ಯ, ಚೆಂಬೈ ವೈದ್ಯನಾಥ ಭಾಗವತರ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಬಡೇ ಗುಲಾಮ್ ಆಲಿ ಖಾನ್, ಎಂ.ಎಲ್. ವಸಂತ ಕುಮಾರಿ, ಡಿ.ಕೆ. ಪಟ್ಟಮ್ಮಾಳ್, ಎಂ. ಬಾಲಮುರಳೀ ಕೃಷ್ಣ, ಕೆ.ಜೆ. ಏಸುದಾಸ್, ಪಿಟೀಲು ಮಾಂತ್ರಿಕ ಕುನ್ನಕುಡಿ ಆರ್. ವೈದ್ಯನಾಥನ್, ಸುಧಾರಘುನಾಥನ್, ಮ್ಯಾಂಡೋಲಿನ್ ವಾದಕ ಯು ಶ್ರೀನಿವಾಸ್, ಸ್ಯಾಕ್ಸ್ ಫೋನ್ ವಾದಕ ಕದ್ರಿ ಗೋಪಾಲನಾಥ್ ಆದಿಯಾಗಿ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಲೋಕದ ದಿಗ್ಗಜರೆಲ್ಲಾ ಕೋಟೆ ಪ್ರೌಢಶಾಲೆ ಆವರಣದಲ್ಲಿ ನಡೆಯುವ ಶ್ರೀ ರಾಮನವಮಿ ಸಂಗೀತೋತ್ಸವದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಎಂ.ಎಸ್. ಸುಬ್ಬುಲಕ್ಮಿಅವರು ಸತತ 34 ವರ್ಷಗಳ ಕಾಲ ಇದೇ ಸಂಗೀತೋತ್ಸವದಲ್ಲಿ ಸತತವಾಗಿ ಕಛೇರಿ ನಡೆಸಿಕೊಟ್ಟಿದ್ದಾರೆ ಎಂದರೆ ಶ್ರೀ ರಾಮಸೇವಾ ಮಂಡಳಿಯ ಹಿರಿಮೆ ಎಂಥದ್ದು ಅನ್ನೋದನ್ನು ಊಹಿಸಿ. ಈ ಸಂಸ್ಥೆಯಲ್ಲಿ ಕಾರ್ಯಕ್ರಮ ನೀಡೋದೇ ಸಂಗೀತ ವಿದ್ವಾಂಸರ ಪಾಲಿಗೆ ಒಂದು ರೀತಿಯ ಪ್ರತಿಷ್ಠೆಯ ಸಂಕೇತವಾಗಿದೆ. ಸಂಗೀತ ಕ್ಷೇತ್ರದಲ್ಲಿ ಸಂಸ್ಥೆಯ ಅವಿರತ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ 2001ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಶ್ರೀ ರಾಮ ಸೇವಾ ಮಂಡಳಿಯ ಕಛೇರಿ ಇದ್ದ ರಸ್ತೆಗೆ ಬೆಂಗಳೂರು ಮಹಾನಗರ ಪಾಲಿಕೆ `ಎಸ್.ವಿ. ನಾರಾಯಣಸ್ವಾಮಿ ರಾವ್ ಮಾರ್ಗ’ ಎಂಬ ಹೆಸನ್ನಿಟ್ಟು ಗೌರವಿಸಿತು.
ಜಯಚಾಮರಾಜೇಂದ್ರ ಒಡೆಯರ್, ಡಾ. ಅಬ್ದುಲ್ ಕಲಾಂ ಆದಿಯಾಗಿ ಈ ದೇಶದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿ, ರಾಜ್ಯಪಾಲರುಗಳೆಲ್ಲಾ ಶ್ರೀ ರಾಮಸೇವಾ ಮಂಡಳಿ ನಡೆಸುವ ವಾರ್ಷಿಕ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಎಸ್.ಎಂ. ಕೃಷ್ಣರಂತಾ ರಾಜಕೀಯ ಧುರೀಣರು ಕೂಡಾ ತಮ್ಮ ಕೆಲಸದೊತ್ತಡ ಎಷ್ಟೇ ಇದ್ದರೂ ರಾಮನವಮಿ ಸಂಗೀತ ಕಾರ್ಯಕ್ರಮಗಳಿಗೆ ಆಗಮಿಸಿ ಸಂಗೀತ ಆಲಿಸುವುದನ್ನು ವರ್ಷಾಂತರಗಳಿಂದ ರೂಢಿಸಿಕೊಂಡು ಬಂದಿದ್ದಾರೆ. ಶಿಕ್ಷಣ ತಜ್ಞರಾಗಿದ್ದ ಪದ್ಮಭೂಷಣ ಡಾ. ಹೆಚ್. ನರಸಿಂಹಯ್ಯನವರು ರಾಮನವಮಿ ತಿಂಗಳಿಗೂ ಮೀರಿ ನಡೆಯುವ ಸಂಗೀತೋತ್ಸವದಲ್ಲಿ ಬಿಡದೆ ಹಾಜರಾತಿ ನೀಡುತ್ತಿದ್ದರು. ನಾಡಿನ ಶ್ರೇಷ್ಠ ವ್ಯಕ್ತಿಗಳು, ಪ್ರಖ್ಯಾತರೆಲ್ಲಾ ತಮ್ಮ ಪಂಥ ಬೇಧಗಳನ್ನೆಲ್ಲಾ ಬದಿಗಿಟ್ಟು ಪಾಲ್ಗೊಳ್ಳುವ ಏಕೈಕ ತಾಣ ಇದಾಗಿದೆ. ಇದೇ ಹಾದಿಯಲ್ಲಿ ಶ್ರೀರಾಮ ಸೇವಾ ಮಂಡಳಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಅದರ ಫಲವಾಗಿಯೇ ಎಂಭತ್ತೊಂದನೇ ವರ್ಷದ ಶ್ರೀರಾಮ ನವಮಿ ಸಂಗೀತೋತ್ಸವವನ್ನೂ ಕೂಡಾ ಅಷ್ಟೇ ಅಚ್ಚುಕಟ್ಟಾಗಿ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ.
No Comment! Be the first one.