ಸದಾ ಹೊಸ ಸಾಹಸಕ್ಕೆ ಕೈ ಹಾಕುತ್ತಾ ಹಿಂದು ಮುಂದು ನೋಡದೆ ಹಣ ವ್ಯಯಿಸುವ ರವಿಚಂದ್ರನ್ ಅದೆಷ್ಟೇ ದೊಡ್ಡ ಪ್ರಮಾಣದ ಸಾಲಗಳಿದ್ದರೂ ಯಾವತ್ತೂ ಅದಕ್ಕೆ ಅಂಜುತ್ತಾ ಕುಳಿತವರಲ್ಲ. ‘ಸಿನಿಮಾನೇ ನನ್ನುಸಿರು’ ಎಂದು ಸಿನಿಮಾವನ್ನೇ ಬದುಕಾಗಿಸಿಕೊಂಡಿರುವ ಕೆಲವೇ ಕೆಲವರ ಪೈಕಿ ರವಿಚಂದ್ರನ್ ಮುಂಚೂಣಿ ನಾಯಕ. ಇಂಥ ರವಿಚಂದ್ರನ್ ಈಗ ಹೊಸ ಹುರುಪಿನೊಂದಿಗೆ ಮತ್ತೆ ಮೈಕೊಡವಿ ನಿಂತಿದ್ದಾರೆ. ೫೯ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ರವಿ ಹಿಂದೆಂದಿಗಿಂತಲೂ ಹೆಚ್ಚು ಜೋಷ್ನಿಂದ ಕಂಗೊಳಿಸುತ್ತಿದ್ದಾರೆ. ಕಸನುಗಾರನ ಹೊಸ ಕನಸುಗಳು ಮತ್ತು ಅವರು ಸಾಗಿ ಬಂದ ಹಾದಿಯ ಕುರಿತಾದ ಸಣ್ಣ ವಿವರ ಇಲ್ಲಿದೆ……
ಕನ್ನಡ ಚಿತ್ರರಂಗದ ಅದ್ಧೂರಿ ಪರ್ವವೊಂದರ ಪ್ರವರ್ತಕ, ಸ್ಯಾಂಡಲ್ವುಡ್ನ ಅಮಲುಗಣ್ಣಿನ ಚೆಲುವ, ಕನಸುಗಾರ ರವಿಚಂದ್ರನ್ ಇದೇ ಮೇ ಮೂವತ್ತಕ್ಕೆ ಭರ್ತಿ ಐವತ್ತೊಂಭತ್ತನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕನ್ನಡ ಚಿತ್ರರಂಗದ ‘ಎರಡನೇ ತಲೆಮಾರಿನ ಹೀರೋಗಳು’ ಎಂದಾಕ್ಷಣ ಕಣ್ಣೆದುರಿಗೆ ಕಾಣುವುದು ಕೆಲವೇ ನಟರು. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮತ್ತು ನಂತರದ ಸ್ಥಾನ ಈ ಕ್ರೇಜಿಸ್ಟಾರ್ಗೆ.
