ಟೈಗರ್ ಬಿ ಬಿ ಅಶೋಕ್ ಕುಮಾರ್ ಕರ್ನಾಟಕ ಕಂಡ ಎನರ್ಜೆಟಿಕ್ ಪೊಲೀಸ್ ಅಧಿಕಾರಿ. ದೈತ್ಯ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು. ಅಶೋಕ್ ಕುಮಾರ್ ಅವರು ಅಫಿಷಿಯಲ್ಲಾಗಿ ಮಾಡಿದ ಎನ್ ಕೌಂಟರ್ ಗಳ ಸಂಖ್ಯೆ ಬರೋಬ್ಬರಿ ಹದಿನೆಂಟು. ರಿಯಲ್ ಪೊಲೀಸ್ ಟೈಗರ್ ಅಶೋಕ್ ಕುಮಾರ್ ಮತ್ತು ರಿಯಲ್ ಡಾನ್ ಜಯರಾಜ್ ನಡುವೆ ಅನೇಕಸಲ ಕದನಗಳು ಏರ್ಪಟ್ಟ ನಿದರ್ಶನಗಳಿವೆ. ಇಂದು ಅದೇ ಅಶೋಕ್ ಕುಮಾರ್ ಜಯರಾಜ್ ಮಗನ ಸಿನಿಮಾಗೆ ಮುಖ್ಯ ಅತಿಥಿಯಾಗಿ ಬಂದು ಶುಭ ಹಾರೈಸಿದ್ದಾರೆ…
ʻʻರೈಮ್ಸ್ ಸಿನಿಮಾದಲ್ಲಿ ಜಯರಾಜ್ ಅವರ ಮಗ ಅಜಿತ್ ಹೀರೋ ಅಂತಾ ಹೇಳಿದ್ರು. ಆ ಕಾರಣಕ್ಕೇ ಈ ಚಿತ್ರದ ಸಮಾರಂಭಕ್ಕೆ ಬಂದಿದ್ದೀನಿ. ನಾನು ಸರ್ವಿಸ್ ನಲ್ಲಿದ್ದಾಗ ಜಯರಾಜ್ ಜೊತೆ ಸಾಕಷ್ಟು ಕಾದಾಡಿದ್ದಿದೆ. ಡಾನ್ ಜಯರಾಜ್ ಪೊಲೀಸರನ್ನು ‘ನಾಯಿ’ ಅನ್ನುತ್ತಿದ್ದರು. ಇವತ್ತು ಅದೇ ಜಯರಾಜ್ ಮಗ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಜಕ್ಕೂ ಖುಷಿಯಾಗುತ್ತಿದೆʼʼ ಎಂದ ಅಶೋಕ್ ಕುಮಾರ್ ಸಿನಿಮಾ ರಂಗಕ್ಕೂ ತಮಗೂ ಇರುವ ನಂಟು ಮತ್ತು ಇವತ್ತಿನ ಸಿನಿಮಾಗಳಲ್ಲಿ ಪೊಲೀಸರನ್ನು ಬಳಸಿಕೊಳ್ಳುತ್ತಿರುವ ಬಗೆಯನ್ನು ವಿವರಿಸಿದರು.
ರೈಮ್ಸ್ ಬಗ್ಗೆ : ಆ ರೈಮ್ಸ್ ಪ್ಲೇ ಆಯಿತೆಂದರೆ, ಅನಾಮತ್ತಾಗಿ ಒಂದು ಹೆಣ ಉರುಳಿತೆಂದೇ ಅರ್ಥ. ಆ ಪದ್ಯಕ್ಕೂ ಅಲ್ಲಿ ನಡೆಯುವ ಕೊಲೆಗಳಿಗೂ ಏನು ಸಂಬಂಧ? ಈ ನಿಗೂಢ ಕೊಲೆಗೂ ಅಲ್ಲಿ ಕೇಳಿಸುವ ರೈಮ್ಸ್ ಗೂ ಇರುವ ಸಂಬಂಧವನ್ನು ಹುಡುಕಲು ಸಾಧ್ಯವಾಗುತ್ತದಾ? ಅನ್ನೋದರ ಸುತ್ತ ಹೆಣೆದುಕೊಂಡಿರುವ ಸಿನಿಮಾ ರೈಮ್ಸ್!
ದುಡ್ಡಿರುವವರು ಸಿನಿಮಾ ಮೇಲೆ ಇನ್ವೆಸ್ಟ್ ಮಾಡುತ್ತಾರೆ. ಆದರೆ ಸಿನಿಮಾ ನಿರ್ಮಾಪಕನಾಗುವ ಉದ್ದೇಶದಿಂದಲೇ ನಾಲ್ಕಾರು ವರ್ಷ ಓಡಾಡಿ, ಒಂದಿಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಪೆಡೆದವರು ಜ್ಞಾನಶೇಖರ್ ಸಿದ್ದಯ್ಯ. ಸಿನಿಮಾ ಮೇಲೆ ಅಪಾರ ಪ್ರೀತಿ ಹೊಂದಿರುವ ಜ್ಞಾನಶೇಖರ್ ತಮ್ಮ ಬಹುಕಾಲದ ಗೆಳೆಯರಾದ ರವಿಕುಮಾರ್, ಗಿರೀಶ್ ಗೌಡ, ರಮೇಶ್ ಆರ್ಯ ಅವರ ಸಹಕಾರ ಪಡೆದು, ಸ್ಕ್ವೇರ್ ಕಾನ್ಸೆಪ್ಟ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ, ಆ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ್ದಾರೆ.
ಐದಾರು ಕಿರುಚಿತ್ರಗಳನ್ನು ರೂಪಿಸಿ, ಪ್ರಶಸ್ತಿಗಳನ್ನೂ ಪಡೆದಿರುವ ಮತ್ತು ಕಮಲ ಹಾಸನ್ ಅವರ ಅಸಿಸ್ಟೆಂಟ್ ಡೈರೆಕ್ಟರ್ ಒಬ್ಬರ ಬಳಿ ಕೆಲಸ ಕಲಿತು ಬಂದಿರುವುದಾಗಿ ಹೇಳುತ್ತಿರುವ ಯುವಕ ಅಜಿತ್ ಕುಮಾರ್. ಈಗ ರೈಮ್ಸ್ ಸಿನಿಮಾದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಸಸ್ಪೆನ್ಸ್ ಮತ್ತು ಕ್ರೈಂ ಥ್ರಿಲ್ಲರ್ ಜಾನರಿನ ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ತಯಾರಾಗಿದೆ. ಅಜಿತ್ ಜಯರಾಜ್, ಸುಷ್ಮಾ ನಾಯರ್, ಶುಭಾ ಪೂಂಜಾ, ಅಭಿನಯ, ಅಪರ್ಣ, ಮಿಮಿಕ್ರಿ ಗೋಪಿ, ಚನ್ನರಾಜು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.