ಕಳೆದ ವರ್ಷ ಸತ್ಯಘಟನೆಯಾಧಾರಿತ ಎಟಿಎಂ ಎಂಬ ಚಿತ್ರವೊಂದು ತೆರೆ ಕಂಡು ಗೆಲುವು ಕಂಡಿತ್ತಲ್ಲಾ? ಅದರ ಮೂಲಕವೇ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದವರು ಎಸ್.ವಿ. ನಾರಾಯಣ್. ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ಘಟನೆಯನ್ನಾಧರಿಸಿ ತೆರೆ ಮೇಲೆ ಮೂಡಿತ್ತು. ಈಗ ನಾರಾಯಣ್ ಅವರು ನಿರ್ಮಿಸಿರುವ ಎರಡನೇ ಸಿನಿಮಾ ರಂಗನಾಯಕಿ.

ಮಾಗಡಿ ತಾಲೂಕಿನ ಸೋಲೂರಿನವರಾದ ನಾರಾಯಣ್ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಯಶಸ್ವೀ ಉದ್ಯಮಿ. ಈ ಕ್ಷೇತ್ರದ ಕೆಲಸದೊತ್ತಡ, ಉದ್ಯಮ ವಿಸ್ತರಿಸುವ ಕಾರ್ಯದಲ್ಲಿ ಕಳೆದು ಹೋಗಿದ್ದ ಅವರ ಪಾಲಿಗೆ ಚಿತ್ರರಂಗವೆಂಬುದು ಆಸಕ್ತಿಯ ಕ್ಷೇತ್ರ. ಎಲ್ಲರಿಗೂ ಬಣ್ಣದ ಜಗತ್ತಿನತ್ತ ಇರುವಂಥಾದ್ದೇ ಬೆರಗಿನ ನೋಟ ಮಾತ್ರವೇ ಅವರದ್ದಾಗಿತ್ತು. ಒಂದು ಚಿತ್ರವನ್ನು ನಿರ್ಮಾಣ ಮಾಡಬೇಕೆಂದಾಗಲಿ, ನಿರ್ಮಾಪಕನಾಗಿ ಗುರುತಿಸಿಕೊಳ್ಳಬೇಕೆಂಬುದಾಗಲಿ ಅವರ ಆಲೋಚನೆಗೂ ಬಂದಿರಲಿಲ್ಲ. ಅಂಥಾ ನಾರಾಯಣ್ ಇನ್ನು ಮುಂದೆ ಒಂದರ ಹಿಂದೊಂದು ಸಿನಿಮಾ ನಿರ್ಮಿಸುವ ಪ್ಲಾನು ನಡೆಸುತ್ತಿದ್ದಾರೆ.

ಉದ್ಯಮಿಯಾಗಿದ್ದ ನಾರಾಯಣ್ ಅವರ ಮುಂದೆ ಎಟಿಎಂ ಚಿತ್ರ ನಿರ್ಮಾಣ ಮಾಡೋ ಆಫರ್ ಬಂದಾಗ ಅವರು ಅದಕ್ಕೆ ಒಪ್ಪಿಕೊಂಡಿದ್ದದ್ದು ಬೇರೆಯದ್ದೇ ಕಾರಣಕ್ಕೆ. ಆ ಕಾಲಕ್ಕೆ ಬೆಂಗಳೂರಿನ ಕಾಪೋರೇಷನ್ ವೃತ್ತದ ಬಳಿ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಭೀಕರ ಹಲ್ಲೆ ದೇಶಾಧ್ಯಂತ ಸದ್ದು ಮಾಡಿತ್ತು. ಜನಸಾಮಾನ್ಯರೂ ಇದರಿಂದ ಬೆಚ್ಚಿ ಬಿದ್ದಿದ್ದರು. ಇದರಿಂದ ಸ್ಫೂರ್ತಿಗೊಂಡ ಸಾಮಾಜಿಕ ಕಳಕಳಿ ಹೊಂದಿರೋ ಕಥೆಯ ಕಾರಣದಿಂದಲೇ ನಾರಾಯಣ್ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರು. ಈಗ ನಾರಾಯಣ್ ಅವರು ನಿರ್ಮಿಸಿರುವ ಎರಡನೇ ಸಿನಿಮಾ ಕೂಡಾ ನೊಂದ ಹೆಣ್ಣೊಬ್ಬಳಿಗೆ ದನಿಯಾಗುವಂಥಾ ಕಥಾ ವಸ್ತುವನ್ನು ಹೊಂದಿದೆ. ದಯಾಳ್ ಪದ್ಮನಾಭನ್ ರಚಿಸಿ, ನಿರ್ದೇಶಿಸಿರುವ ರಂಗನಾಯಕಿ ಅತ್ಯಾಚಾರಕ್ಕೊಳಗಾದ ಹೆಣ್ಣು ಜೀವದ ಕುರಿತ ಸಬ್ಜೆಕ್ಟು. ಅಲ್ಲಿಗೆ ನಾರಾಯಣ್ ಅವರ ನಿರ್ಮಾಣದ ಎರಡೂ ಮಹಿಳಾಪರ ಚಿತ್ರಗಳೇ ಆಗಿವೆ. ವ್ಯಾಪಾರೀ ಸಿನಿಮಾಗಳನ್ನು ಮಾಡಿ ದುಡ್ಡು ಎಣಿಸುವ ಕಡೆ ಹೆಚ್ಚು ಗಮನ ಕೊಡುವ ನಿರ್ಮಾಪಕರ ನಡುವೆ, ಸದಭಿರುಚಿಯ ಕಥಾವಸ್ತುಗಳು ಮತ್ತು ಶೋಷಣೆಗೊಳಗಾದವ ಉಸಿರ ವೇದನೆಯನ್ನು ಸಿನಿಮಾಗಳ ಮೂಲಕ ಪ್ರೇಕ್ಷಕರೆದೆಗೆ ತಾಕಿಸುವ ಪ್ರಯತ್ನ ಮಾಡುತ್ತಿರುವ ನಾರಾಯಣ್ ನಿಜಕ್ಕೂ ಅಭಿನಂದನಾರ್ಹರು.

ಎಸ್ ವಿ ಎಂಟರ್ಟೈನ್ಮೆಂಟ್ ಮೂಲಕ ನಾರಾಯಣ್ ಅವರು ಈಗ ಗಾಂಧಿನಗರದ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಬರುವ ನವೆಂಬರ್ ಒಂದರಂದು ರಂಗನಾಯಕಿ ತೆರೆಮೇಲೆ ಮೂಡಲಿದೆ. ಆ ಚಿತ್ರ ನಾರಾಯಣ್ ಅವರ ಕೈಹಿಡಿಯುವಂತಾಗಲಿ. ಆ ಮೂಲಕ ಇನ್ನು ಸಾಕಷ್ಟು ಸಿನಿಮಾಗಳು ಇವರ ಸಂಸ್ಥೆಯಿಂದ ಹೊರಬರಲಿ ಎಂದು ವಿಜಯದಶಮಿಯ ದಿನ ಹಾರೈಸೋಣ…
No Comment! Be the first one.