ಸಾಮಾನ್ಯವಾಗಿ ಫೈವ್ ಸ್ಟಾರ್ ಚಾಕೋಲೇಟ್ ಜಾಹೀರಾತಿನಲ್ಲಿ ರಮೇಶ್… ಸುರೇಶ್… ಎಂಬ ಕ್ಯಾರೆಕ್ಟರ್ ಗಳ ಪರಿಚಯ ಈಗಾಗಲೇ ನೋಡುಗರಿಗೆ ಆಗಿರುವಂತದ್ದು. ಅದೇ ಹೆಸರಿಟ್ಟಿಕೊಂಡು ಕತ್ತಲೆ ಗುಡ್ಡದ ಗೂಢಚಾರಿಗಳು ಎಂಬ ಉಪಶೀರ್ಷಿಕೆಯೊಂದಿಗೆ ರಮೇಶ್ ಸುರೇಶ್ ಎಂಬ ಹೊಸ ಸಿನಿಮಾವನ್ನು ನಾಗರಾಜ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶನ ಮಾಡುತ್ತಿದ್ಧಾರೆ.
ಚಿತ್ರದಲ್ಲಿ ಸುರೇಶ- ರಮೇಶ ಎಂಬ ಅರೆ ಎಡಬಿಡಂಗಿಗಳು ತಮ್ಮ ಮುಗ್ಧತೆಯಿಂದಲೇ ಒಂದು ನಿಗೂಢ ಪ್ರಕರಣವನ್ನು ಹೇಗೆ ಭೇದಿಸುತ್ತಾರೆ ಎಂಬ ವಿಚಾರವನ್ನು ಮನರಂಜನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ನಾಗರಾಜ ಮಲ್ಲಿಗೇನಹಳ್ಳಿ.
ಅರೆ ಎಡಬಿಡಂಗಿಗಳ ಪಾತ್ರದಲ್ಲಿ ಯಶ್ ರಾಜ್ ಮತ್ತು ಗುಬ್ಬಿ ವೀರಣ್ಣನವರ ಮೊಮ್ಮಗ ಬೆನಕ ಗುಬ್ಬಿ ವೀರಣ್ಣ ನಟಿಸಿದ್ದು, ಖತರ್ನಾಕ್ ಆಗಿ ನಾಯಕರಿಗೆ ಚಳ್ಳೆ ಹಣ್ಣು ತಿನ್ನಿಸುವ ನಾಯಕಿಯ ಪಾತ್ರದಲ್ಲಿ ಮುಳಬಾಗಿಲಿನ ಚಂದನಸೇಗು ನಟಿಸಿದ್ದಾರೆ. ಈಕೆಯ ಜೀವನದಲ್ಲಿ ಸುರೇಶ ಹಾಗೂ ರಮೇಶರ ಪ್ರವೇಶವಾದಾಗ ಆಕೆ ಹೇಗೆ ತನ್ನ ಜೀವನವನ್ನು ಬದಲಾಯಿಸಿಕೊಳ್ಳುತ್ತಾಳೆ ಎಂಬುದು ಚಿತ್ರದ ಮತ್ತೊಂದು ಎಳೆಯಾಗಿದೆ. ಆರ್. ಕೆ. ಟಾಕೀಸ್ ಮೂಲಕ ಪಿ. ಕೃಷ್ಣ ಮತ್ತು ಬಿ. ಶಂಕರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಉಳಿದಂತೆ ವಿಶ್ವಜಿತ್ ರಾವ್ ಛಾಯಾಗ್ರಹಣ, ಆಶಿಕ್ ಗೌಡ ಸಂಕಲನ, ವಿಕ್ರಮ್ ಸಾಹಸ, ಪ್ರಮೋದ್ ಮರವಂತೆ ಸಂಭಾಷಣೆ ಚಿತ್ರಕ್ಕಿದೆ. ಇನ್ನು ತಾರಾಗಣದಲ್ಲಿ ಕಿಶೋರ್, ರೋಬೋ ಗಣೇಶ್, ವನಿತಾ ಜೈನ್ ಮುಂತಾದವರು ನಟಿಸಿದ್ದಾರೆ.
No Comment! Be the first one.