ಒಂದಾನೊಂದು ಕಾಲದಲ್ಲಿ `ಕೋಟಿ ರಾಮು’ ಎನಿಸಿಕೊಂಡಿದ್ದವರು ನಿರ್ಮಾಪಕ ರಾಮು. ರಾಮು ಬ್ಯಾನರ್ ಎಂದರೆ ಅಲ್ಲಿ ಭಯಾನಕ ಶ್ರೀಮಂತಿಕೆ ಇರುತ್ತದೆ. ಬೇಕುಬೇಕಾದಷ್ಟು ದುಡ್ಡು ಸುರೀತಾರೆ. ಕೆಲಸ ಮಾಡಿದವರಿಗೂ ಪಕ್ಕಾ ಪೇಮೆಂಟು…. ಹೀಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿದ್ದವು. ಆದರೆ, ಮೇಲಿಂದ ಮೇಲೆ ಮಾಲಾಶ್ರೀ ಅವರ ಸಿನಿಮಾಗಳನ್ನು ನಿರ್ಮಿಸಿದ್ದೋ, ಅವು ದೊಪ್ಪದೊಪ್ಪನೆ ನೆಲಕ್ಕುರುಳಿದ್ದರ ಮಹಿಮೆಯೋ ಗೊತ್ತಿಲ್ಲ. ರಾಮು ಮತ್ತು ಅವರ ಬ್ಯಾನರಿಗೆ ಹಿಂದಿದ್ದ ಹೆಸರು ಈಗಿಲ್ಲ. `ಅಯ್ಯೋ ಆವಯ್ಯ ಕಾಸು ಕೊಡಲ್ರೀ… ಒಪ್ಪಿಕೊಂಡ ಪೇಮೆಂಟು ಕೊಡಕ್ಕೆ ಪರದಾಡಿಸ್ತಾನೆ’ ಅನ್ನೋ ಮಾತು ತೀರಾ ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿಬಿಟ್ಟಿದೆ. `ಕೋಟಿ ರಾಮು’ ಅಂತಾ ಹೊಗಳುತ್ತಿದ್ದವರೆಲ್ಲಾ `ಟೋಪಿ ರಾಮ’ ಅಂತಾ ಆಡಿಕೊಳ್ಳುತ್ತಿದ್ದಾರೆ. ಆದರೆ ರಾಮು ಮಾತ್ರ ಕಲಸ ಮಾಡಿದ ಕಾರ್ಮಿಕರಿಗೆ ಉಂಡೆ ನಾಮ ತಿಕ್ಕುವ ಕಾರ್ಯವನ್ನು ಇಂದಿಗೂ ಅನೂಚಾನವಾಗಿ ಮುಂದುವರೆಸಿಕೊಂಡೇ ಬರುತ್ತಿದ್ದಾರೆ.
ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ 99 ಅನ್ನುವ ಸಿನಿಮಾವೊಂದು ತೆರೆಗೆ ಬಂದಿದೆ. ಬಹುಶಃ ಗಣೇಶ್ ವೃತ್ತಿಬದುಕಿನಲ್ಲೇ ತೀರಾ ಪ್ರಚಾರವೇ ಇಲ್ಲದೇ ಬಿಡುಗಡೆಗೊಂಡಿರುವ ಸಿನಿಮಾ ಇದಾಗಿದೆ. ಕಡೇಪಕ್ಷ ಪತ್ರಿಕಾ ಪ್ರದರ್ಶನವನ್ನೂ ಏರ್ಪಡಿಸಲಾರದಷ್ಟು ರಾಮು ಬರ್ಬಾದ್ ಆಗಿದ್ದಾರೆ. ಸಿನಿಮಾದ ಗೆಲುವು, ಸೋಲು ಇತ್ಯಾದಿಗಳೇನೇ ಇರಲಿ, ಕೆಲಸ ಮಾಡಿದ ಕಾರ್ಮಿಕರಿಗೆ ರಾಮು ದುಡ್ಡು ಕೊಡದೇ ಯಾಮಾರಿಸೋದಂತೂ ಖಂಡನೀಯ. ಈ ಹಿಂದಿನ ಸಿನಿಮಾಗಳಲ್ಲೂ ರಾಮು ತಂತ್ರಜ್ಞರಿಗೆ ಯಾಮಾರಿಸಿರುವ ಸಾಕಷ್ಟು ಉದಾಹರಣೆಗಳಿವೆ. ಆದರೂ ಜನ ಮತ್ತೆ ಮತ್ತೆ ರಾಮು ತೋಡಿದ ಖೆಡ್ಡಾದಲ್ಲಿ ಬಿದ್ದು ವಿಲವಿಲ ಎನ್ನುವಂತಾಗಿದೆ.
ಆರಂಭದಲ್ಲಿ ಸಿನಿಮಾ ಕಾರ್ಮಿಕರು ಮತ್ತು ತಂತ್ರಜ್ಞರನ್ನು ಕರೆಸಿಕೊಂಡು ಇಂತಿಷ್ಟು ಸಂಭಾವನೆ ಮಾತಾಡಿ ಅಡ್ವಾನ್ಸ್ ಕೊಡೋದು. ಹೇಗೂ ಅಡ್ವಾನ್ಸ್ ಬಂದಿದೆಯಲ್ಲಾ ಎಂದು ಕೆಲಸ ಶುರು ಮಾಡಿದವರು ಮತ್ತೊಂದು ಕಂತಿನ ಪೇಮೆಂಟು ಕೇಳಿದಾಗ ಕೊಡಬೇಕಾದ್ದರಲ್ಲಿ ಅರ್ಧ ಕೊಡುತ್ತಾರೆ. ಇನ್ನು ಕೆಲಸ ಮುಗಿಯೋಹೊತ್ತಿಗೆ ಒಪ್ಪಿಕೊಂಡಿದ್ದರಲ್ಲಿ ಅರ್ಧ ಭಾಗವಷ್ಟೇ ಸಂದಾಯವಾಗಿರುತ್ತದೆ. ಮಿಕ್ಕ ಹಣವನ್ನು ರಿಲೀಸಾದಮೇಲೆ ಕೊಡ್ತೀನಿ ಅಂತಾ ಪ್ರಾಮಿಸ್ ಮಾಡಿ, ಆನಂತರ ಸಿನಿಮಾ ಲಾಸ್ ಆಗಿಬಿಡ್ತು. ಮುಂದಿನ ಸಿನಿಮಾಗೆ ಕೆಲಸ ಮಾಡಿ ಆಗ ಕೊಡ್ತೀನಿ ಅನ್ನೋ ಡೈಲಾಗು ರಾಮು ಬಾಯಲ್ಲಿ ಉದುರುತ್ತದೆ. ಹೀಗೆ ರಾಮುವಿನಿಂದ ಸಿನಿಮಾ ಜನ ಮತ್ತೆ ಮತ್ತೆ ಯಾಮಾರುತ್ತಲೇ ಬಂದಿದ್ದಾರೆ. ಇದು ಯಾವತ್ತಿಗೆ ಕೊನೆಯಾಗುತ್ತದೋ ಗೊತ್ತಿಲ್ಲ!
No Comment! Be the first one.