ರತ್ನಮಂಜರಿ ಸೂಪರ್ ಹಿಟ್ ಸಿನಿಮಾ ಆಗುವುದರಲ್ಲಿ ಡೌಟೇ ಇಲ್ಲ!
ಸದ್ಯಕ್ಕೆ ಸೋಶಿಯಲ್ ಮೀಡಿಯಾ ಬಹಳಷ್ಟು ಮಂದಿಯ ಬಾಳು ಹಾಳಾಗಲೂ ಕಾರಣವಾದ್ರೆ, ಮತ್ತೂ ಕೆಲವರ ಬದುಕು ಹಸನಾಗಲೂ ಒಂದು ಪ್ಲಾಟ್ ಫಾರ್ಮ್ ಕೂಡ. ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡಬೇಕೆನ್ನುವ ಮಂದಿಗೆ ಫೇಸ್ ಬುಕ್ಕು, ಇನ್ ಸ್ಟಾಗ್ರಾಮ್ ವರದಾನವಾಗಿದೆ. ಸಾಕಷ್ಟು ಹೊಸ ಮುಖಗಳನ್ನು ಸೋಶಿಯಲ್ ಮೀಡಿಯಾದ ಮೂಲಕವೇ ಸೆಲೆಕ್ಟ್ ಮಾಡಿ, ಆಯ್ಕೆ ಮಾಡಿಕೊಳ್ಳುತ್ತಲೇ ಇದ್ದಾರೆ. ಈ ಪೈಕಿ ಮರ್ಡರ್ ಮಿಸ್ಟರಿ ರತ್ನಮಂಜರಿ ಸಿನಿಮಾದ ನಾಯಕ ರಾಜ್ ಚರಣ್ ಕೂಡ ಒಬ್ಬರು.
ಮೂಲತಃ ಬೆಂಗಳೂರಿನವರೇ ಆಗಿರುವ ರಾಜ್ ಚರಣ್ ಮೆಕಾನಿಕಲ್ ಇಂಜಿನಿಯರ್ ಆಗಿದ್ದವರು. ಬಣ್ಣದ ಲೋಕದ ಮೇಲೆ ಆಕರ್ಷಿತರಾಗಲು ಸ್ನೇಹಿತ ಸಂಜಿತ್ ನಾಗರಾಜ್ ಕಾರಣವೆನ್ನುತ್ತಾರೆ. ಆ ನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ತರಬೇತಿಯನ್ನು ಪಡೆಯಲು ಸೇರಿದ ಅವರು, ತರಬೇತಿಯ ನಂತರ ಸಿನಿಮಾಗಳಿಗೆ ಆಡಿಷನ್ ಕೊಡಲು ಮುಂದಾದರು. ಆದರೆ ಸಿನಿಮಾ ಲೋಕಕ್ಕಿನ್ನು ಹೊಸ ಮುಖವಾಗಿದ್ದ ರಾಜ್ ಚರಣ್ ಗೆ ಬೆಂಬಲದ ಕೊರತೆ ಕಾಡುತ್ತಿತ್ತು. ಈ ಮಧ್ಯೆ ರಾಜ್ ಚರಣ್ ಗೆ ಫೇಸ್ ಬುಕ್ ನಿಂದಲೇ ರತ್ನಮಂಜರಿಯ ಆಫರ್ ದೊರೆತಿದ್ದಂತೆ. ರತ್ನಮಂಜರಿ ನಿರ್ದೇಶಕ ಪ್ರಸಿದ್ದ್ ರವರೇ ರಾಜ್ ಚರಣ್ ಅವರನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ, ರತ್ನಮಂಜರಿಯ ಕುರಿತಾದ ಹಿಂಟ್ ಗಳನ್ನು ಹೇಳಿದ್ದರಂತೆ. ಪ್ರಾರಂಭದಲ್ಲಿ ಇದಾವುದನ್ನು ನಂಬದ ರಾಜ್ ಚರಣ್ ಮುಂದೆ ನಂಬುವಂತೆಯೂ ಆಗಿದ್ದು ವಿಶೇಷ.
