ಕನ್ನಡ ಚಿತ್ರರಂಗ ಹಡಾಲೆದ್ದು ಕೂತಿದೆ. ಏನೇ ತಿಪ್ಪರಲಾಗ ಹಾಕಿದರೂ ಜನ ಥೇಟರಿಗೆ ಕಾಲಿಡುತ್ತಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ಯೂಟ್ಯೂಬುಗಳಲ್ಲಿ ಟ್ರೇಲರು, ಟೀಸರು, ಸಾಂಗುಗಳನ್ನು ಬೂಸ್ಟ್ ಮಾಡಲಾಗುತ್ತಿದೆ. ಇದರಿಂದ ಯಾರಿಗೋ ಲಾಭವಾಗುತ್ತಿದೆಯೇ ಹೊರತು, ಸಿನಿಮಾಗೆ ಬಂಡವಾಳ ಹಾಕಿದ ನಿರ್ಮಾಪಕನಿಗೆ ನಾಲ್ಕಾಣಿ ವರಮಾನ ಬರುತ್ತಿಲ್ಲ. ಓಟಿಟಿ, ಡಿಜಿಟಲ್ಲು, ಚಾನೆಲ್ಲುಗಳೆಲ್ಲಾ ವ್ಯಾಪಾರವನ್ನು ಬಂದ್ ಮಾಡಿ ಸುಮ್ಮನಾಗಿವೆ. ಸಿನಿಮಾ ಇಂಡಸ್ಟ್ರಿ ಈ ಮಟ್ಟಕ್ಕೆ ನೆಲಕಚ್ಚಿದ್ದರೂ, ಇಲ್ಲಿರುವ ಕಲಾವಿದರು, ಕಾರ್ಮಿಕರು, ತಂತ್ರಜ್ಞರ ಪೇಮೆಂಟು ಕಡಿಮೆಯಾಗಿಲ್ಲ. ಕೆಲವರ ಕಮಿಷನ್ ಕರ್ಮಕಾಂಡಕ್ಕೆ ಫುಲ್ ಸ್ಟಾಪ್ ಇರಲಿ, ಕಾಮಾ ಕೂಡಾ ಬೀಳುತ್ತಿಲ್ಲ!
ಚಿತ್ರರಂಗದ ದುಸ್ಥಿತಿಯನ್ನು ಕಂಡು ಹೊಸ ನಿರ್ಮಾಪಕರು ಹಣ ಹೂಡುವ ಧೈರ್ಯ ಮಾಡುತ್ತಿಲ್ಲ. ಹಾಗಂತ ಸಿನಿಮಾ ಇಂಡಸ್ಟ್ರಿಯನ್ನೇ ನಂಬಿ ಬದುಕುತ್ತಿರುವವರ ವೃತ್ತಿಪರರು ಸುಮ್ಮನೇ ಕೂರಲು ಸಾಧ್ಯವಿಲ್ಲ. ‘ಬೆಳಿಗ್ಗೆ 8ರಿಂದ 8ರ ತನಕ ಕಾಲ್ ಶೀಟ್ ವ್ಯವಸ್ಥೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ’ ಅಂತಾ ಇತ್ತೀಚೆಗೆ ಹಿರಿಯ ನಿರ್ಮಾಪಕ ಕೆ. ಮಂಜು ಹೇಳಿದ್ದರು. ಇದರ ಬೆನ್ನಿಗೇ ಕ್ರೇಜಿಸ್ಟಾರ್ ರವಿಚಂದ್ರನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರರಂಗದಲ್ಲಿ ಕ್ರಾಂತಿ ಕಾರಕ ಬದಲಾವಣೆಯನ್ನು ತಂದು, ಅದಾಗಲೇ ಅದನ್ನು ಕಾರ್ಯರೂಪಕ್ಕಿಳಿಸಿದ್ದಾರೆ.
ಅದೇನೆಂದರೆ, ರವಿಂದ್ರನ್ ಅವರು ರೂಪಿಸುತ್ತಿರುವ ಹೊಸ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕೆ ಕಾರ್ಮಿಕರು, ತಂತ್ರಜ್ಞರು ಮತ್ತು ಕಲಾವಿದರ ಸಮೇತ ಎಲ್ಲರಿಗೂ ತಿಂಗಳ ಸಂಬಳಕ್ಕೆ ಒಪ್ಪಿಸಿದ್ದಾರೆ. ಕನ್ನಡ ಚಿತ್ರರಂಗ ನಿಜಕ್ಕೂ ಜೀವಂತವಾಗಿ ಉಳಿಯಬೇಕೆಂದರೆ, ಇಂಥದ್ದೊಂದು ತೀರ್ಮಾನದ ಅಗತ್ಯವಿತ್ತು. ಸಿನಿಮಾಗೆ ಬಂಡವಾಳ ಹೂಡಿದ ನಿರ್ಮಾಪಕರು ಉಳಿದಾಗ ಮಾತ್ರ ಇಂಡಸ್ಟ್ರಿ ಉಸಿರಾಡಲು ಸಾಧ್ಯ. ʻನಿರ್ಮಾಪಕರಿಗೆ ನಷ್ಟವಾದರೇನು? ನಮಗೆ ಕಾಲ್ ಶೀಟ್ ಲೆಕ್ಕದಲ್ಲಿ ಪೇಮೆಂಟು ಬಂದರೆ ಸಾಕು.ʼ ಅನ್ನೋದು ಎಲ್ಲರ ಮನಸ್ಥಿತಿಯಾಗಿತ್ತು. ಸಮಸ್ಯೆಗಳಾದಾಗ ಪ್ರಶ್ನಿಸುವ ಯೂನಿಯನ್ನುಗಳು ಕೂಡಾ ಸಂಕಷ್ಟದಲ್ಲಿರುವ ನಿರ್ಮಾಪಕರಿಗೆ ಸ್ಪಂದಿಸುತ್ತಿರಲಿಲ್ಲ. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಆಯಕಟ್ಟಿನ ಸ್ಥಾನದಲ್ಲಿ ಪದ್ಮಾಸನ ಹಾಕಿಕೊಂಡು ಕುಂತಿರುವವರಿಗಂತೂ ಚಿತ್ರರಂಗದ ಅಳಿವು ಉಳಿವಿನ ಪ್ರಶ್ನೆಗಿಂತಾ ಬೇಡದ ವಿಚಾರಗಳೇ ಮುಖ್ಯವಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದರೆ ರವಿಚಂದ್ರನ್ ಅವರು ಮಾಡುತ್ತಿರುವ ಕೆಲಸ ನಿಜಕ್ಕೂ ಸ್ವಾಗತಾರ್ಹ. ಮಿಕ್ಕ ನಿರ್ಮಾಪಕರೂ ಆದಷ್ಟು ಬೇಗ ಇದೇ ನಿರ್ಧಾರಕ್ಕೆ ಬಂದು ಸಂಬಳದ ಲೆಕ್ಕದಲ್ಲಿ ದುಡಿಸಿಕೊಂಡರೆ ಮಾತ್ರ ಸಿನಿಮಾ ಇಂಡಸ್ಟ್ರಿ ಮೇಲೇಳಲು ಸಾಧ್ಯ!
No Comment! Be the first one.