ನವೀನ್ ರೆಡ್ಡಿ ನಿರ್ದೇಶನದ ರಿಲ್ಯಾಕ್ಸ್ ಸತ್ಯ ತೆರೆಗೆ ಬಂದಿದೆ. ಈ ಹಿಂದೆ ಅಕಿರ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದ ನವೀನ್ ಅವರ ಮತ್ತೊಂದು ಪ್ರಯತ್ನವಿದು.
ಅಣ್ಣ ತಮ್ಮಂದಿರಂತಾ ಇಬ್ಬರು ವ್ಯಕ್ತಿಗಳು. ಒಂದೇ ಸಲಕ್ಕೆ ದುಡ್ಡುಮಾಡುವ ಸ್ಕೆಚ್ಚು ರೂಪಿಸುತ್ತಾರೆ. ಹುಡುಗಿಯೊಬ್ಬಳನ್ನು ಕಿಡ್ನ್ಯಾಪ್ ಕೂಡಾ ಮಾಡಿಬಿಡುತ್ತಾರೆ. ಆ ಹುಡುಗಿಗೂ ಇವರಿಬ್ಬರಿಗೂ ಏನು ಸಂಬಂಧ? ಆಕೆಯ ತಂದೆ ದುಡ್ಡು ಕೊಟ್ಟು ಮಗಳನ್ನು ಬಿಡಿಸಿಕೊಂಡು ಹೋಗುತ್ತಾನಾ? ಈ ಇಬ್ಬರು ಯಾರೆಂದು ಆಕೆ ಕಂಡು ಹಿಡಿಯುತ್ತಾಳಾ? ಹಣಕ್ಕಾಗಿ ಕ್ರೈಮು ಮಾಡಲು ಹೊರಟವರ ನಡುವಿನ ಬಾಂಧವ್ಯ ಏನಾಗುತ್ತದೆ – ಹೀಗೆ ಹಂತ ಹಂತವಾಗಿ ಕುತೂಹಲ ಕೆರಳಿಸುತ್ತಾ, ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ ರಿಲ್ಯಾಕ್ಸ್ ಸತ್ಯ. ಮೇಲ್ನೋಟಕ್ಕಿಲ್ಲಿ ತಮಿಳಿನ ಎಚ್ಚರಿಕೈ ಸಿನಿಮಾದ ಛಾಯೆ ಕಾಣುತ್ತದಾದರೂ, ಸಾಕಷ್ಟು ಬದಲಾವಣೆಗಳಿವೆ.
ನವೀನ್ ರೆಡ್ಡಿ ಈ ಹಿಂದೆ ಕೂಡಾ ಅಕಿರ ಸಿನಿಮಾವನ್ನು ತುಂಬಾ ಸ್ಟೈಲಿಷ್ ಆಗಿ ರೂಪಿಸಿದ್ದರು. ರಿಲ್ಯಾಕ್ಸ್ ಸತ್ಯನನ್ನು ಕೂಡಾ ಅಷ್ಟೇ ಚೆಂದಗೆ ಸೃಷ್ಟಿಸಿದ್ದಾರೆ. ಮರದಲ್ಲೇ ನಿರ್ಮಿಸಿದಂಥಾ ಮನೆ, ಮಂಚ, ಗನ್ನು, ರಸ್ತೆ ಜೊತೆಗೆ ನಾಲ್ಕು ಮುಖ್ಯ ಪಾತ್ರಗಳಷ್ಟೇ ಇಲ್ಲಿರೋದು. ಆದರೆ ಪ್ರತೀ ಕ್ಷಣ ಕೂಡಾ ‘ಏನಾಗಬಹುದು ಏನಾಗಬಹುದು ಅನ್ನೋ ಕುತೂಹಲ ಕ್ರಿಯೇಟ್ ಮಾಡುತ್ತದೆ. ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಓಡಾಡುವ ಗನ್ನು ಯಾರ ಜೀವ ತೆಗೆದುಬಿಡುತ್ತೋ ಎನ್ನುವ ಟೆನ್ಷನ್ ಸೃಷ್ಟಿಸುತ್ತದೆ.
ಉಗ್ರಂ ಮಂಜು ಮತ್ತು ಪ್ರಭು ಮುಂಡ್ಕೂರ್ ಕಣ್ಣಲ್ಲೇ ಅಭಿನಯಿಸಿ ತೋರಿಸಿದ್ದಾರೆ. ಮಾನ್ವಿನಾ ಹರೀಶ್ ಪಾತ್ರವನ್ನೇ ನುಂಗಿಕೊಂಡವರಂತೆ ನಟಿಸಿದ್ದಾರೆ. ಕಡ್ಡಿಪುಡಿ ಚಂದ್ರುಗೆ ಕಾಮಿಡಿ ಪೊಲೀಸ್ ರೋಲು ಹೇಳಿಮಾಡಿಸಿದಂತಿದೆ. ಆನಂದ್ ರಾಜವಿಕ್ರಮ ಚೆಂದದಸಂಗೀತ ನೀಡಿದ್ದಾರೆ. ರೀ ರೆಕಾರ್ಡಿಂಗ್ ಅಂತೂ ಸಿನಿಮಾವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಯೋಗಿ ಛಾಯಾಗ್ರಹಣ, ಲೈಟಿಂಗು ಸಖತ್ತಾಗಿದೆ. ಶ್ರೀಕಾಂತ್ ಸಂಕಲನ ಚುರುಕಾಗಿದೆ. ವಿಕ್ರಂ ಮೋರ್ ಅವರ ಸಾಹಸ ಮೈ ಜುಮ್ಮೆನಿಸುತ್ತದ.ಎ ಶಂಕರ್ ರಾಮನ್ ಸಂಭಾಷಣೆ ಹದವಾಗಿದೆ. ಒಟ್ಟಾರೆ ಈ ವಾರ ಬಿಡುಗಡೆಯಾಗಿರುವ ಸಿನಿಮಾಗಳ ಪೈಕಿ ರಿಲ್ಯಾಕ್ಸ್ ಸತ್ಯ ಕೂಡಾ ನೋಡುಗರ ಮನಸ್ಸು ಗೆದ್ದಿದ್ದಾನೆ. ಜನ ಥಿಯೇಟರಿಗೇ ಹೋಗಿ ನೋಡಿದರೆ ಸತ್ಯನ ಅಸಲೀ ಫೀಲ್ ಗೊತ್ತಾಗುತ್ತದೆ!