ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಡಾಲಿ ಧನಂಜಯ್ ಚಿತ್ರವನ್ನೀಗ ನಿರ್ಮಾಣ ಮಾಡುತ್ತಿದ್ದಾರೆ. ಭೈರವ ಗೀತಾ ಚಿತ್ರ ಬಿಡುಗಡೆಯ ಸನ್ನಾಹದಲ್ಲಿರುವಾಗಲೇ ವರ್ಮಾ ಒಡೆತನದ ಚಿತ್ರ ನಿರ್ಮಾಣ ಸಂಸ್ಥೆ ‘ಕಂಪೆನಿ’ ವಿರುದ್ಧ ಕನ್ನಡದ ಹಂಚಿಕೆದಾರರೊಬ್ಬರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ವರ್ಮಾ ನೆರಳಲ್ಲಿಯೇ ನಡೆದ ಲಕ್ಷಾಂತರ ರೂಪಾಯಿ ದೋಖಾದ ಬಗ್ಗೆ ಅಂಕಿ ಅಂಶಗಳ ಸಮೇತ ದಾಖಲೆಗಳನ್ನೂ ನೀಡಿದ್ದಾರೆ!
ಇದೇ ಕಂಪೆನಿ ಸಂಸ್ಥೆ ನಿರ್ಮಾಣ ಮಾಡಿದ್ದ ಆಫಿಸರ್ ಎಂಬ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಈ ವರ್ಷವೇ ತೆರೆ ಕಂಡಿತ್ತು. ಇದನ್ನು ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಸೂರ್ಯ ಫಿಲಂಸ್ ಎಂಬ ಸಂಸ್ಥೆ ಪಡೆದುಕೊಂಡಿತ್ತು. ಆಫಿಸರ್ ಚಿತ್ರದ ವಿತರಣಾ ಹಕ್ಕುಗಳನ್ನು ಸೂರ್ಯ ಫಿಲಂಸ್ ಸಂಸ್ಥೆ ಅರವತ್ತಾರು ಲಕ್ಷ ಕೊಟ್ಟು ಖರೀದಿಸಿತ್ತು. ಇದರಲ್ಲಿ ಐವತ್ತಾರು ಲಕ್ಷ ರೂಪಾಯಿಗಳನ್ನು ಆರ್ಟಿಜಿಎಸ್ ಮೂಲಕ ಆಕ್ಸಿಸ್ ಬಾಂಕಿನ ಹೈದ್ರಾಬಾದ್ ಶ್ರೀನಗರ ಶಾಖೆಯ ಕಂಪೆನಿ ಸಂಸ್ಥೆಯ ಅಕೌಂಟಿಗೆ ಜಮೆ ಮಾಡಲಾಗಿತ್ತು. ಉಳಿದ ಹತ್ತು ಲಕ್ಷವನ್ನು ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕರಿಗೆ ಸಂದಾಯ ಮಾಡಲಾಗಿತ್ತು.
