ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಸಿನಿಮಾ ಇನ್ನೇನು ಥೇಟರಿಗೆ ತರಬೇಕೆನ್ನುವಷ್ಟರಲ್ಲಿ ಶುರುವಾಗುತ್ತವೆ ಅಸಲಿ ಆಟ.
ನೀತಿ ನಿಯತ್ತಿನಿಂದ ಕೆಲಸ ಮಾಡೋ ಜಾಹೀರಾತು ಸಂಸ್ಥೆಗಳು, ವಾಹಿನಿಗಳು ಮತ್ತು ಮಾಧ್ಯಮದ ಜಾಹೀರಾತು ಮುಖ್ಯಸ್ಥರು, ಆನ್ಲೈನ್ ಮಾರ್ಕೆಟಿಂಗ್ ಟೀಮ್ಗಳು ಒಂದು ಕಡೆಯಾದರೆ ಮೀಡಿಯಾ ನೆಟ್’ನಲ್ಲೇ ಅಫಿಷಿಯಲ್ಲಾಗಿ ಕುಂತು ಅನ್ ಅಫಿಷಿಯಲ್ ಡೀಲು ಕುದುರಿಸುವ ಖದೀಮರು, ಸಗಣಿ ಹುಳಗಳಂತೆ ಹುಟ್ಟಿಕೊಂಡಿರುವ ಆನ್’ಲೈನ್ ಎಂದರೇನು ಅಂತಲೇ ಗೊತ್ತಿಲ್ಲದ ಆಫ್ಲೈನ್ ವಂಚಕರು, ಪಬ್ಲಿಸಿಟಿ ಹೆಸರಲ್ಲಿ ನಿರ್ಮಾಪಕರ ತಲೆ ಹೊಡೆಯಲು ನಿಂತ ಫ್ರಾಡುಗಳ ಹಾವಳಿ ಮತ್ತೊಂದು ಕಡೆ. ಈ ವೆರೈಟಿ ವೆರೈಟಿ ಜನರ ಮಧ್ಯೆ ಉತ್ತಮರು ಯಾರು ಕಳ್ಳರು ಯಾರು ಅನ್ನೋದನ್ನು ನಿರ್ಧರಿಸೋದೇ ಚಿತ್ರ ನಿರ್ಮಾಪಕರಿಗೆ ಕಷ್ಟವಾಗಿ ಹೋಗುತ್ತದೆ. ಹಾಗೆ ನಿರ್ಧರಿಸೋ ಹೊತ್ತಿಗೆ ಅರಮನೆ ಹೊತ್ತಿ ಉರಿದಂತೆ ಕಷ್ಟಪಟ್ಟು ನಿರ್ಮಿಸಿದ ಸಿನಿಮಾ ಮಣ್ಣು ಮುಕ್ಕಿಬಿಟ್ಟಿರುತ್ತದೆ. ಹೊಸಬರು, ಹಳಬರೆನ್ನದೆ ಎಲ್ಲ ನಿರ್ಮಾಪಕರನ್ನೂ ಕಾಡುತ್ತಿರುವ ಭಯಾನಕ ಸಮಸ್ಯೆಯಿದು.
ಕಳೆದ ಎರಡು ವರ್ಷಗಳಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರನ್ನು ಇನ್ನಿಲ್ಲದಂತೆ ಬೋಳಿಸಿದ ವಿಶಾಲ್ ಮತ್ತು ಸ್ನೇಹಾ ಮ್ಯಾಥ್ಯೂಸ್ ಬಗ್ಗೆ ಸಿನಿಬಜ್ ಈಗಾಗಲೇ ಸಾಕಷ್ಟು ಬರೆದಿದೆ. ಈ ಇಬ್ಬರನ್ನೂ ಮೀರಿಸುವ ಮತ್ತೊಬ್ಬ ಮಹಾನ್ ಫ್ರಾಡೀಗ ಜನ್ಮವೆತ್ತಿದ್ದಾನೆ. ಸಿಕ್ಕಸಿಕ್ಕ ನಿರ್ಮಾಪಕರನ್ನು ಸುಲಿದು ತಿನ್ನಲು ಗಾಂಧಿನಗರವೆಂಬ ಪಡಸಾಲೆಯಲ್ಲಿ ಪದ್ಮಾಸನ ಹಾಕಿ ಕುಂತ ಆ ಫ್ರಾಡ್ ಹೆಸರು ರಾವಣ!