ರವಿಚಂದ್ರನ್ ಪಾಪ್ಯುಲಾರಿಟಿ ಪಡೆದದ್ದು ಹೀರೋ ಆದ ನಂತರವಾದರೂ, ಅವರು ಮೊಟ್ಟ ಮೊದಲಿಗೆ ಬಣ್ಣಹಚ್ಚಿದ್ದು ‘ಕುಲಗೌರವ’ ಚಿತ್ರದಲ್ಲಿ. ಪೇಕೇಟಿ ಶಿವರಾಮ್ ನಿರ್ದೇಶನದ ಆ ಚಿತ್ರದಲ್ಲಿ ಡಾ.ರಾಜ್ ತ್ರಿಪಾತ್ರದಲ್ಲಿ ನಟಿಸಿದ್ದರು. ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಅವರೇ ನಿರ್ಮಿಸಿದ್ದ ಈ ಚಿತ್ರದಲ್ಲಿ ಬಾಲ ಕಲಾವಿದನೊಬ್ಬನ ಅವಶ್ಯಕತೆಯಿದ್ದುದರಿಂದ ಮುದ್ದುಮುದ್ದಾಗಿ ಕಾಣುತ್ತಿದ್ದ ರವಿಚಂದ್ರನ್ ಅವರನ್ನೇ ಆ ಪಾತ್ರದಕ್ಕೆ ಹಾಕಿಕೊಂಡಿದ್ದರು. ಹಾಗೆ ಸಣ್ಣ ವಯಸ್ಸಿಗೇ ರವಿ ‘ಕಲಾವಿದ’ನಾಗಿದ್ದರು. ನಂತರ ಖದೀಮ ಕಳ್ಳರು ಎಂಬ ಚಿತ್ರದಲ್ಲಿ ಪ್ರಭಾಕರ್ ಮತ್ತು ಅಂಬರೀಶ್ ಜೊತೆ ಪುಟ್ಟ ಪಾತ್ರವೊಂದರಲ್ಲಿ ರವಿ ನಟಿಸಿದ್ದರು.
ಆದರೆ ರವಿಚಂದ್ರನ್ ಎಂಬ ಸುರಸುಂದರಾಂಗನನ್ನು ಪೂರ್ಣ ಪ್ರಮಾಣದಲ್ಲಿ ನಾಯಕನನ್ನಾಗಿಸಿದವರು ದೈತ್ಯ ದೇಹಿ ಎಂ.ಪಿ. ಶಂಕರ್. ತಮ್ಮದೇ ನಿರ್ಮಾಣದ ‘ನಾನೇ ರಾಜ’ ಸಿನಿಮಾವನ್ನು ತೆಗೆದು, ರವಿಯನ್ನು ಹೀರೋ ಮಾಡಿದ್ದರು. ನಂತರ ‘ಸ್ವಾಭಿಮಾನ’, ‘ಪ್ರಳಯಾಂತಕ’, ‘ಸಾವಿರ ಸುಳ್ಳು ಮುಂತಾದ ಚಿತ್ರಗಳ ಮೂಲಕ ರವಿ ಹೀರೋ ಆಗೇ ಮುಂದುವರೆದಿದ್ದರು.
ಆಗ ಪರದೆ ಸೀಳಿ ಬಂತು ನೋಡಿ ಪ್ರೇಮಲೋಕ. ೧೯೮೭ರಲ್ಲಿ ಬಂದ ಪ್ರೇಮಲೋಕದ ಮೂಲಕ ಸಾಧಾರಣ ಸಿನಿಮಾ ಹೀರೋ ಆಗಿದ್ದ ರವಿಚಂದ್ರನ್ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ಯುವಕರ ಮನಸ್ಸಿಗೆ ಲಗ್ಗೆಯಿಟ್ಟು ಕನಸುಗಾರನಾಗಿ ಚಿರಸ್ಥಾಯಿಯಾದರು. ತನ್ನೊಟ್ಟಿಗೇ ಹಂಸಲೇಖ ಎಂಬ ಮತ್ತೊಬ್ಬ ಮಾಂತ್ರಿಕನನ್ನೂ ಹೊಸ ರೀತಿಯಲ್ಲಿ ಪರಿಚಯಿಸಿದರು. ಅದರ ಬೆನ್ನಿಗೇ ಬಂದ ‘ರಣಧೀರ’ ಈ ಕನಸಿನ ಪಕ್ಷಿಯ ರೆಕ್ಕೆಯನ್ನು ಮತ್ತಷ್ಟು ಹುರಿಗೊಳಿಸಿತ್ತು. ಹೀಗೆ ತಮ್ಮ ನಿರ್ದೇಶನದೊಂದಿಗೆ ಬೇರೆ ನಿರ್ದೇಶಕರ ಚಿತ್ರಗಳಲ್ಲೂ ಬ್ಯುಸಿಯಾದ ರವಿ ಒಂದರ ಹಿಂದೆ ಒಂದು ಸಿನಿಮಾಗಳನ್ನು ಮಾಡುತ್ತಾ ಬಂದರು. ಹೀಗೆ ಯಶಸ್ಸನ್ನೇ ಹೊದ್ದು ಮಲಗಿದ್ದ ರವಿಚಂದ್ರನ್ಗೆ ಮೊಟ್ಟಮೊದಲ ಬಾರಿಗೆ ಸೋಲು ಎಂಬ ಹೊಡೆದ ಬಿದ್ದಿದ್ದು ಶಾಂತಿಕ್ರಾಂತಿಯಲ್ಲಿ. ೧೯೯೧ರಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಂದ ಶಾಂತಿ ಕ್ರಾಂತಿ ಆ ಕಾಲಕ್ಕೇ ಐದಾರು ಕೋಟಿಯನ್ನು ನುಂಗಿಹಾಕಿತ್ತು. ಅದೇನು ದುರಾದೃಷ್ವವೋ ಏನೋ ಈ ಚಿತ್ರ ನಿರೀಕ್ಷೆಗಳನ್ನೆಲ್ಲಾ ಸುಳ್ಳು ಮಾಡಿ ಅಟ್ಟರ್ಫ್ಲಾಪ್ ಆಗಿಬಿಟ್ಟಿತ್ತು. ಈ ಸಿನಿಮಾ ರವಿಚಂದ್ರನ್ಗೆ ಅದ್ಯಾವ ಪರಿ ಪೆಟ್ಟು ನೀಡಿತ್ತು ಎಂದರೆ, ಹಲವು ವರ್ಷಗಳ ಕಾಲ ರವಿ ಚಿತ್ರನಿರ್ಮಾಣವನ್ನೇ ನಿಲ್ಲಿಸಿಬಿಟ್ಟಿದ್ದರು.
ಶಾಂತಿ ಕ್ರಾಂತಿ ಸಿನಿಮಾ ಕೆಟ್ಟ ರೀತಿಯ ಸೋಲು ಕಂಡರೂ ರವಿಯ ಇಮೇಜ್ಗೆ ಯಾವುದೇ ಧಕ್ಕೆಯಾಗಿರಲಿಲ್ಲ. ಅದೇ ಸಮಯಕ್ಕೆ ಬಂದ ‘ರಾಮಾಚಾರಿ’ ರವಿಚಂದ್ರನ್ಗೆ ಹೊಸ ಹಳ್ಳಿಹೀರೋ ಇಮೇಜು ತಂದುಕೊಟ್ಟಿತ್ತು. ಅಲ್ಲಿಂದ ಶುರುವಾಯ್ತು ನೋಡಿ ಹಳ್ಳಿ ವರಸೆ, ಹಳ್ಳಿ ಮೇಷ್ಟ್ರು, ಚಿಕ್ಕೆಜಮಾನ್ರು, ಪುಟ್ನಂಜ, ಅಣ್ಣಯ್ಯ ಮುಂತಾದ ಸಾಲು ಸಾಲು ಹಳ್ಳಿಹೈದನ ಪಾತ್ರಗಳು ರವಿ ಬದುಕನ್ನು ಹಸನಾಗಿಸಿದ್ದವು. ಜೊತೆಜೊತೆಗೇ ಮನೇ ದೇವ್ರು, ರಸಿಕ, ಗಡಿಬಿಡಿಗಂಡ, ಜಾಣ, ಚಿನ್ನ ದಂಥ ಚಿತ್ರಗಳು ರವಿಚಂದ್ರನ್ ಅವರನ್ನು ರೊಮ್ಯಾಂಟಿಕ್ ಹೀರೋ ಆಗಿಯೂ ಬಿಗಿದಪ್ಪಿದವು. ಈ ಮಧ್ಯೆ ಕಲಾವಿದ ಎಂಬ ಫ್ಲಾಪು ಸಿನಿಮಾವೂ, ಸಿಪಾಯಿ ಎಂಬ ಸೂಪರ್ ಹಿಟ್ ಸಿನಿಮಾಗಳೂ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ವರ್ಷಕ್ಕೆರಡು ಮೂರರಂತೆ ನಟಿಸುವುದರಲ್ಲೇ ತಲ್ಲೀನರಾಗಿಬಿಟ್ಟರು ರವಿ. ಆದರೆ ಈ ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ರಿಮೇಕುಗಳೇ ಆಗಿದ್ದವು.
