ರೇಮೊಗೆ ಆಶಿಕಾ ಯಾಕೆ ಹಾಗೆ ಮಾಡಿದಳು?

ಪ್ರೀತಿ ಅಂದರೇನೆ ಹಾಗೆ. ಇದು ಯಾವಾಗ ಯಾರಮೇಲೆ ಎಲ್ಲಿ ಹುಟ್ಟಿಕೊಳ್ಳತ್ತೋ ಹೇಳಲಿಕ್ಕಾಗುವುದಿಲ್ಲ. ಯಾರನ್ನು ಕಂಡರೆ ಅಸಡ್ಡೆ, ರೇಜಿಗೆ ಹುಟ್ಟಿರುತ್ತದೋ ಅಂಥವರ ಕಡೆಗೇ ಎಷ್ಟೋ ಸಲ ಮನಸ್ಸು ವಾಲಿರುತ್ತದೆ.. ಮುಖ ಕಂಡರೆ ಆಗೋದಿಲ್ಲ ಅನ್ನುವಂತಿದ್ದವರು  ಕೂಡಾ ಜೀವಮಾನದಲ್ಲಿ ಎಂದಿಗೂ ಬೇರಾಗಬಾರದು ಅಂತಾ ತೀರ್ಮಾನಿಸೋದೂ ಇರುತ್ತೆ.

ಹಾಗೆ, ಪರಮ ದುರಹಂಕಾರಿಯೊಬ್ಬನ ಬಗ್ಗೆ ಹುಡುಗಿಗೆ ಇನ್ನಿಲ್ಲದ ಸಿಟ್ಟು. ಹಣದ ತಿಮಿರಿನಲ್ಲಿ ಮೆರೆಯುವ ಅವನನ್ನು ಕಂಡರೇನೆ ಅವಳಿಗೆ ಉರಿ. ಇಂಥವನ ಮೇಲೇ ಕ್ರಮೇಣ ಹುಡುಗಿಗೆ ಲವ್ವಾಗಿಬಿಡುತ್ತೆ. ಅವನನ್ನು ಗಾಢವಾಗಿ ಮೋಹಿಸುತ್ತಾಳೆ. ಪರಸ್ಪರ ಇಬ್ಬರೂ ಭೂಮಿ, ಆಕಾಶ, ಸಮುದ್ರದಷ್ಟು ವಿಸ್ತಾರವಾಗಿ ಪ್ರೇಮಿಸುತ್ತಾರೆ. ಇವರ ಪ್ರೀತಿಯ ಮಧ್ಯೆ ಬೇರೆಲ್ಲ ಸಿನಿಮಾಗಳಂತೆ ಯಾರೋ ವಿಲನ್ನು ಬಂದು ಕಾಟ ಕೊಡೋದಿಲ್ಲ. ಅಪ್ಪ-ಅಮ್ಮ ಪ್ರತಿರೋಧ ತೋರೋದಿಲ್ಲ. ಇನ್ಯಾರ ಕಣ್ಣೂ ಬೀಳಲ್ಲ. ಹೀಗಿದ್ದೂ ಲವ್ವು ಬ್ರೇಕಪ್ಪಾಗುತ್ತದೆ. ಏನಿರಬಹುದು ಕಾರಣ ಅಂತಾ ತಿಳಿದುಕೊಳ್ಳಲು ʻರೇಮೊʼ ಚಿತ್ರವನ್ನು ನೋಡಲೇಬೇಕು.

ಲವ್ವು ಬ್ರೇಕಪ್ಪು ಇತ್ಯಾದಿಗಳು ಮಾತ್ರ ಇಲ್ಲಿಲ್ಲ. ಹಣ, ಯಶಸ್ಸು, ಜನಪ್ರಿಯತೆ ಅನ್ನೋದು ಮನುಷ್ಯನನ್ನು ಹೇಗೆಲ್ಲಾ ಬದಲಿಸಿಬಿಡುತ್ತೆ. ಸೋಲು-ಗೆಲುವಿನ ಸಂದರ್ಭದಲ್ಲಿ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳದಿದ್ದರೆ ಲೈಫಲ್ಲಿ ಏನೆಲ್ಲಾ ಅವಾಂತರಗಳು ಏರ್ಪಡುತ್ತವೆ ಅನ್ನೋದು ಕೂಡಾ ಚಿತ್ರದಲ್ಲಿ ಪ್ರಧಾನವಾಗಿ ತೆರೆದುಕೊಂಡಿದೆ.

ಚಿಟಿಕೆಯಷ್ಟು ಸಹಾಯ ಮಾಡಿ ಕೊಪ್ಪರಿಗೆ ಗಾತ್ರದ ಪ್ರಚಾರ ತೆಗೆದುಕೊಳ್ಳುವವರ ಮಧ್ಯೆ ಸಕಲವನ್ನೂ ಧಾರೆಯೆರೆದು ಮರೆಯಲ್ಲಿ ನಿಂತ ಅಪ್ಪ, ಸ್ನೇಹಕ್ಕಾಗಿ ಬದುಕನ್ನು ಮುಡಿಪಾಗಿಟ್ಟ ಮಲತಾಯಿ, ಒಂದಿಡೀ ಊರಿನ ಸೇತುವೆಯಂತೆ ನಿಂತರೂ ನೆರಳನ್ನೂ ಕಾಣಬಿಡದ ಹೀರೋ ಪಾತ್ರಗಳನ್ನು ಕಟ್ಟಿದ ನಿರ್ದೇಶಕರ ಮನಸ್ಥಿತಿ ಇಷ್ಟವಾಗುತ್ತದೆ.

