ಎಂಭತ್ತರ ದಶಕದಲ್ಲಿ `ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು…’ ಎಂಬ ಹಾಡಿನಿಂದ ಮನೆ ಮಾತಾದ ಮಾಲಾಶ್ರೀ ಮುಟ್ಟಿದ್ದೆಲ್ಲ ಚಿನ್ನ ಆಯ್ತು ಎಂಬ ಮಾತಿನಂತೆ ನಟಿಸಿದ ಚಿತ್ರಗಳಲ್ಲೆಲ್ಲ ಯಶಸ್ಸು ಕಾಣುತ್ತಾ ಬಂವರು. ಆ ಜûಮಾನಾದಲ್ಲಿ ಹೀರೋಗಳನ್ನು ಬಿಟ್ಟು ಮಾಲಾಶ್ರೀ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ಮುಗಿಬೀಳುತ್ತಿದ್ದರು. ಇಂಥಾ ಮಾಲಾಶ್ರೀ ಈಗ ಒಬ್ಬಂಟಿಯಾಗಿ ಹೋರಾಟಕ್ಕಿಳಿದಿದ್ದಾರೆ.

ರಾಮು ನಿರ್ಮಾಣದ “ಮುತ್ತಿನಂಥ ಹೆಂಡತಿ” ಚಿತ್ರದ ಮೂಲಕ ಒಡನಾಟ ಆರಂಭಿಸಿ ನಂತರ ಅದೇ ರಾಮು ಅವರೊಂದಿಗೆ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದರು. ರಾಮು ಮಾಲಾಶ್ರೀ ಮೇಲೆ ತೊಡಗಿಸಿದ ಬಂಡವಾಳಕ್ಕೆ ಯಾವತ್ತು ಮೋಸವಾಗಿಲ್ಲ. ಅದರಲ್ಲೂ “ಸರ್ಕಲ್ ಇನ್ಸ್ಪೆಕ್ಟರ್”, “ಚಾಮುಂಡಿ”, “ದುರ್ಗಿ” ದೊಡ್ಡ ಹೆಸರು ಮಾಡಿದವು. ತುಂಬಾ ವರ್ಷದ ಬಿಡುವಿನ ನಂತರ ಕಿರಣ್ ಬೇಡಿಯಾಗಿ ಕಾಣಿಸಿಕೊಂಡ ಮಾಲಾಶ್ರೀಯನ್ನು ಕೂಡಾ ಜನ  ಕೆಟ್ಟರೀತಿಯಲ್ಲೇನೂ ತಿರಸ್ಕರಿಸಲಿಲ್ಲ. ನಾಯಕ ನಟನಿಗೂ ಮೀರಿದ ಪಾತ್ರಗಳಲ್ಲಿ ಒಬ್ಬ ನಟಿ ಕಾಣಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗೊಮ್ಮೆ ಕಾಣಿಸಿಕೊಂಡರೂ ಯಶಸ್ಸು ಕಾಣುವುದು ಕಷ್ಟಸಾಧ್ಯ. ೮೦ ರ ದಶಕದಲ್ಲಿ “ನಂಜುಂಡಿ ಕಲ್ಯಾಣ” ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಮಾಲಾಶ್ರೀ ನಿಜಕ್ಕೂ ಪ್ರತಿಭಾವಂತೆ.

ಈಕೆ ಗಳಿಸಿದ ಇಮೇಜು, ಬೇಡಿಕೆ, ಪಾತ್ರಗಳ ಆಯ್ಕೆಯಲ್ಲಿನ ಜಾಣ್ಮೆ ಮತ್ಯಾವ ನಟಿಗೂ ಸಾಧ್ಯವಾಗಲೇ ಇಲ್ಲ. ಎರಡು ಮಕ್ಕಳ ತಾಯಿಯಾಗಿ, ಪಾತ್ರಕ್ಕೆ ಜೀವ ತುಂಬಲು ತನ್ನ ದೇಹ ಕರಗಿಸಿದವರು ಮಾಲಾಶ್ರೀ. ಈಗ ಮಾಲಾಶ್ರೀ ಏಕಾಂಗಿ. ರಾಮು ನಿರ್ಗಮನಕ್ಕೆ ಮುನ್ನ ನಿರ್ಮಿಸಿ ಹೋಗಿದ್ದ ಅರ್ಜುನ್‌ ಗೌಡ ಸಿನಿಮಾ ಈಗ ತೆರೆಗೆ ಬರುತ್ತಿದೆ. ಮುಕ್ತಾಯವಾಗಿರುವ ಒಂದೆರಡು ಸಿನಿಮಾಗಳನ್ನು ಬಿಟ್ಟರೆ ಮಾಲಾಶ್ರೀಗೆ ಅಂತಾ ರಾಮು ಏನೆಂದರೆ ಏನೂ ಬಿಟ್ಟು ಹೋಗಿಲ್ಲ. ಬಾಡಿಗೆ ಬರುತ್ತಿದ್ದ ಚೆನ್ನೈನಲ್ಲಿದ್ದ ಆಸ್ತಿಯನ್ನು ಕೂಡಾ ಮಾಲಾಶ್ರೀ ಕಳೆದುಕೊಂಡಿದ್ದಾರೆ.