ಈ ಚಿತ್ರದ ವಿತರಣಾ ಹಕ್ಕಿಗಾಗಿ ಸಂದಾಯ ಮಾಡಿದ ಅರವತ್ತಾರು ಲಕ್ಷ, ಪ್ರಚಾರಕ್ಕೆ ಖರ್ಚು ಮಾಡಿದ ಹಣ ಮತ್ತು ಒಟ್ಟಾರೆ ಗಳಿಕೆಯ ಇಪ್ಪತ್ತು ಪರ್ಸೆಂಟಿನಷ್ಟು ಹಣವನ್ನು ಹಿಡಿದುಕೊಳ್ಳುವ ಬಗ್ಗೆ ಸೂರ್ಯ ಫಿಲಂಸ್ ಮುಖ್ಯಸ್ಥರು ಆಫಿಸರ್ ಚಿತ್ರ ನಿರ್ಮಾಪಕರ ಜೊತೆ ಮೌಕಿಕ ಒಪ್ಪಂದ ಮಾಡಿಕೊಂಡಿದ್ದರು. ಇದೆಲ್ಲವೂ ಸುಬ್ಬಾ ರೆಡ್ಡಿಯವರ ಸಮ್ಮುಖದಲ್ಲಿಯೇ ನಡೆದಿತ್ತು. ಇದರನ್ವಯ ೦೧.೦೬.೨೦೧೮ರಂದು ಆಫಿಸರ್ ಚಿತ್ರವನ್ನು ಸೂರ್ಯ ಫಿಲಂಸ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಬಿಡುಗಡೆಯಾಗಿ ದಿನದೊಪ್ಪತ್ತಿನಲ್ಲಿಯೇ ಹಂಚಿಕೆದಾರರಿಗೆ ಮಹಾ ಆಘಾತ ಕಾದಿತ್ತು. ಚಿತ್ರ ಮಂದಿರಗಳೆಲ್ಲ ಖಾಲಿ ಹೊಡೆದು ಥೇಟರುಗಳಿಂದ ಈ ಚಿತ್ರ ಎತ್ತಂಗಡಿಯಾಗೋ ಹಂತ ತಲುಪಿತ್ತು. ಒಟ್ಟಾರೆಯಾಗಿ ಈ ಚಿತ್ರದಿಂದ ಗಳಿಕೆಯಾದದ್ದು ಹನ್ನೆರಡು ಲಕ್ಷ ಮಾತ್ರ. ಆದರೆ ಈ ಚಿತ್ರದ ಪ್ರಚಾರಕ್ಕೆಂದೇ ಸೂರ್ಯ ಫಿಲಂಸ್ ಸಂಸ್ಥೆ ಒಂಭತ್ತು ಲಕ್ಷದ ತೊಂಬತ್ಮೂರು ಸಾವಿರ ಚಿಲ್ಲರೆ ರೂಪಾಯಿಗಳನ್ನು ವ್ಯಯ ಮಾಡಿತ್ತು!
ಈ ಆಘಾತದಿಂದ ಕಂಗಾಲಾದ ಸೂರ್ಯ ಸಂಸ್ಥೆಯ ಮುಖ್ಯಸ್ಥರು ಕಂಪೆನಿ ಸಂಸ್ಥೆಯ ಹೈದ್ರಾಬಾದ್ ಕಚೇರಿಗೆ ತೆರಳಿದ್ದರು. ಅಲ್ಲಿ ಸಿಕ್ಕ ಸಜ್ಜು ಮತ್ತು ವೇಣು ಮುಂದೆ ಇರೋ ವಿಚಾರ ಹೇಳಿ ತಾವು ಹಾಕಿದ ಹಣವನ್ನು ವಾಪಾಸು ಮಾಡುವಂತೆ ಅಂಗಲಾಚಿದ್ದರು. ಒಂದು ವೇಳೆ ಹಣ ಹಿಂತಿರುಗಿಸದಿದ್ದರೆ ಚಿತ್ರದ ನಾಯಕ ನಾಗಾರ್ಜುನ್ ಮುಂದೆ ಎಲ್ಲವನ್ನೂ ಹೇಳೋದಾಗಿ ಹೇಳಿದಾಗ ಸುಧೀರ್ ಚಂದರ್ ಮತ್ತು ವರ್ಮಾ ಜೆಡಿ ಚಕ್ರವರ್ತಿ ಮನೆಯಲ್ಲಿರುತ್ತಾರೆಂದ ಕಂಪೆನಿ ಸಂಸ್ಥೆಯ ಮಂದಿ ಅಲ್ಲಿಗೆ ಸಾಗಹಾಕಿದ್ದರು. ಆದರೆ ಅಲ್ಲಿ ಯಾರೂ ಇರಲಿಲ್ಲ!