ಈತನ ಮೂಲ ನಾಮಧೇಯ ಕರುಣಾಕರ ಟಿ.ಎನ್. ಸರಿಸುಮಾರು ಹತ್ತು ವರ್ಷಗಳ ಹಿಂದೆ ಗ್ರೂಪ್ ಡ್ಯಾನ್ಸರ್ ಆಗಿದ್ದವನು. ಆ ನಂತರ ಸಿನಿಮಾ ನೃತ್ಯ ನಿರ್ದೇಶಕನಾಗಿ ಅವತಾರವೆತ್ತಿದ್ದ. ನೃತ್ಯ ನಿರ್ದೇಶಕರ ಒಕ್ಕೂಟದಿಂದ ಈತನಿಗೆ ಕಾರ್ಡು ಕೊಟ್ಟಿರಲಿಲ್ಲ. ಹೀಗಾಗಿ ಅದನ್ನೂ ಬಿಟ್ಟು ಸಿನಿಮಾ ನಿರ್ಮಾಣ ಮಾಡ್ತೀನಿ ಅಂತಾ ನಿರ್ಮಾಪಕನ ವೇಷವನ್ನೂ ಹಾಕಿಬಿಟ್ಟ. ಸೋಮಶೇಖರ್ ಮತ್ತು ಪವಿತ್ರಾ ಅನ್ನುವವರನ್ನು ಹಿಡಿದ ನೀವು ಅರ್ಧ ದುಡ್ಡು ಹಾಕಿ, ಮಿಕ್ಕಿದ್ದನ್ನು ಇನ್ ಬ್ರಾಂಡಿಂಗ್ ಮಾಡಿಸ್ತೀನಿ. ನನ್ನನ್ನೂ ಸಹ ನಿರ್ಮಾಪಕನನ್ನಾಗಿ ಮಾಡಿಕೊಳ್ಳಿ ಅಂದ. ಇವನ ಕಲರ್ ಕಲರ್ ಮಾತನ್ನು ನಂಬಿ ಯಾಮಾರಿದವರು ಒಬ್ಬಿಬ್ಬರಲ್ಲ. ಸಣ್ಣ ಪುಟ್ಟ ಬಜೆಟ್ಟಿನ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿಕೊಂಡು ನೆಮ್ಮದಿಯಾಗಿದ್ದ ಕೆ.ಎಂ. ಇಂದ್ರಾ ಅವರಿಗೆ ಈ ಸಿನಿಮಾಗೆ ನೀವೇ ಡೈರೆಕ್ಟ್ರು ಅಂದ.
ನೆನಪಿರಲಿ ಪ್ರೇಮ್ಗೆ ಅಡ್ವಾನ್ಸ್ ಕೊಡಿಸಿ `ವೆಂಕ್ಟೇಸ ಲೋಕಲ್’ ಅನ್ನೋ ಸಿನಿಮಾವನ್ನೂ ಶುರು ಮಾಡಿದ. ಶ್ರೀ ಲಲಿತಾಂಬಿಕಾ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ, ನೆ.ಲ. ನರೇಂದ್ರ ಬಾಬು ಅರ್ಪಿಸಲಿರುವ `ವೆಂಕ್ಟೇಸ ಲೋಕಲ್’ ಹೆಸರಿನ ಸಿನಿಮಾದ ಪೋಸ್ಟರು ರಾರಾಜಿಸಿಬಿಟ್ಟಿತು. ಬರೀ ಪೋಸ್ಟರಿನಲ್ಲೇ ಸಿನಿಮಾ ತೋರಿಸಿದ ಕರುಣಾಕರ ದುಡ್ಡು ಹಾಕಿದ್ದ ಸೋಮಶೇಖರ್ ಜೊತೆಗಿದ್ದೇ ಮಿಣ್ಣಗೆ ನುಲಿಯುತ್ತಾ ಅವರನ್ನು ನುಣ್ಣಗೆ ಮಾಡಿದ್ದ.
