ಸತ್ಯಘಟನೆಯಾಧಾರಿತ ಎಟಿಎಂ ಎಂಬ ಚಿತ್ರವೊಂದು ತೆರೆ ಕಂಡು ಗೆಲುವು ಕಂಡಿತ್ತಲ್ಲಾ? ಅದರ ಮೂಲಕವೇ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದವರು ಎಸ್.ವಿ. ನಾರಾಯಣ್. ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ಘಟನೆಯನ್ನಾಧರಿಸಿ ತೆರೆ ಮೇಲೆ ಮೂಡಿತ್ತು. ಈಗ ನಾರಾಯಣ್ ಅವರು ನಿರ್ಮಿಸಿರುವ ಎರಡನೇ ಸಿನಿಮಾ ರಂಗನಾಯಕಿ. ಈ ಚಿತ್ರದ ಕುರಿತು ನಿರ್ಮಾಪಕ ನಾರಾಯಣ್ ಅವರ ಅಭಿಪ್ರಾಯಗಳೇನು ಅನ್ನೋದರ ವಿವರ ಇಲ್ಲಿದೆ.
ನಿರೂಪಣೆ: ಸುಮ .ಜಿ

-ನಿಮ್ಮ ಹಿನ್ನೆಲೆ ಏನು? ನೀವು ಚಿತ್ರರಂಗದ ಸಂಪರ್ಕಕ್ಕೆ ಬಂದಿದ್ದು ಹೇಗೆ? : ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ನನ್ನ ಜನ್ಮ ಸ್ಥಳ. ವಿದ್ಯಾಭ್ಯಾಸದ ನಂತರ ಬೆಂಗಳೂರಿಗೆ ಬಂದು ೧೯೯೧ರಲ್ಲಿ ನನ್ನ ಅಣ್ಣನೊಂದಿಗೆ ಸೇರಿ ಇಂಡಸ್ಟ್ರಿಯಲ್ ಆಟೋ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಮಾಡುವ ಕಂಪನಿಯೊಂದನ್ನು ಶುರುಮಾಡಿದೆ. ಇಂದಿಗೂ ಯಶಸ್ವಿಯಾಗಿ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದೇವೆ. ಜಪಾನ್, ಯುಎಇ, ಯುರೋಪಿಯನ್ ಹಾಗೂ ಇತರೆ ರಾಷ್ಟ್ರಗಳಿಗೆ ನಮ್ಮ ಸಂಸ್ಥೆಯ ಕಾಂಪೊನೆಂಟ್ಗಳನ್ನು ರಫ್ತು ಮಾಡಲಾಗುತ್ತಿದೆ. ಚಿತ್ರರಂಗಕ್ಕೆ ಬರುವ ಯೋಚನೆಗಳಿರಲಿಲ್ಲ. ನನ್ನಅಣ್ಣನ ಮಗ ಶ್ರೀಹರಿ ಅವನ ಸ್ನೇಹಿತರೊಂದಿಗೆ ನನ್ನ ಬಳಿ ಬಂದು ಒಂದು ಸಿನಿಮಾ ಮಾಡಬೇಕೆಂದಿದ್ದೇವೆ. ೨೦೧೪ನಲ್ಲಿ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಒಂದು ಹೆಣ್ಣಿನ ಮೇಲೆ ಹಲ್ಲೆ ನಡೆದದಿದ್ದರ ಬಗ್ಗೆ ರಿಯಲ್ ಸಬ್ಜೆಕ್ಟ್‌ನ ಸ್ಕ್ರಿಪ್ಟ್ ರೆಡಿ ಮಾಡಿದ್ದೇವೆ. ಇದು ಮಹಿಳೆಯರಿಗೆ ಸಮಾಜದಲ್ಲಿ ಒಂದು ಅವೇರ್ನೆಸ್ ಮೂಡಿಸುವಂತಹ ಒಂದು ಕಥೆ. ನಿಮ್ಮ ಬಳಿ ಯಾರಾದರೂ ಹೂಡಿಕೆದಾರರಿದ್ದರೆ ಹೇಳಿ ಎಂದು ಕೇಳಿದರು. ಈ ಕಥೆ ಕೇಳಿದಾಗ ಮನಮುಟ್ಟುವಂತಿತ್ತು, ಇದು ಒಳ್ಳೆ ಕಥೆ ಅನ್ನಿಸಿತು, ಬೇರೆಯಾರೋ ನಿರ್ಮಾಪಕರನ್ನ ಏಕೆ ಕೇಳಬೇಕು ಎಂದು ಬಜೆಟ್ ಬಗ್ಗೆ ಕೇಳಿದೆ. ೫೦ ಲಕ್ಷ ವೆಚ್ಚದಲ್ಲಿ ಸುಮಾರು ೩ರಿಂದ ೪ ತಿಂಗಳೊಳಗೆ ಸಿನಿಮಾ ಕಂಪ್ಲೀಟ್ ಆಗುತ್ತದೆ ಎಂಬ ಮಾಹಿತಿಯನ್ನು ನೀಡಿದರು. ನಾನೇ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ, ಮುಂದಿನ ಕಾರ್ಯಗಳನ್ನು ಗಮನಿಸಿ ಎಂದು ಹೇಳಿದೆ. ಸಿನಿಮಾಗೆ ಒಂದು ಟೈಟಲ್ ಬಗ್ಗೆ ಚರ್ಚೆ ಶುರುವಾಯಿತು. ಈ ಚಿತ್ರಕ್ಕೆ ಎಟಿಎಂ ಎಂಬ ಟೈಟಲ್‌ನ್ನು ನೀಡಲು ಫಿಲ್ಮ್ ಚೇಂಬರ್‌ನಲ್ಲಿ ನಿರಾಕರಿಸಿದರು. ಎಟಿಎಂ ನಲ್ಲಿ ಹಲ್ಲೆ ನಡೆದಿರುವುದರಿಂದ ಅಟೆಂಪ್ಟ್‌ಟು ಮರ್ಡರ್ – ಎಟಿಎಂ ಎಂದು ಹೆಸರಿಡಲು ಯೋಚಿಸಿದೆವು. ಈ ಚಿತ್ರದಲ್ಲಿ ವಿನಯ್‌ಗೌಡ ಅವರು ನಾಯಕ ನಟನಾಗಿ ನಟಿಸಿದ್ದರು. ಈ ಚಿತ್ರ ಹಲವಾರು ಕಾರಣಗಳಿಂದ ಅಷ್ಟು ಯಶಸ್ವಿ ಕಾಣಲಿಲ್ಲ. ಈ ಚಿತ್ರದಲ್ಲಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡು ರಂಗನಾಯಕಿ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಕಾಕತಾಳೀಯವಾಗಿ ದಯಾಳ್ ಅವರು ನನ್ನನ್ನು ಭೇಟಿ ಮಾಡಿ ಈ ಚಿತ್ರದ ಕಥೆ ಹೇಳಿದರು, ನಾನು ಬಹಳ ಇಷ್ಟಪಟ್ಟು ಒಪ್ಪಿದೆ. ಸುಮಾರು ೧೫೦ ದಿನಗಳು ಹಗಲು ರಾತ್ರಿ ಕೆಲಸ ಮಾಡಿದರು. ಈ ಸಿನಿಮಾ ಇಂಡಿಯನ್ ಪನೋರಮಾಗೆ ಸೆಲೆಕ್ಟ್ ಆಗಿದೆ ಅನ್ನೋದೇ ಒಂದು ಹೆಮ್ಮೆ ವಿಷಯ.

