ಎದುರಿಗಿದ್ದವರಿಗೆ ‘ಇದು ನಟನೆ’ ಅನ್ನಿಸಿಬಿಟ್ಟರೆ ಅದು ಕಾಮಿಡಿಯಾಗಿ ಉಳಿಯುವುದೂ ಇಲ್ಲ. ಸಲೀಸಾಗಿ ನಗಿಸಬಲ್ಲ ಚಾಲಾಕಿತನ ರಂಗಣ್ಣ ಹೊಮ್ಮಿಸುವ ಭಾವಗಳಲ್ಲಿ ಬೆರೆತುಹೋಗಿರುತ್ತದೆ.
ಕೆಲ ದಿನಗಳಿಂದೀಚೆಗೆ ಟ್ರಾಫಿಕ್ ಪೊಲೀಸರು ಕನಸಿನಲ್ಲಿ ಬಂದರೂ ಜನ ಬೆಚ್ಚಿಬೀಳುವಂತಾಗಿದೆ. ಯಾವ ಕಾರಣಕ್ಕೆ ಹಿಡಿದು ದಂಡ ಕಟ್ಟಿಸಿಕೊಳ್ಳುತ್ತಾರೋ ಅನ್ನೋ ಕಾರಣಕ್ಕೆ. ಇದೇ ಟ್ರಾಫಿಕ್ ಪೊಲೀಸ್ ವೇಷದಲ್ಲಿ ನಮ್ಮ ಕುರಿ ರಂಗಣ್ಣ ಮಾಡಿರುವ ಕಾಮಿಡಿ ಎಪಿಸೋಡು ನೋಡಿದವರೆಲ್ಲ ಉಳ್ಳಾಡಿಕೊಂಡು ನಗುವಂತೆ ಮಾಡಿದೆ.
‘ನಾನು ಶಂಕ್ರಣ್ಣನ ಫ್ಯಾನು.. ಚಿಕ್ಕ ವಯಸ್ಸಿಂದಾ ಅವ್ರನ್ನ ನೋಡ್ಕೊಂಡೇ ಬೆಳೆದೋನು. ನಾನು ತುಂಬಾ ಸ್ಟ್ರಿಕ್ಟು ಅಂತಾ ಮಾತು ಶುರು ಮಾಡಿ ಟ್ರಾಫಿಕ್ಸ್ ಪೊಲೀಸ್ ಇನ್ಸ್ಪೆಕ್ಟರೊಬ್ಬರು ದಂಡ ವಸೂಲಾತಿಗೆ ನಿಂತರೆ, ಎದುರಿಗಿದ್ದವರು ನಗಬೇಕಾ? ಭಯಪಡಬೇಕಾ?. ಹೆಲ್ಮೆಟ್ ಇಲ್ಲದೇ ಸವಾರಿ ಮಾಡುವ ಯಾರೇ ಆದರೂ ಪೊಲೀಸರು ಹಿಡಿದ ತಕ್ಷಣ ಹೇಳೋದು ಒಂದೇ ಡೈಲಾಗು ‘ಈಗ ತಾನೇ ಮನೆಯಿಂದಾ ಆಚೆ ಬಂದೆ ಅಂತಾ. ಅದಕ್ಕೆ ನಮ್ಮ ಇನ್ಸ್ ಪೆಕ್ಟರ್ ಶಂಕ್ರಣ್ಣ ಏನಂದಿದ್ದಾರೆ ಗೊತ್ತಾ? “ಇಂಡಿಯಾದಲ್ಲಿರೋ ನೂರಾಹತ್ತು ಕೋಟಿ ಪಾಪ್ಯುಲೇಷನ್ನಿನಲ್ಲಿ ನೂರು ಕೋಟಿ ಜನ ಹೇಳೋದು ಇದನ್ನೇ.. ಕರ್ನಾಟಕದ ಯಾವುದೇ ಮೂಲೆಗೆ ಕಳ್ಸಿದ್ರೂ ಹೋಗೋಕೆ ರೆಡಿ. ಯಾಕಂದ್ರೆ ನನ್ ಹತ್ರ ಇರೋದು ಒಂದು ಬ್ಯಾಗು ನಾಲ್ಕು ಜೊತೆ ಬಟ್ಟೆ ಅಷ್ಟೇ! ಅಂತಾ… ಥೇಟು ಸಿನಿಮಾ ಶೈಲಿಯಲ್ಲಿ, ಅದೂ ಶಂಕ್ರಣ್ಣನ ಸ್ಟೈಲಲ್ಲಿ ರಂಗಣ್ಣ ಡೈಲಾಗು ಉದುರಿಸುವ ಎಪಿಸೋಡಂತೂ ಈಗ ಎಲ್ಲೆಡೆ ವೈರಲ್ ಆಗಿದೆ. ಯೂಟ್ಯೂಬ್ ಮತ್ತು ಫೇಸ್ ಬುಕ್ಕಿನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಿಟ್ಸ್ ಪಡೆದಿದೆ.