ಸಿನಿಮಾ ಸೋಲಲಿ, ಗೆಲ್ಲಲಿ – ಚಿತ್ರರಂಗದಲ್ಲಿ ಸದಾ ಕ್ರಿಯಾಶೀಲರಾಗಿಯೇ ಬಂದಿದ್ದವರು ರಾಮು. ಕನ್ನಡದ ಮಟ್ಟಿಗೆ ನಟ, ನಿರ್ದೇಶಕ ರವಿಚಂದ್ರನ್ ಕಲರ್‌ಫುಲ್ ಚಿತ್ರ ಮಾಡುವುದನ್ನು ತೋರಿಸಿಕೊಟ್ಟರೆ ರಾಮು ಕೋಟಿ ಕೋಟಿ ಖರ್ಚು ಮಾಡಿ ಆ ಕಾಲದಲ್ಲೇ ಅದ್ಧೂರಿ ಚಿತ್ರ ನಿರ್ಮಿಸುವುದನ್ನು ತೋರಿಸಿಕೊಟ್ಟರು. ಎಲ್ಲ ಲಕ್ಷದ ಲೆಕ್ಕಾಚಾರದಲ್ಲಿರುವಾಗಲೇ ಕನ್ನಡ ಚಿತ್ರರಂಗದಲ್ಲೂ ಕೂಡ ಅದ್ಧೂರಿತನಕ್ಕೆ ಕೊರತೆ ಇಲ್ಲ ಎಂಬುದನ್ನು ತೋರಿಸಿಕೊಟ್ಟವರು ಇದೇ ರಾಮು. ಸಿನಿಮಾ ಹಂಚಿಕೆ ವ್ಯವಹಾರದೊಂದಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಮು “ಲಾಕಪ್ ಡೆತ್” ಚಿತ್ರದ ಮೂಲಕ ಮನೆ ಮಾತಾದರು. ನಂತರ ಮೂವತ್ತೈದು ಸಿನಿಮಾಗಳನ್ನು ನಿರ್ಮಿಸಿದ ರಾಮು ಗಳಿಸಿದ್ದಕ್ಕಿಂತಾ ಕಳಕೊಂಡಿದ್ದೇ ಹೆಚ್ಚು. ಮಾಡಿಟ್ಟಿದ್ದ ಆಸ್ತಿ ಕೂಡಾ ಕರಗಿಹೋಯ್ತು. ಈ ನಡುವೆ ಬಂದ ಕೋವಿಡ್‌ ರಾಮು ಅವರ ಜೀವವನ್ನೇ ಕಿತ್ತುಕೊಂಡಿತು.

ಪತಿ ರಾಮು ಎಷ್ಟೇ ಲುಕ್ಸಾನು ಮಾಡಿದರೂ, ಯಾವತ್ತೂ ಅವರ ಕೈ ಬಿಡದೆ ಬದುಕು ಸಾಗಿಸಿದವರು ಮಾಲಶ್ರೀ. ಈಗ ಸಡನ್ನಾಗಿ ಅವರಿಲ್ಲ ಅನ್ನೋದನ್ನು ಅರಗಿಸಿಕೊಳ್ಳಲೂ ಆಗದೆ ತೊಳಲಾಡುತ್ತಿದ್ದಾರೆ. ಲಕ್ಕಿ ಶಂಕರ್‌ ನಿರ್ದೇಶನದಲ್ಲಿ, ಪ್ರಜ್ವಲ್‌ ದೇವರಾಜ್‌ ನಟಿಸಿರುವ ಅರ್ಜುನ್‌ ಗೌಡ ಈಗ ತೆರೆಗೆ ಬರುತ್ತಿದೆ. ಈ ಸಿನಿಮಾದ ಪ್ರೆಸ್‌ ಮೀಟ್‌ ಇತ್ಯಾದಿ ಪಬ್ಲಿಸಿಟಿ ಕಾರ್ಯಕ್ರಮಗಳಲ್ಲಿ ಕೂಡಾ ಮಾಲಾಶ್ರೀ ಕಾಣಿಸಿಕೊಳ್ಳುತ್ತಿಲ್ಲ. ಹೊರಬಂದರೆ, ಎಲ್ಲಿ ರಾಮು ಬಗ್ಗೆ, ತಮ್ಮ ಇವತ್ತಿನ ಸ್ಥಿತಿಯ ಕುರಿತು ಪ್ರಶ್ನೆ ಕೇಳುತ್ತಾರೋ ಎನ್ನುವ ಅಂಜಿಕೆಯಿಂದಲೋ ಏನೋ ಮಾಲಾಶ್ರೀ ಹೀಗೆ ಮಾಡುತ್ತಿರಬಹುದು. ಅದೆಲ್ಲಾ ಏನೇ ಆಗಲಿ, ಮಾಲಾಶ್ರೀ ಇನ್ನಾದರೂ ಗೆಲುವು ಕಾಣಲಿ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಫೆ.4ಕ್ಕೆ ಲಗ್ಗೆ ಇಡಲಿದೆ ‘ಗಜಾನನ ಅಂಡ್ ಗ್ಯಾಂಗ್’

Previous article

ಇದೇನು ರಚ್ಚು ಹೀಗೆ ಮಾಡಿಬಿಟ್ಯಲ್ಲಾ…!?

Next article

You may also like

Comments

Leave a reply

Your email address will not be published.