ದಯಾಳ್ ಪದ್ಮನಾಭನ್ ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರರಂಗದಲ್ಲೂ ಹೆಸರು ಮಾಡುತ್ತಿರುವವರು. ತೊಂಭತ್ತರ ದಶಕದಲ್ಲಿ ರೇಲ್ವೇ ಡಿಪಾರ್ಟ್ʼಮೆಂಟಿನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಚಿತ್ರರಂಗಕ್ಕೆ ಕಾಲಿಟ್ಟವರು. ಓದಲು, ಬರೆಯಲು ಕನ್ನಡವೇ ಗೊತ್ತಿಲ್ಲದಿದ್ದರೂ ಕನ್ನಡ ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಹೆಸರು ಮಾಡಿದ್ದವರು. ನಂತರ ಇದೇ ದಯಾಳ್ ಚಿತ್ರ ನಿರ್ದೇಶನಕ್ಕೂ ಕೈ ಇಟ್ಟು ಸಾಕಷ್ಟು ಸಿನಿಮಾಗಳನ್ನು ರೂಪಿಸಿದ್ದಾರೆ. ಕಮರ್ಷಿಯಲ್ಲು, ಕಲಾತ್ಮಕ ಅನ್ನೋ ಚೌಕಟ್ಟುಗಳನ್ನೆಲ್ಲಾ ಮುರಿದು ಎಲ್ಲ ಥರದ ಸಿನಿಮಾಗಳನ್ನು ಮಾಡುತ್ತಾ ಬಂದದಿದ್ದಾರೆ; ಜೊತೆಗೆ ಗೆದ್ದು ತೋರಿಸಿದ್ದಾರೆ. ಒಂದಾದ ಮೇಲೊಂದು ಸಿನಿಮಾಗಳನ್ನೂ ಮಾಡುತ್ತಲೇ ಬಂದಿರುವ ದಯಾಳ್ ಗೆಲುವಿನ ಗುಟ್ಟು ಏನಿರಬಹುದು ಅಂದರೆ, ಬಹುಮುಖ್ಯವಾಗಿ ಕಾಣುವುದು ಅವರ ಶಿಸ್ತು, ಸಮಯಪ್ರಜ್ಞೆ ಮತ್ತು ಹಿಡಿದ ಕೆಲಸವನ್ನು ಶ್ರದ್ದೆ ವಹಿಸಿ ಮುಗಿಸುವ ದೃಢತೆ.
ಒಂದು ಕಾಲದಲ್ಲಿ ಇದೇ ದಯಾಳ್ ಅವರ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದವರು ಆರ್. ಚಂದ್ರು. ಇವತ್ತು ತಮ್ಮ ಶಿಷ್ಯನ ನಿರ್ಮಾಣದಲ್ಲಿ ಸಿನಿಮಾವೊಂದನ್ನು ನಿರ್ದೇಶಿಸಲು ತಯಾರಾಗಿದ್ದಾರೆ ದಯಾಳ್. ಚಂದ್ರು ನಿರ್ಮಿಸುತ್ತಿರುವ ಎಲ್ಲ ಸಿನಿಮಾಗಳಿಗೆ ದಯಾಳ್ ಬೆಂಬಲವಾಗಿ ನಿಂತಿದ್ದಾರೆ. ಹಾಗೆ ನೋಡಿದರೆ ತಮ್ಮ ಗುರು ದಯಾಳ್ ಅವರನ್ನೂ ಮೀರಿಸಿ ಬೆಳೆದವರು ಚಂದ್ರು. ದಯಾಳ್‌ಗೆ ಹೋಲಿಸಿದರೆ ಚಂದ್ರು ಅವರ ಗುಂಡಿಗೆ ದೊಡ್ಡದು. ದಯಾಳ್ ಪದ್ಮನಾಭನ್ ಹಣದ ವಿಚಾರದಲ್ಲಿ ಯಾವತ್ತೂ ಲಿಮಿಟ್ಟು