ಕೆ.ಎಂ.ಇಂದ್ರಾ ಇದ್ದ ಸಂಗೀತದ ಕೆಲಸವನ್ನೂ ಬಿಟ್ಟು ಈ ಸಿನಿಮಾಗಾಗಿ ತಿಂಗಳುಗಟ್ಟಲೆ ದುಡಿದು ಹೈರಾಣಾದರು. ನೆನಪಿರಲಿ ಪ್ರೇಮ್ ಆ ಕಾಲಕ್ಕೆ ಒಂಚೂರು ಓಡೋ ಹೀರೋ ಬೇರೆ. ಈ ಸಿನಿಮಾದ ನಂತರ ನನ್ನ ನಸೀಬು ಬದಲಾಗುತ್ತದೆ ಅಂದುಕೊಂಡಿದ್ದ ಇಂದ್ರಾ ಆ ನಂತರ ಮತ್ತೆ ಮ್ಯೂಸಿಕ್ಕಿನ ಕೆಲಸವನ್ನೇ ಕಣ್ಣಿಗೊತ್ತಿಕೊಂಡು ಮಾಡುವಂತಾಯಿತು. ಹೀಗೆ ನಿರ್ಮಾಪಕನ ವೇಷ ಕಳಚಿದ ಕರುಣಾಕರ ನಂತರ ಇಂದ್ರಜಿತ್ ಲಂಕೇಶ್ ಸೇರಿದಂತೆ ಸಾಕಷ್ಟು ಜನ ನಿರ್ದೇಶಕರ ತಲೆ ಸವರಿದ. ಸಿನಿಮಾದಲ್ಲಿ ಪಬ್ಲಿಸಿಟಿ ಕೊಡಿಸ್ತೀನಿ ಅಂತಾ ಜಿ.ಆರ್.ಎಸ್ ಫ್ಯಾಂಟಸಿ ಪಾರ್ಕ್ನವರಿಗೆ ಐವತ್ತ್ತು ಲಕ್ಷ ಮುಂಡಾಯಿಸಿದ.
ಇದಾಗುತ್ತಿದ್ದಂತೇ ಕರುಣಾಕರನ ವಂಚಕ ಪುರಾಣ ಗಾಂಧಿನಗರದ ಉದ್ದಗಲಕ್ಕೂ ಹಬ್ಬಿತು. ಇನ್ನು ಇಲ್ಲಿದ್ದರೆ ಸಿನಿಮಾ ಜನ ಅಟ್ಟಾಡಿಸಿ ಮೆಟ್ಟಲ್ಲಿ ಹೊಡೀತಾರೆ ಅನ್ನೋದು ಖುದ್ದು ಕರುಣಾಕರನಿಗೆ ಖಾತ್ರಿಯಾಗಿ ಹೋಯಿತು. ಅಷ್ಟರಲ್ಲಾಗಲೇ ಯಾಮಾರಿಸಿಟ್ಟುಕೊಂಡಿದ್ದ ಕೋಟಿಗಟ್ಟಲೆ ದುಡ್ಡಿತ್ತಲ್ಲಾ? ಅದನ್ನೆಲ್ಲಾ ತೆಗೆದುಕೊಂಡು ಬೆಂಗಳೂರು ಬಿಟ್ಟವನು ಸೀದಾ ಶ್ರೀಲಂಕಾಗೆ ಹೋಗಿ ಸೆಟಲ್ ಆಗಿಬಿಟ್ಟ.
