ಬಿಗ್ ಬಾಸ್ ನಿಂದ ಹೊರ ಬಂದ ಮೇಲಂತೂ ದಯಾಳ್ ಪದ್ಮನಾಭನ್ ಸ್ವಲ್ಪ ಹೆಚ್ಚೇ ಚಾರ್ಜ್ ಆದಂತಿದೆ. ಬಣ್ಣದ ಲೋಕದಲ್ಲಿ ತಮ್ಮನ್ನು ಇನ್ನಿಲ್ಲದೇ ತೊಡಗಿಸಿಕೊಂಡು ತರ ತರದ ಸಿನಿಮಾಗಳನ್ನು ತೆರೆಗೆ ತರುವತ್ತ ಗಮನಹರಿಸಿರುವ ದಯಾಳ್ ಕಳೆದ ಒಂಬತ್ತು ತಿಂಗಳಲ್ಲಿ ಮೂರು ಸಿನಿಮಾಗಳನ್ನು ರೂಪಿಸಿ ತೆರೆಗೆ ತಂದಿದ್ದಾರೆ. ಸಾಕಷ್ಟು ನಿರ್ದೇಶಕರು ಒಂದು ಜಾನರ್ ನ ಸಿನಿಮಾವನ್ನು ನಿರ್ದೇಶನ ಮಾಡಿದರೆ ಅವರ ಮುಂದಿನ ಸಿನಿಮಾವೂ ಅಂತಹುದೇ ಜಾನರ್ ನ ಸಿನಿಮಾವಾಗಿರುತ್ತದೆ. ಆದರೆ ಆ ವಿಚಾರದಲ್ಲಿ ಕೊಂಚ ವಿಭಿನ್ನವಾಗಿರುವ ದಯಾಳ್ ಪದ್ಮನಾಭನ್ ರ ಮೂರು ಸಿನಿಮಾಗಳು ವೈವಿದ್ಯಮಯ ಶೈಲಿಯಲ್ಲಿ, ವೈಶಿಷ್ಟ್ಯವಾದ ನಿರೂಪಣೆಯಲ್ಲಿ ಹೆಸರು ಮಾಡಿರುವಂತದ್ದು.
ತ್ರಯಂಭಕಂ ಸಿನಿಮಾದ ನಂತರ ಈಗ ಹೊಸ ಸಿನಿಮಾವನ್ನು ಘೋಷಿಸಿರುವ ದಯಾಳ್ ಆ ಚಿತ್ರದ ಟೀಸರ್ ಹಾಗೂ ಟೈಟಲ್ ನ್ನು ಲಾಂಚ್ ಮಾಡಿ ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ. ಅಷ್ಟಕ್ಕೂ ಚಿತ್ರದ ಟೈಟಲ್ ರಿಲೀಸ್ ಮಾಡಿದ್ರೆ ಶಾಕ್ ಯಾಕೆ ಆಗ್ಬೇಕು ಅಂತಿದ್ದೀರಾ?
ಹೇಳ್ತೀವಿ ಕೇಳಿ.. ದಯಾಳ್ ಪದ್ಮನಾಭನ್ ಘೋಷಿಸಿರುವ ಹೊಸ ಸಿನಿಮಾದ ಹೆಸರು ರಂಗನಾಯಕಿ. ಈ ಹೆಸರು ಕೇಳಿದೊಡನೆ ಎಲ್ಲರಿಗೂ ಪುಟ್ಟಣ್ಣ ಕಣಗಾಲ್ ಹಾಗೂ ಅಂಬರೀಶ್, ಆರತಿ ಕಾಂಬಿನೇಷನ್ನಿನ ರಂಗನಾಯಕಿ ಸಿನಿಮಾವೇ ನೆನಪಿಗೆ ಬರುತ್ತದೆ. ಆದರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಚಿತ್ರದಲ್ಲಿ ಬಿಂಬಿಸಿರುವ ಕಥಾ ಹಂದರ ಮಾತ್ರ ಒಂದೇ ಎಂಬುದು ಟೀಸರ್, ಟೈಟಲ್ ನೋಡಿದ ಮೇಲೆ ಕನ್ ಫರ್ಮ್ ಆಗುತ್ತದೆ. ಚಿತ್ರದ ಟೈಟಲ್ ನಲ್ಲಿ ರಂಗನಾಯಕಿ ಎಂದಿದ್ದು, ಅಡಿ ಬರಹದಲ್ಲಿ ವಾಲ್ಯೂಮ್ 1 ವರ್ಜಿನಿಟಿ ಎಂದಿದೆ. ಸದ್ಯ ಇದು ಕೌತುಕಕ್ಕೆ ಕಾರಣವಾಗಿದ್ದು, ಅಂದಿನ ಸಿನಿಮಾದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳು ಸಮಾಜವನ್ನು ಹೇಗೆ ಎದುರಿಸುತ್ತಾಳೆ ಎಂಬುದರ ಕುರಿತಾದ ಕಥೆಯನ್ನು ಹೊಂದಿತ್ತು. ಇದೀಗ ಈ ಚಿತ್ರವೂ ನವನವೀನವಾಗಿ ವಿಭಿನ್ನ ಕಥೆಯೊಂದಿಗೆ ಬರುತ್ತಿದ್ದು, ಚಿತ್ರದ ಅಡಿ ಬರಹ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ.
