ಅಮೆರಿಕಾ ಕನ್ನಡಿಗರ ಟೀಮ್ ಜೊತೆಯಲ್ಲಿ ನವ ನಾಯಕ ರಾಜ್ ಚರಣ್ ಹಾಗೂ ಅಖಿಲಾ ಪ್ರಕಾಶ್ ಜೊತೆಯಾಗಿ ನಟಿಸಿರೋ ರತ್ನಮಂಜರಿ ಚಿತ್ರದ ‘ಬಾರೇ ಸುಂದರಿಯೇ ಕೊಡಗಿನ ಸಿರಿಯೇ’ ಅನ್ನೋ ವಿಡಿಯೋ ಸಾಂಗ್ ಯೂಟ್ಯೂಬ್ ನಲ್ಲಿ ಟ್ರೆಡಿಂಗ್ ನಲ್ಲಿದೆ. ಕೇವಲ ಮೂರೇ ದಿನದಲ್ಲಿ ಒಂದು ಮಿಲಿಯನ್(10 ಲಕ್ಷ) ವೀಕ್ಷಣೆ ಗಳಿಸಿದ್ದು, ಸಂಗೀತ ಪ್ರಿಯರಿಗೆ ಮುದ ನೀಡುತ್ತಿದೆ. ಕಳೆದ ವಾರ ಈ ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ‘ಬಾರೇ ಸುಂದರಿಯೇ’ ಹಾಡು ಹೆಚ್ಚು ಸದ್ದು ಮಾಡುತ್ತಿದೆ. ಪ್ರಸನ್ನ ಭೋಜಶೆಟ್ಟರ್ ಬರೆದಿರೋ ಲಿರಿಕ್ಸ್ಗೆ ಹರ್ಷವರ್ಧನ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ವಿಜಯ್ ಪ್ರಕಾಶ್ ಕಂಠದಲ್ಲಿ ಈ ಸಾಂಗ್ ಅದ್ಭುತವಾಗಿ ಮೂಡಿಬಂದಿದೆ. ಹಾಡಿನಲ್ಲಿ ಕೊಡವರ ವೇಷ ಭೂಷಣದ ಜೊತೆ ಅದ್ಭುತ ಮೇಕಿಂಗ್ ಇನ್ನಷ್ಟು ಮೆರಗುಗೊಳಿಸಿದೆ. ಇದೊಂದು ಮರ್ಡರ್ ಮಿಸ್ಟರಿ ಚಿತ್ರವಾಗಿದ್ದು ದೇವರು, ದೆವ್ವ, ಅಪರಾಧ ಈ ಮೂರು ಅಂಶಗಳ ಸುತ್ತ ಕಥೆ ಹೆಣೆಯಲಾಗಿದೆ.
ಚಿತ್ರಕ್ಕೆ ಕರ್ನಾಟಕದ ಮಡಿಕೇರಿ ಭಾಗ ಸೇರಿದಂತೆ ವಿದೇಶಗಳಲ್ಲೂ ಚಿತ್ರೀಕರಣ ನಡೆದಿದೆ. ವಿಶೇಷವೆಂದರೆ ಚಿತ್ರ ಅಮೇರಿಕಾದ ಒಂದು ಭಾಗದಲ್ಲಿ ನಡೆದ ನೈಜ ಘಟನೆ ಆಧರಿಸಿದ್ದಾಗಿದೆ. ಇನ್ನು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ವಸಿಷ್ಟ ಸಿಂಹ ಕೂಡ ಒಂದೊಂದು ಹಾಡನ್ನು ಹಾಡಿದ್ದಾರೆ. ರತ್ನಮಂಜರಿಗೆ ಪ್ರಸಿದ್ದ್ ಆ್ಯಕ್ಷನ್ ಕಟ್ ಹೇಳಿದ್ದಾರೆ.