ರಣಹೇಡಿ ಸಿನಿಮಾ ಬಿಡುಗಡೆಗೊಂಡು ನೋಡಿದವರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತರ ಬದುಕು-ಬವಣೆಯ ಕುರಿತಾದ ಕಥೆ ಹೊಂದಿರುವ ಕಾರಣಕ್ಕೆ ವಿಶೇಷ ಸಿನಿಮಾವಾಗಿ ಪರಿಗಣಿಸುವಂತಾಗಿದೆ.

ಕೃಷಿಯನ್ನೇ ನಂಬಿ ಬದುಕಿದವನ ಸಂಕಷ್ಟಗಳು, ಪ್ರತಿಘಳಿಗೆಯೂ ಕಷ್ಟವನ್ನೇ ಉಂಡು ಮಲಗಬೇಕಾದ ವಿಪರ್ಯಾಸ, ಸಾಂಸಾರಿಕ ಕಲಹ, ಸಾಲಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವ ರೈತನ ಬದುಕಿನ ಇಂಚಿಂಚೂ ವಿವರವನ್ನು ‘ರಣಹೇಡಿ’ಯ ಮೂಲಕ ತೆರೆದಿಟ್ಟಿದ್ದಾರೆ ನಿರ್ದೇಶಕ ಮನು.

ವ್ಯಾಪಾರೀ ಸಿನಿಮಾಗಳ ನಡುವೆ ಇಂಥದ್ದೊಂದು ಚಿತ್ರವನ್ನು ತಯಾರು ಮಾಡುವ ಮನಸು ಮಾಡಿದ ಸುರೇಶ್ ಅವರ ಧೈರ್ಯ ನಿಜಕ್ಕೂ ದೊಡ್ಡದು.

ಅಪಾಪೋಲಿಯಿಂತೆ ಅಲೆದುಕೊಂಡು, ಅಪ್ಪ ಕಷ್ಟಪಟ್ಟು ಕೃಷಿ ಮಾಡಿ, ಆಲೆಮನೆ ನಡೆಸಿ ಸಂಪಾದಿಸಿದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿಕೊಂಡು, ಜೂಜಾಡಿಕೊಂಡು ತಿರುಗುವ ಮಗ. ಎದುರಿಗೆ ಸಿಕ್ಕ ಹೆಂಗಸರನ್ನು ತೋಟದ ಮನೆಯಾಗಲಿ, ಆಲೆ ಮನೆಯ  ಅಂಗಳದಲ್ಲಾಗಲಿ, ಹೊಲ, ಗದ್ದೆಗಳ ಪೊದೆಯೊಳಕ್ಕಾದರೂ ಕೆಡವಿಕೊಳ್ಳುವ ಶೋಕಿಯ ಮಗ. ಸಾಲ ಮಾಡಿ ತಂದ ಹಣದಲ್ಲಿ ವ್ಯವಸಾಯ ಮಾಡುತ್ತಾ ಅದನ್ನೇ ಉಸಿರಾಗಿಸಿಕೊಂಡ ಮಗ. ಇವರಿಬ್ಬರ ಸಂಘರ್ಷದ ಜೊತೆಜೊತೆಗೇ ರೈತ ಬದುಕಿನ ತಳಮಳ ಕೂಡಾ ಇಡೀ ಸಿನಿಮಾದ ಜೀವಾಳದಂತಿದೆ. ಮಾಡಬಾರದ್ದನ್ನು ಮಾಡಿ ಜೈಲುಪಾಲಾದ ಮಗನನ್ನು ಬಿಡಿಸಿಕೊಂಡು ಬರಲು ಹೆಣಗಾಡುವ ತಂದೆ, ಹಣ ಸಂಪಾದನೆಯನ್ನೇ ಉದ್ದೇಶವಾಗಿಸಿಕೊಂಡ ನಿರ್ದಯೂ ಲಾಯರ್ರು, ಇಷ್ಟಪಟ್ಟವನು ವ್ಯಾಘ್ರನಂತಾಡಿದರೂ ಅವನ್ನನ್ನೇ ನೆಚ್ಚಿ ಬದುಕುವ ಹೆಂಡತಿ ಜೊತೆಗೊಂದು ಪುಟಾಣಿ ಮಗು… ಹೀಗೆ ಹಂತಹಂತವಾಗಿ ಕತೆ ತೆರೆದುಕೊಳ್ಳುತ್ತಾ ಹೋಗುತ್ತದೆ.

