ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋದಿಂದಲೇ ಜನಕ್ಕೆ ಹೆಚ್ಚು ಪರಿಚಿತರಾದವರು ಭುವನ್ ಪೊನ್ನಣ್ಣ. ಬಿಗ್ ಬಾಸು, ಧಾರಾವಹಿಗಳನ್ನೆಲ್ಲ ಮುಗಿಸಿದಮೇಲೆ ಭುವನ್ ಮುಂದಿನ ಬದುಕು ಯಾವುದು ಅನ್ನುವ ಕುತೂಹಲದ ಪ್ರಶ್ನೆ ಉದ್ಭವಿಸಿದ್ದ ಹೊತ್ತಿನಲ್ಲೇ ಅಮೋಘವಾದ ಪೋಸ್ಟರು ರಿಲೀಸಾಗಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಅದು ರಾಂಧವ ಚಿತ್ರದ್ದು. ಅಂದಿನಿಂದ ಇಂದಿನವರೆಗೆ ಅದೇ ಕೌತುಕವನ್ನು ಕಾಪಾಡಿಕೊಂಡುಬಂದು ಈಗ ಪರದೆಯಲ್ಲಿ ಅರಳಿದೆ.

ಸಿನಿಮಾವೊಂದು ಹೀಗೆ ಶುರುವಾಗಿ, ಹಾಗೇ ಮುಗಿಯಬೇಕು. ನಡುವೆ ಒಂದು ಮಧ್ಯಂತರ, ಅದಕ್ಕೊಂದು ಶೈಲಿ.. ಹೀಗೆ ಕಮರ್ಷಿಯಲ್ ಸಿನಿಮಾಗಳಿಗೆ ಇಂತಿಷ್ಟು ಫಾರ್ಮುಲಾಗಳು ಬಳಕೆಯಾಗಿರುತ್ತವೆ. ಆದರೆ, ಇಂಥ ಯಾವ ಸಿದ್ಧಸೂತ್ರಗಳೂ ಇಲ್ಲದೇ, ಪ್ರತಿಕ್ಷಣವೂ ಯಾರೂ ಊಹಿಸಲಾಗದಂಥ ದೃಶ್ಯಗಳೇ ಬಂದುಹೋಗಬೇಕು ಅನ್ನೋ ಮೂಲ ಉದ್ದೇಶವನ್ನಿಟ್ಟುಕೊಂಡು ರೂಪಿಸಿರುವ ಸಿನಿಮಾ ರಾಂಧವ!

