ದೂರದ ಕುಂದಾಪುರದವರಾದರೂ, ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ, ಅದರ ಜೊತೆಜೊತೆಗೇ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್. ಕನ್ನಡ ಸಿನಿಮಾಗಳನ್ನು ಏಕತಾನತೆಯಿಂದ ಹೊರತರಬೇಕು ಅಂತಾ ಕನಸಿಟ್ಟುಕೊಂಡಿದ್ದ ರಿಷಬ್ ಚಿತ್ರರಂಗದಲ್ಲಿ ಏಕಾಏಕಿ ಹೆಸರು ಮಾಡಿದ ವ್ಯಕ್ತಿಯಲ್ಲ. ಆರಂಭದಲ್ಲಿ ಎ.ಎಂ.ಆರ್. ರಮೇಶ್ ಅವರ ಸೈನೇಡ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗುವ ಮೂಲಕ ಚಿತ್ರರಂಗ ಪ್ರವೇಶಿಸಿದ ರಿಶಬ್ ಆ ನಂತರದಲ್ಲಿ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಅರವಿಂದ್ ಕೌಶಿಕ್ ತೆಕ್ಕೆಗೆ ಬಿದ್ದರು. ಅರವಿಂದ್ ಟೀವಿ ಮತ್ತು ಸಿನಿಮಾಗಳೆರಡರಲ್ಲೂ ಏಕಕಾಲದಲ್ಲಿ ಕೆಲಸ ಮಾಡುತ್ತಾ ಬಂದವರು. ಅರವಿಂದ್ ಅವರ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಲೇ ಅವರ ತುಘಲಕ್ ಸಿನಿಮಾದಲ್ಲಿ ರಿಷಬ್ ಸಹ ನಿರ್ದೇಶನದ ಜೊತೆಗೆ ನಟನೆಯನ್ನೂ ನಿಭಾಯಿಸಿದ್ದರು. ನಂತರ ಲೂಸಿಯಾ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿರು. ರಕ್ಷಿತ್ ಶೆಟ್ಟಿ ಜೊತೆ ಉಳಿದವರು ಕಂಡಂತೆ ಸಿನಿಮಾದಲ್ಲೂ ಪ್ರಧಾನ ಪಾತ್ರ ನಿರ್ವಹಿಸಿದರು. ಆ ಹೊತ್ತಿಗೇ ಕರ್ನಾಟಕದ ನಕ್ಸಲ್ ಚಟುವಟಿಕೆ ಮತ್ತು ಎಸ್ ಇ ಜೆಡ್ ಸಮಸ್ಯೆಯ ಕುರಿತಾಗಿ ರಿಕ್ಕಿ ಎನ್ನುವ ಸಿನಿಮಾವನ್ನು ನಿರ್ದೇಶಿಸಿದರು.
ರಿಕ್ಕಿ ರಿಶಬ್ ನಿರ್ದೇಶನದ ಮೊದಲ ಸಿನಿಮಾ. ಸಿನಿಮಾ ಕುರಿತು ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಬಾಕ್ಸಾಫೀಸಿನಲ್ಲಿ ಅಂತಾ ಸೌಂಡು ಮಾಡಲಿಲ್ಲ. ಆ ಹೊತ್ತಿಗೇ ನಮ್ಮ ಜನಕ್ಕೆ ಮೊದಲು ಏನು ಕೊಡಬೇಕು ಅನ್ನೋದನ್ನು ಅರಿತ ರಿಷಬ್ ಕಿರಿಕ್ ಪಾರ್ಟಿಯನ್ನು ನಿರ್ದೇಶಿಸಿದರು. ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕಿರಿಕ್ ಪಾರ್ಟಿ ಹೆಸರು ಮಾಡಿತು. ಕಿರಿಕ್ ಪಾರ್ಟಿ ನಂತರ ರಿಶಬ್ ಮತ್ತೆ ಅಂಥದ್ದೇ ಕಾಲೇಜು, ಲವ್ವು ಅಂತಾ ಯಾವುದಾದರೂ ಸಿನಿಮಾ ಮಾಡಬಹುದು ಅಂತಾ ಜನ ಅಂದಾಜಿಸಿದ್ದರು. ರಿಶಬ್ ಅದನ್ನು ಸುಳ್ಳಾಗಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅನ್ನೋ ಔಟ್ ಅಂಡ್ ಔಟ್ ಆಫ್ ಬೀಟ್ ಸಿನಿಮಾವನ್ನು ನಿರ್ದೇಶಿಸಿದರು. ಮತ್ತದನ್ನು ಕಮರ್ಷಿಯಲ್ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಬ್ರಿಜ್ ಲೆವೆಲ್ಲಿನ ಸಿನಿಮಾವೊಂದು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತದೆ ಅಂದರೆ ಸುಮ್ಮನೇ ಮಾತಲ್ಲ.ರಿಷಬ್ ಸರ್ಕಾರಿ ಶಾಲೆಯಲ್ಲೂ ಅದನ್ನು ಸಾಧಿಸಿ ತೋರಿಸಿದರು. ಫಾರ್ಮುಲಾಗಳಾಚೆಗೆ ಸಿನಿಮಾ ಮಾಡಿಯೂ ಅದನ್ನು ಥಿಯೇಟರಿನಲ್ಲಿ ನಿಲ್ಲಿಸಬಲ್ಲೆ ಅನ್ನೋದನ್ನು ಗಾಂಧಿನಗರದವರಿಗೆ ಮನವರಿಕೆ ಮಾಡಿದರು. ನಂತರ ಬೆಲ್ ಬಾಟಮ್ ಅನ್ನೋ ಸಿನಿಮಾದಲ್ಲಿ ನಟಿಸಿ ಹೀರೋ ಆಗಿ ಕೂಡಾ ಗಮನ ಸೆಳೆದರು. ಈ ಚಿತ್ರ ಕೂಡಾ ಬಾಕ್ಸಾಫೀಸಿನಲ್ಲಿ ಏನಿಲ್ಲವೆಂದರೂ ಕೋಟಿ ಲಾಭ ಮಾಡಿತು. ಸದ್ಯ ಒಂಭತ್ತು ಸುಳ್ಳು ಕಥೆಗಳು ಎನ್ನುವ ಸಿನಿಮಾದ ಮೂಲಕ ರಿಷಬ್ ಸಿಂಗರ್ ಕೂಡಾ ಆಗಿದ್ದಾರೆ. ಏನನೋ ಬಡವ ರಾಸ್ಕಲ್ ನಿನಗೆ ಕನ್ನಡ ಬರಲ್ವಾ? ಅನ್ನೋ ಹಾಡು ಈಗ ಕನ್ನಡಿಗರ ಬಾಯಲ್ಲಿ ನಲಿದಾಡುತ್ತಿದೆ. ಹೀಗೆ ರಿಶಬ್ ಶೆಟ್ಟಿ ಅನ್ನೋ ಕುಂದಕನ್ನಡದ ಹುಡುಗ ಗಾಂಧಿನಗರಕ್ಕೆ ಕಾಲಿಟ್ಟು ಮೇಲಿಂದ ಮೇಲೆ ಅಚ್ಚರಿ ಮೂಡಿಸುತ್ತಿದ್ದಾರೆ.
ಇಷ್ಟು ದಿನ ಕೊರಿಯನ್ ಸಿನಿಮಾಗಳನ್ನು ಕನ್ನಡಿಗರು ಕದ್ದು ಸಿನಿಮಾ ಮಾಡುತ್ತಾರೆ ಅನ್ನೋ ಕೆಟ್ಟ ಆರೋಪವೊಂದಿತ್ತು. ಆದರೆ ರಿಶಬ್ ಕೊರಿಯನ್ ಕಲಾವಿದರನ್ನೇ ಬಳಸಿಕೊಂಡಿ ಅವರ ನೆಲಕ್ಕೇ ಹೋಗಿ ಚಿತ್ರೀಕರಿಸಿ ಕನ್ನಡ ಸಿನಿಮಾವೊಂದನ್ನು ಕಟ್ಟಿಕೊಡುವ ಪ್ಲಾನು ನಡೆಸುತ್ತಿದ್ದಾರೆ ಅನ್ನೋ ಮಾಹಿತಿ ಕೂಡಾ ನಮಗೆ ಲಭ್ಯವಾಗಿದೆ. ಅದು ಆದಷ್ಟು ಬೇಗ ಕಾರ್ಯ ರೂಪಕ್ಕೆ ಬರುವಂತಾಗಲಿ.
ಇಂಥ ರಿಷಬ್ ಈಗ ತಾವು ಬೆಳೆಯುವುದರೊಂದಿಗೆ ಇನ್ನೂ ಹತ್ತಾರು ಜನ ಪ್ರತಿಭಾವಂತರು ಹುಟ್ಟಿಕೊಳ್ಳಲಿ ಅನ್ನೋ ಉದಾರ ಮನಸ್ಸಿನವರು. ಈ ಕಾರಣಕ್ಕೇ ಏಳು ಜನ ನವ ನಿರ್ದೇಶಕರಿಗೆ ಅವಕಾಶ ಕೊಟ್ಟು ಕಥಾ ಸಂಗಮವನ್ನು ರೂಪಿಸಿದ್ದಾರೆ. ಇದೇ ವಾರ ಚಿತ್ರ ತೆರೆಗೆ ಬರುತ್ತಿದೆ. ಆ ಮೂಲಕ ಏಳು ಜನ ಯುವ ನಿರ್ದೇಶಕರ ಭವಿಷ್ಯ ನಿರ್ಧಾರವಾಗಲಿದೆ…