ಬ್ರೈನ್ ಶೇರ್ ಕ್ರಿಯೇಶಷನ್ಸ್ ರೂಪಿಸುತ್ತಿರುವ ಕುರಿ ಬಾಂಡ್ ಕಾರ್ಯಕ್ರಮ ಯಾವತ್ತಿನಿಂದಲೂ ಕರ್ನಾಟಕದ ಜನತೆಯನ್ನು ನಗಿಸುತ್ತಲೇ ಬಂದಿದೆ. ಒತ್ತಡದ ಜೀವನದಲ್ಲಿ ನಗುವನ್ನು ಕಳೆದುಕೊಂಡವರು ಒಮ್ಮೆ ಕುರಿಬಾಂಡ್ ಎಪಿಸೋಡುಗಳನ್ನು ನೋಡಿದರೆ ಒಂದಿಷ್ಟು ಕಾಲವಾದರೂ ನಿರಾಳವಾಗಬಹುದು. ಅದರಲ್ಲೂ ಕುರಿ ರಂಗಣ್ಣನ ಸಂಚಿಕೆಗಳಂತೂ ಬಲು ಮಜಾ ಕೊಡುತ್ತವೆ.
‘ಕುರಿ ಕಾರ್ಯಕ್ರಮದಲ್ಲಿ ಜನರನ್ನು ಬಕರಾ ಮಾಡುತ್ತಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಾಮಿಡಿ ಪ್ರತಿಭೆಗಳು ಸಾಕಷ್ಟು ಮಂದಿಯಿದ್ದಾರೆ. ಸ್ಮೈಲ್ ಸಾಗರ್ರಿಂದ ಆರಂಭಗೊಂಡು ಪ್ರಕಾಶ, ಪ್ರತಾಪ, ಸುನಿಲ್, ಮತ್ತು ರಂಗಣ್ಣ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ.
ಕುರಿ ರಂಗ ಅಂತೂ ಕನ್ನಡದ ವಿಶಿಷ್ಟ ಹಾಸ್ಯ ಕಲಾವಿದ. ‘ಇದು ನಟನೆ ಅಂತಾ ಅನ್ನಿಸದೇ ಸಹಜವಾಗಿ ತೊಡಗಿಕೊಳ್ಳುವ ರಂಗಣ್ಣನ ಶೈಲಿಯೇ ಭಿನ್ನ. ಎದುರಿಗಿದ್ದವರಿಗೆ ನಟನೆ ಅನ್ನಿಸಿದರೆ ಅದು ಕಾಮಿಡಿಯಾಗಿ ಉಳಿಯುವುದೂ ಇಲ್ಲ. ಸಲೀಸಾಗಿ ನಗಿಸಬಲ್ಲ ಚಾಲಾಕಿತನ ರಂಗಣ್ಣ ಹೊಮ್ಮಿಸುವ ಭಾವಗಳಲ್ಲಿ ಬೆರೆತುಹೋಗಿರುತ್ತದೆ. ಇತ್ತೀಚೆಗೆ ಚಿತ್ರರಂಗದಲ್ಲೂ ಹೆಚ್ಚು ಜನಪ್ರಿಯತೆ ಪಡೆದಿರುವ ರಂಗಣ್ಣ ಇನ್ನೂ ಹೆಚ್ಚು ಅವಕಾಶಗಳನ್ನು ಪಡೆದು ದೊಡ್ಡ ಎತ್ತರಕ್ಕೇರಲಿ.