ರಂಗನಾಯಕಿ ಹುಟ್ಟಿದ್ದು ಹೇಗೆ!
ನಿರ್ಭಯಾ ಪ್ರಕರಣ ನಡೆದ ನಂತರ ದಯಾಳ್ ಒಂದು ಕಾದಂಬರಿಯನ್ನು ಬರೆಯಲು ಆರಂಭಿಸಿದ್ದರಂತೆ. ಕನ್ನಡ ಭಾಷೆ ಗೊತ್ತಿಲ್ಲದ ಕಾರಣ ತಾವು ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ರಚಿಸಿದ್ದರಂತೆ. ಇದನ್ನು ದಯಾಳ್ ಅವರ ಅಸೋಸಿಯೇಟ್ ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ದಯಾಳ್ ಅವರ ಕಾದಂಬರಿ ಆಧಾರಿತವೇ ರಂಗನಾಯಕಿ ತಯಾರಾಗಲಿದೆಯಂತೆ.
ಇನ್ನು ಸಿನಿಮಾ ಟೈಟಲ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಐಜಿ ರೂಪ ಮಾತನಾಡಿ, “ರಂಗನಾಯಕಿ ಹೆಸರು ಕೇಳಿದರೇನೇ ರೋಮಾಂಚನಗೊಳ್ಳುತ್ತದೆ. ನಾನು ನನ್ನ ಐದನೇ ವಯಸ್ಸಿನಲ್ಲಿ ನನ್ನ ತಂದೆ ತಾಯಿಯೊಂದಿಗೆ ಪುಟ್ಟಣ್ಣ ಕಣಗಾಲರ ರಂಗನಾಯಕಿಯನ್ನು ಚಿತ್ರಮಂದಿರದಲ್ಲಿ ನೋಡಿದ್ದೆ. ಈಗ ಅದೇ ಹೆಸರಿನ ಸಿನಿಮಾದ ಆರಂಭೋತ್ಸವಕ್ಕೆ ನಾನು ಅತಿಥಿಯಾಗಿ ಬಂದಿರೋದು ಖುಷಿಯೆನಿಸುತ್ತಿದೆ. ಹೆಣ್ಣುಮಕ್ಕಳ ಪರವಾದ ಸಾಮಾಜಿಕ ಸಂದೇಶ ಈ ಸಿನಿಮಾದ ಮೂಲಕ ಜಗತ್ತಿಗೆ ರವಾನೆಯಾಗಲಿ” ಎಂದು ಹೇಳಿದರು.
ಧೈರ್ಯಂ ಸಿನಿಮಾದ ಮೂಲಕ ಸಿನಿಮಾ ನಾಯಕನಟಿಯಾಗಿ ಎಂಟ್ರಿ ಕೊಟ್ಟಿದ್ದ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಾತ್ರದ ಕುರಿತು ಅಧಿತಿ ಮಾತನಾಡಿ, ಅತ್ಯಾಚಾರದಂತಹ ಅಮಾನವೀಯ ಪ್ರಕರಣಗಳಾದಾಗ ಅದರ ಸುದ್ದಿಗಳನ್ನು ನೋಡಿ ಮನಸ್ಸು ಹಿಂಡುತ್ತದೆ. ಅಂತಹುದೇ ವಿಚಾರವನ್ನು ಫೋಕಸ್ ಮಾಡುವ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳ ಪಾತ್ರದಲ್ಲಿ ನಟಿಸಲಿದ್ದೇನೆ. ಇದು ನಿಜಕ್ಕೂ ಚಾಲೆಂಜಿಂಗ್ ಆದ ಪಾತ್ರ ಎಂದರು.
ಈ ಸಿನಿಮಾದಲ್ಲಿ ನಿರ್ದೇಶಕ ಶ್ರೀನಿ, ತ್ರಿವಿಕ್ರಮ್, ಲಾಸ್ಯಾ, ಶಿವಮಣಿ ಸೇರಿದಂತೆ ಸಾಕಷ್ಟು ಜನ ನಟಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ರಂಗನಾಯಕಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಹಿಂದೆ ಎಟಿಎಮ್ ಸಿನಿಮಾ ನಿರ್ಮಿಸಿದ್ದ ಎಸ್.ವಿ. ನಾರಾಯಣ್ ನಿರ್ಮಿಸುತ್ತಿದ್ದಾರೆ. ರಂಗನಾಯಕಿ ಇದೇ ತಿಂಗಳು 29ರಿಂದ ಚಿತ್ರೀಕರಣವನ್ನು ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಪುಟ್ಟಣ್ಣ ಕಣಗಾಲ್ ಅವರ ರಂಗನಾಯಕಿಯನ್ನು ಮೀರಿಸುವಷ್ಟರ ಮಟ್ಟಿಗೆ ದಯಾಳ್ ಪದ್ಮನಾಭನ್ ಅವರ ರಂಗನಾಯಕಿ ಮೂಡಿಬರಲೆಂದು ಹಾರೈಸೋಣ.
-ಸಚಿನ್ ಕೃಷ್ಣ
No Comment! Be the first one.