ದುರಂತವೆಂದರೆ, ಶಾಂತಿಕ್ರಾಂತಿಯ ನಂತರ ಹತ್ತಿಪ್ಪತ್ತು ಸಿನಿಮಾಗಳಲ್ಲಿ ರವಿಚಂದ್ರನ್ ನಟಿಸಿದರೂ ಆ ಸಿನಿಮಾಕ್ಕಾಗಿ ಮಾಡಿದ್ದ ಸಾಲ ಮಾತ್ರ ಅವರನ್ನು ಬಿಟ್ಟು ದೂರ ಹೋಗಲೇ ಇಲ್ಲ. ಈ ನಡುವೆ ತನ್ನ ತಮ್ಮನಿಗಾಗಿ ಮಾಡಿದ ‘ಅಹಂ ಪ್ರೇಮಾಸ್ಮಿ ಮತ್ತು ಹೊಸತೇನನ್ನೋ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಮಾಡಿದ ‘ಏಕಾಂಗಿ’ ಸಿನಿಮಾಗಳು ರವಿಚಂದ್ರನ್ರನ್ನು ಆರ್ಥಿಕವಾಗಿ ಮತ್ತುಷ್ಟು ಸಂಕಷ್ಟಕ್ಕೆ ದೂಡಿದವು. ಯಾವ ಚಿತ್ರದ ಬಗ್ಗೆ ಅತಿಯಾದ ಮಹತ್ವಾಕಾಂಕ್ಷೆ ಇರಿಸಿಕೊಂಡಿದ್ದರೋ ಈ ಎರಡೂ ಚಿತ್ರಗಳು ಕನಸುಗಾರನ ಕನಸನ್ನು ನುಚ್ಚುನೂರು ಮಾಡಿಬಿಟ್ಟವು.
ಏಕಾಂಗಿ ಆದ ನಂತರ ಕೋದಂಡ ರಾಮ, ಒಂದಾಗೋಣ ಬಾ, ಸಾಹುಕಾರ, ರಾಮಕೃಷ್ಣ, ಪಾಂಡುರಂಗ ವಿಠಲ ಮುಂತಾದ ಕಮರ್ಷಿಯಲ್ ಸಿನಿಮಾಗಳಲ್ಲಿ ರವಿ ಕಾಣಿಸಿಕೊಂಡರು. ಆದರೆ ಈ ಎಲ್ಲ ಚಿತ್ರಗಳು ಶೋಚನೀಯ ಸೋಲು ಕಂಡಿದ್ದರಿಂದ ‘ರವಿ ಜಮಾನಾ ಮುಗಿದೇ ಹೋಯ್ತು’ ಎಂಬಂತಾಗಿಹೋಗಿತ್ತು. ಆದರೆ ರವಿ ಚಂದ್ರನ್ ಅಷ್ಟು ಸುಲಭಕ್ಕೆ ಸೋಲುವ ವ್ಯಕ್ತಿಯೇ? ಹೀಗೇ ಬಿಟ್ಟರೆ ಜನ ತನ್ನನ್ನು ಮರೆತೇಬಿಡುತ್ತಾರೆ ಎಂಬ ನಿಜವನ್ನು ಅರಿತ ರವಿ ‘ಮಲ್ಲ’ ಎಂಬ ಪಕ್ಕಾ ಮಸಾಲೆ ಚಿತ್ರವನ್ನು ನಿರ್ದೇಶಿಸಿ ನಟಿಸಿದರು. ಪ್ರಿಯಾಂಕ ಈ ಚಿತ್ರದ ಹೀರೋಯಿನ್ನು. ಹೊಕ್ಕಳ ಮೇಲೆ ದ್ರಾಕ್ಷಿ, ನವಿಲುಗರಿ, ಪಾರಿವಾಳ ಎಲ್ಲವನ್ನೂ ಒಟ್ಟೊಟ್ಟಿಗೇ ಸೇರಿಸಿ ಹೊಸ ಮ್ಯಾಜಿಕ್ಕು ಮಾಡಿಬಿಟ್ಟರು. ಯಾರೂ ನಿರೀಕ್ಷಿಸದ ರೀತಿಯಲ್ಲಿ ‘ಮಲ್ಲ’ ಹಿಟ್ ಆಯಿತು..