ಹಾಗೆ ಶ್ರೀಲಂಕಾಗೆ ಹೋದವನು ಮತ್ತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು `ರಾವಣ್ ಕೆ.ಆರ್.’ ಅನ್ನೋ ಹೆಸರಿನಲ್ಲಿ. ನಾಲ್ಕಾರು ವರ್ಷ ನಾಪತ್ತೆಯಾಗಿದ್ದ ಕರುಣಾಕರ್ ಟಿ.ಎನ್. ಮತ್ತೆ ಕಾಣಿಸಿಕೊಳ್ಳೋ ಹೊತ್ತಿಗೆ ಚಹರೆಯೂ ಬದಲಾಗಿಬಿಟ್ಟಿತ್ತು. ನರಪೇತಲನಂತಿದ್ದ ಹುಡುಗ ಕರುಣಾಕರ ಗುಂಡಗುಂಡಗೆ ಯಾರೂ ಕಂಡುಹಿಡಿಯಲೂ ಸಾಧ್ಯವಾಗದಷ್ಟು ಬದಲಾಗಿ ಹೋಗಿದ್ದ. ಇವತ್ತಿಗೂ `ಆವತ್ತು ಎಲ್ಲರಿಗೂ ಉಂಡೆ ನಾಮ ತಿಕ್ಕಿ ಹೋಗಿದ್ದ ಕರುಣಾಕರನೇ ಈ ರಾವಣ’ ಅನ್ನೋದು ಯಾರಿಗೂ ಗೊತ್ತೇ ಆಗಿಲ್ಲ. ರಾವಣನ ಗೆಟಪ್ಪಿನಲ್ಲಿ ಬಂದ ಕರುಣಾಕರ ಜೆ.ಡಬ್ಯ್ಲು ಮ್ಯಾರಿಯೇಟ್ ಎನ್ನುವ ಸ್ಟಾರ್ ಹೋಟೆಲಿನಲ್ಲಿ ಪ್ರತ್ಯಕ್ಷವಾಗಿದ್ದ. ಅದು ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್ ಎನ್ನುವ ಈವೆಂಟಿನಲ್ಲಿ. ಉಪೇಂದ್ರ ಅವರನ್ನು ಕರೆದುಕೊಂಡು ಬಂದು ಕೂರಿಸಿ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್ ಮಾಡ್ತಿದೀನಿ ಅಂತಾ ಪೋಸು ಕೊಟ್ಟು ಅಲ್ಲೂ ಒಂದಿಷ್ಟು ಕಾಸು ಮಾಡಿಕೊಂಡ. ಜೊತೆಗೆ ಮಹೇಶ್ ಕೊಠಾರಿಯ ಸಿನಿಮಾ ವ್ಯವಹಾರ ನನ್ನಿಂದಲೇ ನಡೀತಿದೆ ಅಂತಾನೂ ಬಿಲ್ಡಪ್ ಕೊಟ್ಟ.
ಇವೆಲ್ಲ ಆಗುತ್ತಿದ್ದಂತೇ ರಾವಣ ಸೀದಾ ಹೋಗಿ ತೂರಿಕೊಂಡಿದ್ದು ಎಸ್. ನಲಿಗೆ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯೊಳಗೆ. ಈಗಷ್ಟೇ ರಿಲೀಸಾಗಿ ಥಿಯೇಟರಿನಲ್ಲಿರುವ ಖನನ ಸಿನಿಮಾದ ನಿರ್ಮಾಣವನ್ನು ಮಾಡಿರೋದು ಸಹಾ ಇದೇ ನಲಿಗೆ ಸಂಸ್ಥೆ. ಮೂಲತಃ ಸಿನಿಮಾ ಚಿತ್ರೀಕರಣಕ್ಕೆ ಬೇಕಿರುವ ಕ್ಯಾಮೆರಾ ಸಲಕರಣೆಗಳನ್ನು ದಿನದ ಆಧಾರದಲ್ಲಿ ಬಾಡಿಗೆ ಕೊಡುವ ವೃತ್ತಿ ನಲಿಗೆ ಶ್ರೀನಿವಾಸ್ ಅವರದ್ದು. ಇವರ ಬಳಿ ಕೆಲಸಕ್ಕಿದ್ದ ರಾವಣ ಶ್ರೀನಿವಾಸ್ ರಾವ್ ಅವರಿಗೇ ಗೊತ್ತಿಲ್ಲದಂತೆ ಅವರ ಕ್ಯಾಮೆರಾಗಳನ್ನು ಅಡವಿಡಲು ಸ್ಕೆಚ್ ಹಾಕಿದ್ದ. ಖನನ ಸಿನಿಮಾಗೆ ಪಬ್ಲಿಸಿಟಿ ಮಾಡಿಕೊಡ್ತೀನಿ ಅಂತಾ ಲಕ್ಷಾಂತರ ರುಪಾಯಿ ದುಡ್ಡು ಕಿತ್ತು ಕೈ ಎತ್ತಿದ. ಸದ್ಯ ಖನನ ನಿರ್ಮಾಪಕ ಶ್ರೀನಿವಾಸ್ ಮತ್ತವರ ಮಗ ಆರ್ಯವರ್ಧನ್ ಈತನ ವಿರುದ್ಧ ಪೊಲೀಸ್ ದೂರು ನೀಡಲು ಸಜ್ಜಾಗಿದ್ದಾರೆ.
