ಅನೀಶ್ ರಾಮಾರ್ಜುನ ಸಿನಿಮಾದೊಂದಿಗೆ ಕನ್ನಡದ ಮುಂಚೂಣಿ ಹೀರೋಗಳ ಸಾಲಿಗೆ ಬಂದು ನಿಂತಿದ್ದಾರೆ. ಇನ್ನು ಎಚ್ಚರದಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು, ಇವತ್ತಿನಂತೆಯೇ ಶ್ರಮ ವಹಿಸಿದರೆ ಬಹುಶಃ ಅನೀಶ್ ದೇಶವೇ ತಿರುಗಿನೋಡುವಂತಾ ಕಲಾವಿದನಾಗಿ ಮಾರ್ಪಡುತ್ತಾರೆ….
ಅಪ್ಪಟ ಕಲಾವಿದ ಅನೀಶ್ ಅಬ್ಬರಿಸುತ್ತಿದ್ದಾರೆ. ಸಿನಿಮಾವನ್ನು ಉಸಿರಾಗಿಸಿಕೊಂಡು, ಎಂಥದ್ದೇ ಅಡೆತಡೆ ಬಂದರೂ ಬಿಡದೆ ಪ್ರಯತ್ನಿಸುತ್ತಾ ಸಿನಿಮಾ ಬಿಟ್ಟು ಬೇರೇನೂ ಮಾಡಲಾರೆ ಅಂತಾ ಹೋರಾಟ ನಡೆಸಿದವರಲ್ಲಿ ಅನೀಶ್ ತೇಜೇಶ್ವರ್ ಒಬ್ಬರು. ಪಟ್ಟ ಪರಿಶ್ರಮ, ಅನುಭವಿಸಿದ ಯಾತನೆಗಳಿಗೆ ಇಂದು ಪ್ರತಿಫಲ ದೊರೆತಿದೆ. ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲೇ ಒಂದು ಹಂತದ ಗೆಲುವು ಕಂಡಿದ್ದ ಅನೀಶ್ ಈ ಬಾರಿ ಪರಿಪೂರ್ಣವಾದ ಯಶಸ್ಸನ್ನು ಸಾಧಿಸಿದ್ದಾರೆ.
ಮೊದಲ ಸಿನಿಮಾದಿಂದ ಹಿಡಿದು ಅನೀಶ್ ನಟಿಸಿದ ಎಲ್ಲ ಚಿತ್ರಗಳಲ್ಲೂ ಇವರ ನಟನೆ, ಡ್ಯಾನ್ಸು, ಫೈಟು ಎಲ್ಲವನ್ನೂ ಜನ ಇಷ್ಟ ಪಡುತ್ತಿದ್ದರು. ಅನೀಶ್ ಬಗ್ಗೆ ಒಳ್ಳೇ ಮಾತುಗಳು ಕೇಳಿಬಂದರೂ ಸಿನಿಮಾ ಹೆಳಿಕೊಳ್ಳುವಂತಾ ಗೆಲುವು ಸಾಧಿಸುತ್ತಿರಲಿಲ್ಲ. ಎಲ್ಲ ಸರಿ ಇದ್ದರೂ ಯಾಕೆ ಹೀಗಾಗುತ್ತಿದೆ ಅಂತಾ ಯೋಚಿಸಿದ ಅನೀಶ್ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾವನ್ನು ಸ್ವತಃ ತಾವೇ ನಿರ್ದೇಶಿಸಿದರು. ನೋಡಿದ ಎಲ್ಲರೂ ಇಷ್ಟಪಟ್ಟರು. ಈಗ ಅನೀಶ್ ಮತ್ತೊಮ್ಮೆ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿ ʻರಾಮಾರ್ಜುನʼನನ್ನು ಹೊರತಂದಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಅನೀಶ್ ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದಾರೆ. ಜೊತೆಗೆ ನಿರ್ದೇಶಿಸಿರುವ ಎರಡನೇ ಸಿನಿಮಾಗೇ ಬಹುಕಾಲ ಮಾಗಿದವರಂತೆ ಕೆಲಸ ಮಾಡಿದ್ದಾರೆ. ಇವೆಲ್ಲದರ ಕಾರಣ ರಾಮಾರ್ಜುನನನ್ನು ಜನ ಬಿಗಿದಪ್ಪಿಕೊಂಡಿದ್ದಾರೆ. ವಿಮರ್ಶಕರೂ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಇದು ನಿಜವಾದ ಕಾನ್ಫಿಡೆನ್ಸು! : ರಿಲೀಸಿಗೆ ರೆಡಿ ಇರುವ ದಿಗ್ಗಜರ ಸಿನಿಮಾಗಳನ್ನು ತೆರೆಗೆ ತರುವುದೋ ಬೇಡವೋ ಅಂತಾ ಮೀನಮೇಷ ಎಣಿಸುತ್ತಿರುವ ದಿನಗಳಿವು. ದೊಡ್ಡವರ ಸಿನಿಮಾ ಬಂದಮೇಲೆ ನಾವು ರಿಲೀಸ್ ಮಾಡೋಣ ಎಂದು ಸಾಕಷ್ಟು ಜನ ಕಾದು ಕುಂತಿದ್ದಾರೆ. ಘಟಾನುಘಟಿಗಳೇ ದಿಕ್ಕು ತೋಚದ ಪರಿಸ್ಥಿತಿಯಲ್ಲಿರುವಾಗ, ʻಆಗಿದ್ದಾಗಲಿ, ನಮ್ಮ ಸಿನಿಮಾ ರಿಲೀಸ್ ಮಾಡೋಣ. ಜನ ಸ್ವೀಕರಿಸದೇ ಬಿಡುವುದಿಲ್ಲʼ ಅಂತಾ ರಾಮಾರ್ಜುನ ತಂಡ ತೀರ್ಮಾನಿಸಿತ್ತಲ್ಲಾ? ಅವತ್ತೇ ಈ ಚಿತ್ರ ಗೆಲ್ಲುತ್ತದೆ ಎನ್ನುವುದು ಖಾತ್ರಿಯಾಗಿತ್ತು. ಸಿನಿಮಾ ಕಂಪ್ಲೀಟ್ ಆಗಿ, ವ್ಯಾಪಾರಾಕ್ಕಾಗಿ ಓಡಾಡುವ ದಿನಗಳಲ್ಲೇ ರಕ್ಷಿತ್ ಶೆಟ್ಟಿ ಕೂಡಾ ಸಿನಿಮಾದ ಭಾಗವಾಗಿದ್ದರಲ್ಲಾ? ಆಗಲೇ ರಾಮಾರ್ಜುನನ ತಾಕತ್ತು ಗೊತ್ತಾಗಿತ್ತು. ಈಗ ಎಲ್ಲರ ಅನಿಸಿಕೆಗಳೂ ನಿಜವಾಗಿದೆ. ರಾಮಾರ್ಜುನ ಈ ವರ್ಷದ ಮೊಟ್ಟ ಮೊದಲ ಕಮರ್ಷಿಯಲ್ ಹಿಟ್ ಸಿನಿಮಾ ಆಗಿ ದಾಖಲೆ ಬರೆದಿದ್ದಾನೆ.
ಅದೇನೋ ಗೊತ್ತಿಲ್ಲ, ಸಿನಿಮಾರಂಗ ತೀರಾ ಕಾಡಿಬೇಡಿಸಿ, ಸಾಕಪ್ಪಾ ಅನ್ನುವ ಮಟ್ಟದ ತನಕ ಯಾರು ಪ್ರಯತ್ನಿಸುತ್ತಾರೋ ಅವರಿಗೆ ಮಾತ್ರ ಬೊಗಸೆ ತುಂಬವಷ್ಟು ಗೆಲುವು ನೀಡುತ್ತದೆ. ಸುದೀಪ್, ದರ್ಶನ್, ದುನಿಯಾ ವಿಜಯ್, ಯಶ್ ಸೇರಿದಂತೆ ಸಾಕಷ್ಟು ಜನ ಹೀರೋಗಳು ಏಕಾಏಕಿ ಗೆದ್ದವರಲ್ಲ. ಇಂಡಸ್ಟ್ರಿಗೆ ಬಂದು, ಪಡಬಾರದ ಪಾಡು ಪಟ್ಟನಂತರಷ್ಟೇ ಸ್ಟಾರ್ ವರ್ಚಸ್ಸು ಪಡೆದವರು. ಈ ನಿಟ್ಟಿನಲ್ಲಿ ಶ್ರೀ ಮುರಳಿಗಿಂತಾ ಉದಾಹರಣೆ ಬೇಕಿಲ್ಲ.
ಮೊದಲ ಸಿನಿಮಾ ಚಂದ್ರಚಕೋರಿ ನಂತರ ಮುರಳಿ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದರು. ಅವಕಾಶಗಳು ಕೈಗೆಟುಕುತ್ತಿದ್ದವೇ ವಿನಃ ಗೆಲುವಿನ ಪಟ್ಟಿಯಲ್ಲಿ ದಾಖಲಾಗುತ್ತಿರಲಿಲ್ಲ. ಉಗ್ರಂ ಎನ್ನುವ ಒಂದೇ ಒಂದು ಖಡಕ್ ಸಿನಿಮಾ ಅವರ ನಸೀಬನ್ನೇ ಬದಲಿಸಿಬಿಟ್ಟಿತು. ಮದರಂಗಿ ಕೃಷ್ಣ, ಡಾಲಿ ಧನಂಜಯ ಕೂಡಾ ಸೋಲಿನ ಮೇಲೆ ಸೋಲು ಕಂಡವರು. ಒಂದೊಂದು ಸಿನಿಮಾದ ಗೆಲುವು ಅವರನ್ನು ಇಂದು ಬೇರೆಯದ್ದೇ ಜಾಗದಲ್ಲಿ ಕೂರಿಸಿದೆ.
ಈಗ ಅನೀಶ್ ಕೂಡಾ ರಾಮಾರ್ಜುನ ಸಿನಿಮಾದೊಂದಿಗೆ ಕನ್ನಡದ ಮುಂಚೂಣಿ ಹೀರೋಗಳ ಸಾಲಿಗೆ ಬಂದು ನಿಂತಿದ್ದಾರೆ. ಇನ್ನು ಎಚ್ಚರದಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು, ಇವತ್ತಿನಂತೆಯೇ ಶ್ರಮ ವಹಿಸಿದರೆ ಬಹುಶಃ ಅನೀಶ್ ದೇಶವೇ ತಿರುಗಿನೋಡುವಂತಾ ಕಲಾವಿದನಾಗಿ ಮಾರ್ಪಡುತ್ತಾರೆ…. ಅದು ಸಾಧ್ಯವಾಗಲಿ!
No Comment! Be the first one.