ಕುರುಕ್ಷೇತ್ರ ಸೇರಿ ಈವರೆಗೆ ನಿಖಿಲ್ ಕುಮಾರ್ ನಟನೆಯ ಮೂರು ಸಿನಿಮಾಗಳು ಬಂದಿವೆ. ಪೂರ್ಣ ಪ್ರಮಾಣದ ಹೀರೋ ಲೆಕ್ಕದಲ್ಲಿ ತೆಗೆದುಕೊಂಡರೆ ಈಗ ಬಿಡುಗಡೆಯಾಗಿರುವ ರೈಡರ್ ಮೂರನೇದು. ಮೊದಲ ಸಿನಿಮಾ ಗ್ಲೋಬಲ್ ಲೆವೆಲ್ಲಿನ ಮೆಡಿಕಲ್ ಮಾಫಿಯಾ ಇತ್ಯಾದಿಗಳ ಸುತ್ತಲಿನ ಸಬ್ಜೆಕ್ಟ್ ಒಳಗೊಂಡಿತ್ತು. ನಂತರದ ಸೀತಾರಾಮ ಕಲ್ಯಾಣ ಔಟ್ ಅಂಡ್ ಔಟ್ ಫ್ಯಾಮಿಲಿ ಬ್ಯಾಕ್ ಡ್ರಾಪ್ ಹೊಂದಿತ್ತು. ಒಂದೇ ಬಗೆಯ ಸಿನಿಮಾ ಒಪ್ಪಿಕೊಳ್ಳದೆ, ಭಿನ್ನ ಬಗೆಯ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡುಬಂದಿರುವ ನಿಖಿಲ್ ಈ ಸಲ ಯಾವ ಜಾನರನ್ನುಆಯ್ಕೆ ಮಾಡಿಕೊಳ್ಳಬಹುದೆನ್ನುವ ಕುತೂಹಲವಿತ್ತು. ಈಗ ತೆರೆಗಪ್ಪಳಿಸಿರುವ ರೈಡರ್ ಎಲ್ಲವನ್ನೂ ಜಾಹೀರು ಮಾಡಿದೆ…
ಒಂದು ಅನಾಥಾಶ್ರಮ, ಅಚಾನಕ್ಕಾಗಿ ಅಲ್ಲಿ ಜೊತೆಯಾಗುವ ಪುಟಾಣಿ ಜೋಡಿ ಹಕ್ಕಿಗಳು. ಒಂದು ಹಕ್ಕಿ ಮತ್ತೆ ಹೆತ್ತವರೊಂದಿಗೆ ಗೂಡು ಸೇರಿದರೆ, ಗಂಡು ಹಕ್ಕಿ ಮತ್ತೊಬ್ಬರ ಆಶ್ರಯದಲ್ಲಿ ಬೆಳೆದಿರುತ್ತದೆ. ಹುಡುಗ ಬ್ಯಾಸ್ಕೆಟ್ ಬಾಲ್ ಪಟುವಾದರೆ, ಹುಡುಗಿ ತನ್ನದೇ ಸಂಸ್ಥೆಗೆ ಬಾಸ್ ಆಗಿರುತ್ತಾಳೆ. ದೊಡ್ಡವರಾದಮೇಲೂ ಅವರಿಬ್ಬರಲ್ಲೂ ಬಾಲ್ಯದ ಪ್ರೀತಿ ಕಾಡುತ್ತಲೇ ಇರುತ್ತದೆ. ಹೇಗಾದರೂ ಮಾಡಿ ಒಬ್ಬರನ್ನೊಬ್ಬರು ಸಂಧಿಸಬೇಕು ಅನ್ನೋದನ್ನು ಧ್ಯೇಯವಾಗಿಸಿಕೊಂಡಿರುತ್ತಾರೆ. ಪರಸ್ಪರರು ಹುಡುಕಾಟ ಆರಂಭಿಸುತ್ತಾರೆ. ಪಕ್ಕದಲ್ಲೇ ಸುಳಿದಾಡಿದರೂ, ಎದುರು ಬದುರು ಬಂದು ಕೂತರೂ, ಜೊತೆಯಲ್ಲೇ ಕೆಲಸ ಮಾಡಿದರೂ, ಒಟ್ಟೊಟ್ಟಿಗೇ ಓಡಾಡಿದರೂ, ಕಿತ್ತಾಟಗಳು ಘಟಿಸಿ, ಮಾತು ಮಥಿಸಿದ ಮೇಲೂ ಇವನೇ ನನ್ನ ಹುಡುಗ, ನಾನು ಹುಡುಕುತ್ತಿರುವ ಜೀವ ಇವಳೇ ಅಂತಾ ಇಬ್ಬರಿಗೂ ಗೊತ್ತಾಗೋದೇ ಇಲ್ಲ. ಯಾಕೆಂದರೆ, ಇಡೀ ಸಿನಿಮಾ ರಚನೆಗೊಂಡಿರೋದೇ ಜಸ್ಟ್ ಮಿಸ್ ಫಾರ್ಮುಲಾ ಆಧಾರದಲ್ಲಿ.