ಮೀರಿದವರಲ್ಲ. ಮೂರ್ನಾಲ್ಕು ಕೋಟಿಯ ಸಿನಿಮಾ ಮಾಡಿ ಅದನ್ನು ಹೇಗೆ ವಾಪಾಸು ತೆಗೆಯೋದು ಅಂತಾ ಪ್ಲಾನು ಮಾಡುವವರು. ಆದರೆ ಚಂದ್ರು ರೇಂಜೇ ಬೇರೆ. ತಮ್ಮ ಸಮಕಾಲೀನ ನಿರ್ದೇಶಕರು ಕಾರಲ್ಲಿ ಓಡಾಡಲೂ ಯೋಚಿಸುತ್ತಿದ್ದ ಹೊತ್ತಲ್ಲಿ ಚಂದ್ರು ಎಲಿಕಾಫ್ಟರಲ್ಲಿ ಜರ್ನಿ ಮಾಡುತ್ತಿದ್ದರು. ಉಪೇಂದ್ರ ಅವರ ಮಾರುಕಟ್ಟೆ ಬಿದ್ದು ಹೋಗಿದ್ದ ಸಮಯದಲ್ಲೇ ಐ ಲವ್ ಯೂ ಸಿನಿಮಾ ಮಾಡಿ, ಅವರಿಗೆ ಮತ್ತೆ ವರ್ಚಸ್ಸು ತಂದು ಕೊಟ್ಟಿದ್ದರು. ಅದೇ ಉಪ್ಪಿಯನ್ನಿಟ್ಟುಕೊಂಡು ಕಬ್ಜ ಮಾಡಿ ಎಪ್ಪತ್ತೆಂಭತ್ತು ಕೋಟಿ ವಹಿವಾಟು ನಡೆಸಿದವರು.
ಒಂದು ಸಿನಿಮಾ ಮಾಡಲೂ ಭಯ ಪಡುವಂತಾ ಸನ್ನಿವೇಷದಲ್ಲಿ ಬರೋಬ್ಬರಿ ಐದಾರು ಸಿನಿಮಾಗಳನ್ನು ಒಟ್ಟೊಟ್ಟಿಗೇ ಅನೌನ್ಸ್ ಮಾಡಿದವರು. ಸಿನಿಮಾವನ್ನು ನಂಬಿ ಹೇಗಪ್ಪಾ ಇನ್ವೆಸ್ಟ್ ಮಾಡೋದು ಅಂತಾ ಎಲ್ಲರೂ ಯೋಚಿಸುತ್ತಿರುವಾಗ ʻಅಯ್ಯೋ ಸಿನಿಮಾ ಇಂಡಸ್ಟ್ರಿ ನಷ್ಟದಲ್ಲಿದೆ. ವ್ಯಾಪಾರವಾಗ್ತಿಲ್ಲ ಅಂತಾ ಹೇಳೋದೆಲ್ಲಾ ಸುಳ್ಳು. ನಾನದನ್ನು ನಂಬೋದೇ ಇಲ್ಲ. ಈಗ ನಾನು ನಿರ್ಮಿಸುತ್ತಿರುವ ಮತ್ತು ನಿರ್ದೇಶಿಸಲಿರುವ ಸಿನಿಮಾಗಳನ್ನು ಹೇಗೆ ವ್ಯಾಪಾರ ಮಾಡಿ ತೋರಿಸ್ತೀನಿ ನೋಡಿ ಅಂತಾ ಹೇಳುತ್ತಿರುವ ಅವರ ಧೈರ್ಯ ನಿಜಕ್ಕೂ ಮೆಚ್ಚುವಂಥದ್ದು. ನೂರು ರುಪಾಯಿ ಕೈಲಿ ಹಿಡಿದು ಚಿತ್ರರಂಗಕ್ಕೆ ಬಂದವನು ನಾನು. ಇಷ್ಟರ ಮಟ್ಟಿಗೆ ಬಂದು ನಿಂತಿದ್ದೇನೆ… ಮತ್ತಷ್ಟು ಸಾಹಸಗಳನ್ನು ಮಾಡಿ ಗೆದ್ದು ತೋರಿಸ್ತೀನಿ… ಅನ್ನುವ ಚಂದ್ರು ಮಾತು ಸಿನಿಮಾ ರಂಗದ ಭಯಭೀತ ವಾತಾವರಣಕ್ಕೆ ಔಷಧ ನೀಡುವಂತಿದೆ.
ಗುರು ದಯಾಳ್ ಮತ್ತು ಅವರನ್ನು ಮೀರಿಸಿರುವ ಶಿಷ್ಯ ಚಂದ್ರು ಇಬ್ಬರಿಗೂ ಒಳ್ಳೇದಾಗ್ಲಿ…
Leave a Reply
You must be logged in to post a comment.