ತಮ್ಮ ಸ್ಯಾಕ್ಸಫೋನ್ ವಾದನದ ಮೂಲಕ ಜಗತ್ತಿನೆಲ್ಲೆಡೆ ಪ್ರಸಿದ್ಧರಾಗಿರುವ ಕಲಾವಿದ ಕದ್ರಿ ಗೋಪಾಲನಾಥ್. ಅವರ ಪುತ್ರ ಮಣಿಕಾಂತ್ ಕದ್ರಿ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಚಿತ್ರರಂಗದಲ್ಲೂ ಸಂಗೀತ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದಾರೆ. ಪೃಥ್ವಿ, ಸವಾರಿಯಂಥಾ ಸಿನಿಮಾಗಳಿಗೆ ಮಣಿಕಾಂತ್ ಸಂಯೋಜಿಸಿದ ಹಾಡುಗಳು ಯಾವತ್ತಿಗೂ ಕೇಳುಗರ ಕಿವಿಗೆ ಇಂಪಾಗಿಯೇ ಉಳಿಯುವಂಥದ್ದು. ಈಗ ಅದೇ ಪಟ್ಟಿಗೆ ಸೇರ್ಪಡೆಯಾಗುವ ಮತ್ತೊಂದು ಗೀತೆ ರಿಲೀಸಾಗಿದೆ. ಅದು ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ ಚಿತ್ರದ್ದು. ಈ ಚಿತ್ರಕ್ಕೂ ಮಣಿಕಾಂತ್ ಕದ್ರಿ ಅವರೇ ಸಂಗೀತ ಸಂಯೋಜಿಸಿದ್ದಾರೆ.

ವ್ಯಾಸತೀರ್ಥರ ರಚನೆಯ ಈ ಹಾಡನ್ನು ಕನ್ನಡ ನಾಡಿನ ಹೆಮ್ಮೆಯ ಗಾಯಕಿ ಅನನ್ಯಾ ಭಗತ್ ಕರ್ಣಾನಂದಗೊಳಿಸುವ ರೀತಿಯಲ್ಲಿ ಹಾಡಿದ್ದಾರೆ.
ಅಟೆಂಪ್ಟ್ ಟು ಮರ್ಡರ್ ಚಿತ್ರವನ್ನು ನಿರ್ಮಿಸುವ ಮೂಲಕ ಚಿತ್ರರಂಗದಲ್ಲಿ ಪೂರ್ಣಪ್ರಮಾಣದ ನಿರ್ಮಾಪಕರೆನಿಸಿಕೊಂಡವರು ಎಸ್.ವಿ ನಾರಾಯಣ್. ರಂಗನಾಯಕಿ-ವಾಲ್ಯೂಮ್-೧ ‘ವರ್ಜಿನಿಟಿ ಚಿತ್ರ ಕೂಡಾ ಇದೇ ನಾರಾಯಣ್ ನಿರ್ಮಾಣದಲ್ಲಿ ಮೂಡಿಬಂದಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ಈ ಚಿತ್ರದಲ್ಲಿ ಅದಿತಿ ಪ್ರಭುದೇವ, ಎಂ.ಜಿ. ಶ್ರೀನಿವಾಸ್, ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಂಗನಾಯಕಿಯ ಟ್ರೇಲರ್ ಬಿಡುಗಡೆಗೊಂಡು ಸಂಚಲನ ಸೃಷ್ಟಿಸಿತ್ತು. ಈಗ ಈ ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿದೆ. ಕದ್ರಿ ಮಣಿಕಾಂತ್ ಸಂಗೀತ ನೀಡಿರುವ ‘ಕೃಷ್ಣ ನೀ ಬೇಗನೆ ಬಾರೋ ಹಾಡಿನ ಲಿರಿಕಲ್ ವಿಡಿಯೋ ಅನಾವರಣಗೊಂಡಿದೆ. ಕಣಗಾಲ್ ಪುಟ್ಟಣ್ಣನವರ ‘ರಂಗನಾಯಕಿ’ಯಂತೆಯೇ ದಯಾಳ್ ಅವರ ‘ರಂಗನಾಯಕಿ’ ಕೂಡ ನೊಂದ ಯುವತಿಯೊಬ್ಬಳ ಆತ್ಮಕತೆಯಂತೆ ಮೂಡಿಬಂದಿದೆ.

ಯಾರೋ ಮಾಡಿದ ತಪ್ಪಿಗೆ ಸಮಾಜ ಹೆಣ್ಣನ್ನು ಅಪರಾಧಿಯಂತೆ ಕಾಣುತ್ತದೆ. ಅನಿಷ್ಠರ ಕುಕೃತ್ಯಕ್ಕೆ ಮಹಿಳೆ ಈ ಜಗತ್ತಿನಲ್ಲಿ ನಿತ್ಯ ನರಕ ಅನುಭವಿಸುವಂತಾಗುತ್ತದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳೊಬ್ಬಳು ಈ ಸಮಾಜದಲ್ಲಿ ಮತ್ತೆ ಸಹಜವಾಗಿ ಜೀವನ ಮಾಡಲು ಸಾಧ್ಯವಾ? ಎಲ್ಲ ಯಾತನೆಗಳಿಂದ ಹೊರಬಂದು ಆಕೆ ತನ್ನ ಕನಸುಗಳನ್ನು ಆಕೆ ಈಡೇರಿಸಿಕೊಳ್ಳುವಲ್ಲಿ ಸಫಲವಾಗುತ್ತಾಳಾ? ಎಂಬಿತ್ಯಾದಿ ವಿಚಾರಗಳನ್ನು ‘ರಂಗನಾಯಕಿಯ ಮೂಲಕ ಅನಾವರಣಗೊಳಿಸಲಿದ್ದಾರೆ.

ಈಗ ಬಿಡುಗಡೆಯಾಗಿರುವ ಕೃಷ್ಣ ನೀ ಬೇಗನೆ ಬಾರೋ ಹಾಡು ಮೋಹಕವಾಗಿ ಮೂಡಿಬಂದಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಎಲ್ಲೆಡೆ ವೈರಲ್ ಆಗಿರುವ ಈ ಲಿರಿಕಲ್ ವಿಡಿಯೋ ಕೇಳಲು ಮಾತ್ರವಲ್ಲ ನೋಡಲು ಸಹಾ ಅಷ್ಟೇ ಚೆಂದವಾಗಿದೆ.

ಶ್ರೀಮತಿ ಮಂಜುಳಾ ಮತ್ತು ಎಸ್.ವಿ. ಕೃಷ್ಣಮೂರ್ತಿ ಅರ್ಪಿಸಿರುವ ಎಸ್.ವಿ. ಎಸ್ವೀ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಬಿ. ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ, ನವೀನ್ ಕೃಷ್ಣ ಸಂಭಾಷಣೆ, ವೆಂಕಟ್ ದೇವ್ ಸಹನಿರ್ದೇಶನವಿದೆ. ಶ್ರೀನಿ, ಅದಿತಿ ಪ್ರಭುದೇವ ಮತ್ತು ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.