ಚಿತ್ರರಂಗದಲ್ಲಿ ಹೊಸಬರ ಅಲೆ ಎಂಥದ್ದೇ ಇದ್ದರೂ ಅದನ್ನು ಮೀರಿ ಲೈಮ್ಲೈಟಿಗೆ ಬಂದೇ ಬರುತ್ತೇನೆ ಎನ್ನುತ್ತಿರುವ ರವಿಚಂದ್ರನ್ ಹೊಸ ಹುರುಪಿನೊಂದಿಗೆ ಮತ್ತೆ ಮೈಕೊಡವಿ ನಿಂತು ‘ಮಂಜಿನ ಹನಿ’ ಚಿತ್ರವನ್ನು ಆರಂಭಿಸಿದರು. ಸಂದೇಶ್ ನಾಗರಾಜ್ ಆರಂಭಿಸಿದ್ದ ಈ ಚಿತ್ರದ ಖರ್ಚು ಯಾವಾಗ ಕೈ ಮೀರುತ್ತಾ ಹೋಯಿತೋ ಆಗ ರವಿಚಂದ್ರನ್ ಅದನ್ನು ಮೂರು ಕೋಟಿಗೆ ಸ್ವತಃ ತಾವೇ ಖರೀದಿಸಿಬಿಟ್ಟರು. ನಂತರ ಆ ಚಿತ್ರ ಮುಂದುವರೆಯಿತು. ಸುಮಾರು ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿದ್ದ ‘ಮಂಜಿನ ಹನಿ’ಗಾಗಿ ಸುಮಾರು ಎಂಬತ್ತು ಪರ್ಸೆಂಟ್ ಶೂಟಿಂಗ್ ಮುಗಿಸಲಾಗಿತ್ತು. ಆದರೆ ರವಿಚಂದ್ರನ್ಗೆ ಚಿತ್ರೀಕರಣಗೊಂಡಿದ್ದ ಆ ಸಿನೆಮಾದ ಕಡೆ ಅದೇನು ಅತೃಪ್ತಿ ಉಂಟಾಯಿತೋ ಏನೋ? ಅಷ್ಟೂ ಭಾಗವನ್ನು ಸಾರಾಸಗಟಾಗಿ ತಿಪ್ಪೆಗೆ ಬಿಸಾಡಿ ಮತ್ತೆ ಹೊಸದಾಗಿ ಚಿತ್ರೀಕರಿಸಲು ನಿರ್ಧರಿಸಿದರು. ಏನೇ ಮಾಡಿದರೂ ಈ ವರೆಗೂ ಮಂಜಿನಹನಿ ಪರದೆಮೇಲೆ ತೊಟ್ಟಿಕ್ಕಲೇಇಲ್ಲ. ಇಂಥ ಹುಚ್ಚು ಸಾಹಸಗಳನ್ನು, ಹುಂಬ ಕೆಲಸಗಳನ್ನು ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಅಲ್ಲದೇ ಮತ್ಯಾರು ಮಾಡಲು ಸಾಧ್ಯ?
