ಯಾರ ಬದುಕು ಹೇಗೆ ಕೊನೆಯಾಗುತ್ತದೋ ಗೊತ್ತಾಗುವುದಿಲ್ಲ. ತೀರಾ ಬದುಕಿಬಾಳಬೇಕಾದವರು, ಬೆಳೆದು ಬೆಳಗಬೇಕಿದ್ದವರು ಹಠಾತ್ತನೆ ಕಣ್ಮುಚ್ಚಿದಾಗ ಆಗುವ ನೋವನ್ನು ಸಹಿಸೋದು ಕಷ್ಟ. ಯುವ ಕಲಾ ನಿರ್ದೇಶಕ ರತನ್ ಯಾವ ಸೂಚನೆಯೂ ಕೊಡದೆ ಎದ್ದು ನಡೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುತೇಕ ಸಿನಿಮಾಗಳಿಗೆ ಈಶ್ವರಿ ಕುಮಾರ್ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಸಾರಥಿ ಸೇರಿದಂತೆ ಅನೇಕ ಚಿತ್ರಗಳು ಕುಮಾರ್ ಅವರಿಗೆ ಹೆಸರು ತಂದುಕೊಟ್ಟಿದೆ. ಇಂಥ ಕುಮಾರ್ ಅವರ ಸಹಾಯಕನಾಗಿ ಹಲವಾರು ಚಿತ್ರಗಳಿಗೆ ದುಡಿದಿದ್ದ ಹುಡುಗ ರತನ್ ಗೌಡ. ಕುಮಾರ್ ಅವರ ಸ್ವಂತ ಅಣ್ಣನ ಮಗ ಕೂಡಾ. ಮೂಲತಃ ಚಿಕ್ಕಮಗಳೂರಿನ ಹುಡುಗ. ವಯಸ್ಸು ಹೆಚ್ಚೆಂದರೆ ಇಪ್ಪತ್ತೆಂಟಿರಬಹುದು. ಚಿಕ್ಕಪ್ಪ ಈಶ್ವರಿ ಕುಮಾರ್ ಚಿತ್ರರಂಗದಲ್ಲಿ ದುಡಿಮೆ ಆರಂಭಿಸಿದ್ದರಿಂದ ರತನ್ ಕೂಡಾ ಬಹುಬೇಗ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದ.
ಚಿತ್ರರಂಗದಲ್ಲಿರುವ ಸುಮಾರು ಇಪ್ಪತ್ತೈದು ವಿಭಾಗಗಳಲ್ಲಿ ಸಿಕ್ಕಾಪಟ್ಟೆ ಒತ್ತಡ, ಶ್ರಮದ ಕೆಲಸ ಕಲಾನಿರ್ದೇಶಕರದ್ದು. ಚಿತ್ರೀಕರಣ ನಡೆಯುತ್ತಿರುವುದು ಯಾವ ಕಾಡಿನಲ್ಲೇ ಆದರೂ ನಿರ್ದೇಶಕ ಕೇಳಿದ ಪ್ರಾಪರ್ಟಿಯನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಿಕೊಡಬೇಕು. ಇವರು ಹಗಲು-ರಾತ್ರಿಯೆನ್ನದೆ ದುಡಿದರೆ ಮಾತ್ರ ಚಿತ್ರೀಕರಣ ಸರಾಗವಾಗಿ ನೆರವೇರಲು ಸಾಧ್ಯ.