ಹಾಗೆ ನೋಡಹೋದರೆ, ಜಸ್ಟ್ ಮಿಸ್ ಸೂತ್ರದ ಆಧಾರದಲ್ಲಿ ಕಳೆದೆರಡು ದಶಕಗಳಲ್ಲೇ ಹತ್ತು ಹಲವು ಸಿನಿಮಾಗಳು ಬಂದು ಹೋಗಿವೆ. ಇದರಲ್ಲೇನು ವಿಶೇಷ ಅಂದುಕೊಳ್ಳುವಂತಿಲ್ಲ. ಪ್ರತಿ ದೃಶ್ಯದಲ್ಲೂ ಟ್ವಿಸ್ಟುಗಳು ಎದುರಾಗುತ್ತದೆ. ಇನ್ನೇನು ಒಬ್ಬರಿಗೊಬ್ಬರ ಗುರುತು ಸಿಕ್ಕೇಬಿಟ್ಟಿತು ಅಂದುಕೊಳ್ಳುವ ಹೊತ್ತಿಗೇ ಏನಾದರೊಂದು ಅಡ್ಡಗಾಲು ಬಂದು ಬೀಳುತ್ತದೆ.
ಹಾಗಂತ ರೈಡರ್ ಬರಿಯ ಲವ್ ಸುತ್ತಲೇ ಸುತ್ತಿಕೊಂಡಿಲ್ಲ. ಪ್ರೀತಿಯ ಪ್ರಧಾನ ಎಳೆಯ ಜೊತೆಗೇ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ದೃಶ್ಯಗಳೂ ಬೆಸೆದುಕೊಂಡಿವೆ. ವಿಶೇಷಚೇತನ ಹೆಣ್ಣುಮಗಳ ಬದುಕಿಗೆ ನೆರವಾಗುವ ನಾಯಕ ನಾಯಕಿ, ಮೂಲ ನಿವಾಸಿಗಳನ್ನು ಎತ್ತಂಗಡಿ ಮಾಡಿ ಬಿಲ್ಡಿಂಗೆಬ್ಬಿಸಲು ಪ್ಲಾನು ಮಾಡುವ ರಿಯಲ್ ಎಸ್ಟೇಟ್ ಕ್ರಿಮಿ, ಬಾಲ್ಯದಲ್ಲಿ ಬೆಳೆದ ಪರಿಸರವನ್ನು ಎದೆಗವುಚಿಕೊಳ್ಳುವ, ತನ್ನುಡುಗಿ ಬಿಟ್ಟು ಹೋದ ಕಿವಿಯ ರಿಂಗನ್ನು ಪ್ರಾಣದಂತೆ ಕಾಪಿಟ್ಟುಕೊಳ್ಳುವ ಹೀರೋ, ಪ್ರಾಣ ತೆಗೆಯಲು ಬಂದವನ ಮನಸ್ಸನ್ನೂ ಬದಲಿಸುವ ಪ್ರೀತಿ, ಗೀತಿ ಇತ್ಯಾದಿಗಳೆಲ್ಲಾ ಸೇರಿ ಚೆಂದ ಕಥೆಯಾಗಿ ರೂಪುಗೊಂಡಿದೆ.