– ಮೊದಲ ಸಿನಿಮಾ ಕೂಡಾ ನೊಂದ ಮಹಿಳೆಯ ಪರವಾಗಿತ್ತು. ಎರಡನೇ ಸಿನಿಮಾ ಕೂಡಾ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ಕಥೆಯನ್ನು ಹೊಂದಿದೆ. ಇದು ಕೋ-ಇನ್ಸಿಡೆನ್ಸಾ ಅಥವಾ? : ಮಚ್ಚು-ಲಾಂಗ್, ಹೊಡೆದಾಟ-ಬಡಿದಾಟ, ಲವ್ ಇದೇ ರೀತಿಯಲ್ಲಿಯೇ ಈಗಿನ ಚಿತ್ರಗಳು ಬರುತ್ತಿವೆ. ನಾವು ಏನೇ ಸಿನಿಮಾಗಳನ್ನು ತೆಗೆದರೂ ಡಾ.ರಾಜ್‌ಕುಮಾರ್ರವರ ಸಿನಿಮಾಗಳಲ್ಲಿನ ಮೆಸೇಜ್ ಕೊಡೋಕೆ ಸಾಧ್ಯವಾಗುವುದಿಲ್ಲ. ಅಣ್ಣಾವ್ರು ಸಂಸಾರಿಕ, ಸಾಂಸ್ಕೃತಿಕ, ಐತಿಹಾಸಿಕ, ಪೌರಾಣಿಕ – ಈ ಎಲ್ಲರೀತಿಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಾವು ಸಮಾಜಕ್ಕೆ ಸಂದೇಶವನ್ನು ನೀಡುವಂಥದ್ದು ಏನೂ ಇಲ್ಲ ಎಲ್ಲವೂ ಅಣ್ಣಾವ್ರು ಹೇಳಿದ್ದಾರೆ. ರೌಡಿಸಂ ಕುರಿತಾದ ಸಿನಿಮಾ ತೆಗೆದರೆ ಒಂದು ಕ್ಯಾಟಗರಿ ಜನಗಳು ಮಾತ್ರ ಸಿನಿಮಾ ನೋಡುತ್ತಾರೆ. ಒಂದು ಹೆಣ್ಣಿನ ವಿಷಯಕ್ಕೆ ಸಂಬಂಧಿಸಿದಂತೆ ಸಿನಿಮಾ ಮಾಡಿದರೆ ಹೆಸರಿನೊಂದಿಗೆ ದುಡ್ಡೂ ಸಹ ಮಾಡಬಹುದು ಎಂಬುದನ್ನು ನನ್ನ ಮೊದಲನೇ ಸಿನಿಮಾದಲ್ಲಿ ಕಂಡುಕೊಂಡಿದ್ದೇನೆ. ಹೆಣ್ಣಿನ ಮೇಲೆ ನಡೆಯುತ್ತಿರುವ ಅವಮಾನ, ಶೋಷಣೆ, ಅತ್ಯಾಚಾರದ ಕುರಿತು ಮನಮುಟ್ಟುವ ರೀತಿಯಲ್ಲಿ ಸಿನಿಮಾ ಮಾಡಿ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ಈ ಸಿನಿಮಾ ಮಾಡಿದ್ದೇವೆ.

– ರಂಗನಾಯಕಿ ಚಿತ್ರ ಗೋವಾ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾದ ಬಗ್ಗೆ ಹೇಳಿ : ನನ್ನ ಪ್ರೊಡಕ್ಷನ್ನ ಎರಡನೇ ಸಿನಿಮಾ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿರೋದು ನನಗೆ ಬಹಳ ಖುಷಿ ಕೊಟ್ಟಿದೆ. ದೆಹಲಿಯ ಇಂಟರ್ ನ್ಯಾಷನಲ್ ಫೆಸ್ಟಿವಲ್, ಕೇರಳ ಇಂಟರ್ ನ್ಯಾಷನಲ್ ಫೆಸ್ಟಿವಲ್, ಕಲ್ಕತ್ತಾ ಇಂಟರ್ ನ್ಯಾಷನಲ್ ಫೆಸ್ಟಿವಲ್, ಬೆಂಗಳೂರು ಇಂಟರ್ ನ್ಯಾಷನಲ್ ಫೆಸ್ಟಿವಲ್ ಹೀಗೆ ಎಲ್ಲ ಅಂತಾರಾಷ್ಟ್ರೀಯ ಫೆಸ್ಟಿವಲ್‌ಗಳಲ್ಲಿ ರಂಗನಾಯಕಿ ಚಿತ್ರವನ್ನು ಸ್ಕ್ರೀನಿಂಗ್ ಮಾಡುವ ಅವಕಾಶ ಇದೆ ಅನ್ನೋದು ತುಂಬಾ ಹೆಮ್ಮೆ ಇದೆ.