ನಟ ಇಶಾನ್‌ ಗೆ ಹಾಡು, ಡ್ಯಾನ್ಸು, ಫೈಟು ಮಾತ್ರವಲ್ಲ ನಟನೆಗೂ ವಿಫುಲವಾದ ಅವಕಾಶವಿರುವ ಚಿತ್ರವಿದು. ಒಂದು ಮಟ್ಟಿಗೆ ಇಶಾನ್‌ ಅದನ್ನು ಬಳಸಿಕೊಂಡಿರೋದೂ ನಿಜ. ಆಶಿಕಾ ರಂಗನಾಥ್‌ ಸಿಕ್ಕ ಪಾತ್ರವನ್ನು ಅಕ್ಷರಶಃ ಬಡಿದು ಬಾಯಿಗೆ ಹಾಕೊಂಡು ನಟಿಸಿದ್ದಾರೆ. ಶರತ್‌ ಕುಮಾರ್‌ ಪಾತ್ರ ಇನ್ನೊಂಚೂರು ಗಟ್ಟಿಯಾಗಬೇಕಿತ್ತು.  ರಾಜೇಶ್‌ ನಟರಂಗ ಮತ್ತು ಅಚ್ಯುತ್‌ ಕುಮಾರ್‌ ಎಂದಿನಂತೆ ತುಂಬಾನೇ ಇಷ್ಟವಾಗುತ್ತಾರೆ. ವಯಸ್ಸಾದರೂ ಮಧುಬಾಲಾ ಗ್ಲಾಮರ್‌ ಮಂಕಾಗಿಲ್ಲ. ನಾಯಕ ಮತ್ತು ನಾಯಕಿಯ ನಡುವೆ ಕೀ ರೋಲ್‌ ಪ್ಲೇ ಮಾಡಿರುವ ಶರಣ್ಯಾ ನಟನೆ ಸೂಪರ್.‌  

ಅರ್ಜುನ್‌ ಜನ್ಯ ನೀಡಿರುವ ಟ್ಯೂನಿಗೆ ಕವಿರಾಜ್‌ ಬರೆದಿರುವ ನೊಂದೋರ ಸಾಲಲ್ಲಿ ನಂದೊಂದು ಹೆಸರು ಹಾಡಂತೂ ಪರ್ಮನೆಂಟಾಗಿ ಮನಸ್ಸಿನಲ್ಲುಳಿಯುತ್ತದೆ. ಆಗಾಗ ಇಂಥಾ ಪದಗಳನ್ನು ಪೋಣಿಸಿ ಅಚ್ಚರಿ ಮೂಡಿಸುವ ಕವಿರಾಜ್‌ ಚಿತ್ರದ ಫೀಲು ಹೆಚ್ಚಿಸಿದ್ದಾರೆ.

ನಿರ್ದೇಶಕ ಪವನ್‌ ಒಡೆಯರ್‌ ಸಿಕ್ಕ ಎಲ್ಲವನ್ನೂ ಬಳಸಿಕೊಂಡು, ರಿಚ್‌ ಫೀಲ್‌ ಕೊಡುವ ಚಿತ್ರವನ್ನು ಕಟ್ಟಿದ್ದಾರೆ. ತಾಂತ್ರಿಕವಾಗಿ ತುಂಬಾ ಶ್ರೀಮಂತಿಕೆ ಹೊಂದಿರುವ ಸಿನಿಮಾ ಇದು. ವೈದಿ ಕ್ಯಾಮೆರಾ ಕೆಲಸ ಅದನ್ನು ಸಾಬೀತುಮಾಡಿದೆ.  ಮುಂದೇನಾಗುತ್ತದೆ ಅಂತಾ ಹೇಗೆ ಸುಳಿವು ಸಿಗಬಾರದೋ ಹಾಗೇ ಪಾತ್ರಗಳು ಏನು ಮಾತಾಡಬಹುದು ಅನ್ನೋದು ಮೊದಲೇ ಗೊತ್ತಾಗಬಾರದು. ಈ ನಿಟ್ಟಿನಲ್ಲಿ, ಸಂಭಾಷಣೆಯನ್ನು ಇನ್ನೊಂಚೂರು ಬದಲಿಸಬಹುದಿತ್ತು ಅನ್ನಿಸುತ್ತದೆ. ಹಾಗಂತ ಇದು ಪ್ರಮಾದವಲ್ಲ. ನೋಡುಗರು ಕನೆಕ್ಟ್‌ ಆಗಲಿ ಅಂತಲೇ ನಿರ್ದೇಶಕ ಪವನ್‌  ಉದ್ದೇಶಪೂರ್ವಕವಾಗಿ ಹೀಗೆ ಮಾಡಿರಬಹುದು!

ಅಪರೂಪಕ್ಕೆ ಬಂದಿರುವ ರಿಚ್‌, ಮ್ಯೂಸಿಕಲ್ ಲವ್‌ ಸ್ಟೋರಿಯ ಸಿನಿಮಾ ರೇಮೊ. ಆರಂಭದಿಂದ ಕೊನೆಯವರೆಗೂ ಎಲ್ಲೂ ಬೋರು ಹೊಡೆಸದ ಚಿತ್ರ. ನೀವೂ ನೋಡಿ…


Posted

in

by

Tags:

Comments

Leave a Reply