ʻʻಸಂಬಂಧದ ಬೆಲೆ ಗೊತ್ತಿಲ್ಲದೇ ಎಲ್ಲವನ್ನೂ ಲೆಕ್ಕಾಚಾರದ ತಕ್ಕಡಿಯಲ್ಲಿ ತೂಗೋದು ಗೊತ್ತಿಲ್ಲ….ʼʼ, ʻʻಎದೆಯಲ್ಲಿ ಬೆಂಕಿ ಇಟ್ಕೊಂಡು ಗಾರ್ಡನಲ್ಲಿ ಹೂವ ಬೆಳೆಸಕ್ಕೆ ಬಂದಿದ್ದೀಯಾ?…ʼʼ – ಇಂಥಾ ನೂರಾರು ಸಂಭಾಷಣೆಯ ಸಾಲುಗಳು ಇಡೀ ಚಿತ್ರದಲ್ಲಿವೆ ಮತ್ತು ಈ ಮಾತುಗಳೇ ಸಿನಿಮಾದ ಗುರುತ್ವ ಶಕ್ತಿಯೂ ಆಗಿದೆ. ಡವ್ವಾ ಡವ್ವಾ ಹಾಡು ಕೂತವರನ್ನು ಸೀಟಲ್ಲೇ ಕುಣಿಸುತ್ತದೆ. ಪ್ರತಿದೃಶ್ಯಕ್ಕೂ ಮುತುವರ್ಜಿ ಕೊಟ್ಟು, ಶರತ್ ಚಕ್ರವರ್ತಿ ಬರೆಯುವ ಸಂಭಾಷಣೆ ಯಾವತ್ತಿಗೂ ಚೆಂದವೇ.
ಆಕ್ಷನ್ ಹೀರೋ ಇಮೇಜು ರೂಪಿಸಿಕೊಳ್ಳ ಲು ಯತ್ನಿಸಿದ್ದ ನಿಖಿಲ್ ಈ ಬಾರಿ ಏಕಾಏಕಿ ಲವರ್ ಬಾಯ್ ಅವತಾರವೆತ್ತಿದ್ದಾರೆ. ತುಂಬಾ ಮುದ್ದಾಗಿ ಕಾಣುತ್ತಾರೆ ಕೂಡಾ. ಸಿನಿಮಾದಿಂದ ಸಿನಿಮಾಗೆ ನಿಖಿಲ್ ನಟನೆ ಪಕ್ವವಾಗುತ್ತಿದೆ. ಮೆಲ್ಲನೆ ಮೆಲ್ಲನೆ ಹಾಡಿನ ಸಾಹಿತ್ಯ, ಸಂಗೀತ, ಮತ್ತು ಹಿನ್ನೆಲೆಗಳೆಲ್ಲಾ ಬಾಚಿತಬ್ಬಿ ಮುತ್ತಿಕ್ಕುವಂತಿದೆ. ಅಪರೂಪಕ್ಕೆ ಚಿಕ್ಕಣ್ಣನಿಗಿಲ್ಲಿ ನಿಜಕ್ಕೂ ನಗಿಸುವ ಪಾತ್ರ ದಕ್ಕಿದೆ. ಕೆ.ಆರ್.ಪೇಟೆ ಶಿವುಗೆ ಇನ್ನಷ್ಟು ದೃಶ್ಯಗಳು ಸಿಗಬೇಕಿತ್ತು. ಈ ಗರುಡಾ ರಾಂ ನಟನೆ ಕೆಜಿಎಫ್ ಗಟಾರದಿಂದ ಎದ್ದು ಹೊರಬರುವಂತೆ ಕಾಣುತ್ತಿಲ್ಲ. ನಾಯಕಿ ಕಶ್ಮೀರಾ ಪರ್ದೇಶಿ ಮುಖದಲ್ಲಿ ಕಾಶ್ಮೀರದಷ್ಟೇ ಸೊಬಗಿದೆ. ಕ್ಯಾಮೆರಾ ಕೆಲಸ ಮಾಡಿರುವ ಶ್ರೀಶಾ ಕುದುವಳ್ಳಿಗೆ ಯಾವುದನ್ನೂ ಅತಿಯಾಗಿಸದೆ, ಕತೆ ಬಯಸಿದಷ್ಟೇ ತೆರೆಯನ್ನು ಸಿಂಗರಿಸುವ ಕಲೆ ಗೊತ್ತಿದೆ. ಅನಗತ್ಯ ಹೊಡೆದಾಟದ ದೃಶ್ಯಗಳು ಬೇಕಿರಲಿಲ್ಲ ಅನ್ನೋದನ್ನು ದೊಡ್ಡವರು, ಚಿಕ್ಕವರು, ಕ್ಲಾಸು, ಮಾಸು, ಫ್ಯಾಮಿಲಿ, ಫ್ರೆಂಡ್ಸುಗಳೆನ್ನು ವರ್ಗ ಬೇಧವಿಲ್ಲದೆ ನೋಡಬಹುದಾದ ಸಿನಿಮಾ ರೈಡರ್…!
Comments