ಸ್ನೇಹಿತರು, ಪೈಪೋಟಿ, ಟೈಸನ್, ಕ್ರ್ಯಾಕ್ ಮತ್ತು ಈಗ ರಾಜಮಾರ್ತಾಂಡ ಸಿನಿಮಾಗಳನ್ನು ನಿರ್ದೇಶಿಸಿರುವವರು ಕೆ. ರಾಮ್ ನಾರಾಯಣ್. ಕನ್ನಡದಲ್ಲಿ ಅನೇಕ ಹಾಡುಗಳನ್ನು ರಚಿಸುತ್ತಾ, ಜೊತೆಜೊತೆಗೇ ಸಂಭಾಷಣೆ, ನಿರ್ದೇಶನ ವಿಭಾಗಗಳಲ್ಲೂ ಕೆಲಸ ಮಾಡುತ್ತಾ ನಂತರ ಪೂರ್ಣಪ್ರಮಾಣದ ಡೈರೆಕ್ಟರ್ ಆದವರು ರಾಮ್ ನಾರಾಯಣ್. ಇವರ ಕೈಗೆ ಸಿನಿಮಾ ಒಪ್ಪಿಸಿದರೆ ಯಾವುದೇ ಸಮಸ್ಯೆ ಕೊಡದೆ ಸೈಲೆಂಟಾಗಿ ಕೆಲಸ ಮುಗಿಸಿಕೊಡುತ್ತಾರೆ ಅನ್ನೋದು ಸಾಕಷ್ಟು ಜನ ನಿರ್ಮಾಪಕರ ನಂಬಿಕೆ. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಯಾವತ್ತೂ ಪ್ರಚಾರ ಬಯಸದ, ಸದ್ದಿಲ್ಲದೇ ಕೆಲಸ ಮಾಡುವ ರಾಮ್ ನಾರಾಯಣ್ ಭಾವುಕ ವ್ಯಕ್ತಿ. ಅವರ ಹಾಡುಗಳು ಮತ್ತು ನಿರ್ದೇಶಿಸಿರುವ ಸಿನಿಮಾಗಳಲ್ಲೂ ಅದು ಅಭಿವ್ಯಕ್ತಗೊಂಡಿದೆ. ಇಂಥ ರಾಮ್ ನಾರಾಯಣ್ ಈಗ ತೀರಾ ಬೇಸರದಲ್ಲಿದ್ದಾರೆ.
ಕಳೆದ ವರ್ಷವಷ್ಟೇ ಇವರ ತಂದೆ ತೀರಿಕೊಂಡಿದ್ದರು. ಇದಾಗುತ್ತಿದ್ದಂತೇ ಅಮ್ಮನಿಗೂ ಅನಾರೋಗ್ಯ ಬಾಧಿಸಿತ್ತು. ಈಗಷ್ಟೇ ಒಂಚೂರು ಆರೋಗ್ಯ ಸುಧಾರಿಸುತ್ತಿದೆ. ಅಮ್ಮ ಮತ್ತೆ ಮೊದಲಿನಂತಾಗುತ್ತಾರೆ ಎನ್ನುವ ನಂಬಿಕೆ ಹುಟ್ಟಿತ್ತು. ಮೊನ್ನೆ ದಿನ ಡಯಾಲಿಸಿಸ್ ಮುಗಿಸಿ ಹಾಸಿಗೆಯಿಂದ ಏಳುವ ಸಂದರ್ಭದಲ್ಲಿ ಹೃದಯಾಘಾತವಾಗಿ ಅಲ್ಲೇ ಕುಸಿದಿದ್ದಾರೆ. ಅಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಮತ್ತೊಂದು ಕಡೆ ಇವರ ನಿರ್ದೇಶನದ ರಾಜಮಾರ್ತಾಂಡದ ಹೀರೋ ಚಿರಂಜೀವಿ ಸರ್ಜಾ ಯಾವ ಸೂಚನೆಯನ್ನೂ ನೀಡದೆ ಎದ್ದು ನಡೆದುಬಿಟ್ಟರು. ಚಿತ್ರೀಕರಣ ಪೂರ್ಣಗೊಂಡಿದ್ದರಿಂದ, ಧೃವಾ ಕೂಡಾ ಅಣ್ಣನ ಕೊನೇ ಸಿನಿಮಾಗೆ ಡಬ್ಬಿಂಗ್ ನೀಡುವ ಭರವಸೆ ನೀಡಿದ್ದರಿಂದ ರಾಮ್ ನಾರಾಯಣ್ ರಾಜಮಾರ್ತಾಂಡ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಯಾರಿಗೇ ಆಗಲಿ ಹೆತ್ತವರನ್ನು ಕಳೆದುಕೊಂಡ ಸಂಕಟ ಅಷ್ಟು ಸುಲಭಕ್ಕೆ ಶಮನವಾಗುವುದಿಲ್ಲ. ಸಜ್ಜನ ಮತ್ತು ಕ್ರಿಯಾಶೀಲ ರಾಮ್ ನಾರಾಯಣ್ ಪಾಲಿಗೆ ಎಲ್ಲ ವ್ಯಾಕುಲಗಳೂ ಆದಷ್ಟು ಬೇಗ ದೂರಾಗಲಿ ಅಂತಷ್ಟೇ ಸದ್ಯಕ್ಕೆ ಆಶಿಸಬಹುದು…
No Comment! Be the first one.