ರವಿ ಬೆಳಗೆರೆ. ಈ ಹೆಸರು ಕನ್ನಡ ಪತ್ರಿಕಾ ರಂಗವನ್ನು ಆವರಿಸಿಕೊಂಡು ಗಡಿಯ ಗೊಡವೆಯಿಲ್ಲದೆ ಹರಡಿಕೊಂಡಿರುವ ರೀತಿಯೇ ಅದ್ಭುತ. ದಿಕ್ಕಿಲ್ಲದ ಜೀವಗಳಿಗೆ, ದಿಕ್ಕೆಟ್ಟ ಮನಸುಗಳಿಗೆ ಭರವಸೆಯ ಟಾನಿಕ್ಕು ಹನಿಸುತ್ತಲೇ ಅಕ್ಷರ ಜಗತ್ತನ್ನ ಆವರಿಸಿಕೊಂಡಿರುವ ಬೆಳಗೆರೆ ಈವತ್ತು ಎಲ್ಲರನ್ನೂ ಅಗಲಿದ್ದಾರೆ…
ಬಹುಶಃ ಮೂರೂವರೆ ದಶಕಗಳಿಗೂ ಹೆಚ್ಚು ಕಾಲದ ಅಕ್ಷರ ಸಾಂಗತ್ಯದಲ್ಲಿ ಬೆಳಗೆರೆ ಪ್ರಭಾವಿಸದ ಕ್ಷೇತ್ರಗಳೇ ಇಲ್ಲವೇನೋ. ಹಾಗಿರುವಾಗ ಚಿತ್ರರಂಗ ಅದರಿಂದ ಹೊರಗುಳಿಯಲು ಸಾಧ್ಯವಿಲ್ಲ. ಚಿತ್ರರಂಗದ ಘಟಾನುಘಟಿಗಳೊಂದಿಗೆ ನಿಕಟ ನಂಟು ಹೊಂದಿರುವ ಬೆಳಗೆರೆಯವರು ಒಂದಷ್ಟು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಆಯಾ ಕಾಲಘಟ್ಟಗಳಲ್ಲಿ ಚಿತ್ರರಂಗದ ಮಂದಿಯನ್ನು ಅಕ್ಷರಗಳ ಮೂಲಕವೇ ಪ್ರಭಾವಿಸುತ್ತಾ ಬಂದಿದ್ದಾರೆ.
ಇದಕ್ಕೆ ಖ್ಯಾತ ನಿರ್ದೇಶಕ ಯೋಗರಾಜ ಭಟ್ ಈ ಹಿಂದೆ ಯಾವುದೋ ಸಂದರ್ಭದಲ್ಲಿ ಹೇಳಿದ್ದ ಮಾತೇ ಉದಾಹರಣೆ. ‘ನಾನು ಏನೇ ಯೋಚಿಸಲು ಹೋದರೂ ಅದರಲ್ಲಿ ಬೆಳಗೆರೆಯವರ ವಿಚಾರಗಳ, ಬರವಣಿಗೆಯ ಒಂದಂಶ ಇದ್ದೇ ಇರುತ್ತೆ’ ಅಂದಿದ್ದರು ಯೋಗರಾಜ ಭಟ್!
ಯಾವ ದಿಕ್ಕು ದೆಸೆಗಳೂ ಇಲ್ಲದೆ ದೈನ್ಯವೇ ತುಂಬಿದಂತಿರೋ ಜೀವಗಳೆದೆಗೂ ಅಕ್ಷರಗಳ ಮೂಲಕವೇ ಒಂದು ಮುಷ್ಠಿ ಭರವಸೆಯನ್ನು ರವಾನಿಸುವ ಮಾಂತ್ರಿಕ ಶಕ್ತಿ ಬೆಳಗೆರೆಯವರ ಬರವಣಿಗೆಗಳ ವಿಶೇಷ. ಹೀಗೆ ಅದೆಷ್ಟು ಲಕ್ಷ ಮಂದಿ ಬೆಳಗೆರೆಯವರ ಅಕ್ಷರಗಳ ಬಲದಿಂದಲೇ ಸೋಲುಗಳ ಕಮರಿಯಿಂದ ಎದ್ದು ಬಂದಿದ್ದಾರೋ, ಅದೆಷ್ಟು ಮಂದಿ ಸಾವಿನ ಸನಿಹದಿಂದ ಬದುಕಿನತ್ತ ಮುಖ ಮಾಡಿದ್ದಾರೋ, ಇನ್ನೆಷ್ಟು ಮಂದಿ ಆ ಪ್ರೇರಣೆಯಿಂದಲೇ ಅಕ್ಷರ ಜಗತ್ತಿಗೆ ಅಡಿಯಿರಿಸಿ ಬದುಕು ಕಟ್ಟಿಕೊಂಡಿದ್ದಾರೋ. ಇದೆಲ್ಲವೂ ಅವರ ಬದುಕಿನ ನಿಜವಾದ ಸಾರ್ಥಕತೆ.