ಅಮೆರಿಕಾದ ಎನ್ ಆರ್ ಐ ಗಳಾಗಿದ್ದ ನಟರಾಜ್ ಹಳೇಬೀಡು, ಡಾ. ನವೀನ್ ಜೊತೆ ಸೇರಿ ಸಂದೀಪ್ ಎಸ್ ಎನ್ ಎಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ರತ್ನಮಂಜರಿಯನ್ನು ತಯಾರಿಸಿದ್ದು, ಮೊದಲು ಸಿನಿಮಾಕ್ಕಾಗಿ ಬಹುತೇಕ ಎನ್ ಆರ್ ಐ ಕನ್ನಡಿಗರನ್ನೇ ಆಯ್ಕೆ ಮಾಡುವ ಪ್ಲ್ಯಾನ್ ನಲ್ಲಿದ್ದರಂತೆ. ಪ್ರೊಫೈಲ್ ಇಷ್ಟವಾದರೂ ರಾಜ್ ಚರಣ್ ಅವರನ್ನು ಪೆಂಡಿಂಗ್ ನಲ್ಲೂ ಇಟ್ಟಿದ್ದರಂತೆ. ಕೊನೆಗೆ ನಾಯಕನ ಪಾತ್ರಕ್ಕೆ ಎನ್ ಆರ್ ಐ ಕನ್ನಡಿಗರಾರು ಸೂಟ್ ಆಗದ ಕಾರಣ ಅಂತಿಮವಾಗಿ ರಾಜ್ ಚರಣ್ ಅವರನ್ನೇ ಫೈನಲ್ ಮಾಡಿದ್ದುಂಟು. ಸಿನಿಮಾ ಇನ್ನೇನು ಪ್ರಾರಂಭವಾಗಬೇಕೆನ್ನುವಾಗ ನಿರ್ದೇಶಕ ಪ್ರಸಿದ್ದ್ ರಾಜ್ ಚರಣ್ ಅವರಿಗೆ ರತ್ನಮಂಜರಿ ಮುಗಿಯುವವರೆಗೂ ಮತ್ತಾವುದೇ ಸಿನಿಮಾಗಳಲ್ಲಿ ನಟಿಸುವುದಾಗಲಿ, ಕಮಿಟ್ ಆಗುವುದಾಗಲಿ ಮಾಡಬಾರದೆನ್ನುವ ಕಂಡೀಷನ್ ನ್ನು ಹಾಕಿದ್ದರಂತೆ.ಅದೇ ಸಮಯಕ್ಕೆ ಆಫರ್ ಗಳು ಬರುವುದೂ ಹೆಚ್ಚಾಗಿತ್ತಂತೆ. ಪ್ರಾರಂಭದಲ್ಲಿ ಈ ಷರತ್ತಿಗೆ ಸಮ್ಮತಿ ಇಲ್ಲದ ರಾಜ್ ಚರಣ್ ಗೆ ರತ್ನಮಂಜರಿ ಸಿನಿಮಾದ ಕಥೆಯೇ ಹ್ಞೂಂ ಗುಟ್ಟುವಂತೆ ಮಾಡಿದ್ದು ಶಾಕಿಂಗ್ ವಿಚಾರ.