ಇದು ನಿರ್ದೇಶಕ ಸುನೀಲ್ ಆಚಾರ್ಯ ಬರೆದ ಕಾದಂಬರಿ; ಪುಸ್ತಕವಾಗುವ ಮುಂಚೆ ಚಿತ್ರವಾಗಿ ಜನ್ಮತಾಳಿದ ಕೃತಿ. ಹೀಗಾಗಿ ಕಾದಂಬರಿಯ ಗುಣಗಳನ್ನು ಉಳಿಸಿಕೊಂಡೇ ಪಕ್ಕಾ ಕಮರ್ಷಿಯಲ್ ಅಂಶಗಳೊಂದಿಗೆ ತೆರೆ ಮೇಲೆ ಗೋಚರಿಸಿದೆ. ಚಿತ್ರದ ನಾಯಕನಟ ಪಕ್ಷಿ ಸಂಶೋಧಕ. ತೀರಾ ಅಪರೂಪಕ್ಕೆ ಕಾಣಸಿಗುವ ಪ್ರಬೇಧದ ಗೂಬೆಯೊಂದರ ಸುಳಿವು ಹಿಡಿದು ಅದರ ಬದುಕಿನ ಹಂತಗಳನ್ನು, ಅದರ ಗುಣಲಕ್ಷಣಗಳನ್ನು ರಿಸರ್ಚು ಮಾಡಲು ಹೊರಟು ನಿಲ್ಲುತ್ತಾನೆ. ಹಾಗೆ ಹೊರಟವನು ಸೀದಾ ಹೋಗಿ ನಿಲ್ಲುವುದು ಒಡೆಯನ ಸಮುದ್ರವೆನ್ನುವ ಪ್ರದೇಶದ ಎದೆಮೇಲೆ. ಗೂಬೆಯ ಜಾಡು ಹಿಡಿದು ಹುಡುಕಾಟ ಆರಂಭಿಸಿದವನಿಗೆ ಎದುರಾಗುವ ವಿಚಾರಗಳು, ಘಟನೆಗಳೇ ಬೇರೆ. ಇದ್ದಕ್ಕಿದ್ದಂತೆ ಕತೆ ತಲೆಮಾರೊಂದನ್ನು ದಾಟಿ ಹಿಂದಕ್ಕೆ ಹೋಗಿ ನಿಲ್ಲುತ್ತದೆ. ಚಿತ್ರದ ನಾಯಕ ರಾಬರ್ಟ್, ಒಡೆಯನ ಸಮುದ್ರ ಮತ್ತು ಯಜಮಾನಿಕೆಯ ಸುತ್ತ ಕತೆ ಬಿಚ್ಚಿಕೊಳ್ಳುತ್ತದೆ. ಜೀವ ವಿಜ್ಞಾನದಿಂದ ಆರಂಭಗೊಂಡ ವಿಚಾರ ತಲೆಮಾರುಗಳ ಹಿಂದೆ ನಡೆದ ಕೊಲೆಗಳು, ಆಸ್ತಿ ದಾಹ, ದುರಾಸೆ, ನಂಬಿಕೆ ದ್ರೋಹ ಹೀಗೆ ಊಹೆಗೆ ನಿಲುಕದ ವಸ್ತುಗಳನ್ನು ತಾಕುತ್ತದೆ. ಅದರ ನಡುವೆ ಮತ್ತೊಂದು ಉಪಕತೆಯೂ, ರಣ ರೋಚಕ ಪ್ರೇಮ ಕಾವ್ಯವೂ ಉದ್ಭವಿಸುತ್ತದೆ. ಎಲ್ಲಿಂದಲೋ ಆರಂಭಿಸಿ, ಮತ್ತೆಲ್ಲಿಗೋ ಕರೆದೊಯ್ದು, ಇನ್ನೆಲ್ಲೋ ನಿಲ್ಲಿಸಿ, ಎಲ್ಲವನ್ನೂ ನಂಬಿಸುತ್ತಾ ಸಾಗುವ ರಾಂಧವನ ಕತೆಯಲ್ಲಿ ಸೈನ್ಸು, ಎಪಿಕ್ಕು, ಥ್ರಿಲ್ಲರ್, ರಿವೇಂಜು, ತಂತ್ರ, ಕುತಂತ್ರ, ಕೌಟುಂಬಿಕ ಕಲಹ, ಲವ್ವು … ಹೀಗೆ ಎಲ್ಲ ಪ್ರಾಕಾರಗಳೂ ಬೆಸೆದುಕೊಂಡಿವೆ.

ಒಂದೇ ಚಿತ್ರದಲ್ಲಿ ಎಲ್ಲವನ್ನೂ ಹೇಳಲು ಹೊರಟು, ಯಾವುದೇ ಗೊಂದಲವಾಗದಂತೆ ಕತೆಯನ್ನು ನಿರೂಪಿಸಿರುವುದು ನಿರ್ದೇಶಕ ಸುನೀಲ್ ಆಚಾರ್ಯ ಅವರ ಚತುರತೆ ಅನ್ನಬಹುದು. ಪುಸ್ತಕ ರೂಪದ ಕಾದಂಬರಿಯಲ್ಲಿ ಎಂಥದ್ದನ್ನು ಬೇಕಾದರೂ ಬರೆದು ಓದುಗರೆದೆಗೆ ಧಾಟಿಸಬಹುದು. ಆದೇ ಕತೆ, ರೂಪಕಗಳನ್ನೆಲ್ಲಾ ಯಥಾವತ್ತಾಗಿ ದೃಶ್ಯ ರೂಪದಲ್ಲಿ ಸೃಷ್ಟಿಸುವುದಿದೆಯಲ್ಲಾ? ಅದು ಅಷ್ಟು ಸುಲಭಕ್ಕೆ ಆಗಿಹೋಗುವಂಥದ್ದಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಸುನೀಲ್ ಆಚಾರ್ಯ ತಾವೇ ಬರೆದ ಕಾದಂಬರಿಯ ಇಂಚಿಂಚೂ ಕಲ್ಪನೆಯನ್ನು ಚಾಚೂ ತಪ್ಪದಂತೆ ತೆರೆಮೇಲೆ ಮೂಡಿಸಿದ್ದಾರೆ. ಇದು ಚೊಚ್ಚಲ ನಿರ್ದೇಶಕನ ಪಾಲಿಗೆ ಅದ್ವಿತೀಯ ಗೆಲುವೂ ಹೌದು. ಕತೆಯಲ್ಲಿ ಇಷ್ಟೆಲ್ಲ ಸಕಾರಾತ್ಮಕ ಅಂಶಗಳಿದ್ದರೂ ಆರಂಭದಲ್ಲಿ ಬೇರೆಯದ್ದೇ ಇಂಟರೆಸ್ಟು ಕ್ರಿಯೇಟ್ ಮಾಡುವ ಗೂಬೆ ಕಡೆವರೆಗೂ ಜೊತೆಯಾಗದೆ ಕಳೆದುಹೋಗೋದು ಜೀವವೈವಿಧ್ಯದ ಬಗ್ಗೆ ಆಸಕ್ತಿ ಹೊಂದಿರುವವರಿಗರ ಒಂದಿಷ್ಟಾದರೂ ಬೇಸರ ತರಿಸಬಹುದು. ನೋಡುಗರ ದಿಕ್ಕು ತಪ್ಪಿಸಿ, ಬೇರೆಲ್ಲೋ ಕರೆದೊಯ್ಯುವುದೇ ನಿರ್ದೇಶಕನ ಮೂಲ ಉದ್ದೇಶವಾಗಿದ್ದು, ಈ ಕಾರಣಕ್ಕೇ ಗೂಬೆ ಕೂರಿಸುವ ಕೃತ್ಯ ಎಸಗಿದ್ದರೆ ಆ ಸಣ್ಣ ಅಸಮಧಾನಕ್ಕೂ ವಿನಾಯ್ತಿ ನೀಡಬಹುದು!

