ಒಂದಾನೊಂದು ಕಾಲದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ರಂಗನಾಯಕಿ’ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಈಗ ‘ರಂಗನಾಯಕಿ’ ಶೀರ್ಷಿಕೆಯಲ್ಲೇ ಮತ್ತೊಂದು ಸಿನಿಮಾ ತಯಾರಾಗಿ ನಿಂತಿದೆ. ಈ ಹಿಂದೆ ಎ.ಟಿ.ಎಂ. ಎನ್ನುವ ಸಿನಿಮಾವನ್ನು ನಿರ್ಮಿಸಿದ್ದ ಎಸ್.ವಿ ನಾರಾಯಣ್ ನಿರ್ಮಾಣದಲ್ಲಿ, ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ರಂಗನಾಯಕಿ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ, ಎಂ.ಜಿ. ಶ್ರೀನಿವಾಸ್, ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಂಗನಾಯಕಿಯ ಟ್ರೇಲರ್ ಇಂದು ಸೆಪ್ಟೆಂಬರ್ 3ಕ್ಕೆ ಲೋಕಾರ್ಪಣೆಗೊಳ್ಳುತ್ತಿದೆ.
ವಿಶೇಷವೆಂದರೆ ೧೯೮೧ರಲ್ಲಿ ತೆರೆಕಂಡ ‘ರಂಗನಾಯಕಿ’ಯಂತೆಯೇ ಈ ‘ರಂಗನಾಯಕಿ’ ಕೂಡ ಮಹಿಳಾ ಪ್ರಧಾನ ಕಥಾಹಂದರ ಹೊಂದಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳು ಸಮಾಜವನ್ನು ಹೇಗೆ ಎದುರಿಸುತ್ತಾಳೆ ಎಂಬುದು ಚಿತ್ರದ ಪ್ರಧಾನ ಅಂಶ. ‘ಒಳ್ಳೊಳ್ಳೆ ಪಾತ್ರ ಮಾಡಬೇಕು ಎಂದು ಸದಾ ಬಯಸುವ ನನಗೆ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ. ನಮ್ಮ ನಟನಾ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಇದು ಸೂಕ್ತವಾದ ಸಿನಿಮಾ. ರಂಗನಾಯಕಿ ಎಂದರೆ ಹೀರೋಯಿನ್. ನಿಜಜೀವನದಲ್ಲಿ ಯಾರು ನಿಜವಾದ ರಂಗನಾಯಕಿ ಎಂಬುದು ಈ ಚಿತ್ರದಿಂದ ಗೊತ್ತಾಗಲಿದೆ’ ಎಂದಿರುವ ಅದಿತಿ ಈ ಚಿತ್ರದ ಬಗ್ಗೆ ತೀವ್ರವಾದ ಭರವಸೆ ಹೊಂದಿದ್ದಾರೆ. ಈ ಸಿನಿಮಾ ಆರಂಭಕ್ಕೆ ಮುನ್ನ ದಯಾಳ್ ಕಥೆ ಹೇಳಿ ಮುಗಿಸಿದಾಗ ಅದಿತಿ ಕಣ್ಣಲ್ಲಿ ನೀರು ತುಂಬಿಕೊಂಡಿತ್ತಂತೆ. ಹೀಗಾಗಿ ನಟಿಸಲು ತಕ್ಷಣ ಒಪ್ಪಿಕೊಂಡಿದ್ದಾರೆ. ‘ಈ ಕಥೆಯಲ್ಲಿ ಫ್ಯಾಂಟಸಿ ಇಲ್ಲ. ವಾಸ್ತವದ ನೆಲೆಗಟ್ಟಿನಲ್ಲಿ ಇಡೀ ಚಿತ್ರ ಸಾಗಲಿದೆ. ಪ್ರತಿ ಹುಡುಗಿಗೂ ಈ ಸಿನಿಮಾ ಕನೆಕ್ಟ್ ಆಗಲಿದೆ’ ಎಂಬುದು ಅವರ ಅಭಿಪ್ರಾಯ. ಕಳೆದ ಎರಡು ವರ್ಷಗಳಿಂದ ನಟಿಸಿದ ಸಿನಿಮಾಗಳಲ್ಲೆಲ್ಲಾ ಸ್ಕೋರು ಮಾಡುತ್ತಿರುವ ಅದಿತಿಯಂತಾ ನಟಿಗೆ ರಂಗನಾಯಕಿಯ ಪಾತ್ರ ನಿಜಕ್ಕೂ ವರವಾಗಿದೆ.
ಅಂದಹಾಗೆ, ‘ರಂಗನಾಯಕಿ’ ಶೀರ್ಷಿಕೆಯಲ್ಲಿ ಸರಣಿ ಸಿನಿಮಾಗಳನ್ನು ಮಾಡಬೇಕೆಂಬುದು ದಯಾಳ್ ಪ್ಲಾನಾಗಿದೆ. ಮೊದಲ ಚಿತ್ರಕ್ಕೆ ‘ವಾಲ್ಯೂಮ್ ೧ ವರ್ಜಿನಿಟಿ’ ಎಂಬ ಟ್ಯಾಗ್ಲೈನ್ ನೀಡಲಾಗಿದ್ದು, ಇದರ ಟ್ರೇಲರು ನಾಳೆ ಜಗದ ಕಣ್ಮುಂದೆ ತೆರೆದುಕೊಳ್ಳಲಿದೆ.