ಅನೀಶ್ ತೇಜೇಶ್ವರ್ ಹೀರೋ ಆಗಿ ನಟಿಸಿದ್ದ ‘ಅಕಿರ’ ಎನ್ನುವ ಸ್ಟೈಲಿಷ್ ಸಿನಿಮಾವನ್ನು ನಿರ್ದೇಶಿಸಿದ್ದವರು ನವೀನ್ ರೆಡ್ಡಿ. ಈಗ ನವೀನ್ ಮತ್ತೊಂದು ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದು ರಿಲ್ಯಾಕ್ಸ್ ಸತ್ಯ!
ಇದೇ ವಾರ ತೆರೆಗೆ ಬರುತ್ತಿರುವ ರಿಲ್ಯಾಕ್ಸ್ ಸತ್ಯ ಸಿನಿಮಾದಲ್ಲಿ ಸಾಕಷ್ಟು ಹೊಸತನಗಳು ತುಂಬಿಕೊಂಡಿವೆ. ಈ ಚಿತ್ರದಲ್ಲಿ ಪ್ರಭು ಮಂಡ್ಕೂರ್ ಹೀರೋ ಆಗಿ ನಟಿಸಿದ್ದಾರೆ. ಈಗಾಗಲೇ ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪ್ರಭು ಕನ್ನಡ ಚಿತ್ರರಂಗದ ಭರವಸೆಯ ನಾಯಕನಟ. ಇಂಥ ಪ್ರಭು ನಟನೆಯಲ್ಲಿ ರಿಲ್ಯಾಕ್ಸ್ ಸತ್ಯ ಸಿನಿಮಾ ಬೇರೆಯದ್ದೇ ಲೆವೆಲ್ಲಿನಲ್ಲಿ ಬಂದಿದೆ ಅಂತಾ ಖುದ್ದು ಗಾಂಧಿನಗರದಲ್ಲಿ ಟಾಕ್ ಕ್ರಿಯೇಟ್ ಆಗಿದೆ. ಪರಿಸ್ಥಿತಿ ತೀರಾ ಕೈ ಮೀರಿಹೋದಾಗ ವ್ಯಾಘ್ರನಂತೆ ವರ್ತಿಸುವ ಪರಿಸ್ಥಿತಿ ಎದುರಾಗುತ್ತದಲ್ಲಾ? ಆಗ ಸ್ವತಃ ಹೀರೋ ತನಗೆ ತಾನೇ ಸ್ವಗತದಲ್ಲಿ ರಿಲ್ಯಾಕ್ಸ್ ಸತ್ಯಾ ಅಂತಾ ಹೇಳಿಕೊಳ್ಳುವುದು ಈ ಚಿತ್ರದಲ್ಲಿ ಸಿಗ್ನೇಜರ್ ಡೈಲಾಗ್ ನಂತೆ ಬಳಕೆಯಾಗಿದೆಯಂತೆ. ಇದನ್ನೇ ಶೀರ್ಷಿಕಿಯನ್ನಾಗಿಯೂ ಇಡಲಾಗಿದೆ.
ನವೀನ್ ರೆಡ್ಡಿ ಅಕಿರ ಸಿನಿಮಾವನ್ನೇ ಕನಸಿಟ್ಟುಕೊಂಡು ಮಾಡಿದ್ದರು. ಅನೀಶ್ ಪಾಲಿಗೆ ಆ ಸಿನಿಮಾ ಒಂದು ಮಟ್ಟಕ್ಕೆ ಬ್ರೇಕ್ ನೀಡಿತ್ತು. ನಾಯಕಿ ಕ್ರಿಷಿ ತಾಪಂಡ ಕೂಡಾ ಸಾಕಷ್ಟು ಅವಕಾಶ ಗಿಟ್ಟಿಸಿಕೊಳ್ಳುವಂತಾಯಿತು. ರಿಲ್ಯಾಕ್ಸ್ ಸತ್ಯ ಕರಾರುವಕ್ಕಾದ ಗೆಲುವು ಸಾಧಿಸುತ್ತದೆ ಅನ್ನೋದನ್ನು ಈಗಾಗಲೇ ರಿಲೀಸಾಗಿರುವ ಚಿತ್ರದ ಟ್ರೇಲರ್ ಸ್ಪಷ್ಟವಾಗಿ ಸಾರಿ ಹೇಳುತ್ತಿದೆ. ಮಾನ್ವಿತಾ ಮತ್ತು ಪ್ರಭು ಕಂಬಿನೇಷನ್ನು, ಉಗ್ರಂ ಮಂಜು, ಕಡ್ಡಿಪುಡಿ ಚಂದ್ರು ಮುಂತಾದವರ ನಟನೆಯ ಜೊತೆಗೆ ನಿರ್ದೇಶಕರು ಕಟ್ಟಿಕೊಟ್ಟಿರುವ ವಿಕ್ಷಿಪ್ತ ವಾತಾವರಣ ಎಲ್ಲವೂ ಟ್ರೇಲರಿನಲ್ಲೇ ಹೊಸದೇನ್ನೋ ಹೇಳುವಂತೆ ಗೋಚರಿಸಿದೆ. ಈ ಟ್ರೇಲರು ನೋಡಿದ ಯಾರಿಗೇ ಆಗಲಿ ಸಿನಿಮಾವನ್ನೊಮ್ಮೆ ನೋಡಲೇಬೇಕು ಅನ್ನಿಸದೇ ಇರಲಾರದು.
ಈ ವಾರ ಬಿಡುಗಡೆಯಾಗಲಿರುವ ಸಿನಿಮಾ ಕೂಡಾ ಟ್ರೇಲರಿನಂತೆಯೇ ಶಕ್ತಿಯುತವಾಗಿದ್ದೇ ಆದಲ್ಲಿ ರಿಲ್ಯಾಕ್ಸ್ ಸತ್ಯ ಕನ್ನಡ ಚಿತ್ರರಂಗಕ್ಕೊಂದು ದಾಖಲೆಯ ಸಿನಿಮಾವಾಗುವುದರಲ್ಲಿ ಸಂದೇಹವಿಲ್ಲ. ಮೋಹನ್ ಕುಮಾರ್ ಎಚ್.ಆರ್, ಮೋಹನರೆಡ್ಡಿ ಮತ್ತು ಚೇತನ್ಕುಮಾರ್ ನಿರ್ಮಿಸಿರುವ ರಿಲ್ಯಾಕ್ಸ್ ಸತ್ಯ ಚಿತ್ರದಲ್ಲಿರುವ ನಾಲ್ಕು ಹಾಡುಗಳಿಗೆ ಆನಂದ ರಾಜಾ ವಿಕ್ರಂ ಸಂಗೀತ ಸಂಯೋಜನೆ ಮಾಡಿದ್ದಾರೆ.