– ನಿರ್ದೇಶಕ ದಯಾಳ್ ಅವರ ಕೆಲಸ ನಿಮಗೆ ಹೇಗೆ ಖುಷಿ ಕೊಟ್ಟಿದೆ? : ನಿರ್ದೇಶಕ ದಯಾಳ ಪದ್ಮನಾಭನ್ ಅವರ ಬಗ್ಗೆ ಹೇಳಬೇಕೆಂದರೆ, ನಾಗತಿಹಳ್ಳಿ ಚಂದ್ರಶೇಖರ್ ಅವರು ಹೇಳಿದಂತೆ ಎಂತಹ ಕಲ್ಲು ಹೃದಯದವರನ್ನೂ ಸಿನಿಮಾ ನರೇಶನ್ ಬಗ್ಗೆ ತಿಳಿಸಿ ಒಪ್ಪಿಸುವಂತಹ ಚಾಕಚಕ್ಯತೆ ಅವರಲ್ಲಿದೆ. ತುಂಬಾ ಪ್ರತಿಭಾವಂತ ಸಿಸ್ಟಮ್ಯಾಟಿಕ್ ಮನುಷ್ಯ. ಕ್ವಾಲಿಟಿ ಆಗಬಹುದು, ಪೇಮೆಂಟ್ ಆಗಬಹುದು, ಎಲ್ಲೂ ಕಾಂಪ್ರೂ ಆಗೋಲ್ಲ. ಒಂದು ಕಾರ್ಪೊರೇಟ್ ಸಂಸ್ಥೆಯಲ್ಲಿ ಹೇಗೆ ಕೆಲಸ ಮಾಡ್ತಾರೋ ಹಾಗೆ ಕೆಲಸ ಮಾಡ್ತಾರೆ ಮತ್ತು ಬೇರೆಯವರಿಂದ ಕೆಲಸ ತೆಗೀತಾರೆ. ನಾನು ಅವರಿಂದ ಬಹಳ ಕಲಿತಿದ್ದೇನೆ. ಎಲ್ಲೂ ಹಣ ಆಗಲೀ, ಸಮಯ ಆಗಲೀ ದುರುಪಯೋಗ ಮಾಡುವುದಿಲ್ಲ.

– ಈ ಸಿನಿಮಾ ಬಿಡುಗಡೆಗೂ ಮುಂಚೆಯೇ ಸಾಕಷ್ಟು ಹೆಸರು ಮಾಡುತ್ತಿದೆಯಲ್ಲಾ? ಅದರ ಬಗ್ಗೆ ಹೇಳಿ : ಈಗಾಗಲೇ ಹೇಳಿರುವಂತೆ ತುಂಬಾ ತೂಕದ ಟೈಟಲ್ ರಂಗನಾಯಕಿ. ಚಿತ್ರತಂಡ ಬಹಳ ಜವಾಬ್ದಾರಿಯನ್ನು ಹೊತ್ತಿದೆ. ಬೇರೆ ಯಾವುದಾದರೊಂದು ಸಾಮಾನ್ಯ ಟೈಟಲ್ ಇಟ್ಟು ರಿಲೀಸ್ ಮಾಡಿದರೆ ಆಗೋದಿಲ್ಲ. ಚಿತ್ರರಂಗ ಕಂಡಂತಹ ಯಶಸ್ವಿ ಚಲನಚಿತ್ರ ರಂಗನಾಯಕಿ ಆಗಿರೋದ್ರಿಂದ ಇದನ್ನ ನಾವು ಇದನ್ನ ಅಷ್ಟು ಸುಲಭವಾಗಿ ಪರಿಗಣಿಸುವಂತಿಲ್ಲ. ಚಿತ್ರಬ್ರಹ್ಮ ಪುಟ್ಟಣ ಕಣಗಾಲ, ಅಂಬರೀಶಣ್ಣ, ಆರತಿ ಅವರುಗಳನ್ನು ಮನಸ್ಸಿನಲ್ಲಿಟ್ಟು ಈ ಚಿತ್ರವನ್ನು ಪ್ರಚಾರ ಮಾಡುತ್ತಿದ್ದೇವೆ. ಎಲ್ಲ ರೀತಿಯ ಮಾಧ್ಯಮಗಳಲ್ಲಿಯೂ ಎಲ್ಲೆಲ್ಲಿ ಸಾಧ್ಯವಿದೆಯೋ ಎಲ್ಲ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಈ ಸಿನಿಮಾಗೆ ಪ್ರಚಾರ ಮಾಡಿದ್ದೇವೆ. ಸುಮಾರು ೩೫ರಿಂದ ೪೦ ಲಕ್ಷವನ್ನು ಪ್ರಚಾರಕ್ಕೆಂದೇ ಬಳಸಿದ್ದೇವೆ. ಕರ್ನಾಟಕ ರಾಜ್ಯದಾದ್ಯಂತ ಎಲ್ಲರಿಗೂ ತಲುಪಬೇಕೆನ್ನುವುದೇ ಇದರ ಉದ್ದೇಶ. ಯಾವುದೇ ರೀತಿಯ ಮುಜುಗರವಿಲ್ಲದೆ ಬಂದು ಕುಟುಂಬದೊಂದಿಗೆ ಈ ಚಿತ್ರವನ್ನು ನೋಡಬಹುದು. ಸಿನಿಮಾ ನೋಡಿದ ನಂತರ ಉಳಿಯುವಂತಹ ಭಾವನೆಯನ್ನು ಜೀವನದುದ್ದಕ್ಕೂ ಕ್ಯಾರಿ ಮಾಡಿದರೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಗೌರವ ಸೂಚಿಸದಂತಾಗುತ್ತದೆ. ಈ ಚಿತ್ರಕ್ಕೂ ಗೌರವ ಸಿಕ್ಕಂತಾಗುತ್ತದೆ.