ಸತ್ಯ ಘಟನೆಯಾದಾರಿತ ಎಳೆಯೊಂದನ್ನಿಟ್ಟುಕೊಂಡು ತಯಾರಾಗಿರುವ ರತ್ನ ಮಂಜರಿ ಅಮೆರಿಕಾದಲ್ಲಿ ನಡೆದಿದ್ದ ಕೊಲೆ ಕಥೆಯೊಂದನ್ನು ಆಧರಿಸಿದೆ. ಹಾಗಂತ ಸಂಪೂರ್ಣ ಮರ್ಡರ್ ಮಿಸ್ಟರಿ ಜಾನರ್ ಗೆ ತಗುಲಿಕೊಳ್ಳದೇ ಪ್ರೇಕ್ಷಕರು ಚಕಿತಗೊಳಿಸುವ ಸಾಕಷ್ಟು ಸೀಕ್ರೆಟ್ ಗಳನ್ನು ರತ್ನಮಂಜರಿ ಹೊಂದಿರುವುದು ವಿಶೇಷ. ಸಿನಿಮಾದ ಕೆಲವೊಂದು ಭಾಗವನ್ನು ವಿದೇಶದಲ್ಲಿ ಚಿತ್ರೀಕರಿಸಿದ್ದು, ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಸಲಾಗಿದೆ. ಸಿನಿಮಾಗೆ ತಕ್ಕ ಲೊಕೇಷನ್ನುಗಳನ್ನೇ ಸೆಲೆಕ್ಟ್ ಮಾಡಿಕೊಂಡಿರುವ ಚಿತ್ರತಂಡ ಡಿಫರೆಂಟ್ ಸ್ಟೈಲ್ ನಲ್ಲಿ ಮೂಡಿಬಂದಿದೆ ಎನ್ನುತ್ತಾರೆ ರಾಜ್ ಚರಣ್.
ರತ್ನಮಂಜರಿಯ ಬಗ್ಗೆ ಬಹಳಷ್ಟು ಭರವಸೆಯನ್ನಿಟ್ಟುಕೊಂಡಿರುವ ರಾಜ್ ಚರಣ್, ಪ್ರೇಕ್ಷಕರಿಗೆ ಸಿನಿಮಾ ಎಲ್ಲಿಯೂ ಬೋರಾಗುವಂತೆ ಮಾಡದೇ ಅವರು ಬಯಸಬಹುದಾದ ಎಲ್ಲ ಎಲಿಮೆಂಟುಗಳನ್ನು ಬೇಕಂತಲೇ ತುರುಕದೇ ಸನ್ನಿವೇಶಕ್ಕೆ, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ರತ್ನಮಂಜರಿಗೆ ಕಥೆಯೇ ಜೀವಾಳವಾಗಿದ್ದು, ಕಥೆಯೇ ಮೊದಲ ಹೀರೋ ಎನ್ನುತ್ತಾರೆ ಅವರು. ಅಲ್ಲದೇ ಚೊಚ್ಚಲ ಚಿತ್ರದಲ್ಲಿಯೇ ನಿರ್ದೇಶಕರು ರಾಜಕಿರಣ್ ಗೆ ಸುಮಾರು ಶೇಡ್ ಗಳಲ್ಲಿ ತೋರಿಸುವ ಪ್ರಯತ್ನವನ್ನು ಮಾಡಿದ ನಿರ್ದೇಶಕರ ಧೈರ್ಯ ಮೆಚ್ಚಲೇಬೇಕು.