ಹಾಯ್ ಬೆಂಗಳೂರ್ ಪತ್ರಿಕೆಯನ್ನು ಬೆರಗಿನಂತೆ, ಭರವಸೆಯಂತೆ ಕರ್ನಾಟಕದ ಲಕ್ಷಾಂತರ ಮನಸುಗಳ ಕದ ದಾಟಿಸಿ ಬಿಟ್ಟವರು ರವಿ ಬೆಳಗೆರೆ. ಬೆಳಗೆರೆಯವರಿಗೆ ಓದುಗರೇ ಅಕ್ಷರ ಮಾಂತ್ರಿಕನೆಂಬ ಬಿರುದು ನೀಡಿದ್ದಾರೆ. ಅದು ಅವರ ಬರವಣಿಗೆಯ ಮಾರ್ಧವತೆಗೆ ಸಿಕ್ಕ ಮಹಾ ಪುರಸ್ಕಾರ. ಬಹುಶಃ ಹಾಯ್ ಬೆಂಗಳೂರ್ ಎಂಬ ಪತ್ರಿಕೆಯನ್ನು ಅವರು ಓದುಗರಿಗೆ ತಲುಪಿಸಿದ ರೀತಿ, ಕಟ್ಟ ಕಡೆಯ ಜೀವಗಳಿಗೂ ಅಕ್ಷರಗಳ ರುಚಿ ಹತ್ತಿಸಿದ ಪರಿ ಕನ್ನಡ ಪತ್ರಿಕಾ ಜಗತ್ತಿನ ನಿಜವಾದ ಅಚ್ಚರಿ. ಅಲ್ಲೆಲ್ಲೋ ಕರೆಂಟಿನ ಪರಿಚಯವೂ ಇಲ್ಲದ ಕರ್ನಾಟಕದ ಮೂಲೆಯಲ್ಲಿನ ಮನಸುಗಳಲ್ಲಿಯೂ ಪ್ರತೀ ಶುಕ್ರವಾರದ ಹೊತ್ತಿಗೆ ಕಾತರದ ದೀಪ ಹಚ್ಚಿಟ್ಟು ಕಾಯುವಂತೆ ಮಾಡಿದ ಬೆಳಗೆರೆಯವರದ್ದು ಹಗಲಿರುಳಿನ ಪರಿವೆಯಿಲ್ಲದೆ ಮುದುರಿ ಕೂತು ಕೆಲಸ ಮಾಡುವ ಛಾತಿ ಇರುವವರು ಮಾತ್ರವೇ ತುಳಿಯಬಹುದಾದ ಹಾದಿ.
ಆಗಾಗ ಕೆಲ ಮಂದಿ ಬೆಳಗೆರೆಯ ಮೋಡಿಯನ್ನು ಕಂಡು ನಖಶಿಖಾಂತ ಉರಿ ಹತ್ತಿಸಿಕೊಂಡು ಉರುಳಾಡುವುದೂ ಇದೆ. ಅಂಥವರೆಲ್ಲ ಈ ಸುದೀರ್ಘ ದಾರಿಯ ಬದುವಿನಲ್ಲಿ ನಿಂತು ಊಳಿಡುತ್ತಲೇ ಇರುತ್ತಾರೆ. ಅಂಥಾ ಸಾವಿರ ಸವಾಲುಗಳನ್ನು ದಾಟಿಕೊಂಡು ಹಾಯ್ ಬೆಂಗಳೂರನ್ನು ಕಟ್ಟಿ ನಿಲ್ಲಿಸಿದ್ದು ಸಜೀವ ಅಚ್ಚರಿ. ಬಹುಶಃ ಇಂದು ಬೆಳಗೆರೆಯವರ ಬಗೆಗಿನ ತಕರಾರು ತೆಗೆಯುವವರು ಅವರು ಗಳಿಸಿದ್ದನ್ನು ಮಾತ್ರವೇ ಲೆಕ್ಕ ಹಾಕುತ್ತಾರೆ. ಎರಡು ದಶಕಗಳಿಗೂ ಹೆಚ್ಚು ಕಾಲದ ಈ ವ್ರತಕ್ಕೆ ಬಲಿಯಾದ ಸುಖ, ಸುಟ್ಟ ರಾತ್ರಿಗಳ ಲೆಕ್ಕ ಅಂಥವರಿಗೆ ಬೇಕಿಲ್ಲ. ಆದರೆ ಬೆಳಗೆರೆ ಓದುಗರ ಪಾಲಿಗೆ ಅದು ಯಾವತ್ತಿದ್ದರೂ ಅವುಡುಗಚ್ಚಿ ಏನಾದರೊಂದು ಸಾಧಿಸುವ ಛಲಕ್ಕೆ ಶಾಶ್ವತ ಇಂಧನ.