ಇವೆಲ್ಲದರ ಜೊತೆಗೆ ಮತ್ತೆ ಬ್ರಾಂಡಿಂಗ್ ಮಾಡುವುದಾಗಿ ಹೇಳಿ ಬಸ್ಸುಗಳ ಮೇಲಿನ ಜಾಹೀರಾತು, ರೇಡಿಯೋ ಅಡ್ವರ್’ಟೈಸ್’ಮೆಂಟ್, ಆಟೋಗಳ ಹಿಂದೆ ಸ್ಟಿಕರ್ ಅಂಟಿಸುವುದೂ ಸೇರಿದಂತೆ ಪ್ಯಾಕೇಜ್ ಡೀಲು ಮಾಡಲು ನಿಂತ. ಹತ್ತು ಬಸ್ಸುಗಳ ಮೇಲೆ ಜಾಹೀರಾತು ಹಾಕಿಸಿ ನೂರು ಬಸ್ಸುಗಳ ಬಿಲ್ ಕೊಟ್ಟ. ರೇಡಿಯೋ, ಆಟೋಗಳ ಹೆಸರಲ್ಲೂ ಮನಸೋ ಇಚ್ಛೆ ಯಾಮಾರಿಸಿದ. ತೀರಾ ಇತ್ತೀಚೆಗೆ `ನಟ ಸಾರ್ವಭೌಮ’ ಅನ್ನೋ ಸಿನಿಮಾದಲ್ಲೂ ಪ್ಯಾಕೇಜ್ ಡೀಲು ಪಡೆದ ರಾವಣ ಧೀರ ರಾಕ್ಲೈನ್ ವೆಂಕಟೇಶ್ ಅವರಿಗೇ ಮುಂಡಾಯಿಸಿಬಿಟ್ಟ. ಮೊದಲೆಲ್ಲಾ ರಾಕ್ಲೈನ್ ವೆಂಕಟೇಶ್ ಅಂದರೆ ಯಾರಿಂದಲೂ ಯಾಮಾರದ ವ್ಯಕ್ತಿ, ಖಡಕ್ಕು ವ್ಯವಹಾರ ಅಂತೆಲ್ಲಾ ಹೆಸರಾಗಿದ್ದವರು. ಆದರೆ ಅದ್ಯಾಕೋ ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ರಾಕ್ಲೈನ್ ವೆಂಕಟೇಶ್ ನಂಬಬೇಕಾದವರನ್ನು ನಂಬದೇ ರಾವಣನಂಥ ಖದೀಮರನ್ನು ಹತ್ತಿರ ಬಿಟ್ಟುಕೊಂಡು ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ರಾಕ್ಲೈನ್ರಂಥ ನಿರ್ಮಾಪಕರಿಗೇನೋ ಇಂಥವನ್ನೆಲ್ಲಾ ಎದುರಿಸೋ ತಾಕತ್ತಿದೆ. ಆದರೆ, ತೀರಾ ಸಾಲ ತಂದು ಸಿನಿಮಾ ಮಾಡುವ, ಕನ್ನಡ ಚಿತ್ರರಂಗವನ್ನು ನಂಬಿ ಹೊರಗಿನಿಂದ ಬಂದವರ ಪಾಡೇನಾಗಬೇಡ?
