ರಶ್ಮಿಕಾ ಮಂದಣ್ಣ ಉಮೇದಿಗೆ ಬಿದ್ದು ಮಾಡುವ ಅವಾಂತರಗಳು ಒಂದೆರಡಲ್ಲ. ಈ ಹಿಂದೆ ಕನ್ನಡದ ಹುಡುಗಿಯಾಗಿದ್ದರೂ ತಮಿಳು ಚಾನೆಲ್ ವೊಂದರಲ್ಲಿ ಕನ್ನಡ ನನಗೆ ಕಷ್ಟ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಹೀಟು ಆರುವ ಮುನ್ನವೇ ಮತ್ತೆ ರಶ್ಮಿಕಾ ಮಂದಣ್ಣ ತಮಿಳು ಚಿತ್ರತಂಡದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯೆಸ್.. ಚಿತ್ರತಂಡದ ಅನುಮತಿಯಿಲ್ಲದೇ ಸಿನಿಮಾ ಶೀರ್ಷಿಕೆಯನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ರಶ್ಮಿಕಾ ವಿರುದ್ಧ ತಮಿಳು ಚಿತ್ರತಂಡ ಕಿಡಿಕಾರಿದೆ.
ಎಸ್ ಆರ್ ಪ್ರಭು ನಿರ್ಮಾಣದ ಇನ್ನೂ ಶೀರ್ಷಿಕೆ ಇಡದ ಚಿತ್ರದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಭಾಗ್ಯರಾಜ್ ಕಣ್ಣನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನೆಪೋಲಿಯನ್, ಯೋಗಿ ಬಾಬು, ಸತೀಶ್ ಸೇರಿದಂತೆ ಮಲಯಾಳಂ ನಟ ಮೋಹನ್ ಲಾಲ್ ಮುಂತಾದವರು ಪಾತ್ರವರ್ಗದಲ್ಲಿದ್ದರು. ಅಲ್ಲದೇ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ನ್ನು ಶೀಘ್ರದಲ್ಲೇ ಭರ್ಜರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಕೂಡ ಮಾಡಿಕೊಟ್ಟಿತ್ತಂತೆ. ಅಷ್ಟರಲ್ಲಾಗಲೇ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ ಸ್ಟಾ ಗ್ರಾಮ್ನಲ್ಲಿ ‘ಸುಲ್ತಾನ್’ ಸಿನಿಮಾ ಚಿತ್ರೀಕರಣ ನಾಲ್ಕನೇ ದಿನ ಎಂದು ಪೋಸ್ಟ್ ಮಾಡಿದ್ದಾರೆ. ಇದರಿಂದ ಚಿತ್ರತಂಡ ರಶ್ಮಿಕಾ ಮಂದಣ್ಣ ವಿರುದ್ಧ ಕೆಂಡಾಮಂಡಲವಾಗಿರುವುದಾಗಿ ಕಾಲಿವುಡ್ ನಲ್ಲಿ ಗುಸು ಗುಸು ಶುರುವಾಗಿದೆ.