೨೦೧೮ರ ಫೆಬ್ರವರಿ ತಿಂಗಳಲ್ಲಿ ನಟ, ನಿರ್ದೇಶಕ ರಘುರಾಮ್ ಎತ್ತಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಕುರಿತು ಸಿನಿಬಜ಼್ ಪ್ರಕಟಿಸಿದ್ದ ವರದಿ ಕೂಡಾ ವ್ಯಾಪಕವಾಗಿ ವೈರಲ್ ಆಗಿತ್ತು.
ರಘುರಾಮ್ ಅವರು ತಮ್ಮದೇ ಕೈಬರಹದಲ್ಲಿ ನಾಲ್ಕಾರು ಸಾಲುಗಳನ್ನು ಬರೆದಿದ್ದರು. ಅದು ರವಿಚಂದ್ರನ್ ಅವರಿಗೆ ಯಾಕೆ ಇನ್ನೂ ಡಾಕ್ಟರೇಟ್ ಬಂದಿಲ್ಲ ಎಂಬ ಚುಟುಕಾದ ಮತ್ತು ಅರ್ಥವತ್ತಾದ ಬರಹವಾಗಿತ್ತು. ಕನ್ನಡ ಚಿತ್ರರಂಗಕ್ಕೆ ಅದ್ದೂರಿತನವನ್ನು ತಂದುಕೊಟ್ಟು, ಆಡಿಯೋ ಬೆಲೆಯನ್ನು ಸೃಷ್ಟಿಸಿ, ಪರಭಾಷಾ ನಟ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿ, ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತವಾಗಿಸಲು ಕಾರಣರಾದ ಹಲವರಲ್ಲಿ ಪ್ರಮುಖರಾದ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ಗೌರವ ಸಿಕ್ಕಿಲ್ಲ. ಇದು ಸರಿನಾ? ಅಂತಾ ಪ್ರಶ್ನೆ ಮಾಡಿದ್ದರು.
ರಘುರಾಮ್ ಅವರ ಈ ಪ್ರಶ್ನೆಯನ್ನು ಪುಷ್ಟೀಕರಿಸಿ ರವಿಚಂದ್ರನ್ ಅವರಿಗೆ ಈ ಗೌರವ ಸಲ್ಲಲೇಬೇಕು ಅಂತಾ ಲೆಕ್ಕವಿಲ್ಲದಷ್ಟು ಜನ ಅಭಿಪ್ರಾಯ ಪಟ್ಟಿದ್ದರು. ರಘುರಾಮ್ ಅವರು ಎತ್ತಿದ್ದ ಪ್ರಶ್ನೆಯಲ್ಲಿ ನಿಜಕ್ಕೂ ಅರ್ಥವಿತ್ತು. ಕನ್ನಡ ಚಿತ್ರರಂಗಕ್ಕೆ ಅದ್ದೂರಿತನದ ಜೊತೆಗೆ ಹೊಸಾ ಆಯಾಮವನ್ನು ತಂದುಕೊಟ್ಟವರು ರವಿಚಂದ್ರನ್. ಸಿನಿಮಾವನ್ನೇ ಧ್ಯಾನದಂತೆ ಸ್ವೀಕರಿಸಿರುವ ರವಿಚಂದ್ರನ್ ಖಂಡಿತವಾಗಿಯೂ ಡಾಕ್ಟರೇಟ್ ಗೌರವಕ್ಕೆ ಅರ್ಹರು ಎನ್ನುವ ಮಾತು ಎಲ್ಲೆಡೆ ಕೇಳಿಬಂದಿತ್ತು.
ಈಗ ಜನರ ಒತ್ತಾಸೆ, ರಘುರಾಮ್ ಅವರ ಬಯಕೆಗೆ ಬೆಲೆ ಸಿಕ್ಕಿದೆ. ಸಿಎಂಆರ್ ಯೂನಿವರ್ಸಿಟಿ ಇದೇ ನವೆಂಬರ್ ೩ರಂದು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದವರು ಡಾ. ರಾಜ್ ಕುಮಾರ್. ನಂತರ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ಕಲಾವಿದರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಈಗ ರವಿಚಂದ್ರನ್ ಅವರಿಗೆ ಪ್ರತಿಷ್ಟಿತ ಸಿಎಂಆರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿರುವುದು ಕ್ರೇಜ಼ಿಸ್ಟಾರ್ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ.
ಇವತ್ತಿಗೆ ರಘುರಾಮ್ ರವಿಚಂದ್ರನ್ ಅವರ ಆಪ್ತ ವಲಯದಲ್ಲಿದ್ದಾರೆ. ಅದಕ್ಕೂ ಮೀರಿ ರಘುರಾಮ್ ರವಿ ಅವರ ಪರಮ ಅಭಿಮಾನಿ. ಒಂದು ಕಾಲಕ್ಕೆ ರವಿಚಂದ್ರನ್ ಸಿನಿಮಾ ರಿಲೀಸಾದಾಗ ಅವರಂತೆಯೇ ವೇಷ ತೊಟ್ಟು ಓಡಾಡುತ್ತಿದ್ದವರು. ತಾವು ಇಷ್ಟಪಟ್ಟ ಹುಡುಗಿಯ ಮನೆ ಮುಂದೆ ಚಿಕ್ಕೆಜಮಾನನಂತೆ ಪಂಚೆ ಉಟ್ಟು, ರೇಡಿಯೋ ಹಿಡಿದು ತಿರುಗಾಡಿದವರು. ರವಿಚಂದ್ರನ್ ಅಂದರೆ ಜೀವದಷ್ಟು ಪ್ರೀತಿಸುವ ರಘುರಾಮ್ ಈಗ ಕನಸುಗಾರನಿಗೆ ಡಾಕ್ಟರೇಟ್ ಸಿಕ್ಕಿರೋದನ್ನು ಹಬ್ಬದಂತೆ ಸಂಭ್ರಮಿಸಿ ಆಚರಿಸಿರುತ್ತಾರೆ!