ಎಂ.ಎಸ್.ಎನ್. ಸೂರ್ಯ ಎನ್ನುವ ವ್ಯಕ್ತಿ ಕನ್ನಡ ಮತ್ತು ತೆಲುಗಿನಲ್ಲಿ `ಸುವರ್ಣ ಸುಂದರಿ’ ಎನ್ನುವ ಸಿನಿಮಾ ನಿರ್ಮಿಸಿ, ಕನ್ನಡದಲ್ಲೇ ಮೊದಲು ರಿಲೀಸ್ ಮಾಡಿದ್ದಾರೆ. ಕಳೆದ ವಾರ ಬಿಡುಗಡೆಗೊಂಡ ಈ ಸಿನಿಮಾ ಆರಂಭದಲ್ಲಿ ಸಾಕಷ್ಟು ಸೌಂಡು ಮಾಡಿತ್ತು. ಅದರ ಪಬ್ಲಿಸಿಟಿ ಕೂಡಾ ಅದೇ ರೇಂಜಿನಲ್ಲಿತ್ತು. ಆದರೆ ಸಿನಿಮಾ ಬಿಡುಗಡೆಯಾಗೋ ಹೊತ್ತಿಗೆ ಸದ್ದೇ ಇಲ್ಲದೆ ತೆರೆಗೆ ಬಂದಿದೆ. ಯಾಕೆಂದು ವಿಚಾರಿಸಿದರೆ ಇದೇ ರಾವಣ ಅವರ ಬಳಿ ಪಬ್ಲಿಸಿಟಿ ಪ್ಯಾಕೇಜು ಪಡೆದು ಬರೋಬ್ಬರಿ ಹದಿಮೂರು ಲಕ್ಷಕ್ಕೆ ಗುನ್ನ ಮಡಗಿದ್ದಾನಂತೆ. ಅವರು ಸಿನಿಮಾದ ಪ್ರಚಾರಕ್ಕೆಂದು ಇಟ್ಟುಕೊಂಡಿದ್ದ ದುಡ್ಡೆಲ್ಲಾ ರಾವಣ ಪಾಲಾಗಿರೋದರಿಂದ ಚಿತ್ರವನ್ನು ಸೈಲೆಂಟಾಗಿ ರಿಲೀಸ್ ಮಾಡಿದ್ದಾರೆ.
ರಾವಣನಂಥಾ ಉರುಫ್ ಕರುಣಾಕರನಂಥಾ ಕ್ರಿಮಿಗಳನ್ನು ಹೀಗೇ ಬೆಳೆಯಲು ಬಿಟ್ಟರೆ ಕನ್ನಡ ಸಿನಿಮಾ ನಿರ್ಮಾಪಕರು ಮುಂಡಾಮೋಚಿಕೊಳ್ಳಲು ಬೇರೆ ಕಾರಣವೇ ಬೇಕಿಲ್ಲದಂತಾಗೋದು ಸತ್ಯ. ಚಲನಚಿತ್ರ ವಾಣಿಜ್ಯ ಮಂಡಳಿ ಈ ವಿಚಾರದಲ್ಲಾದರೂ ಉತ್ತಮ ತೀರ್ಮಾನಕ್ಕೆ ಬರಬೇಕಿದೆ. ಆ ಮೂಲಕ ರಾವಣ ಮತ್ತು ಅವನಂತೇ ಸುಲಿಗೆಗೆ ನಿಂತಿರುವ, ನಿರ್ಮಾಪಕರನ್ನು ಬೆದರಿಸಿ ತಿನ್ನುತ್ತಿರುವ ಕ್ರಿಮಿಗಳನ್ನು ಹೊಸಕಿಹಾಕಬೇಕಿದೆ.
No Comment! Be the first one.