ರಾಂಧವನಾಗಿ ಅವತಾರವೆತ್ತಿರುವ ಭುವನ್ ಪೊನ್ನಣ್ಣರನ್ನು ತೆರೆಮೇಲೆ ನೋಡಿದವರಿಗೆ ಇದು ಇವರ ಮೊದಮೊದಲ ಚಿತ್ರ ಅಂತಾ ಯಾವ ಘಳಿಗೆಯಲ್ಲೂ ಅನ್ನಿಸೋದಿಲ್ಲ. ಅಷ್ಟೊಂದು ತನ್ಮಯತೆಯಿಂದ, ಪಾತ್ರದೊಳಗೆ ಪ್ರವೇಶಿಸಿ ನಟಿಸಿದ್ದಾರೆ. ಅದೂ ನಾಲ್ಕಾರು ಶೇಡುಗಳಿರುವ ಪಾತ್ರಗಳಲ್ಲಿ ವೆರೈಟಿ ಅಭಿನಯ ನೀಡೋದು ಎಂಥ ಪಳಗಿದ ನಟನಿಗೂ ಕಷ್ಟಸಾಧ್ಯ. ಆದರೆ, ಭುವನ್ ಅದನ್ನಿಲ್ಲಿ ಪರಿಪೂರ್ಣವಾಗಿ ನಿಭಾಯಿಸಿದ್ದಾರೆ ಮತ್ತು ಸಾಧಿಸಿದ್ದಾರೆ. ಹಿನ್ನೆಲೆ ಗಾಯಕರಾಗಿ ಹೆಸರು ಮಾಡಿದ್ದ ಶಶಾಂಕ್ ಶೇಷಗಿರಿಯವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಇಂಪಾಗಿದೆ. ಛಾಯಾಗ್ರಹಣ ಕಣ್ಣಿಗೆ ತಂಪೆನಿಸುತ್ತದೆ. ಮಂಜುನಾಥ ಹೆಗಡೆ, ಅರವಿಂದ್ ಮುಂತಾದವರ ನಟನೆ ಸರಾಗವಾಗಿ ಸರಿಯುವ ದೃಶ್ಯಗಳಿಗೆ ಸಾಥ್ ನೀಡಿದರೆ, ಹಾಸ್ಯನಟ ಜಹಾಂಗೀರರ ಆಕ್ಟಿಂಗು ಅಲ್ಲಲ್ಲಿ ಅತಿ ಎನಿಸುತ್ತದೆ.  ಒಟ್ಟಾರೆಯಾಗಿ, ಹೊಸ ಬಗೆಯ ಸಿನಿಮಾವನ್ನು ನಿರೀಕ್ಷಿಸುವ ಪ್ರೇಕ್ಷಕರಿಗೆ ರಾಂಧವ ಆಪ್ತವಾಗುತ್ತಾನೆ. ಒಮ್ಮೆಯಾದರೂ ನೋಡಿ ನೀವೂ ರಾಂಧವನನ್ನು ಅಪ್ಪಿ ಮುದ್ದಾಡಬಹುದು!

CG ARUN

ಮುಹೂರ್ತ ನೆರವೇರಿಸಿಕೊಂಡ ಮರೆಯದೆ ಕ್ಷಮಿಸು!

Previous article

ಬಿರಿಯಾನಿ ತಿನ್ನುತ್ತಾ ಐಂದ್ರಿ ಜೊತೆ ಮೂವಿ ನೋಡುತ್ತಿದ್ದ ದಿಗಂತನ ಬಗ್ಗೆ ಹೀಗೆಲ್ಲಾ…

Next article

You may also like

Comments

Leave a reply

Your email address will not be published. Required fields are marked *