ಕ್ರೇಜ಼ಿಸ್ಟಾರ್ , ಕನಸುಗಾರ, ರವಿಮಾಮ ಎಂಬಿತ್ಯಾದಿಯಾಗಿ ಹೆಸರಾಗಿರುವ ಅಮಲುಗಣ್ಣಿನ ಚೆಲುವ ರವಿಚಂದ್ರನ್. ಸಿನಿಮಾವನ್ನೇ ಉಸಿರಾಗಿಸಿಕೊಂಡು ಕೆಲಸ ನಿರ್ವಹಿಸುತ್ತಾ ಬಂದಿರುವ ರವಿಚಂದ್ರನ್ ಅವರ ವೃತ್ತಿ ಮತ್ತು ಖಾಸಗೀ ಬದುಕಿನಲ್ಲಿ ಒಂದಿಷ್ಟು ಸುಂದರವಾದ ಪಲ್ಲಟಗಳಾಗುತ್ತಿವೆ. ಅವರೇ ಅಚ್ಚರಿಗೊಳ್ಳುವಂತಾ ವಿಷಯಗಳು ಘಟಿಸುತ್ತಿವೆ. ಅವೆಲ್ಲದರ ಬಗ್ಗೆ ಸ್ವತಃ ರವಿ ಏನು ನುಡಿಯುತ್ತಾರೆ? ಇಲ್ಲಿದೆ ವಿವರ…
ಇದುವರೆಗೂ ಎಲ್ಲಾ ತರಹದ ಕಾಸ್ಟ್ಯೂಮ್ ಹಾಕಿದ್ದೆ. ಆದ್ರೆ ಇದೊಂದು ಬಾಕಿ ಇತ್ತು. ಈಗ ಅದು ಕೂಡ ಈಡೇರಿತು…!
– ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿರುವ ನಟ ರವಿಚಂದ್ರನ್ ಅವರ ಮೊದಲ ಪ್ರತಿಕ್ರಿಯೆ ಇದು. ರವಿಚಂದ್ರನ್ ಅವರ ಕಲಾ ಸೇವೆಯನ್ನು ಪರಿಗಣಿಸಿ, ಬೆಂಗಳೂರಿನ ಪ್ರತಿಷ್ಟಿತ ಸಿ.ಎಂ.ಆರ್.ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ನವೆಂಬರ್ ೩ರಂದು ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಮೂಲಕ ಕ್ರೇಜಿಸ್ಟಾರ್ ಈಗ ಡಾಕ್ಟರ್ ರವಿಚಂದ್ರನ್ ಆಗಿದ್ದಾರೆ. ಈ ಗೌರವ ಅವರಿಗೂ ಖುಷಿ ತಂದಿದೆ. ಆ ಖುಷಿಯೊಂದಿಗೆ ಅವರ ಸಿನಿಜರ್ನಿಯ ಕುರಿತು ಅವರು ಹೇಳಿದಿಷ್ಟು…
– ಅಕ್ಟೋಬರ್ 18ಕ್ಕೆ ಮಗಳು ಬರ್ತ್ ಡೇ ಆಚರಿಸಿಕೊಂಡಳು. ಅವತ್ತೇ ನನ್ನ ಹೊಸ ದಾರಿ ಶುರುವಾಯಿತು. ಮಗಳ ಬರ್ತ್ ಡೇ ಸಂಭ್ರಮದಲ್ಲಿದ್ದೆ. ಸಿಎಂಆರ್ ಶಿಕ್ಷಣ ಸಂಸ್ಥೆಯಿಂದ ಒಂದು ಫೋನ್ ಬಂತು. ಸಿಎಂಆರ್ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ನಿಮ್ಮನ್ನು ಆಯ್ಕೆ ಮಾಡಿದ್ದೇವೆ ಅಂತ ಕರೆ ಮಾಡಿದವರು ಹೇಳಿದರು. ಬದಲಾವಣೆ ಅಲ್ಲಿಂದ ಶುರುವಾಯಿತು.
– ಮಗಳ ಮದುವೆ ಜತೆಗೆ ಅವಳ ಬರ್ತ್ಡೇ ಸಂಭ್ರಮದಿಂದಲೇ ಹೊಸ ಜರ್ನಿ ಶುರುವಾಗಿದೆ. ಇನ್ನೇನಿದ್ದರೂ ನಂದು ಹೊಸ ದಾರಿ. ಮತ್ತೆ ಪ್ರೇಮ ಲೋಕದ ಯುಗಕ್ಕೆ ಬಂದು ನಿಂತಿದ್ದೇನೆ. ‘ರವಿ ಬೋಪಣ್ಣ’ ಚಿತ್ರದ ಟ್ರೇಲರ್ ಬಂದ್ರೆ ಆ ಬದಲಾವಣೆ ಏನು ಅನ್ನೋದು ಗೊತ್ತಾಗಲಿದೆ. ಮೂರ್ನಾಲ್ಕು ಸಿನಿಮಾಗಳಿವೆ. ಅಷ್ಟು ಸಿನಿಮಾಗಳಲ್ಲಿ ಪಾತ್ರವೂ ವಿಭಿನ್ನ, ಲುಕ್ ಕೂಡ ವಿಶೇಷ.