ಬೇರೆ ನಿರ್ವಾಹವಿಲ್ಲದೆ ಸೂರ್ಯ ಸಂಸ್ಥೆಯ ಮುಖ್ಯಸ್ಥರು ಹೈದ್ರಾಬಾದಿನ ಫಿಲಂ ಚೇಂಬರ್ ಕಚೇರಿಯಲ್ಲಿ ಆರು ದಿನಗಳ ಕಾಲ ಕಾದಿದ್ದರು. ಕಡೆಗೂ ನಿರ್ಮಾಪಕ ಸುಧೀರ್ ಚಂದರ್ ಅಲ್ಲಿಗೆ ಬಂದು ಖರ್ಚು ವೆಚ್ಚದ ವಿವರ ಪಡೆದುಕೊಂಡಿದ್ದರು. ಅಸಲೀ ನಷ್ಟದ ವಿಚಾರ ಅರಿವಾಗಿದೆ ಎಂದೂ ಹೇಳಿದ್ದರು. ೧೫.೦೬.೨೦೧೮ರಂದು ಬಂದು ತನ್ನನ್ನು ಭೇಟಿಯಾಗುವಂತೆ ತಿಳಿಸಿದ ಸುಧೀರ್ ಚಂದರ್ ಇಪ್ಪತ್ತು ಲಕ್ಷ ರೂಗಳನ್ನು ಕೊಡೋದಲ್ಲದೇ ಅದೇ ತಿಂಗಳ ಮೂವತ್ತನೇ ತಾರೀಕಿನಂದು ಉಳಿದ ಹಣವನ್ನೂ ವಾಪಾಸು ಕೊಡೋದಾಗಿ ಭರವಸೆ ನೀಡಿದ್ದರು. ಕಲ್ಯಾಣ್ ರಾಮ್ ಮತ್ತು ನಾನಿ ಅಭಿನಯದ ಹೊಸಾ ಚಿತ್ರದ ನೆಗೆಟೀವ್ ಹಣದಲ್ಲಿ ಎಲ್ಲ ಬಾಬತ್ತನ್ನು ವಾಪಾಸು ಮಾಡೋದಾಗಿಯೂ ಹೇಳಿದ್ದರು.
ಆದರೆ ಅದೇ ದಿನಾಂಕದಂದು ಕಂಪೆನಿ ಕಚೇಢರಿಗೆ ಹೋದ ಸೂರ್ಯ ಫಿಲಂಸ್ ಮುಖ್ಯಸ್ಥರಿಗೆ ಸಿಕ್ಕಿದ್ದು ಸಜ್ಜು ಎಂಬಾತ. ಸುಧೀರ್ ಚಂದರ್ ಕಲ್ಯಾಣ್ ರಾಮ್ರನ್ನು ಭೇಟಿಯಾಗಲು ಹೋಗಿದ್ದಾರೆಂಬ ಉತ್ತರ ಕೊಟ್ಟಿದ್ದ. ಎರಡ್ಮೂರು ದಿನ ಬಿಟ್ಟು ಬರುವಂತೆ ಹೇಳಿದ್ದ. ಆದರೆ ನಂತರ ಹೋದಾಗ ಆತನೇ ಸುಧೀರ್ ಚಂದರ್ ಲಂಡನ್ನಿಗೆ ಹೋಗಿರೋದಾಗಿ ಕಥೆ ಹೇಳಿದ್ದ. ಈ ಚಿತ್ರದ ಟಿವಿ ರೈಟ್ಸ್ ಹಣ ಬರಬೇಕಾದ್ದರಿಂದ ಜುಲೈ ಎರಡರಂದು ಬರಲು ಹೇಳಿ ಕಳಿಸಿದ್ದ.
