ಈ ಬಾರಿ ಅನೀಶ್ ಗುರಿ ಮುಟ್ಟೋದು ಗ್ಯಾರೆಂಟಿ… ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಮೂಲಕ ಪಕ್ಕಾ ಆಕ್ಷನ್ ಸ್ಟಾರ್ ಆಗಿ ಹೊರಹೊಮ್ಮಿದ ನಟ ಅನೀಶ್! ಈಗ ಅನೀಶ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿ ನಾಯಕನಟನಾಗಿ ನಟಿಸಿರುವ ‘ರಾಮಾರ್ಜುನ’ ಚಿತ್ರದ ಖಡಕ್ ಟೀಸರ್ ಬಿಡುಗಡೆಯಾಗಿದೆ. ಸಿನಿಮಾದಿಂದ ಸಿನಿಮಾಗೆ ಮಾಗುತ್ತಾ ಬಂದಿರುವ ಅನೀಶ್ ಅವರನ್ನು ‘ರಾಮಾರ್ಜುನ’ ಟೀಸರಿನಲ್ಲೀ ನೋಡೋದೇ ಒಂದು ಚೆಂದ.
ಕಮರ್ಷಿಯಲ್ ಹೀರೋಗೆ ಬೇಕಿರುವ ಎಲ್ಲ ಗುಣವನ್ನೂ ಹೊಂದಿರುವ ಅನೀಶ್ ಅತ್ಯುತ್ತಮ ಡ್ಯಾನ್ಸರ್ ಅನ್ನೋದು ಈಗಾಗಲೇ ಸಾಬೀತಾಗಿದೆ. ಸ್ಟಂಟ್ಸ್’ನಲ್ಲಿ ಕೂಡಾ ಅಷ್ಟೇ ಪರ್ಫೆಕ್ಟ್ ಅನ್ನೋದನ್ನು ಜನ ವಾಸು ನಾನ್ ಪಕ್ಕಾ ಕಮರ್ಷಿಯಲ್ಲಿನಲ್ಲೇ ನೋಡಿದ್ದಾರೆ. ಈ ಬಾರಿ ‘ರಾಮಾರ್ಜುನ’ ಟೀಸರ್ ನೋಡಿದವರಿಗೆ ‘ಅನೀಶ್ ಸಿನಿಮಾದ ಎಲ್ಲ ವಿಭಾಗಗಳಲ್ಲೂ ನೈಪುಣ್ಯತೆ ಹೊಂದಿರುವ ಪ್ರತಿಭಾವಂತ’ ಅನ್ನಿಸೋದು ಖಾತ್ರಿಯಾಗುತ್ತದೆ. ಕಿರಣ್ ಚಂದ್ರ ಸಂಭಾಷಣೆ, ನವೀನ್ ಕುಮಾರ್ ಕ್ಯಾಮೆರಾ, ವಿಕ್ರಂ ಅವರ ಸಾಹಸ ಸಂಯೋಜನೆ, ನಿಶ್ವಿಕಾ ನಾಯ್ಡು ಬೋಲ್ಡ್ ನಟನೆಯ ಜೊತೆಗೆ ಅನೀಶ್ ಅವರ ನಿರ್ದೇಶನ ಮತ್ತು ನಟನೆ ‘ರಾಮಾರ್ಜುನ’ನ ಕಲರ್ರು, ಖದರ್ರು ಎಲ್ಲವನ್ನೂ ಹೆಚ್ಚಿಸಿದೆ. ಒಟ್ಟಾರೆ, ಈ ಟೀಸರನ್ನು ನೋಡುತ್ತಿದ್ದಂತೇ ‘ಈ ಬಾರಿ ಅನೀಶ್ ಗುರಿ ಮುಟ್ಟೋದು ಗ್ಯಾರೆಂಟಿ’ ಅನ್ನಿಸುವಂತಿದೆ.
ಟೀಸರ್ ಬಿಡುಗಡೆಯ ಸಂದರ್ಭದಲ್ಲಿ ಮಾತಾಡಿದ ಅನೀಶ್ “ಯಾವತ್ತೂ ಡೈರೆಕ್ಷನ್ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಅಚಾನಕ್ಕಾಗಿ ಸ್ಟಾರ್ಟ್ ಆಯ್ತು. ನನ್ನ ಹಿಂದಿನ ನಿರ್ದೇಶಕರುಗಳಿಗೆ ಧನ್ಯವಾದವನ್ನು ಹೇಳುತ್ತೇನೆ. ಅವರು ಹೇಳಿಕೊಟ್ಟ ಪಾಠವಿದು. ನಾನು ಯಾವ ಡೈರೆಕ್ಷನ್ ಕೋರ್ಸ್ಗೆ, ಕ್ಲಾಸಿಗೆ ಹೋಗಿಲ್ಲ. ನನ್ನ ಮೊದಲ ಸಿನಿಮಾದಿಂದಲೂ ನಾನು ಟೆಕ್ನಿಕಲ್ ಆಗಿಯೇ ನೋಡುತ್ತಿದ್ದೆ. ಸೆಟ್’ಗೆ ಹೋಗಿ ಬರೀ ಶೂಟ್ ಮುಗಿಸಿ ಬರುತ್ತಿರಲಿಲ್ಲ. ಎಡಿಟಿಂಗ್ ಆಗಿರಬಹುದು, ಡಿಐ, ಶಾಟ್ ಡಿವಿಷನ್ ಸೇರಿದಂತೆ ಪ್ರತಿಯೊಂದರ ಕುರಿತಾಗಿಯೂ ನಾನು ನಿರ್ದೇಶಕರುಗಳನ್ನು ಡೌಟ್ ಕೇಳುತ್ತಲೇ ಇದ್ದೆ. ಅದಕ್ಕಾಗಿ ಈ ಸಿನಿಮಾವನ್ನು ನನ್ನ ಎಲ್ಲ ನಿರ್ದೇಶಕರಿಗೆ ಡೆಡಿಕೇಟ್ ಮಾಡುತ್ತೇನೆ. ಅವರ ಹತ್ತಿರ ಕಲಿತಿರುವುದನ್ನೇ ನಾನು ಈ ಚಿತ್ರದಲ್ಲಿ ಅಪ್ಲೈ ಮಾಡಲು ಸಾಧ್ಯವಾಯಿತು.
ವಿಂಕ್ ವಿಜಲ್ ಪ್ರೊಡಕ್ಷನ್ ಮೂಲಕ ಇದು ನಾನು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ. ನಾನು ಯಾವತ್ತೂ ನಿರ್ಮಾಪಕ ಆಗುತ್ತೇನೆ ಅಂತಾನು ಯೋಚಿಸಿರಲಿಲ್ಲ. ನಾನು ನಟನಾಗಿ ಎಷ್ಟರಮಟ್ಟಿಗೆ ಗೆಲ್ಲಬೇಕೋ, ಅಷ್ಟೇ ಪ್ರಮಾಣದಲ್ಲಿ ಕ್ವಾಲಿಟಿ ಸಿನಿಮಾಗಳನ್ನು ಕೊಡಬೇಕೆಂಬ ಆಸೆ, ಆಕಾಂಕ್ಷೆ ಸಾಕಷ್ಟಿದೆ. ಅಲ್ಲದೇ ನನ್ನ ನಿರ್ಮಾಣದ ಸಿನಿಮಾಗಳಲ್ಲಿ ನಾನೇ ನಟಿಸದೇ ಹೊಸ ಮುಖಗಳಿಗೆ ಅವಕಾಶ ಸೃಷ್ಟಿಸುವ ಯೋಜನೆಯನ್ನು ಹಾಕಿಕೊಂಡಿದ್ದೇನೆ.” ಎಂದು ಹೇಳಿದರು.
ಸಿನಿಮಾ ಆರಂಭದ ಸಮಯದಲ್ಲೇ ಒಂದು ಟೀಸರ್ ಬಿಟ್ಟಿದ್ದು, ಅದು ಕೂಡಾ ಅದ್ಭುತವಾದ ಪ್ರತಿಕ್ರಿಯೆ ಪಡೆದಿತ್ತು. ಈಗ ರಾಮಾರ್ಜುನ ಚಿತ್ರದ ಎರಡನೇ ಟೀಸರ್ ಕೂಡಾ ಹೊರಬಂದಿದ್ದು ಧೂಳೆಬ್ಬಿಸುವ ದಿಕ್ಕಿನಲ್ಲಿ ಸಾಗುತ್ತಿದೆ.