ಬೆಂಗಳೂರಿನಂಥಾ ಮಹಾ ನಗರಕ್ಕೆ ಬರಿಗೈಲಿ ಬಂದು ಮಹತ್ತರವಾದುದನ್ನು ಸಾಧಿಸೋದು ಈವತ್ತಿಗೆ ಸಿನಿಮ್ಯಾಟಿಕ್ ವಿಚಾರ. ಆದರೆ ಅದರ ವಾಸ್ತವ ರೂಪ ಬೆಳಗೆರೆಯವರದ್ದು. ದೂರದ ಬಳ್ಳಾರಿಯಿಂದ ಬಿಡಿಗಾಸನ್ನಷ್ಟೇ ಇಟ್ಟುಕೊಂಡು ಬೆಂಗಳೂರಿಗ ಬಂದ ಅವರು ಪತ್ರಿಕಾರಂಗದಲ್ಲಿ ಬೆಳೆದು ನಿಂತ ರೀತಿ ಎಲ್ಲಾ ಕ್ಷೇತ್ರದವರಿಗೂ ಸ್ಫೂರ್ತಿ. ಓರ್ವ ಪತ್ರಕರ್ತನಾಗಿ ಭ್ರಷ್ಟರನ್ನು ಬೆತ್ತಲಾಗಿಸಿ, ಹಗರಣಗಳನ್ನು ಬಯಲಾಗಿಸುವಷ್ಟಕ್ಕೇ ಸೀಮಿತವಾಗಿದ್ದರೆ ಬಹುಶಃ ಈ ಮಟ್ಟದ ಗೆಲುವು ಸಾಧ್ಯವಾಗುತ್ತಿರಲಿಲ್ಲವೇನೋ. ಆದರೆ ಬೆಳಗೆರೆ ದೂರದಲ್ಲಿ ಹಿಡಿ ಸಾಂತ್ವನಕ್ಕಾಗಿ ಕಾದು ಕೂತ ಜೀವಗಳಿಗೆ ಸಾಂತ್ವನ ನೀಡಿದರು.
ಯಾರದ್ದೋ ಕಣ್ಣೀರಿಗೆ ಮಿಡಿಯುತ್ತಲೇ ಸೋಲು, ಹತಾಶೆಗಳ ಕೂಪದಲ್ಲಿ ಹೂತು ಹೋಗಿದ್ದ ಅದೆಷ್ಟೋ ಮನಸುಗಳನ್ನು ಹೊಸಾ ಭರವಸೆಯಿಂದ ಎದ್ದು ನಿಲ್ಲವಂತೆ ಮಾಡಿದರು. ಹಾಯ್ ಬೆಂಗಳೂರ್ ಎಂಬ ಕಪ್ಪು ಸುಂದರಿ ಅದ್ಯಾವ್ಯಾವ ಮೂಲೆಯಲ್ಲಿದ್ದ ಜೀವಗಳನ್ನು ಅದೆಲ್ಲೆಲ್ಲಿಗೆ ಕೈ ಹಿಡಿದು ಕರೆತಂದಳೋ. ಅದೆಷ್ಟು ಲಕ್ಷ ಜನರು ಭರವಸೆಯಿಂದ ಬದುಕುವಂತೆ ಮಾಡಿದಳೋ. ಬೆಳಗೆರೆಯವರ ಬದುಕಿನ ಸಾರ್ಥಕತೆ ಇರುವುದೇ ಅದರಲ್ಲಿ. ಅದೆಷ್ಟೋ ಗಾವುದ ದೂರ ಕೂತ ಅಗೋಚರ ಜೀವಗಳ ದುಮ್ಮಾನಗಳನ್ನು ಅಕ್ಷರಗಳಿಂದಲೇ ನೇವರಿಸಿದ, ನಿರಾಸೆಯ ಜೇಡ ಗೂಡುಗಟ್ಟಿದ ಮನಸುಗಳಲ್ಲಿ ಗೆದ್ದೇ ತೀರುವ ಹುಮ್ಮಸ್ಸು ತುಂಬಿದ, ಆದರೆ ಬೇಷರತ್ತಾಗಿ ಬದುಕಿನ ಪ್ರತೀ ತಿರುವಿನಲ್ಲಿಯೂ ಹೆಮ್ಮೆಯಿಂದ ಗುರುವಾಗಿ ನೆನಪಾಗುವ, ಸೋತು ಕೂತಾದ ಅಕ್ಷರಗಳಿಂದಲೇ ನೇವರಿಸುತ್ತಿದ್ದ ರವಿ ಬೆಳಗೆರೆಯವರಿಗೀಗ ಬದುಕು ಮುಗಿಸಿ ಹೊರಟಿದ್ದಾರೆ.
No Comment! Be the first one.