ಇನ್ನು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ವಸಿಷ್ಟ ಸಿಂಹ, ವಿಜಯ್ ಪ್ರಕಾಶ್ ಕೂಡ ಒಂದೊಂದು ಹಾಡನ್ನು ಹಾಡಿದ್ದು, ರತ್ನಮಂಜರಿಗೆ ಹರ್ಷವರ್ಧನ ರಾಜ್ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ. ರತ್ನಮಂಜರಿಯ ಎಲ್ಲ ಹಾಡುಗಳನ್ನ ಕೆ.ಕಲ್ಯಾಣ್ ಬರೆದಿದ್ದಾರೆ. ಪ್ರೀತಂ ತೆಗ್ಗಿನಮನೆ ಅವರ ಛಾಯಾಗ್ರಹಣ ಕೂಡ ರತ್ನಮಂಜರಿಗಿದೆ. ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ ರತ್ನ ಮಂಜರಿಗೆ ಸಾಹಸ ಸಂಯೋಜನೆಯನ್ನು ಮಾಡಿರುವುದು ವಿಶೇಷವಾಗಿದೆ. ಇನ್ನು ರಾಜ್ ಚರಣ್ ಗೆ ನಾಯಕಿಯರಾಗಿ ಅಖಿಲಾ ಪ್ರಕಾಶ್ ಮತ್ತು ಪಲ್ಲವಿರಾಜ್ ನಟಿಸಿದ್ದಾರೆ. ಅಂದಹಾಗೆ ಕಳೆದ ಆಗಸ್ಟ್ ತಿಂಗಳಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಾಡಿದ್ದ ಹಾಡೊಂದು ಅಕ್ಕ ಸಮ್ಮೇಳನದಲ್ಲಿ ಬಿಡುಗಡೆಯಾಗಿತ್ತು. ಈ ಮೂಲಕ ವಿದೇಶದಲ್ಲಿ ಆಡಿಯೋ ಲಾಂಚ್ ಮಾಡಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ರತ್ನಮಂಜರಿ ಪಾತ್ರವಾಗಿದೆ.
ತಾಂತ್ರಿಕವಾಗಿಯೂ ಈ ಚಿತ್ರ ಶ್ರೀಮಂತಿಕೆಯಿಂದ ಕೂಡಿದ್ದು, ವಿದೇಶದಲ್ಲಿಯೇ ಇದರ ಸಿಜಿ ಸೇರಿದಂತೆ ಅನೇಕ ಕಾರ್ಯಗಳು ನಡೆದಿವೆ. ಅದಕ್ಕೆ ಹಾಲಿವುಡ್ ಚಿತ್ರಗಳ ತಂತ್ರಜ್ಞರೇ ಕಾರ್ಯ ನಿರ್ವಹಿಸಿದ್ದಾರೆ. ಆದ್ದರಿಂದಲೇ ರೊಮ್ಯಾಂಟಿಕ್ ಥ್ರಿಲ್ಲರ್ ಕಥಾನಕ ಹೊಂದಿರೋ ರತ್ನಮಂಜರಿ ಹಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂತೆ ಮೂಡಿ ಬಂದಿದೆ ಎಂಬ ಭರವಸೆಯಲ್ಲಿದ್ದಾರೆ ರಾಜ್ ಚರಣ್. ಇನ್ನು ರತ್ನಮಂಜರಿಯ ನಂತರ ರಾಜ್ ಚರಣ್ ಗೆ ಕನ್ನಡ, ತೆಲುಗು ಭಾಷೆಗಳಲ್ಲಿ ಬಹಳಷ್ಟು ಆಫರ್ ಬಂದಿದ್ದು, ಮೂರು ಕಥೆಗಳನ್ನು ರಾಜ್ ಚರಣ್ ಓಕೆ ಅಂದಿದ್ದು, ಸದ್ಯದಲ್ಲಿಯೇ ಚಿತ್ರದ ಕುರಿತು ಮಾಹಿತಿ ತಿಳಿಸಲಿದ್ದಾರೆ. ಚೊಚ್ಚಲ ಸಿನಿಮಾ ರತ್ನಮಂಜರಿಯ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪದಾರ್ಪಣೆ ಮಾಡಲಿರುವ ರಾಜ್ ಚರಣ್ ಗೆ ಶುಭಾಶಯಗಳನ್ನು ಕೋರುತ್ತಾ, ಮತ್ತಷ್ಟು ವೈವಿದ್ಯಮಯ, ಡಿಫರೆಂಟ್ ಕಥಾಹಂದರದ ಸಿನಿಮಾಗಳಲ್ಲಿ ನಟಿಸುವಂತಾಗಲಿ ಎಂದು ಸಿನಿಬಜ್ ಹಾರೈಸುತ್ತದೆ.
No Comment! Be the first one.