ಬಹುಶಃ ಒತ್ತಡದ ಜೀವನ ತೀರಾ ಸಣ್ಣ ವಯಸ್ಸಿಗೆ ರತನ್ ಬ್ಲಡ್ ಪ್ರಷರ್ ನಿಯಂತ್ರಣಕ್ಕೆ ಸಿಗಲಾರದಷ್ಟು ಹೆಚ್ಚಿಸಿತ್ತೇನೋ. ಮುಖದ ತುಂಬಾ ನಗುವನ್ನು ಪ್ರತಿಷ್ಠಾಪಿಸಿಕೊಂಡು, ಓಡಾಡುತ್ತಿದ್ದ ಸ್ಪುರದ್ರೂಪಿ ಹುಡುಗ ರತನ್ ನನ್ನು ನೋಡಿದರೆ ಈತನಿಗೆ ಬಿಪಿ ಯಾಕೆ ಬರತ್ತೆ ಅಂತಲೇ ಅನ್ನಿಸುತ್ತಿತ್ತು. ಅಪಾರ ಹಾಸ್ಯ ಪ್ರಜ್ಞೆ ಮೈಗೂಡಿಸಿಕೊಂಡಿದ್ದ ರತನ್ ಸುತ್ತಲಿದ್ದವರನ್ನೂ ನಗಿಸುತ್ತಿದ್ದ. ಮಹಾ ಸಿಡುಕರನ್ನೂ ಮಾತಿಗೆಳೆದು ಮೈ ಮರೆಸುತ್ತಿದ್ದ. ಸಹಾಯಕ ಕಲಾನಿರ್ದೇಶಕನಾಗಿದ್ದುಕೊಂಡೇ ಅವಕಾಶ ಸಿಕ್ಕಾಗ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ರತನ್ ಅಭಿನಯಿಸುತ್ತಿದ್ದ. ಇನ್ನೇನು ತೆರೆಗೆ ಬರಲು ರೆಡಿಯಾಗಿರುವ ಟಕ್ಕರ್ ಸೇರಿದಂತೆ ಸುಮಾರು ಸಿನಿಮಾಗಳಲ್ಲಿ ರತನ್ ಕಾಣಿಸಿಕೊಂಡಿದ್ದಾನೆ. ರತನ್ ಒಳಗೊಬ್ಬ ಅದ್ಭುತ ಹಾಸ್ಯ ನಟನಿದ್ದ. ಪ್ರತಿಭಾವಂತ ಹುಡುಗ ರತನ್ ಯಾವತ್ತಾದರೊಮ್ಮೆ ಸಿನಿಮಾ ನಿರ್ದೇಶನ ಆರಂಭಿಸಬೇಕು ಎನ್ನುವ ಕನಸು ಹೊತ್ತಿದ್ದವನು.
ನಿರ್ದೇಶಕ ದಿನಕರ್ ಅವರ ಎಲ್ಲ ಸಿನಿಮಾಗಳಿಗೂ ಕೆಲಸ ಮಾಡಿದ್ದ ರತನ್, ದಿನಕರ್ ಅವರ ಬಗ್ಗೆ ಭಯ ಭಕ್ತಿಯ ಜೊತೆಗೆ ಅಪಾರ ಪ್ರೀತಿಯನ್ನೂ ಇರಿಸಿಕೊಂಡಿದ್ದ. ‘’ದಿನಕರ್ ಅಣ್ಣನ ಜೊತೆ ಸಿನಿಮಾ ಮಾಡಿದರೆ ಸಾಕು ಸಲೀಸಾಗಿ ಕೆಲಸ ಕಲಿತುಬಿಡಬಹುದು.’’ ಅಂತಾ ಹೇಳಿಕೊಳ್ಳುತ್ತಿದ್ದ. ದರ್ಶನ್ ಅವರ ಅಭಿಮಾನಿಯಾಗಿದ್ದ ರತನ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತಿರುವುದು ತನ್ನ ಪುಣ್ಯ ಅಂತಾ ಭಾವಿಸಿದ್ದ. ಇಂಥ ಹುಡುಗ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಬಿಡುಗಡೆಯ ದಿನವೇ ಇಹಲೋಕ ತ್ಯಜಿಸಿದ್ದಾನೆ.
ಅತಿಯಾದ ಬಿಪಿಯ ಕಾರಣಕ್ಕೆ ಕಳೆದೊಂದು ತಿಂಗಳ ಹಿಂದೆ ಸ್ಟ್ರೋಕ್ ಆಗಿತ್ತಂತೆ. ಈಗ ರತನ್ ಇಹಲೋಕ ತ್ಯಜಿಸಿದ್ದಾನೆ. ಚಿಕ್ಕಮಗಳೂರಿನಲ್ಲೇ ಅಂತ್ಯ ಸಂಸ್ಕಾರ ನೆರವೇರಿದೆ. ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ರತನ್ ಗೆ ಎರಡು ವರ್ಷದ ಪುಟಾಣಿ ಮಗುವೂ ಇದೆ.
No Comment! Be the first one.