ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಲೂ ಏನೇನೂ ಮಾಡಬಾರದೋ ಅದೆಲ್ಲವನ್ನು ಚಾಚು ತಪ್ಪದೇ ಪಾಲಿಸುವ ದಿವ್ಯಸ್ಪಂದನ ಅಲಿಯಾಸ್ ರಮ್ಯ ಈಗ ಮತ್ತೆ ಸ್ಟ್ರಾಂಗಾಗಿ ಕಾಲೆಳೆಸಿಕೊಂಡಿದ್ದಾರೆ.
ನಟಿ ಹಾಗೂ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ ರಮ್ಯಾಅಲಿಯಾಸ್ ದಿವ್ಯಾ ಸ್ಪಂದನ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ನವೀನ್ ಸಾಗರ್ ಎಂಬುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ರಮ್ಯಾ ಪರವಾಗಿ ವಕೀಲರಾದ ಎಚ್ ವಿ ಭವ್ಯಾ ಅವರು ಮಾಹಿತಿ ತಂತ್ರಜ್ಞಾನ ಕಾಯಿದೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಆರೋಪದಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ನವೀನ್ ಸಾಗರ್ ಎಂಬುವವರು ತನ್ನ ಫೇಸ್ಬುಕ್ ಖಾತೆಯಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ನಟಿಸಿರುವ ಚಲನಚಿತ್ರದ ಫೋಟೋ ಬಳಸಿ ವಿಕೃತವಾಗಿ ಬಿಂಬಿಸಿ ಅಶ್ಲೀಲ ಪದಗಳಿಂದ ಮಹಿಳೆಯ ಚಾರಿತ್ರ್ಯಹರಣ ಮಾಡಿದ ಬರಹ ಪೋಸ್ಟ್ ಮಾಡಿದ್ದಾಗಿ ದೂರಿನಲ್ಲಿ ಭವ್ಯಾ ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಪೋಸ್ಟ್ ಪ್ರಕಟಿಸಿ ಅಶ್ಲೀಲ ಪದಗಳಿಂದ ನಿಂದನೆ ಮಾಡಲು ನವೀನ್ ಸಾಗರ್ ಪ್ರಚೋದನೆ ನೀಡಿರುತ್ತಾರೆ. ಮಹಿಳೆಯ ಚಿತ್ರವನ್ನು ವಿಕೃತವಾಗಿ, ತೇಜೋವಧೆ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಂಡು ಘನತೆಗೆ ಧಕ್ಕೆ ತಂದಿರುವ ನವೀನ್ ಸಾಗರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.