– ಒಂದು ಮ್ಯೂಜಿಕಲ್ ಸಿನಿಮಾ ಮಾಡ್ಬೇಕು ಅನ್ನೋದು ನನ್ನ ಬಹು ದಿನದ ಕನಸು. ಅದಕ್ಕಂತಲೇ ಸ್ಟುಡಿಯೋ ಮಾಡಿದೆ. ಒಂದಷ್ಟು ಕೆಲಸಗಳು ನಡೆದವು. ಕಾರಣಾಂತರಗಳಿಂದ ಅವೆಲ್ಲಾ ನಿಂತಿದ್ದವು. ಅದಕ್ಕೂ ಚಾಲನೆ ಸಿಕ್ಕಿದೆ. ಅಕ್ಟೋಬರ್ ೧೮ಕ್ಕೆ ಸ್ಕ್ರಿಪ್ಟ್ ವರ್ಕ್ ಮುಗಿಸಿದ್ದೀನಿ. ಇನ್ನೇನು ಅದರ ಕೆಲಸಗಳು ಶುರುವಾಗುವುದಷ್ಟೇ ಬಾಕಿಯಿದೆ. ನನ್ನ ಬಹುದಿನದ ಆಸೆಯೊಂದು ಈಡೇರುತ್ತಿದೆ ಎನ್ನುವ ಖುಷಿ ನನಗೂ ಇದೆ.
– ಮನೋರಂಜನ್ ನಂತರ ಈಗ ವಿಕ್ರಮ್ ಕೂಡ ಸಿನಿಮಾಕ್ಕೆ ಬಂದಾಯ್ತು. ನಟರಾಗಬೇಕು ಅನ್ನೋದು ಅವರದ್ದೇ ಆಸೆ. ಮಕ್ಕಳು ಕೂಡ ಪೋಷಕರಂತೆ ಆಗಲು ಬಯಸುವುದು ಸಹಜ. ಅದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಇಲ್ಲಿ ನೆಲೆ ಕಂಡುಕೊಳ್ಳಬೇಕಾದವರು ಅವರೇ. ಅದಕ್ಕೆ ಬೇಕಾದ ಬೆಂಬಲ ನೀಡುವುದು ಪೋಷಕರಾದ ನಮ್ಮ ಕೆಲಸ.
– ಮೂವರು ಒಂದೇ ಸಿನಿಮಾದಲ್ಲಿ ಅಭಿನಯಿಸುವ ಸಂದರ್ಭ ಸದ್ಯಕ್ಕೆ ಎದುರಾಗಿಲ್ಲ. ಗೊತ್ತಿಲ್ಲ ಅದು ಯಾವಾಗ ಬರುತ್ತೆ ಅಂತ. ಬರಲಿ ಎನ್ನುವುದು ಕೂಡ ನನ್ನಾಸೆ. ಬಂದ್ರೆ ಒಂದೇ ಸಿನಿಮಾದಲ್ಲಿ ಇಬ್ಬರು ಹೀರೋಗಳಿಗೆ ನಾನೇ ತಂದೆ ಆಗಬಹುದು. ಇಲ್ಲವೇ ನಾನೇ ಹೀರೋ ಆದ ಸಿನಿಮಾದಲ್ಲಿ ಅವರು ಸಣ್ಣ ಪುಟ್ಟ ಪಾತ್ರಗಳಿಗೂ ಬಣ್ಣ ಹಚ್ಚಬಹುದು.
– ನಾನು ಯಾವತ್ತೂ ಮಣ್ಣಿನ ಮೇಲೆ ದುಡ್ಡು ಹಾಕಿಲ್ಲ. ನನಗೆ ಸಿನಿಮಾನೇ ಚಿನ್ನ ಅದೇ ನನ್ನ ಅನ್ನ. ಹೋದರೂ ಬಂದರೂ ಇದರಿಂದಲೇ. ನಾನು ಸಿನಿಮಾ ಹುಚ್ಚ. ಹುಚ್ಚುತನ ಇಲ್ಲದಿದ್ದರೆ ಸಿನಿಮಾರಂಗಕ್ಕೆ ಏನೂ ಮಾಡಕ್ಕಾಗಲಲ್ಲ…