ಆ ಬಳಿಕವೂ ಒಂದೆರಡು ಸಲಕ ಹೈದ್ರಾಬಾದಿಗೆ ಅಲೆದ ಸೂರ್ಯ ಫಿಲಂಸ್ ಮುಖ್ಯಸ್ಥರಿಗೆ ಜುಲೈ ಮೂವತ್ತರಂದು ಅಂತಿಮ ಆಘಾತ ಕಾದಿತ್ತು. ಯಾಕೆಂದರೆ ಹೈದ್ರಾಬಾದಿನ ಕಂಪೆನಿ ಸಂಸ್ಥೆಯ ಕಚೇರಿಗೆ ಬೀಗ ಜಡಿದುಕೊಂಡಿತ್ತು. ಸುಧೀರ್ ಚಂದರ್ ಮೊಬೈಲು ಕೂಡಾ ಸ್ವಿಚಾಫ್ ಆಗಿತ್ತು. ಕಡೆಗೆ ಹೇಗೋ ಮಾಹಿತಿ ಕಲೆ ಹಾಕಿ ರಾಮ್ಗೋಪಾಲ್ ವರ್ಮಾ ಮತ್ತು ಸುಧೀರ್ ಮುಂಬೈ ಕಚೇರಿಯಲ್ಲಿದ್ದಾರೆಂಬ ಸುಳಿವು ತಿಳಿದು ಅಲ್ಲಿಗೆ ಹೋದರೂ ಪ್ರಯೋಜನವಾಗಲಿಲ್ಲ. ಸಜ್ಜು ಮುಂಬೈನ ಹೋಟೆಲಿನಲ್ಲಿ ಸಿಕ್ಕನಾದರೂ ಆತನೂ ಸುಧೀರ್ ಚಂಣದರ್ನನ್ನು ಭೇಟಿಯಾಗಲು ಬಂದಿರೋದಾಗಿ ಹೇಳಿದ್ದ. ಅಲ್ಲಿಗೆ ಸಾಲ ಸೋಲ ಮಾಡಿ ಆಫಿಸರ್ ಚಿತ್ರದ ವಿತರಣ ಹಕ್ಕು ಖರೀದಿ ಮಾಡಿದ್ದ ಕಾಸು ಗೋತಾ ಹೊಡೆದಿದೆ ಎಂಬ ವಿಚಾರ ಸ್ಪಷ್ಟವಾಗಿತ್ತು.
ಸೂರ್ಯ ಫಿಲಂಸ್ ಸಣ್ಣ ವಿತರಣಾ ಸಂಸ್ಥೆ. ಅವರಿವರ ಬಳಿ ಸಾಲ ಮಾಡಿಯೇ ಇದರ ಮಾಲೀಕರು ಆಫಿಸರ್ ಚಿತ್ರದ ವಿತರಣಾ ಹಕ್ಕನ್ನು ಖರೀದಿಸಿದ್ದರು. ಇದೀಗ ಬೇರೆ ದಾರಿ ಕಾಣದೆ ಈ ಚಿತ್ರದ ವಿತರಣೆಗಾದ ಒಟ್ಟು ೭೮,೯೩,೯೯೮ ರೂಗಳನ್ನು ವಾಪಾಸು ಕೊಡಿಸುವಂತೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಆಗಾಗ ಬೇಡದ ವಿಚಾರಕ್ಕೆ ಮೂಗು ತೂರಿಸಿ ವಿವಾದವೆಬ್ಬಿಸೋ ವರ್ಮಾಗೆ ಬಡಪಾಯಿ ಹಂಚಿಕೆದಾರರ ಸಂಕಷ್ಟ ತಾಕುತ್ತಿಲ್ಲವೇ? ಅಥವಾ ವಂಚನೆ ಅವರಿಗೆ ಕರಗತವಾಗಿದೆಯೋ ಎಂಬುದನ್ನು ಫಿಲಂಚೇಂಬರಿನ ಮುಂದಿನ ಕ್ರಮಗಳೇ ನಿರ್ಧರಿಸಲಿವೆ!
#
No Comment! Be the first one.