– ಈ ಸಿನಿಮಾವನ್ನು ಜನ ಯಾವ ಕಾರಣಕ್ಕಾಗಿ ನೋಡಲೇ ಬೇಕು ಅನ್ನೋದು ನಿಮ್ಮ ಅಭಿಪ್ರಾಯ? : ಪ್ರತಿಯೊಬ್ಬ ಗಂಡು ಒಂದು ಹೆಣ್ಣಿಗೆ ಒಬ್ಬ ಅಣ್ಣನಾಗಿ, ತಮ್ಮನಾಗಿ, ಗಂಡನಾಗಿ, ತಂದೆಯಾಗಿ, ಗೆಳೆಯನಾಗಿ ಗೌರವ ನೀಡುತ್ತಾನೆ. ಯಾರು ಹೆಣ್ಣಿಗೆ ಗೌರವ ನೀಡುತ್ತಾರೋ ಅವರೆಲ್ಲೂ ಈ ಸಿನಿಮಾವನ್ನು ನೋಡಲೇಬೇಕು, ನೋಡುತ್ತಾರೆ ಅನ್ನೋ ಭಾವನೆ ನನಗಿದೆ. ಒಂದು ಹಣ್ಣಿಗೆ ಗೌರವ ನೀಡಿದರೆ ದೇವರಿಗೆ ಗೌರವ ನೀಡಿದ ಹಾಗೆ. ಹೆಣ್ಣನ್ನ ಪ್ರಕೃತಿಗೆ, ದೇವರಿಗೆ, ತಾಯಿಗೆ, ನದಿಗೆ ಹೋಲಿಕೆ ಮಾಡುತ್ತಾರೆ. ಹೆಣ್ಣೆಂದರೆ ಒಂದು ಶಕ್ತಿ. ಯಾವುದಾದರೂ ರೀತಿಯಲ್ಲಿ ಹೆಣ್ಣಿಗೆ ಗೌರವಿಸುತ್ತೇವೆ. ರಂಗನಾಯಕಿ ಸಿನಿಮಾ ಮೂಲಕ ಹೆಣ್ಣನ್ನು ಗೌರವಿಸುವುದರೊಂದಿಗೆ ಹೆಣ್ಣನ್ನು ಆರಾಧಿಸೋಣ.

CG ARUN

ಚೇಸ್ ಯಾವಾಗ ರಿಲೀಸ್?

Previous article

ಅಭಿಮಾನಿಗಳ ಬಯಕೆ ಈಡೇರಿದೆ…

Next article

You may also like

Comments

Leave a reply

Your email address will not be published. Required fields are marked *