ಈ ನಡುವೆ ಸುದೀಪ್ ಜೊತೆಗಿನ ಮಾಣಿಕ್ಯ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಅಣ್ಣನಾಗಿ, ಅಪ್ಪನಾಗಿ ಕ್ರೇಜಿಸ್ಟಾರ್ ಕಾಣಿಸಿಕೊಂಡರು. ಟೀವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರು. ಆರ್ಥಿಕವಾಗಿಯೂ ಒಂದಿಷ್ಟು ಸಬಲರಾದರು. ಮಗಳ ಮದುವೆ ಮುಗಿಸಿದ್ದಾರೆ. ಇಬ್ಬರೂ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ೫೯ಕ್ಕೆ ಕಾಲಿರಿಸಿರುವ ಈ ‘ರಸಿಕ’ ರವಿ ಹೊಸತೇನನ್ನೋ ಮಾಡಬೇಕೆಂಬ ತುಡಿತಕ್ಕೆ, ಹೊಸಾ ಸಾಹಸಗಳಿಗೆ ಕೈ ಹಚ್ಚುವಂತೆ ಮಾಡಬಲ್ಲ ಹುರುಪಿಗೆ ಸ್ಫೂರ್ತಿಯಂಥವರು. ಅವರು ಚಿತ್ರರಂಗದಲ್ಲಿ ಮತ್ತೆ ‘ಸಿಪಾಯಿ’ಯಂತೆ ಎದ್ದುಬರುವಂತಾಗಲಿ..
ವಿಚಂದ್ರನ್ ಅವರ ಕನಸಿನ ಚಿತ್ರವಾಗಿದ್ದ ‘ಏಕಾಂಗಿ’ ಬಿಡುಗಡೆಗೊಂಡು ಯಾರೂ ನಿರೀಕ್ಷಿಸದ ರೀತಿಯಲ್ಲಿ ನೆಲಕಚ್ಚಿತ್ತು. ಆದರೂ ರವಿಚಂದ್ರನ್ ಪ್ರಕಾರ ‘ಏಕಾಂಗಿ’ ಅವರ ಇಷ್ಟದ ಸಿನಿಮಾವಂತೆ. ಏಕಾಂಗಿ ಸೋತಿದ್ದರಿಂದಲೋ ಏನೋ ಅವರು ಇನ್ನೂ ಆ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ತಮ್ಮ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಆಗೊಮ್ಮೆ ಈಗೊಮ್ಮೆ ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕುವುದು ಕ್ರೇಜಿಸ್ಟಾರ್ನ ಹುಟ್ಟುಗುಣ. ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದೆಯೇ ಬಿಡುಗಡೆಗೊಂಡು ನೆಲಕಚ್ಚಿದ್ದ ಶಾಂತಿಕ್ರಾಂತಿ ಸಿನಿಮಾವೇ ಅದಕ್ಕೆ ಉತ್ತಮ ಉದಾಹರಣೆ. ನಂತರ ಕಲಾವಿದ, ಏಕಾಂಗಿ, ಅಪೂರ್ವ, ರವಿ ಬೋಪಣ್ಣ, ರಾಜೇಂದ್ರ ಪೊನ್ನಪ್ಪ… ಹೀಗೆ ರವಿ ಯಾವಾಗಲೂ ‘ಪ್ರಯೋಗ’ ನಿರತರಾಗಿರುತ್ತಾರೆ. ಯಾಕೆಂದರೆ ಈತ ಅಪ್ಪಟ ‘ಕನಸುಗಾರ’. ಕಾಲವೆಂಬೋ ಕಾಲ ಏಟು ಕೊಟ್ಟಾಗೆಲ್ಲ ಮತ್ತೊಂದು ಕನಸಿನ ಸಾರೋಟು ಹತ್ತಿ ನಾಗಾಲೋಟ ಆರಂಭಿಸುವ ‘ಸ್ವಪ್ನ ಸುದರ’ ರವಿಚಂದ್ರನ್ರ ಎಲ್ಲ ಕನಸುಗಳೂ ನನಸಾಗಲಿ!!