ತನ್ನಿಂದಾದ ಅನಾಹುತ, ಯಡವಟ್ಟುಗಳನ್ನು ಸರಿಮಾಡಿಕೊಂಡು ಬದುಕಲು ಯತ್ನಿಸಿದರೂ ಕೈಕೊಡುವ ಕೃಷಿ, ಎದೆಮೇಲಿನ ಸಾಲದ ಭಾರ ಯಾವುದಕ್ಕೂ ಆಸ್ಪದ ಕೊಡುವುದಿಲ್ಲ. ಇಷ್ಟೆಲ್ಲದರ ನಡುವೆ ಮಗ ಕೂಡಾ ಅಪ್ಪನಂತೇ ಸಾವಿಗೆ ಶರಣಾಗಿ ‘ರಣಹೇಡಿ’ಯಾಗುತ್ತಾನಾ? ಮಣ್ಣಿನ ಕೆಲಸಕ್ಕೆ ಸಲಾಮು ಹೊಡೆದು ಬೇರೆ ಬದುಕು ಕಟ್ಟಿಕೊಳ್ಳುತ್ತಾನಾ? ಕೃಷಿಯನ್ನು ನಂಬಿದ ಕುಟುಂಬ ಬೀದಿಗೆ ಬೀಳುತ್ತಾ? ಹೀಗೆ ಒಂದಷ್ಟು ಪ್ರಶ್ನೆಗಳಿಗೆ ‘ರಣಹೇಡಿ’ ಉತ್ತರ ನೀಡುತ್ತಾನೆ.

ಸಿನಿಮಾದಲ್ಲಿ ಚಿತ್ರಕತೆ ಅಲ್ಲಲ್ಲಿ ದಿಕ್ಕುತಪ್ಪಿದಂತೆ ಕಂಡರೂ,  ಕಥೆಯಲ್ಲಿನ ವಿಶೇಷತೆ ಕುಂತು ನೋಡುವಂತೆ ಮಾಡುತ್ತದೆ. ಈ ನೆಲದ ಮಣ್ಣಿನ ಮಕ್ಕಳ ಸಹಜ  ಸೊಗಡಿನ ಮಾತು ಇಲ್ಲಿ ಸಂಭಾಷಣೆಯಾಗಿರುವುದು ವಿಶೇಷ. ನಾಯಕ ಕರ್ಣಕುಮಾರ್ ಮತ್ತು ಅಪ್ಪನಾಗಿ ಅಚ್ಯುತ್ ಕುಮಾರ್ ಮನಮಿಡಿಯುವಂತೆ ನಟಿಸಿದ್ದಾರೆ. ಗಿರೀಶ್ ಕಾಮಿಡಿ, ಶಫಿ ನಟನೆ ಗಮನ ಸೆಳೆಯುತ್ತದೆ. ನಾಯಕಿ ಐಶ್ವರ್ಯಾ ರಾವ್ ನಟನೆಯಲ್ಲಿ ಮಾದಕತೆ ಮತ್ತು ಮುಗ್ದತೆ ಸಮಪ್ರಮಾಣದಲ್ಲಿ ಮಿಳಿತವಾಗಿದೆ. ವಿ ಮನೋಹರ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದರೂ ಸಂಗೀತ ಒಂಚೂರು ಹಳತೆನಿಸುತ್ತದೆ.

ಒಟ್ಟಾರೆಯಾಗಿ ಮೈಸೂರು ಸೀಮೆಯ ಭಾಷೆ, ಸೊಗಡು,  ಈ ನಾಡಿನ ಕತೆ, ಬವಣೆ ಎಲ್ಲವನ್ನೂ ತೆರೆದಿಡುವ ಅಪ್ಪಟ ದೇಸೀ ಸಿನಿಮಾ ರಣಹೇಡಿ.

CG ARUN

24ಕ್ಕೆ ‘ಮೋಕ್ಷ’ದ ಟೀಸರ್!

Previous article

ಕರಿಯಪ್ಪನ ಕೀರ್ತನೆಗಳು!

Next article

You may also like

Comments

Leave a reply

Your email address will not be published. Required fields are marked *